ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಗೆ ಆಕೆ ಪೋಷಕರು ಒಪ್ಪಿದರೂ ಅವಳು ಒಪ್ಪುತ್ತಿಲ್ಲ: ಹುಡುಗೀರು ಏಕೆ ಹೀಗೆ?

Last Updated 27 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

*ನಾನು ಒಂದು ಕಾಲದಲ್ಲಿ ಮಾದರಿ ವಿದ್ಯಾರ್ಥಿಯಾಗಿದ್ದೆ. ಅಪ್ಪ– ಅಮ್ಮ ನನ್ನ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಈಗ ನನ್ನ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ. ನಾನು ಸಂಬಂಧಗಳಿಗೆ ಬೆಲೆ ಕೊಟ್ಟರೆ ಎಲ್ಲರೂ ಹಣಕ್ಕೆ ಬೆಲೆ ಕೊಡುತ್ತಾರೆ. ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಾಳೆ. ಉದ್ಯೋಗಗಳನ್ನು ಕಳೆದುಕೊಂಡೆ. ಹುಡುಗಿಯ ತಂದೆ ಉದ್ಯೋಗವಾದ ಮೇಲೆ ಮದುವೆಗೆ ಒಪ್ಪಿಗೆ ಕೊಟ್ಟರೂ ಅವಳು ಒಪ್ಪುತ್ತಿಲ್ಲ. ಹುಡುಗೀರು ಏಕೆ ಹೀಗೆ?

ಹೆಸರು, ಊರು ಇಲ್ಲ.

ಯೌವನದಲ್ಲಿ ಹುಡುಗಿಯರ ಕುರಿತ ಆಕರ್ಷಣೆ ಸಹಜವಾದದ್ದು. ಇಷ್ಟವಾದವಳು ತಿರಸ್ಕರಿಸಿದಾಗ ನೋವಾಗುವುದೂ ಸಹಜವೇ. ನೀವು ಇಷ್ಟಪಡುವ ಹುಡುಗಿಗೆ ನಿಮ್ಮ ಬಗೆಗೂ ಆಕರ್ಷಣೆ ಹುಟ್ಟದಿದ್ದರೆ ಪ್ರೀತಿ ಮೂಡುವುದು ಹೇಗೆ ಸಾಧ್ಯ? ಪತ್ರದ ಭಾಷೆಯನ್ನು ಗಮನಿಸಿದರೆ ನೀವು ಆತ್ಮಗೌರವವನ್ನು ಬಿಟ್ಟುಕೊಟ್ಟಿದ್ದೀರಿ ಎನ್ನಿಸುತ್ತದೆ. ನಿಮ್ಮ ವ್ಯಕ್ತಿತ್ವದ ಘನತೆಯಿಂದ ಪ್ರೀತಿಯನ್ನು ಗಳಿಸಿಕೊಳ್ಳದೆ ಬೇಡಿಕೊಂಡು ಪಡೆಯುವುದು ಸಾಧ್ಯವಿಲ್ಲ. ಹೀಗಾಗಿ ಸಿನಿಮಾದ ದುರಂತ ನಾಯಕನಂತೆ ದುಃಖಿಸುತ್ತಿದ್ದೀರಿ. ನಿಮ್ಮ ವ್ಯಕ್ತಿತ್ವವನ್ನು ನಿಮ್ಮ ಅಂತರಂಗ ಒಪ್ಪುವಂತಹ ಮಟ್ಟಕ್ಕೆ ಏರಿಸಲು ಮೊದಲು ಪ್ರಯತ್ನಿಸಿ. ಉದ್ಯೋಗವನ್ನು ಪಡೆದು ಆರ್ಥಿಕ ಸ್ಥಿರತೆಯನ್ನು ಗಳಿಸಿಕೊಂಡು ಸುರಕ್ಷಿತ ಬದುಕಿನ ಭರವಸೆಯನ್ನು ಕೊಡಲು ನಿಮಗೆ ಸಾಧ್ಯವಾದಾಗ ಹುಡುಗಿಯರು ನಿಮ್ಮತ್ತ ಸಹಜವಾಗಿ ಆಕರ್ಷಿತರಾಗುತ್ತಾರೆ. ಹಣಕ್ಕೆ ನೀವು ಪ್ರಾಮುಖ್ಯತೆ ಕೊಡದಿದ್ದರೂ ಅದು ಗೌರವಯುತ ಬದುಕಿಗೆ ಅತ್ಯಗತ್ಯ ಎನ್ನುವುದು ನಿಮಗೂ ಗೊತ್ತೇ ಇದೆ.

ನೆನಪಿಡಿ, ನಿಜಜೀವನದ ಪ್ರೀತಿ ಸಿನಿಮಾ, ಸಾಹಿತ್ಯಗಳ ಪ್ರೀತಿಯಲ್ಲ. ಪರಸ್ಪರ ಆಕರ್ಷಣೆ, ಗೌರವಗಳಿಲ್ಲದಿದ್ದಲ್ಲಿ ಆಣೆ, ಪ್ರಮಾಣ, ಭರವಸೆಗಳಿಂದ ಪ್ರೀತಿ ಸಿಗುವುದಿಲ್ಲ.

* ಪಿಯುಸಿ ಫೇಲ್ ಆದ ನಂತರ ಡಿಪ್ಲೋಮಾ ಮಾಡಿ ಬಿ.ಇ. ಓದುತ್ತಿದ್ದೇನೆ. ಪ್ರಾಥಮಿಕ ಶಾಲೆಯಿಂದ ಹುಡುಗಿಯರ ಶಾಲೆಯಲ್ಲಿ ಮಾತ್ರ ಓದಿದ್ದೇನೆ. ಹುಡುಗರ ಜೊತೆ ಮಾತನಾಡಿ ಅಭ್ಯಾಸವಿಲ್ಲ. ಆದರೆ ಈಗ ಸೆಮಿನಾರ್ ಮತ್ತಿತರ ಅಗತ್ಯಗಳಿಗಾಗಿ ಹುಡುಗರ ಜೊತೆ ಒಡನಾಡಲೇಬೇಕು. ಆಗ ಭಯವಾಗಿ ಕಣ್ಣೀರು ಬಂದು ಕಾರಣವಿಲ್ಲದಿದ್ದರೂ ಅತ್ತೇಬಿಡುತ್ತೇನೆ. ನಾನು ಗಟ್ಟಿಯಾಗಿರಬೇಕು ಅಂದುಕೊಂಡ್ರೂ ಆಗಲ್ಲ. ಇದರಿಂದ ಹೊರಗೆ ಬರುವುದು ಹೇಗೆ?

ಹೆಸರಿಲ್ಲ, ಮಂಡ್ಯ.

ನೀವು ಗಟ್ಟಿಯಾಗಿಯೇ ಇದ್ದೀರಿ. ಹುಡುಗರ ಜೊತೆ ಒಡನಾಡುವುದರ ಬಗ್ಗೆ ಬಾಲ್ಯದಿಂದಲೂ ನಿಮ್ಮೊಳಗೆ ಬಿತ್ತಲಾದ ತಪ್ಪುನಂಬಿಕೆಗಳಿಂದಾಗಿ ಕಷ್ಟಪಡುತ್ತಿದ್ದೀರಿ. ನಿಮ್ಮ ಪೋಷಕರು ಅವರ ಆತಂಕಗಳನ್ನು ನಿಮ್ಮೊಳಗೆ ಭಯವಾಗಿ ತುಂಬಿದ್ದಾರೆ. ಹುಡುಗರ ಜೊತೆ ಮಾತನಾಡುವುದು, ಸಹಜವಾಗಿ ಬೆರೆಯುವುದು, ಕೈಕುಲುಕುವುದು, ಕ್ಯಾಂಟೀನ್‍ಗೆ ಅಥವಾ ಪ್ರವಾಸಕ್ಕೆ ಹೋಗುವುದು ಮುಂತಾದವುಗಳಿಂದ ನಿಮ್ಮ ಘನತೆಗೆ ಕುಂದಾಗುವುದಿಲ್ಲ.

ಏಕಾಂತದಲ್ಲಿ ನಿಂತು ಸುತ್ತಲೂ ಹುಡುಗರು ಇರುವಂತೆ ಕಲ್ಪಿಸಿಕೊಳ್ಳಿ. ಆಗ ನಿಮ್ಮ ದೇಹದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ. ಹೆಚ್ಚಾಗುವ ಎದೆಬಡಿತ, ಮೈಬೆವರುವಿಕೆ, ನಡುಕ, ಕಣ್ಣೀರು- ಮುಂತಾದವು. ನಂತರ ನಿಧಾನವಾಗಿ ಉಸಿರಾಟವನ್ನು ಮಾಡುತ್ತಾ ದೇಹವನ್ನು ಸಮಸ್ಥಿತಿಗೆ ತನ್ನಿ. ಮತ್ತೆಮತ್ತೆ ಕಲ್ಪನೆಯನ್ನು ಮುಂದುವರೆಸಿ, ದೇಹವನ್ನು ಸಮಸ್ಥಿತಿಗೆ ತನ್ನಿ. ಮುಂದಿನ ಹಂತದಲ್ಲಿ ಹುಡುಗರ ಜೊತೆ ನಿಧಾನವಾಗಿ ಸ್ಪಷ್ಟವಾಗಿ ಮಾತನಾಡಿದಂತೆ ಕಲ್ಪಿಸಿಕೊಳ್ಳಿ. ಆಗಲೂ ದೇಹವನ್ನು ಸಮಸ್ಥಿತಿಗೆ ತನ್ನಿ. ಪದೇಪದೇ ಸುಮಾರು ಒಂದು ತಿಂಗಳು ಈ ಅಭ್ಯಾಸ ಮಾಡಿ. ಅಗತ್ಯವಿದ್ದರೆ ಕೆಲವು ಆತ್ಮೀಯ ಸ್ನೇಹಿತೆಯರನ್ನು ಹುಡುಗರ ಬಟ್ಟೆ ತೊಡಿಸಿ ಸುತ್ತಲೂ ಕೂರಿಸಿಕೊಳ್ಳಿ. ಅಭ್ಯಾಸವನ್ನು ಆಳವಾಗಿ ಅನುಭವಿಸಿ ಮಾಡಿದಷ್ಟೂ ಪರಿಣಾಮಗಳು ಬೇಗ ಸಿಗುತ್ತವೆ. ನಂತರ ಹೊರಗಡೆ ಹುಡುಗರ ಜೊತೆ ಮಾತನಾಡುವಾಗ ಆಗಾಗ ದೇಹವನ್ನು ಸಮಸ್ಥಿತಿಗೆ ತಂದುಕೊಳ್ಳುತ್ತಾ ನಿಧಾನವಾಗಿ ಮಾತನಾಡಿ.

* ವಯಸ್ಸು 31. ಸಣ್ಣ ವಿಷಯಕ್ಕೂ ಸಿಟ್ಟು ಬೇಸರ. ಒಮ್ಮೊಮ್ಮೆ ಹಳೆಯ ನೆನಪಿನಿಂದ ನಗು, ಅಳು ಬರುತ್ತದೆ. ಹೆಚ್ಚು ಸಮಯ ಮೌನವಾಗಿರುತ್ತೀನಿ. ಆತಂಕ, ಭಯ ಹೆಚ್ಚಾಗಿರುತ್ತದೆ. ಚುರುಕುತನ ಇಲ್ಲ. ಇದು ಮಾನಸಿಕ ಕಾಯಿಲೆಯೇ?

ಹೆಸರು, ಊರು ಇಲ್ಲ

ನಿಮ್ಮ ಕೌಟುಂಬಿಕ ಪರಿಸ್ಥಿತಿಗಳ ವಿವರಗಳಿಲ್ಲದಿದ್ದರೂ ಸ್ಪಷ್ಟವಾಗಿ ಪತ್ರ ಬರೆದಿದ್ದೀರಿ. ಹಾಗಾಗಿ ಸದ್ಯಕ್ಕೆ ಇದು ಮಾನಸಿಕ ಕಾಯಿಲೆ ಖಂಡಿತಾ ಅಲ್ಲ. ನಿಮ್ಮ ಬಗ್ಗೆ ಉದ್ದದ ಋಣಾತ್ಮಕ ಅಂಶಗಳ ಪಟ್ಟಿ ನೀಡಿದ್ದೀರಿ. ಇದರ ಸೂಚನೆ ಗೊತ್ತೇ? ನಿಮ್ಮ ಬಗ್ಗೆ ನಿಮಗೇ ಪ್ರೀತಿ ಗೌರವಗಳಿಲ್ಲ. ಇದಕ್ಕೆ ಕಾರಣ ನೀವು ಬದುಕುತ್ತಿರುವ ರೀತಿ ನಿಮಗೇ ತೃಪ್ತಿಕರವಾಗಿಲ್ಲ. ನಾನು ಹೇಗೆ ಬದುಕಬೇಕೆಂದಿದ್ದೇನೆ ಎನ್ನುವುದನ್ನು ಪಟ್ಟಿ ಮಾಡಿಕೊಂಡು ಸಣ್ಣಸಣ್ಣ ವಿಷಯಗಳಿಂದ ಪ್ರಾರಂಭಿಸಿ. ಆರಂಭದ ಸೋಲುಗಳನ್ನು ಒಪ್ಪಿಕೊಳ್ಳಿ. ಗೆಲುವನ್ನು ಆನಂದಿಸಿ. ನಿಧಾನವಾಗಿ ನಿಮ್ಮ ಆತ್ಮಗೌರವ ಹೆಚ್ಚಿದಂತೆ ಮನಸ್ಸು ಹದಕ್ಕೆ ಬರುತ್ತದೆ.

ಕುಟುಂಬದವರು ಸ್ನೇಹಿತರು ಹಾಗೂ ತಜ್ಞ ಮನೋಚಿಕಿತ್ಸಕರ ಸಹಾಯ ಪಡೆದರೆ ಒಳ್ಳೆಯದು. ಪರಿಸ್ಥಿತಿ ಹೀಗೇ ಮುಂದುವರಿದರೆ ಮಾನಸಿಕ ಅಸ್ವಸ್ಥತೆ ನಿಮ್ಮನ್ನು ಆವರಿಸಿಕೊಳ್ಳಬಹುದು.

(ಅಂಕಣಕಾರರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT