ರವಿಯನ್ನು ನಿಗೂಢವಾದ ತಾವಿನಲ್ಲಿ ಕೂಡಿಹಾಕಿ ಬಂದಿದೆಯೇನೋ ಎಂಬಂತೆ ಜಿಟಿಜಿಟಿ ಸುರಿಯುವ ಮಳೆ, ಎಷ್ಟೆಲ್ಲ ಬೆಚ್ಚನೆಯ ನೆನಪುಗಳನ್ನೂ ತನ್ನೊಂದಿಗೆ ಹೊತ್ತು ತರುತ್ತದೆ. ಮಲೆಸೀಮೆಯಲ್ಲಿ ಮುದ ನೀಡಿದ ಅಂದಿನ ಮುಸಲಧಾರೆ, ಕಾಂಕ್ರೀಟ್ ಕಾಡಿನ ಧಾವಂತದ ಬದುಕಿನಲ್ಲೂ ನವಿರುಕ್ಕಿಸುವ ಇಂದಿನ ವರ್ಷಧಾರೆಯ ನೆನಪಿನ ಸಿಂಚನ ಲೇಖಕಿ ಸಹನಾ ಹೆಗಡೆ ಅವರಿಂದ
ಈ ಲೋಕ, ಆ ಲೋಕ
ಬೆಂಗಳೂರಿನ ರಸ್ತೆಗಳೆಲ್ಲ ಜಲಾವೃತ ಎಂದು ಮಾಧ್ಯಮಗಳು ಎತ್ತರದ ಸ್ವರದಲ್ಲಿ ಸುದ್ದಿ ಬಿತ್ತರಿಸುತ್ತಿದ್ದಾಗ ಅಮೆರಿಕೆಯ ನೆಲದಲ್ಲಿದ್ದೆ. ವಿಮಾನ ನಿಲ್ದಾಣದಿಂದ ಮನೆ ತಲುಪುವುದಕ್ಕಿಂತಲೂ ಹೆಚ್ಚಾಗಿ ಬಟ್ಟೆಗಳನ್ನು ಒಣಗಿಸುವುದು ಹೇಗಪ್ಪಾ ಎಂಬ ಚಿಂತೆ ಕಾಡುತ್ತಿತ್ತು. ಕಳವಳದಲ್ಲಿಯೇ ವಿಮಾನ ಇಳಿದು ಕಾವಳದಲ್ಲಿಯೇ ಮನೆ ತಲುಪಿದಾಗ , ನೆಟ್ಟಿದ್ದ ನಾಲ್ಕಾರು ಹೂಗಿಡಗಳೂ ಒಣಗಿ ನಿಂತಿದ್ದವು!
ಹೇಗಿದೆ ಮಳೆಗಾಲ?
ತಿಂಗಳಾನುಗಟ್ಟಲೆ ಹೊಡೆಯುವ ಮಳೆಯಿಂದ ರೋಸಿಹೋದ ಮಲೆನಾಡಿಗರನ್ನು ಅರ್ಥಾತ್ ಮಳೆನಾಡಿಗರನ್ನು ‘ಹೇಗಿದೆ ಮಳೆಗಾಲ?’ ಎಂದು ಕೇಳಿನೋಡಿ. ‘ಸುಡುಗಾಡು ಮಳೆಗಾಲ, ಬೇಜಾರು ಹಿಡಿದುಹೋಯಿತು’ ಎಂಬ ಉತ್ತರ ಬರದಿದ್ದರೆ ಹೇಳಿ. ಸುಡುಗಾಡಿಗೂ ಹೋಗಲಾರದಷ್ಟು ಮಳೆ ಹೊಯ್ಯುವಲ್ಲಿ ಮಳೆಗಾಲವೇ ಸುಡುಗಾಡಾಗಿಬಿಡುತ್ತದೆ!