ಸೋಮವಾರ, ಆಗಸ್ಟ್ 8, 2022
23 °C

ಕೌಟುಂಬಿಕ ಮನಸ್ತಾಪ: ಬಹುದೂರ ಒಯ್ಯದಿರಿ

ಅಮೃತ Updated:

ಅಕ್ಷರ ಗಾತ್ರ : | |

Prajavani

ಕೌಟುಂಬಿಕ ಮನಸ್ತಾಪ ಬಹುತೇಕ ಕಡೆ ಇರುವಂಥದೇ. ಆದರೆ ಈ ವೈಮನಸ್ಯವನ್ನು ಮರೆಯದೆ ಅಥವಾ ಸೌಹಾರ್ದ ಮಾತುಕತೆಯಿಂದ ಪರಿಹರಿಸಿಕೊಳ್ಳದೇ ದೂರವಾಗುತ್ತಾರಲ್ಲ, ಅದು ಮಾನಸಿಕ ಸ್ವಾಸ್ಥ್ಯವನ್ನು ಹಾಳು ಮಾಡುವಂಥದ್ದು.

ಆಕೆ 26ರ ಹರೆಯದ ಯುವತಿ. 10 ವರ್ಷಗಳ ಹಿಂದೆ ತನ್ನ ತಾಯಿಯ ಜೊತೆ ಮಾತು ಬಿಟ್ಟವಳು ತಿರುಗಿ ಇದುವರೆಗೂ ಮಾತನಾಡಿಲ್ಲ. ಆಕೆಯ ಅಮ್ಮ ಮಾನಸಿಕವಾಗಿ ನೊಂದು ಆಪ್ತ ಸಮಾಲೋಚಕರ ಮೊರೆ ಹೋಗಿದ್ದಾಳೆ. ಇನ್ನೊಂದು ಪ್ರಕರಣದಲ್ಲಿ ನಾಲ್ವರು ಅಣ್ಣ– ತಮ್ಮಂದಿರು ಆಸ್ತಿ ಜಗಳದಿಂದಾಗಿ 18 ವರ್ಷಗಳಿಂದ ಪರಸ್ಪರ ಮಾತನಾಡುತ್ತಿಲ್ಲ. ಕೆಲವು ಕುಟುಂಬಗಳಲ್ಲಿ ಅತ್ತೆ– ಸೊಸೆ ಪರಸ್ಪರ ಮಾತುಕತೆಯಿಲ್ಲದೇ, ಮಗನನ್ನೂ ದೂರ ಮಾಡಿಕೊಂಡ ಪ್ರಕರಣಗಳಿವೆ. ಬಹುಶಃ ಈ ಭೂಮಿಯ ಮೇಲೆ ಸಂಘಜೀವಿ ಮನುಷ್ಯನ ಸೃಷ್ಟಿಯಾದಾಗಿನಿಂದಲೂ ಈ ದ್ವೇಷ, ಮನಸ್ತಾಪ ಎನ್ನುವುದೂ ಶುರುವಾಗಿರಬಹುದು. ಆದರೆ ಕೌಟುಂಬಿಕ ವೈಮನಸ್ಯದ ಬಗ್ಗೆ ಚರ್ಚಿಸುವುದು ಬಿಡಿ, ಅದರ ಬಗ್ಗೆ ಹೇಳಿಕೊಳ್ಳುವುದಕ್ಕೆ ಬಹುತೇಕರು ನಾಚಿಕೆಪಡುತ್ತಿದ್ದರು. ಈಗ ಪರಿಸ್ಥಿತಿ ಸ್ವಲ್ಪ ಬದಲಾಗಿದೆ. ಈ ವಿಷಯವನ್ನು ಬಹಿರಂಗವಾಗಿ ಮಾತನಾಡುವುದು, ಸಮಾಲೋಚಕರಿಂದ ಪರಿಹಾರ ಪಡೆಯುವುದು ಸಾಮಾನ್ಯ ಎಂಬಂತಾಗಿದೆ. ಇದು ಸೆಲೆಬ್ರಿಟಿಗಳಲ್ಲೂ ಇದೆ. ಸ್ಯಾಂಡಲ್‌ವುಡ್‌ನಲ್ಲಿ ಕೂಡ ಕೆಲವು ನಟ– ನಟಿಯರು ತಮ್ಮ ತಂದೆಯ ಅಥವಾ ತಾಯಿಯ ಜೊತೆಗೆ ಮಾತು ಬಿಟ್ಟಿರುವುದನ್ನು ಸಂದರ್ಶನಗಳಲ್ಲಿ ಹೇಳಿಕೊಂಡಿರುವುದುಂಟು.

ಸದಸ್ಯರು ಒಂದೇ ಕಡೆ ಬದುಕು ಸಾಗಿಸುವಾಗ ನಿತ್ಯ ಮಾತುಕತೆ ನಡೆಸುವುದು, ಜಗಳಗಳಿದ್ದರೆ ಪರಿಹರಿಸಿಕೊಳ್ಳುವುದು, ಮನೆಯಲ್ಲಿ ಹಿರಿಯರಿದ್ದರೆ ಬುದ್ಧಿಮಾತು ಹೇಳಿ ಸರಿಪಡಿಸುವುದು ನಡೆಯುತ್ತಿರುತ್ತದೆ. ಆದರೆ ಕುಟುಂಬಗಳ ಗಾತ್ರ ಸಣ್ಣದಾದಂತೆ ಮನಸ್ಸು ಕೂಡ ಕಿರಿದಾಗುತ್ತಿದೆ. ತಮ್ಮದೇ ಕುಟುಂಬ ಬೆಳೆದಂತೆ ಬದುಕು ಕಟ್ಟಿಕೊಳ್ಳಲು ಯುವ ದಂಪತಿ ಬೇರೆ ಮನೆ ಮಾಡಿಕೊಂಡು ಹೋಗುವುದು ಸಾಮಾನ್ಯವಾಗುತ್ತಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಬಹಳಷ್ಟು ವರ್ಷಗಳ ಹಿಂದೆಯೇ ಬಂದಂತಹ ಇಂತಹ ವ್ಯವಸ್ಥೆ ಭಾರತದಲ್ಲೂ ಕಾಲಿಟ್ಟು ಕೆಲವು ವರ್ಷಗಳಾದವು. ಈ ಮೂಲಕ ಹಿರಿಯರ ಜೊತೆ ಅಥವಾ ಸಹೋದರರ ಜೊತೆ ಹೆಚ್ಚಿನ ಕಡೆ ಮನಸ್ತಾಪ ನಡೆಯುವುದು ಕೂಡ ಸಹಜ ಎಂಬಂತಾಗಿದೆ.

ಮನಸ್ತಾಪಕ್ಕೆ ಕಾರಣಗಳು
ಈ ಆಧುನಿಕ ಜೀವನಶೈಲಿಯಲ್ಲಿ ಇಂತಹ ಕೌಟುಂಬಿಕ ಕಲಹಕ್ಕೆ ಮನಶಾಸ್ತ್ರಜ್ಞರು ಹಲವು ಕಾರಣಗಳನ್ನು ನೀಡುತ್ತಾರೆ. ಬಾಲ್ಯದಲ್ಲಿ ಸಮಸ್ಯೆಗಳಿದ್ದರೆ ಅದು ಮುಂದೆ ಯುವಕ/ ಯುವತಿಯರಾದಾಗಲೂ ಮುಂದುವರಿದುಕೊಂಡು ಹೋಗುತ್ತದೆ ಎನ್ನುತ್ತಾರೆ. ಪೋಷಕರಿಂದ ಬೈಗಳ, ಪೀಡನೆಗೆ ಒಳಗಾದವರು, ತೀರಾ ಕಟ್ಟುನಿಟ್ಟಿನ ಪೋಷಕರಿದ್ದರೆ, ಮಕ್ಕಳಲ್ಲಿ ತಾರತಮ್ಯ ಎಸಗುವ ಪೋಷಕರಿದ್ದರೆ ಅಂಥವರು ಮುಂದೆ ಕುಟುಂಬದ ಸದಸ್ಯರ ಜೊತೆ ಮನಸ್ತಾಪ ಮಾಡಿಕೊಳ್ಳುವುದು ಜಾಸ್ತಿಯಂತೆ. ಹಾಗೆಯೇ ತಂದೆ– ತಾಯಿ ವಿಚ್ಛೇದನ ಪಡೆದುಕೊಂಡರೆ ತಂದೆಯ ಜೊತೆ ವೈಮನಸ್ಯ ಹೊಂದುವುದು ಜಾಸ್ತಿ ಎನ್ನುತ್ತಾರೆ ತಜ್ಞರು.

ಇನ್ನೊಂದು ಸಾಮಾನ್ಯ ಕಾರಣವೆಂದರೆ ಮದುವೆಯಾದ ನಂತರ ಅತ್ತೆ– ಮಾವಂದಿರ ಜೊತೆ ಹೊಂದಾಣಿಕೆಯ ಕೊರತೆ. ಹಾಗೆಯೇ ಹಣಕಾಸು, ಆಸ್ತಿಯ ವಿಷಯದಲ್ಲಿ ಈ ಕಲಹ ಶುರುವಾಗುವುದು ಸಹಜ. ಹಣವನ್ನು ಸಮಾನವಾಗಿ ವಿಭಾಗಿಸಿದರೂ, ಮನೆ, ಜಮೀನು, ಚಿನ್ನ, ಉದ್ಯಮ ಮೊದಲಾದವುಗಳ ವಿಷಯದಲ್ಲಿ ಸರಿಯಾದ ಪಾಲು ಅಸಾಧ್ಯ.

ವಯಸ್ಸಾದ ತಂದೆ– ತಾಯಿಯ ಹೊಣೆ ಹೊರುವ ವಿಷಯದಲ್ಲೂ ಮಕ್ಕಳ ಮಧ್ಯೆ ಮನಸ್ತಾಪ ಶುರುವಾಗಬಹುದು. ‘ನಾನು ಮಾತ್ರ ಅಪ್ಪ– ಅಮ್ಮನ ಹೊಣೆ ಹೊರಬೇಕು, ಉಳಿದವರು ಆರಾಮವಾಗಿ ತಿರುಗಾಡಿಕೊಂಡಿದ್ದಾರೆ’ ಎಂಬ ದೂರು ಬಹುತೇಕರಿಂದ ಬಂದೇ ಬರುತ್ತದೆ. ಪೋಷಕರು ಮತ್ತು ಮಕ್ಕಳ ಮಧ್ಯೆ ಜೀವನಶೈಲಿಗೆ ಸಂಬಂಧಿಸಿದಂತೆ ಮನಸ್ತಾಪ ಬರಬಹುದು. ಕೆಲವೊಮ್ಮೆ ರಾಜಕೀಯ, ಸಿದ್ಧಾಂತಗಳ ಒಲವು ಕೂಡ ಇದಕ್ಕೆ ಕಾರಣವಾಗಬಹುದು.

ಕಲಹ ಮರೆಯುವುದು ಯಾವಾಗ?
‘ಕ್ರಮೇಣ ಈ ವೈಮನಸ್ಯಕ್ಕೆ ನೊಂದು ಪರಸ್ಪರ ಮಾತುಕತೆಗೆ, ಸೌಹಾರ್ದಕ್ಕೆ ಯತ್ನಿಸುವವರು ಈಗ ಜಾಸ್ತಿಯಾಗಿದ್ದಾರೆ’ ಎನ್ನುತ್ತಾರೆ ಆಪ್ತ ಸಮಾಲೋಚಕ ಡಿ.ಟಿ. ಜೋಶಿ. ಅದರಲ್ಲೂ ಕುಟುಂಬ ಸದಸ್ಯರ ಆರೋಗ್ಯ ಸಮಸ್ಯೆ ಬಹುತೇಕರು ರಾಜಿ ಮಾಡಿಕೊಳ್ಳಲು ಕಾರಣ. ಕ್ಷಮಿಸುವುದು, ಮರೆಯುವುದು ಇದೆಲ್ಲ ಸಾಧ್ಯವಿಲ್ಲದಿದ್ದರೂ ನಿಮ್ಮಂತೆಯೇ ಇತರರ ಅಭಿಪ್ರಾಯವೂ ಇರಬೇಕೆಂದಿಲ್ಲ, ವಿಭಿನ್ನ ಅಭಿಪ್ರಾಯಗಳಿರುತ್ತವೆ ಎಂಬುದನ್ನು ಒಪ್ಪಿಕೊಂಡರೆ ಸಂಬಂಧವನ್ನು ನಿಭಾಯಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು