ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾವಲಂಬಿ ಬದುಕು ಕಲಿಸಿದ ಮಲೆನಾಡು ಮೇಳ: ವಿಶೇಷ ಲೇಖನ

‘ಬೀಜ‘ ಕೇವಲ ವೃಕ್ಷವಾಗುವುದಷ್ಟೇ ಅಲ್ಲದೇ ತನ್ನ ನಂಬಿದವರ ಬದುಕಿನ ಕನಸಾಗಿ, ಅದರಾಚೆಗಿನ ಮನೋಬಲವಾಗಿ ಚಿಗುರುತ್ತದೆ.
Published 21 ಜುಲೈ 2023, 23:39 IST
Last Updated 21 ಜುಲೈ 2023, 23:39 IST
ಅಕ್ಷರ ಗಾತ್ರ

ನಾಟಿ ಬೀಜಗಳ ಉಡುಗೊರೆ ಮತ್ತು ವಿನಿಮಯವೆಂಬ ಸಾಮಾನ್ಯ ಸಂಗತಿ ಇಂದು ವನದೊಳಗಿನ ನೂರಾರು ಮಹಿಳೆಯರಿಗೆ 'ಸ್ವಾವಲಂಬನೆ' ಎಂಬ ಜಗತ್ತಿನ ಬಾಗಿಲು ತೆರೆದು ದೃಢವಾದ ಹೆಜ್ಜೆ ಊರಲು ಕಾರಣವಾಗಿದೆ. ‘ಬೀಜ‘ ಕೇವಲ ವೃಕ್ಷವಾಗುವುದಷ್ಟೇ ಅಲ್ಲದೇ ತನ್ನ ನಂಬಿದವರ ಬದುಕಿನ ಕನಸಾಗಿ, ಅದರಾಚೆಗಿನ ಮನೋಬಲವಾಗಿ ಚಿಗುರುತ್ತದೆ.

–––

ಶಿರಸಿಯೆಂಬ ಮಲೆನಾಡ ಸೆರಗಿನ ಪುಟ್ಟ ಊರಲ್ಲಿ ಜಾಗತಿಕ ಆಹಾರ ಭದ್ರತೆ, ಸಾಮಾಜಿಕ ಬದಲಾವಣೆಯ ಸವಾಲುಗಳಿಗೆ ಸ್ಥಳೀಯ ಪರಿಸರ ವ್ಯವಸ್ಥೆಗಳಲ್ಲಿ ಪರಿಹಾರ ಕಂಡುಕೊಳ್ಳಲು 2001ರಲ್ಲಿ ಸ್ಥಾಪನೆಯಾಗಿದ್ದು ವನಸ್ತ್ರೀ ಎಂಬ ಸಂಸ್ಥೆ. ಇದು ನಾಟಿ ಬೀಜ ಸಂರಕ್ಷಣೆಯ ಸಂಕಲ್ಪದೊಂದಿಗೆ ಆರಂಭವಾದ ಮಹಿಳಾ ಸದಸ್ಯರೇ ಪ್ರಧಾನವಾಗಿರುವ ವಿಶಿಷ್ಟ ಸಂಸ್ಥೆ !

ಸಂಸ್ಥೆಯ ಕಾರ್ಯಚಟುವಟಿಕೆಯ ಭಾಗವಾಗಿ ಬೆಳೆದಿದ್ದು ‘ಮಲೆನಾಡು ಮೇಳ’. ಆರಂಭವಾಗಿದ್ದು 2004ರಲ್ಲಿ. ಈ ಮೇಳ ನಾಟಿ ಅಥವಾ ದೇಸಿ  ಬೀಜಗಳು ಮತ್ತು ಗೆಡ್ಡೆಗಳ ಸಂರಕ್ಷಣೆ ಜೊತೆಗೆ ವನಸ್ತ್ರೀ ಸಂಸ್ಥೆಯ ಸದಸ್ಯರ ಸಾಮಾಜಿಕ, ಆರ್ಥಿಕ ಭದ್ರತೆಗೆ ವೇದಿಕೆಯಾಗುವ ಜೊತೆಗೆ ಅವರಿಗೆ ಬಲ ನೀಡಿದೆ.

ಕಾಡುನಾಡಿನ ಬೀಜಗಳು ಇಲ್ಲಿನ ಸಾಮಾಜಿಕ ಮತ್ತು ಪರಿಸರ ಆರೋಗ್ಯದಲ್ಲಿ ನಿರ್ಣಾಯಕ ಪಾತ್ರವಹಿಸಿವೆ. ಈ ದೇಸಿ ಬೀಜ ಸಂಸ್ಕೃತಿ ಮಲೆನಾಡ ಮಹಿಳೆಯರ ಜೀವನದೊಂದಿಗೆ ಅಂತರ್ಗತ ಸಂಬಂಧಹೊಂದಿವೆ. ಇಂಥ ದೇಸಿ ಬೀಜಗಳ ಸಾಂಗತ್ಯವೇ ಇಂದು ಮಹಿಳೆಯರಿಗೆ ತಮ್ಮ ಸಾಮರ್ಥ್ಯವನ್ನು ಸ್ಪರ್ಧಾತ್ಮಕ ಪ್ರಪಂಚದೆದುರು ಸಮರ್ಥವಾಗಿ ಪ್ರದರ್ಶಿಸುವ ಶಕ್ತಿ ನೀಡಿವೆ. ಹಲವು ಮಹಿಳೆಯರು ಇಂದು ಕೇವಲ ಆರ್ಥಿಕ, ಸಾಮಾಜಿಕ ಸ್ವಾವಲಂಬನೆ ಮಾತ್ರವಲ್ಲದೇ ಮಾನಸಿಕ ವಾಗಿಯೂ ಸಬಲೀಕರಣಗೊಂಡಿದ್ದಾರೆ. ಈ ಎಲ್ಲ ‘ಶಕ್ತಿ‘ಗೂ ವನಸ್ತ್ರೀ ಸಂಸ್ಥೆಯ ಮಹಿಳೆಯರೇ ಅಡಿಗಲ್ಲು ಹಾಕಿದ ‘ಮಲೆನಾಡು ಮೇಳ‘ ಕಾರಣವಾಗಿದೆ.

ವಿಭಿನ್ನ ‘ಯಶೋಗಾಥೆ‘ಗಳು

ಮೇಳದ ಹಿರಿಯ ಸದಸ್ಯೆ ಬಕ್ಕಳದ ಫಣಿವೇಣಿ ಭಟ್ ಅವರು ತರಕಾರಿ ಬೀಜಗಳ ಜೊತೆ ಕಾಡಿನ ಬೀಜಗಳ ಸಂರಕ್ಷಣೆಗೂ ಆದ್ಯತೆ ನೀಡಿದ್ದಾರೆ. ಅವುಗಳನ್ನು ಆಯ್ದು, ಸೋಯಿಸಿ ಸುಂದರ ಹೂಬುಟ್ಟಿ, ಫ್ರೇಮ್, ಆರತಿ ತಾಟು ಮಾಡಿ ಮಾರುತ್ತಾರೆ. ಕೆಲಸಕ್ಕೆ ಸಮಯ ಹಿಡಿದರೂ ಮಾರುಕಟ್ಟೆಯಲ್ಲಿ ಉತ್ತಮ ದರ ಇವರ ಕೈ ಸೇರುತ್ತಿದೆ. 'ಕಾಡು ಹರಟೆಗಿಂತ ಕಾಡು ಬೀಜದ ಸಾಂಗತ್ಯ ಖುಷಿ ಕೊಡುತ್ತದೆ' ಎನ್ನುತ್ತಾರೆ ಅವರು.

ಕಡಬಾಳದ ಶ್ರೀಮತಿ ಹೆಗಡೆ ಮತ್ತು ಪಾರ್ವತಿ ಹೆಗಡೆ ಕಡಬಾಳ ಚಪಾತಿ, ಪೂರಿ ಗೃಹೋದ್ಯಮದಲ್ಲಿ  ಪಾಲುದಾರರಿದ್ದಾರೆ. ದಶಕಗಳಿಂದ ಮಲೆನಾಡು ಮೇಳದಲ್ಲಿ ವಿವಿಧ ತಳಿಗಳ ನಾಟಿ ಬೀಜಗಳನ್ನು ಮಾರಾಟ ಮಾಡುತ್ತಾ ಸಂಭ್ರಮಿಸಿದವರು. ಮೇಳದುದ್ದಕ್ಕೂ ಮಾರುಕಟ್ಟೆಯ ಆಂತರ್ಯ ಅಳೆದುತೂಗಿ ‘ವಿಭಾ ಫುಡ್ ಟೆಕ್’ ಆರಂಭಿಸಿ ರೆಡಿಮೇಡ್ ಚಪಾತಿ, ಪೂರಿಗಳನ್ನು ಮಾಡಿ ಹೊರಜಗತ್ತಿನ ಸವಾಲುಗಳನ್ನು ಮಣಿಸಿ ಸಾಗುತ್ತಿದ್ದಾರೆ. ಎಷ್ಟೇ ಬೆಳೆದರೂ ಬೀಜ, ಸಸಿಗಳ ಒಡನಾಟ ಇವರಿಂದ ದೂರಾಗಿಲ್ಲ. 'ಮೇಳವು ಮಹಿಳೆಗೆ ತನ್ನ ಸುತ್ತಮುತ್ತಲ ಜೈವಿಕ ಸಾಂಸ್ಕೃತಿಕ ಸಂಪತ್ತನ್ನು ಹೊರ ಜಗತ್ತಿಗೆ ಪರಿಚಯಿಸಲು ಪ್ರಮುಖ ಮಾರ್ಗವಾಗಿದೆ. ನಿರಂತರ ತೊಡಗಿಕೊಳ್ಳುವ ಪ್ರಕ್ರಿಯೆಯಿಂದ ಹಲವು ಅವಕಾಶಗಳ ಬಾಗಿಲು ತೆರೆಯುವಲ್ಲಿಯೂ ಇದು ಕೀಲಿಕೈ ಆಗಿದೆ' ಎಂದು ಹರ್ಷ ವ್ಯಕ್ತಪಡಿಸಿದರು.

ಕಲಗಾರಒಡ್ಡಿನ ಕುಸುಮ ಭಟ್ ಮೇಳದ ಹಳೆಯ ಸದಸ್ಯೆ. ಇವರು ಇತರರು ನಿರ್ಲಕ್ಷ್ಯ ಮಾಡಿದ ವಸ್ತುಗಳನ್ನು ತಾವು ಅಲಕ್ಷ್ಯಿಸದೇ ಅದನ್ನೇ ಬಂಡವಾಳ ಮಾಡಿ ಆರ್ಥಿಕ ಸ್ವಾವಲಂಬಿಯಾಗಿದ್ದಾರೆ. ತ್ಯಾಜ್ಯವಾಗುವ ಅಡಿಕೆ ಸಿಪ್ಪೆಗೂ ಕಲಾಸಿರಿವಂತಿಕೆಯ ಮೂಲಕ ಮರುಜೀವ ನೀಡಿ ಅತ್ಯಾಕರ್ಷಕ ಮಾಲೆ, ವಿವಿಧಾಕೃತಿಯ ಗಿಡಗಳನ್ನಾಗಿ ಮಾರ್ಪಡಿಸಿದ್ದಾರೆ. ಮಾತ್ರೆಗಳ ಹೊರ ಕವಚ ಬಳಸಿ ಮನಸ್ಸಿಗೆ ಮುದ ನೀಡುವ ಹೂವು, ಸಿಗರೇಟ್ ಪ್ಯಾಕ್‍ನಿಂದ ನಾಯಿ, ಹುಲ್ಲು ಕಡ್ಡಿಯಿಂದ ಹೂಬುಟ್ಟಿ, ಮಾಲೆ, ಬಟ್ಟಲು ಸೇರಿದಂತೆ ಗೀಚಿ ಬದಿಗೆಸೆದ ಬೆಂಕಿ ಕಡ್ಡಿಯಿಂದ ಕೊರಳ ಮಾಲೆ, ಕಸಗೆ ಹರಳಿನಿಂದ ಕುಕ್ಕೆ ಇಂಥ ಹಲವು ವಸ್ತುಗಳು ಇವರ ಬಳಿಯಿವೆ. ಬಹುಕಾಲದ ಇವರ ಕಸೂತಿಗಳಿಗೆ ಮೇಳವೇ ಪ್ರಥಮ ಮಾರುಕಟ್ಟೆಯಾಗಿತ್ತು ಎಂಬುದು ಗಮನಾರ್ಹ ಸಂಗತಿ.

ವಿಜಯಲಕ್ಷ್ಮಿ ಎಂಬುವವರು ವನಸ್ತ್ರೀ ತರಬೇತಿ ಪಡೆದು ಹಳ್ಳಿಯಲ್ಲಿ ಜೇನು ಕೃಷಿ ಮಾಡಿ ದೆಹಲಿಯಲ್ಲಿ ಅದರ ತುಪ್ಪ ಮಾರಿ ಗೆದ್ದಿದ್ದಾರೆ. ಗುಬ್ಬಿಗದ್ದೆಯ ರಂಜನಾ ಹೆಗಡೆ ಅವರು ಮೇಳದಲ್ಲಿ ಭಾಗಿಯಾಗಿ, ಕಲಿತು, ಗಾರ್ಡನಿಂಗ್ ಮಾಡಿ ಈಗ ತಮ್ಮದೇ ಆದ ಬ್ರ್ಯಾಂಡ್ ಮಾಡಿ ಗಿಡಗಳ ಮಾರಾಟ ಮಾಡುತ್ತಿದ್ದಾರೆ. ಸುವರ್ಣ ಶಿರಗೋಡಬೈಲ್ ಎಂಬುವವರು ಸಸ್ಯ ನರ್ಸರಿ, ಬೀಜ ಮಾರಾಟದ ಮೂಲಕ ಗುರುತಿಸಿಕೊಂಡು ಇಂದು ನಗರ ಪ್ರದೇಶದಲ್ಲಿ ತಾರಸಿ ತೋಟ ನಿರ್ಮಾಣ ಮಾರ್ಗದರ್ಶಕಿಯಾಗಿದ್ದಾರೆ.

ಮತ್ತಿಘಟ್ಟ ದಟ್ಟಾರಣ್ಯದಲ್ಲಿ ಕಾಡಿನ ಉತ್ಪನ್ನ, ಗಡ್ಡೆಗೆಣಸು ಬೆಳೆದು ಮೇಳದ ಮೂಲಕ ಲಕ್ಷ್ಮಕ್ಕನಾಗಿ ಚಿರಪರಿಚಿತರಾಗಿರುವ ಲಕ್ಷ್ಮೀ ಸಿದ್ದಿ ತನ್ನ ಕುಟುಂಬ ಗಟ್ಟಿಗೊಳಿಸಿಕೊಂಡಿದ್ದು ಮೇಳದ ಬಲದಿಂದ. ಇಂಥ ಹಲವು ಮಹಿಳೆಯರ ಯಶೋಗಾಥೆಯನ್ನು ಮಲೆನಾಡು ಮೇಳ ಹುಟ್ಟುಹಾಕಿದೆ.
ಒಳ ಹಳ್ಳಿಗಳ ಹಲವು ಮಹಿಳೆಯರಿಗೆ ಹೊರ ಜಗತ್ತಿಗೆ ತೆರೆದುಕೊಳ್ಳಲು, ಅವಕಾಶಗಳ ಬಾಗಿಲು ಬಡಿಯಲೂ ಅವಕಾಶ ಇರುವುದಿಲ್ಲ. ಇಂಥ ಸಂದಿಗ್ದತೆಯಲ್ಲಿ ಇರುವವರಿಗೆ ಬದುಕಿನ ಭರವಸೆಯಾಗಿ, ಬೆಳಕಿನ ಬೀಜವಾಗಿ ವನಸ್ತ್ರೀ ಹಾಗೂ ಮಲೆನಾಡು ಮೇಳ ಕಾಣುತ್ತಿದೆ.
‘ಬೀಜಗಳಿಗೆ ಯಾವುದೇ ಜಾತಿ, ಧರ್ಮವಿಲ್ಲ, ಅವು ಸಾರ್ವತ್ರಿಕ ಮತ್ತು ಜಾತ್ಯತೀತ. ಅವುಗಳನ್ನು ನಂಬಿದರೆ ಮೋಸವಿಲ್ಲ. ಪ್ರಾಮಾಣಿಕ ಪರಿಶ್ರಮ, ಆತ್ಮವಿಶ್ವಾಸವಿದ್ದರೆ ಗೆಲುವು ಸುಲಭ ಮತ್ತು ಸಾಧ್ಯ. ವನಸ್ತ್ರೀ ಹಾಗೂ ಮಲೆನಾಡು ಮೇಳ ವಿವಿಧ ಸಮುದಾಯಗಳೊಂದಿಗೆ ತನ್ನ ಕೆಲಸದಲ್ಲಿ ಈ ಭಾವನೆಯನ್ನು ಸದಾ ಕಾಲ ಬಲವಾಗಿ ಪೋಷಿಸುತ್ತದೆ’ ಎಂಬುದು ದಶಕಗಳ ಕಾಲ ಮೇಳ ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಮನೋರಮಾ ಜೋಶಿ ಅಂತರಾಳದ ನುಡಿಯಾಗಿದೆ.
‘ಬದುಕಿನ ಒಳ ಪ್ರಪಂಚದಲ್ಲಿ ಕಳೆದುಹೋದ ಮಹಿಳೆಯರಿಗೆ ಮಲೆನಾಡು ಮೇಳ ಹೊರ ಪ್ರಪಂಚಕ್ಕೆ ತೆರೆದ ಬಾಗಿಲಾಗಿದೆ. ಕೇವಲ ಆರ್ಥಿಕ ಸಬಲತೆ ಇಂದು ಬಲದ ಸಂಕೇತವಲ್ಲ. ಬದುಕಿನ ಏಕತಾನತೆಯನ್ನು ಮುರಿದು ಹೊಸ ಸಾಧ್ಯತೆಗಳತ್ತ ಯೋಚನೆ ಮಾಡುವುದೂ ಕೂಡ 'ಮಹಿಳಾ ಸ್ವಾವಲಂಬನೆ' ಒಂದು ಸ್ವರೂಪವಾಗಿದೆ. ಅದನ್ನು ವನಸ್ತ್ರೀ ಮತ್ತು ಮಲೆನಾಡು ಮೇಳ ಸಾಕ್ಷೀಕರಿಸುತ್ತಿದೆ’ ಎಂಬುದು ಮೇಳದ ಸಂಘಟನಾ ಶಕ್ತಿಯಾದ ಶೈಲಜಾ ಗೋರ್ನಮನೆ ಮತ್ತು ಸುನೀತಾ ರಾವ್ ಮಾತಾಗಿದೆ.

’ದೇಸಿ ಬೀಜ ರಕ್ಷಣೆ’ ಎನ್ನುವುದು ಮಹಿಳೆಯರಿಗೆ ಸ್ವಾಭಿಮಾನ, ಭದ್ರತೆ, ಸ್ವಾತಂತ್ರ್ಯ ಎಲ್ಲವನ್ನೂ ಕಲ್ಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT