ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೀತಿಗಿಂತ ದೊಡ್ಡ ಶಕ್ತಿ ಯಾವುದೂ ಇಲ್ಲ: ಮದುವೆಯ ನಂತರ ಬದುಕು ಮುಗಿಯದು....

ಮಿಸ್ಸೆಸ್‌ ಇಂಡಿಯಾ ಕೋ ಪೆಜೆಂಟ್ ರನ್ನರ್‌ ಅಪ್ ಸುಪ್ರಿಯಾ ಮೋಹನ್‌
Published 8 ಜೂನ್ 2024, 0:32 IST
Last Updated 8 ಜೂನ್ 2024, 0:32 IST
ಅಕ್ಷರ ಗಾತ್ರ
ಪುಣೆಯಲ್ಲಿ ನಡೆದ ಮಿಸ್ಸೆಸ್‌ ಇಂಡಿಯಾ ಕೋ ಪೆಜೆಂಟ್–2024ರ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡದ ಸುಪ್ರಿಯಾ ಮೋಹನ್‌ ಸೆಕೆಂಡ್ ರನ್ನರ್ ಅಪ್‌ ಆಗಿ ಹೊರಹೊಮ್ಮಿದ್ದಾರೆ. ಭಾರತದ ವಿವಿಧ ರಾಜ್ಯಗಳ 14 ಜನ ಸ್ಪರ್ಧಿಗಳ ನಡುವೆ ಎರಡನೇ ಸ್ಥಾನ ಪಡೆದ ಹೆಮ್ಮೆಯ ಕನ್ನಡತಿ ಸುಪ್ರಿಯಾ,  ‘ಮದುವೆಯಾಯಿತು ಇನ್ನೇನಿದೆ?’ ಎನ್ನುವ ಹೆಣ್ಮಕ್ಕಳಿಗೆ ಹೇಳಿದ ಸ್ಫೂರ್ತಿಯ ಕಿವಿಮಾತುಗಳಿವು...

ದಕ್ಷಿಣ ಕನ್ನಡದ ಪುತ್ತೂರಿನಿಂದ ಪುಣೆಯಲ್ಲಿ ನಡೆದ ಮಿಸ್ಸೆಸ್‌ ಇಂಡಿಯಾ ಕೋ–ಪೆಜೆಂಟ್ ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್‌ ಪ್ರಶಸ್ತಿಯ ತನಕದ ನನ್ನ ಪಯಣ, ಒಂದು ಪ್ರೀತಿಯ ಪಯಣ.

ಚಿಕ್ಕಂದಿನಿಂದಲೂ ನನಗೆ ಸೌಂದರ್ಯ, ಅಲಂಕಾರ, ಪ್ರಸಾದನ, ಉಡಿಗೆತೊಡಿಗೆ... ಇಂಥದ್ದರ ಬಗೆಗೆಲ್ಲಾ ಹೆಚ್ಚು ಪ್ರೀತಿ. ಆದರೆ, ಯಾವುದೇ ಮಧ್ಯಮ ವರ್ಗದ ಸಾಂಪ್ರದಾಯಿಕ ಕುಟುಂಬಗಳಲ್ಲಿರುವಂತೆ ನಮ್ಮ ಮನೆಯಲ್ಲಿಯೂ ಸೌಂದರ್ಯ ಸ್ಪರ್ಧೆಗಳ ಬಗ್ಗೆ ಮಡಿವಂತಿಕೆ. ಹೀಗಾಗಿ, ‘ಈಗ ಅದೇನೂ ಬೇಡ. ಮೊದಲು ಓದು’ ಅಂದರು. ಕಂಪ್ಯೂಟರ್ ಸೈನ್ಸ್‌ ಎಂಜಿನಿಯರಿಂಗ್‌ ಮುಗಿಸಿದೆ. ಆಮೇಲೆ? ‘ಒಂದೊಳ್ಳೇ ಕೆಲಸ ಹಿಡಿ, ಸ್ವಾವಲಂಬನೆ ಮುಖ್ಯ’ ಎನ್ನುವ ಬುದ್ಧಿವಾದ. ಯುಎಸ್‌ ಮೂಲದ ಐಟಿ ಕಂಪನಿಯೊಂದರಲ್ಲಿ ಟೆಕ್ನಿಕಲ್‌ ಮ್ಯಾನೇಜರ್‌ ಆಗಿ ಸೇರಿಕೊಂಡೆ. ಈಗಲಾದರೂ...? ‘ಇಲ್ಲ, ಮೊದಲು ಮದುವೆಯಾಗು, ಆಮೇಲೆ ನಿನಗೆ ಹೇಗೆ ಬೇಕೊ ಹಾಗಿರು’ ಅಂದರು ಅಪ್ಪ. ಇದಂತೂ ಪ್ರತಿ ಮನೆಯಲ್ಲಿ ಹೆಣ್ಣುಮಕ್ಕಳಿಗೆ ಪೋಷಕರು ಹೇಳುವ ಖಾಯಂ ಕಿವಿಮಾತು. ಮದುವೆಯಾಗಿ ಸಂಸಾರದಲ್ಲಿ ಬಿದ್ದ ಮೇಲೆ ಬೇರೆ ಏನನ್ನೂ ಮಾಡಲಾರರು ಅಂತ ಪೋಷಕರು ಅಂದುಕೊಂಡಿರುತ್ತಾರೆ. ಬಹಳಷ್ಟು ಹೆಣ್ಣುಮಕ್ಕಳೂ ಅದನ್ನೇ ನಿಜ ಮಾಡುತ್ತಾರೆ. ಮದುವೆಯಾಯಿತು ಎನ್ನುವ ಕಾರಣಕ್ಕೆ ನಮ್ಮನ್ನು, ನಮ್ಮ ಬದುಕನ್ನು, ನಮ್ಮ ಕನಸನ್ನು ಕೈಬಿಡಬೇಕು ಎಂದೇನೂ ಇಲ್ಲ. ಹೊಸ ಬದುಕು, ಹೊಸ ಜವಾಬ್ದಾರಿಗಳನ್ನು ಪ್ರೀತಿಸುತ್ತಲೇ ನಮ್ಮ ಕನಸನ್ನು ಪೊರೆಯಬೇಕಾಗುತ್ತದೆ. ನಾನು ಮಾಡಿದ್ದೂ ಅದೇ.

ಪ್ರೀತಿಯ ಹಿಂದೆ ಹೋದವರು ಸೋತಿಲ್ಲ...

ಪ್ರೀತಿ ಯಾವತ್ತೂ ಸೋಲಿಸುವುದಿಲ್ಲ; ಗೆಲ್ಲಿಸುತ್ತದೆ. ಅದು ವ್ಯಕ್ತಿ ಪ್ರೀತಿಯಾಗಿರಲಿ, ಸ್ವಪ್ರೀತಿಯಾಗಿರಲಿ, ನಮ್ಮ ಕನಸು, ನಮ್ಮ ಬದುಕಿನ ಮೇಲಿನ ಪ್ರೀತಿಯೇ ಆಗಿರಲಿ. ಮದುವೆಯಾಗಿ, ಗಂಡ, ಮನೆ, ಮಗು, ವೃತ್ತಿಯ ನಡುವೆ ಕಳೆದು ಹೋದ ನನ್ನನ್ನು ಆಗಾಗ ನನ್ನ ಕನಸು ಎಚ್ಚರಿಸುತ್ತಲೇ ಇತ್ತು. ಇದಿಷ್ಟೇ ನನ್ನ ಬದುಕಲ್ಲ. ನನ್ನ ಖುಷಿ, ನೆಮ್ಮದಿ ಇನ್ನೆಲ್ಲೊ ಇದೆ ಎನ್ನುವ ಭಾವ ಆಗಾಗ ಮೀಟುತ್ತಲೇ ಇತ್ತು. ಹೆರಿಗೆ ರಜೆಯಲ್ಲಿದ್ದಾಗ ಮೇಕಪ್‌ ಆರ್ಟಿಸ್ಟ್‌ ಕೋರ್ಸ್‌ ಮಾಡಿದೆ. ನಾನು ಮೇಕಪ್‌ ಮಾಡಿದ ಯುವತಿಯರ ಕಣ್ಣಲ್ಲಿ ಖುಷಿ ನೋಡಿದಾಗ ನಾನೂ ಆ ಖುಷಿಯನ್ನು ಅನುಭವಿಸುತ್ತಿದ್ದೆ. ನನ್ನೊಳಗಿನ ಸೌಂದರ್ಯ ಪ್ರಜ್ಞೆ ಮರುಹುಟ್ಟು ಪಡೆಯಲಾರಂಭಿಸಿತ್ತು. ಅವರನ್ನು ಚಂದಗೊಳಿಸುತ್ತ, ನಾನೂ ಚಂದವಾಗುವುದನ್ನು ಕಲಿತೆ.

ಸೌಂದರ್ಯ ಒಂದು ಶಕ್ತಿ. ನಾನು ಸುಂದರವಾಗಿದ್ದೀನಿ, ಸುಂದರವಾಗಿರಬೇಕು ಎನ್ನುವ ಭಾವವೇ ಚೈತನ್ಯವನ್ನು ನೀಡುವಂತದ್ದು. ಮದುವೆ, ಗರ್ಭಾವಸ್ಥೆ, ಹೆರಿಗೆಯ ನಂತರ ಮತ್ತೆ ಯಾವಾಗ ನಾನು ಸೌಂದರ್ಯದತ್ತ ಗಮನ ಕೊಡಲು ಆರಂಭಿಸಿದೆನೊ ಆಗ ನನ್ನೊಳಗಿನ ಶಕ್ತಿಯೂ ವೃದ್ಧಿಸಿದಂತಹ ಅನುಭವ. ನನ್ನ ಕನಸೂ ಮತ್ತೆ ನಳನಳಿಸಿದ್ದು ಆಗಲೇ.

ಸ್ಫೂರ್ತಿ ಒಳಗೇ ಇದೆ

ಅನೇಕ ಸಲ ಸಾಧನೆಗೆ ಹೊರಗಿನಿಂದ ಸ್ಫೂರ್ತಿಯನ್ನು ಹುಡುಕಿ ಸೋಲುತ್ತೇವೆ. ಆದರೆ ನಿಜವಾದ ಸ್ಫೂರ್ತಿ ನಮ್ಮೊಳಗಿನಿಂದಲೇ ಬರಬೇಕು. ಅದನ್ನು ನಾವೇ ಹುಡುಕಿಕೊಳ್ಳಬೇಕು. ನಾನು ಮಾಡಿದ್ದೂ ಅಷ್ಟೇ. ನನ್ನೊಳಗೆ ಹುದುಗಿ ಮರೆಯಾಗಿದ್ದ ಸ್ಫೂರ್ತಿಗೆ ಉತ್ತೇಜನ ಕೊಟ್ಟೆ. ಅದು ನನ್ನನ್ನು ನನ್ನ ಕನಸಿನ ದಾರಿಗೆ ಕರೆದುಕೊಂಡು ಹೋಯಿತು.


ಕುಟುಂಬವೇ ದೊಡ್ಡ ಶಕ್ತಿ

ಒಂದು ಹೆಣ್ಣಿಗೆ ಸಾಧನೆಯ ಹಾದಿಯಲ್ಲಿ ಕುಟುಂಬವೇ ದೊಡ್ಡ ಶಕ್ತಿ. ಆರಂಭದಲ್ಲಿ ನನ್ನ ಕನಸಿಗೆ ಬ್ರೇಕ್‌ ಹಾಕಿದ್ದ ಅಪ್ಪ ಮೋಹನ್‌ ಹಾಗೂ ಅಮ್ಮ ಗುಣವತಿ ನಂತರದಲ್ಲಿ ಅದೇ ಕನಸನ್ನು ಪೋಷಿಸಲೂ ನೆರವಾದರು. ನನ್ನ ಮೇಲೆ ಜವಾಬ್ದಾರಿ ಹೆಚ್ಚಿದಾಗ, ನಾನು ಕಾರ್ಯನಿಮಿತ್ತ ಬೇರೆ ಊರುಗಳಿಗೆ ಹೋಗಬೇಕಾಗಿ ಬಂದಾಗ ಒಂದೇ ಕರೆಗೆ ಅಮ್ಮ ಓಡಿ ಬರದೇ ಹೋಗಿದ್ದರೆ ಇವತ್ತು ಇಷ್ಟೆಲ್ಲಾ ಸಾಧ್ಯವಾಗುತ್ತಿರಲಿಲ್ಲ. ಈ ಕ್ಷೇತ್ರದ ಬಗ್ಗೆ ಸಣ್ಣ ಕಳವಳವನ್ನಿಟ್ಟುಕೊಂಡ ಪತಿ ಅರ್ಜುನ್‌ ಸಹ ಮೊದ ಮೊದಲು ಹಿಂದೇಟು ಹಾಕಿದರು. ಅನಂತರ ನನ್ನ ನೆರವಿಗೆ ನಿಂತದ್ದು ಈ ಸಾಧನೆಗೆ ಪೂರಕವಾಯಿತು.

ಗೆಲ್ಲಿಸಿದ ಉತ್ತರ–ಈ ಸ್ಪರ್ಧೆಯಲ್ಲಿ ಗೆದ್ದರೆ ಏನು ಮಾಡುವಿರಿ?
ಕೊನೆಯ ಸುತ್ತಿನಲ್ಲಿ ನನ್ನೆದುರಿಗೆ ಬಂದ ಪ್ರಶ್ನೆಯಿದು. ‘ವಿವಾಹಿತ ಮಹಿಳೆಯರ ಸಾಧನೆಗೆ ಸ್ಫೂರ್ತಿಯಾಗಬೇಕು’ ಎಂದು ಉತ್ತರಿಸಿದೆ. ‘ಮದುವೆಯಾಯಿತು, ಇನ್ನೇನು?’ ಎಂದು ಕನಸಿನಿಂದ ಹಿಂದೆ ಸರಿಯುವ ವಿವಾಹಿತ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಬೇಕು. ಭಾರತದಲ್ಲಿ ವಿವಾಹವನ್ನು ಹೆಣ್ಣಿನ ಸಾಧನೆಯ ಅಡ್ಡಗೋಡೆ ಎಂದು ಬಿಂಬಿಸುವವರಿಗೆ, ಮದುವೆ ಹೆಣ್ಣಿನ ಜೀವನದ ಫುಲ್‌ಸ್ಟಾಪ್‌ ಎಂದು ನಂಬಿರುವವರಿಗೆ ಉತ್ತರ ಕೊಡಲು ನನಗೆ ಈ ಗೆಲುವು ಅವಕಾಶ ನೀಡಿದೆ. ಕೊನೆಯ ಸುತ್ತಿನಲ್ಲಿ ನಾವು 14 ಜನ ಸ್ಪರ್ಧಿಗಳು. ನಾವು ಕೊಡುವ ಉತ್ತರದ ಮೇಲೆ ನಮ್ಮ ಗೆಲುವು ನಿರ್ಧರಿತವಾಗಿರುತ್ತದೆ.


ಸೌಂದರ್ಯ ಸ್ಪರ್ಧೆ ಎಂದರೆ…

ಸೌಂದರ್ಯ ಸ್ಪರ್ಧೆ ಎಂದರೆ ಅಂದ–ಚಂದ, ಮೈಮಾಟ–ಮೈಕಾಂತಿ, ಥಳಕು–ಬಳಕು, ಒನಪು–ಒಯ್ಯಾರ... ಇದಷ್ಟೇ ಅಲ್ಲ. ಬಾಹ್ಯ ಸೌಂದರ್ಯದಷ್ಟೇ ಆಂತರಿಕ ಪ್ರಭೆಯೂ ಬೇಕು. ಬದುಕನ್ನು ನೋಡುವ ನಿಮ್ಮ ದೃಷ್ಟಿಕೋನ, ಧೋರಣೆ, ಕೌಶಲ್ಯ, ನೈಪುಣ್ಯ, ಚಾತುರ್ಯ, ಮಾನವೀಯತೆ, ಮನೋಧರ್ಮ, ದೇಹದ ಭಂಗಿ ಎಲ್ಲವೂ ಮುಖ್ಯವಾಗುತ್ತದೆ. ಸೌಂದರ್ಯಸ್ಪರ್ಧೆಗೆ ಸಜ್ಜಾಗುವುದು ಎಂದರೆ ನಮ್ಮ ಒಳ–ಹೊರಗನ್ನು ನಾವು ಉದ್ದೀಪನಗೊಳಿಸಿಕೊಳ್ಳುವುದು.

ಸುಪ್ರಿಯಾ ಮೋಹನ್
ಸುಪ್ರಿಯಾ ಮೋಹನ್

ಮುಂದಿದೆ ಕನಸು

ನನ್ನ ಕನಸಿನೆಡೆ ಇದೊಂದು ಪುಟ್ಟ ಹೆಜ್ಜೆ. ಸಾಧಿಸುವುದು ಇನ್ನೂ ಮುಂದಿದೆ. ಮಿಸ್ಸೆಸ್‌ ಗ್ಲೋಬ್‌, ಮಿಸ್ಸೆಸ್‌ ಯೂನಿವರ್ಸ್‌, ಮಿಸ್ಸೆಸ್‌ ವರ್ಲ್ಡ್ ನಂತಹ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಬೇಕೆನ್ನುವ ಮಹದಾಸೆ ಇದೆ. ಅದಕ್ಕೆ ನನ್ನನ್ನು ನಾನು ಸಜ್ಜುಗೊಳಿಸಿಕೊಳ್ಳುತ್ತ, ಅವಕಾಶಕ್ಕಾಗಿ ಕಾಯುವೆ.

ಸುಪ್ರಿಯಾ ಮೋಹನ್
ಸುಪ್ರಿಯಾ ಮೋಹನ್
ಕಪ್ಪನ್‌ ಹುಡುಗಿ...
ಚಿಕ್ಕಂದಿನಿಂದ ನಂದು ಸಾಧಾರಣ ಕಪ್ಪಗಿನ ಮೈಬಣ್ಣ. ಮನೆಯಲ್ಲಿ ಎಲ್ಲರೂ ಬೆಳ್ಳಗಿದ್ದಾರೆ. ಮನೆಯಲ್ಲಿ ಏನಾದ್ರೂ ಕಾರ್ಯಕ್ರಮ ಇದ್ದಾಗ ನೆಂಟರು ‘ಯಾರದು? ಆ ಕಪ್ಪನ್‌ ಹುಡುಗಿ?’ ಅಂತ ಕೇಳೋರು. ಅದನ್ನೇ ನಾನು ಸ್ಫೂರ್ತಿಯಾಗಿ, ಚಾಲೆಂಜ್‌ ಆಗಿ ತಗೊಂಡೆ. ಅಂತಹ ಮಾತುಗಳಿಂದ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವ ಬದಲು ಹೆಚ್ಚಿಸಿಕೊಂಡೆ. ನನ್ನನ್ನು ನಾನು ಪ್ರೀತಿಸುವುದನ್ನು, ಅಲಂಕರಿಸಿಕೊಳ್ಳುವುದನ್ನು, ಚಂದವಾಗಿರುವುದನ್ನು ಕಲಿತೆ. ಯಾರು ನನ್ನನ್ನು ಕಪ್ಪನ ಹುಡುಗಿ ಅಂತ ಸೈಡಿಗೆ ಸರಿಸುತ್ತಿದ್ದರೊ ಅವರ ಮುಂದೆ ಬೆಳೆದು ತೋರಿಸಬೇಕೆನ್ನುವ ಛಲ ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ. ಅನೇಕ ಸಲ ಸಾಧನೆಗೆ ಹೊರಗಿನಿಂದ ಸ್ಫೂರ್ತಿಯನ್ನು ಹುಡುಕಿ ಸೋಲುತ್ತೇವೆ. ಆದರೆ ನಿಜವಾದ ಸ್ಫೂರ್ತಿ ನಮ್ಮೊಳಗಿನಿಂದಲೇ ಬರಬೇಕು. ಅದನ್ನು ನಾವೇ ಹುಡುಕಿಕೊಳ್ಳಬೇಕು. ನಾನು ಮಾಡಿದ್ದೂ ಅಷ್ಟೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT