ಬುಧವಾರ, ಫೆಬ್ರವರಿ 8, 2023
16 °C

ಮುಟ್ಟಾಗುವ ಮೊದಲು ಮೈಗ್ರೇನ್: ಪರಿಹಾರ ಇಲ್ಲವೇ?

ಡಾ. ವೀಣಾ ಎಸ್. ಭಟ್ Updated:

ಅಕ್ಷರ ಗಾತ್ರ : | |

* ನನ್ನ ಮಗಳಿಗೆ ಪ್ರತಿ ತಿಂಗಳು ಮುಟ್ಟಾಗುವ ಮೊದಲು ಮೈಗ್ರೇನ್ ತಲೆನೋವು ಬರುತ್ತದೆ. ಇದು ನಾಲ್ಕು ದಿನ ಮೊದಲು ಬರಬಹುದು, ಇಲ್ಲವೇ ಮುಟ್ಟಿನ ಸಂದರ್ಭದಲ್ಲಿ ಬರುತ್ತದೆ. ಅದು ತುಂಬಾ ತೀವ್ರತರವಾಗಿರಬಹುದು ಮತ್ತು ಅದು ಕೆಲವು ಮಾತ್ರೆಗೂ ಕೂಡಾ ಬಗ್ಗುವುದಿಲ್ಲ ಹೇಗೆ ಈ ಸಮಸ್ಯೆಯನ್ನು ಬಗೆಹರಿಸುವುದು? ಅವಳಿಗೆ 26 ವರ್ಷ. ಮುಟ್ಟಿನ ಮೊದಲು 2 ಕೆ.ಜಿ ತೂಕ ಹೆಚ್ಚಾಗುತ್ತದೆ ಮತ್ತು ಆಹಾರ ವ್ಯಾಯಾಮಗಳಿಂದ ಹೋಗುವುದೇ ಇಲ್ಲ.
-ಹೆಸರು, ಊರು ತಿಳಿಸಿಲ್ಲ

ನಿಮ್ಮ ಮಗಳಿಗಿರುವುದು ಹೆಚ್ಚಿನ ಮಹಿಳೆಯರಲ್ಲಿ 20-40 ವರ್ಷಗಳ ಒಳಗೆ ಕಂಡುಬರುವ ಅದರಲ್ಲೂ ಉದ್ಯೋಗಸ್ಥ ಹಾಗೂ ವಿದ್ಯಾವಂತ ಮಹಿಳೆಯರನ್ನು ಕಾಡುವ ಮುಟ್ಟಿನ ಮುನ್ನ ಬರುವ ಬವಣೆಯ ಲಕ್ಷಣಗಳು (ಪಿ.ಎಂ.ಎಸ್). ಈ ಸಮಸ್ಯೆ ಬಹಳಷ್ಟು ಮಹಿಳೆಯರಲ್ಲಿ ಮತ್ತು ಹೆಚ್ಚಿನ ಜನಸಾಮಾನ್ಯರಲ್ಲಿ ಇದ್ದರೂ ಕೂಡ ಹೆಚ್ಚಿನವರಿಗೆ ಈ ಬಗ್ಗೆ ಗೊತ್ತಿಲ್ಲ. ಈ ಸಮಸ್ಯೆಯಿಂದ ಬಳಲುತ್ತಿದ್ದರೂ ಈ ಬಗ್ಗೆ ಸರಿಯಾದ ಮಾಹಿತಿ ಮತ್ತು ಅರಿವು ಇರುವುದಿಲ್ಲ. ಮುಟ್ಟಿನ ಮುನ್ನ ಬರುವ ಬವಣೆಯ ಬಗ್ಗೆ ಮಾಹಿತಿ ಇರುವುದೇ ಚಿಕಿತ್ಸೆಯ ಮೊದಲ ಹೆಜ್ಜೆ. ಮುಟ್ಟಿನ ಮುನ್ನಬರುವ ಬವಣೆ ಅಂಡೋತ್ಪತ್ತಿಯ ನಂತರ ಆರಂಭವಾಗಿ (7-14 ದಿನ) ಮುಟ್ಟುಬರಲು ನಾಲ್ಕೈದು ದಿನ ಇರುವಾಗ ಅತಿರೇಕಕ್ಕೆ ಹೋಗಿ ಮುಟ್ಟಾಗಿ ಎರಡು ಮೂರು ದಿನದೊಳಗೆ ನಿಂತು ಹೋಗಿ ಬಿಡುತ್ತದೆ. ನಂತರ ಅಂಡೋತ್ಪತ್ತಿ ಆಗುವವರೆಗೂ ಯಾವುದೇ ರೀತಿಯ ರೋಗಲಕ್ಷಣಗಳು ಇರುವುದಿಲ್ಲ. ಪಿ.ಎಂ.ಎಸ್.ನಲ್ಲಿ ಶಾರೀರಿಕವಾಗಿ, ಮಾನಸಿಕವಾಗಿ, ನಡವಳಿಕೆಯಲ್ಲಿ ಹಾಗೂ ಸ್ವನಿಯಂತ್ರಿತ ನರಮಂಡಲದಲ್ಲಿ ಬದಲಾವಣೆಗಳಾಗಬಹುದು. ಶಾರೀರಿಕವಾಗಿ ಮೈ ಭಾರ , ಹೊಟ್ಟೆ ಊದಿದ ಅನುಭವ, ತೂಕ ಏರುವಿಕೆ, ಮಾಂಸಖಂಡಗಳ ಸ್ನಾಯುಸೆಳೆತ, ಕೀಲುನೋವು, ಸುಸ್ತು, ತಲೆನೋವು, ಹೆಚ್ಚುವ ಮಲಬದ್ದತೆ, ಕೆಲವೊಮ್ಮೆ ಬೇಧಿ, ಕಿಬ್ಬೊಟ್ಟೆ ನೋವು ಇತ್ಯಾದಿ ಉಂಟಾಗಬಹುದು.

ಮಾನಸಿಕವಾಗಿ ಸಿಡುಕು, ಉದ್ವೇಗ, ಮುಂಗೋಪ, ಖಿನ್ನತೆ, ಮರೆಗುಳಿತನ, ಏಕಾಗ್ರತೆ ಹೊಂದಲು ಸಾಧ್ಯವಾಗದೇ ಇರುವುದು, ಅತಿಯಾಗಿ ತಿನ್ನುವ ಕಡುಬಯಕೆ, ಅದರಲ್ಲೂ ಉಪ್ಪು, ಉಪ್ಪಿನಾಂಶ, ಸಿಹಿ, ಖಾರಗಳ ಬಗ್ಗೆ ಅಗಾಧ ಬಯಕೆ, ಯಾವುದೇ ನಿರ್ಣಯ ತೆಗೆದುಕೊಳ್ಳಲು ಅಸಾಮರ್ಥ್ಯ, ಲೈಂಗಿಕತೆಯಲ್ಲಿ ವ್ಯತ್ಯಾಸ ಇತ್ಯಾದಿಗಳು ಉಂಟಾಗಬಹುದು. ಸ್ವನಿಯಂತ್ರಿತ ನರಮಂಡಲದಲ್ಲಾಗುವ ಬದಲಾವಣೆಯಿಂದ ತಲೆತಿರುಗುವಿಕೆ, ನಿತ್ರಾಣ, ವಾಕರಿಕೆ, ವಾಂತಿ ಇತ್ಯಾದಿ ಉಂಟಾಗಬಹುದು. ಪಿ.ಎಂ.ಎಸ್ ನಿರ್ದಿಷ್ಟ ಕಾರಣಗಳು ಸರಿಯಾಗಿ ತಿಳಿದಿಲ್ಲವಾದರೂ ಶರ್ಕರಪಿಷ್ಠಾದಿ ಆಹಾರಗಳಿಗೆ ಅಸಹಿಷ್ಣುತೆ ಆಗುವುದು, ಪಿರಿಡಾಕ್ಸಿನ್ ಎಂಬ ವಿಟಮಿನ್ ಕೊರತೆಯಿಂದ, ಈಸ್ಟ್ರೋಜನ್, ಅಥವಾ ಪ್ರೊಜೆಸ್ಟ್ರಾನ್‌ ಹಾರ್ಮೋನ್ ಕೊರತೆ ಅಥವಾ ನರವಾಹಕಮಟ್ಟದಲ್ಲಿ ವ್ಯತ್ಯಾಸವಾಗುವುದು ಇತ್ಯಾದಿ ಕಾರಣ ಕೊಡಬಹುದು. ಇದೊಂದು ಸಹಜ ಹಾರ್ಮೋನು ಮಟ್ಟದ ಏರಿಳಿತಕ್ಕೆ ತೋರಲ್ಪಡುವ ಅಸಹಜ ಶಾರೀರಿಕ ಪ್ರತಿಕ್ರಿಯೆ. ಅತಿಯಾಗಿ ಕಾಫಿ, ಟೀ ಅಥವಾ ಜಂಕ್‌ಫುಡ್ ಸೇವನೆ, ಹೆಚ್ಚು ಉಪ್ಪಿನಾಂಶವಿರುವ ಪದಾರ್ಥಗಳ ಸೇವನೆ, ಧೂಮಪಾನ, ಮದ್ಯಪಾನ ಇವೆಲ್ಲ ಪ್ರಚೋದನೆ ಅಂಶಗಳಾಗಿರುತ್ತವೆ. ರೋಗ ಪತ್ತೆಹಚ್ಚಲು ಯಾವುದೇ ಲ್ಯಾಬ್ ಪರೀಕ್ಷೆಗಳಿಲ್ಲ. ಕನಿಷ್ಠ ಎರಡು– ಮೂರು ಋತುಚಕ್ರದ ಅವಧಿಯಲ್ಲಿ ರೋಗಸೂಚಕ ಲಕ್ಷಣಗಳನ್ನು ಡೈರಿಯಲ್ಲಿ ಬರೆದಿಡುವುದರಿಂದ ಮತ್ತು ಇಂತಹದ್ದೆ ಲಕ್ಷಣಗಳುಳ್ಳ ರಕ್ತಹೀನತೆ, ಹೈಪೋಥೈರಾಡಿಸಮ್ ಮತ್ತು ಖಿನ್ನತೆ ರೋಗಗಳು ಇಲ್ಲವೆಂಬುದನ್ನು ಖಾತ್ರಿಪಡಿಸಿಕೊಂಡು ಪಿ.ಎಂ.ಎಸ್ ಪತ್ತೆಹಚ್ಚಬಹುದು. ಕಡಿಮೆ ಉಪ್ಪು ಹಾಗೂ ಕೆಫೈನ್ ಸೇವನೆ, ಸಕ್ಕರೆ, ಮೈದಾ, ಕರಿದ ಪದಾರ್ಥಗಳನ್ನು ಕಡಿಮೆ ಮಾಡಿ ಹೆಚ್ಚು ಹಣ್ಣುಗಳು, ಹಸಿರು ಸೊಪ್ಪು ತರಕಾರಿ, ಇಡೀ ಧಾನ್ಯಗಳು, ಒಣಹಣ್ಣು ಇತ್ಯಾದಿ ಹೆಚ್ಚು ಸೇವಿಸಬೇಕು. ಪಿರಿಡಾಕ್ಸಿನ್ ಮಾತ್ರೆ (ವಿಟಮಿನ್ ಬಿ6) ವೈದ್ಯರ ಸಲಹೆ ಮೇರೆಗೆ ಸೇವಿಸಿ. ಸಾಕಷ್ಟು ನಿದ್ರೆ ಹಾಗೂ ವಿಶ್ರಾಂತಿ ಕನಿಷ್ಠ 30 ನಿಮಿಷ ನಿತ್ಯ ವ್ಯಾಯಾಮ, ಯೋಗ, ಪ್ರಾಣಾಯಾಮ ಇವೆಲ್ಲವುದರಿಂದ ಪಿ.ಎಂ.ಎಸ್ ನಿರ್ವಹಣೆ ಮಾಡಬಹುದು. ನೀವು ವೈದ್ಯರನ್ನು ಸಂಪರ್ಕಿಸಿ.

ಸಿಸೇರಿಯನ್ ಹೆರಿಗೆ ಆಗಿ 6 ತಿಂಗಳಾಗಿದೆ. ಎಷ್ಟು ತಿಂಗಳಿಗೆ ಸೇರಬಹುದು. 6 ತಿಂಗಳಿಂದ ನಾನು ಮುಟ್ಟು ಕೂಡಾ ಆಗಿಲ್ಲ. ಏನಾದರೂ ತೊಂದರೆ ಆಗಬಹುದೇ?
-ಹೆಸರು, ಊರು ತಿಳಿಸಿಲ್ಲ

ನೀವು ಎದೆಹಾಲು ಕುಡಿಸುತ್ತಿರುವುದರಿಂದ ತಿಂಗಳು ತಿಂಗಳು ಮುಟ್ಟಾಗದೇ ಇರಬಹುದು. ಇನ್ನೂ ನಿಮಗೆ ಮುಟ್ಟು ಆರಂಭವಾಗದೇ ಇದ್ದರೂ ಅಂಡಾಶಯದಿಂದ ಅಂಡೋತ್ಪತ್ತಿ ಆಗುವ ಸಂಭವವಿದೆ. ಆದ್ದರಿಂದ ನೀವಾಗಲಿ ಅಥವಾ ಯಾರೇ ಹೆರಿಗೆ ಆದವರು ಅದು ಸಿಸೇರಿಯನ್ ಅಥವಾ ಸಹಜ ಹೆರಿಗೆ ಆದವರು ಇರಬಹುದು, ಕನಿಷ್ಠ ಆರು ವಾರಗಳ ಅಂತರವಿಟ್ಟು ಲೈಂಗಿಕ ಸಂಪರ್ಕ ಮಾಡಬಹುದು. ಆದರೆ ಎರಡು ವರ್ಷಗಳೊಳಗೆ ಇನ್ನೊಮ್ಮೆ ಗರ್ಭಧಾರಣೆಯಾಗದ ಹಾಗೆ ಮುಂಜಾಗ್ರತೆ ವಹಿಸಿ. ಅಂದರೆ ಕಾಂಡೋಮ್ ಬಳಸಬಹುದು, ಇಲ್ಲವಾದರೆ ಕಾಪರ್ಟಿ ಅಳವಡಿಸಿಕೊಳ್ಳಲಿ. ಮುಂಜಾಗ್ರತೆ ವಹಿಸುವುದು ಒಳ್ಳೆಯದು. ಯಾವುದಕ್ಕೂ ವೈದ್ಯರ ಸಲಹೆ ಪಡೆಯಿರಿ.

* ಮೇಡಂ, ನನಗೆ 24 ವರ್ಷ. ಇತ್ತೀಚಿಗೆ ಮದುವೆ ಆಗಿದೆ. ನಾನು ಹಾಗೂ ನನ್ನಗಂಡ ಲೈಂಗಿಕ ಸಂಪರ್ಕ ಮಾಡಿದ ನಂತರ ನಮಗೆ ಮುಂದೆ ಮಕ್ಕಳಾಗುತ್ತೋ ಇಲ್ಲವೋ ಎನ್ನುವ ಆತಂಕ. ನಾವು ಈ ಪ್ರಕ್ರಿಯೆಯಲ್ಲಿ ಸರಿಯಾಗಿ ತೊಡಗಿಸಿಕೊಂಡಿದ್ದೇವೋ ಇಲ್ಲವೋ ಎನ್ನುವ ಬಗೆಯೂ ಬಹಳಷ್ಟು ಸಂದೇಹಗಳಿವೆ. ನಾವಿಬ್ಬರು ತೆಳ್ಳಗಿರುವುದರಿಂದ ನನಗೆ ಇನ್ನಷ್ಟು ಸಂದೇಹವಾಗುತ್ತಿದೆ. ದಯವಿಟ್ಟು ನಮಗೆ ಸಲಹೆ ಕೊಡುತ್ತೀರಾ?
-ಹೆಸರು, ಊರು ತಿಳಿಸಿಲ್ಲ

ನೀವು ಗಂಡ ಹೆಂಡತಿ ಇಬ್ಬರೂ ಯಾವುದೇ ಆತಂಕ ಹಾಗೂ ಸಂದೇಹಗಳಿಲ್ಲದೇ ಪರಸ್ಪರ ಲೈಂಗಿಕ ಸಂಪರ್ಕದಲ್ಲಿ ಇರಿ. ಈ ಬಗ್ಗೆ ಏನಾದರೂ ಸಂದೇಹ ಬಂದಲ್ಲಿ ನಿಮ್ಮ ಕುಟುಂಬ ವೈದ್ಯರನ್ನ ಇಲ್ಲವೇ ಲೈಂಗಿಕ ತಜ್ಞರನ್ನ ಸಂಪರ್ಕಿಸಿ. ನಿರಂತರ ನೀವಿಬ್ಬರು ಒಟ್ಟಿಗೆ ಇದ್ದು ಪರಸ್ಪರ ಲೈಂಗಿಕ ಸಂಪರ್ಕ ಮುಂದುವರೆಸಿದರೆ ನಿಮಗೆ ಒಂದು ವರ್ಷಗಳೊಳಾಗಾಗಿ ಮಕ್ಕಳಾಗಲೇ ಬೇಕು. ಇಲ್ಲದಿದ್ದರೆ ಅದನ್ನು ಬಂಜೆತನವೆಂದು ಪರಿಗಣಿಸಿ ನಿಮ್ಮಿಬ್ಬರಿಗೂ ಸೂಕ್ತ ತಪಾಸಣೆ ಹಾಗೂ ತಜ್ಞವೈದ್ಯರ ಸಲಹೆ– ಸೂಚನೆ ಅಗತ್ಯವಾಗಿರುತ್ತದೆ. 24 ವರ್ಷವೆಂದರೆ ಹೆಚ್ಚಿನ ಆತಂಕ ಬೇಡ. ಹಾಗೇಯೇ ನಿರ್ಲಕ್ಷ್ಯವೂ ಬೇಡ.


ಡಾ. ವೀಣಾ ಎಸ್. ಭಟ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು