ಮಂಗಳವಾರ, ಮಾರ್ಚ್ 21, 2023
20 °C

ಗೀಳೆಂಬ ವ್ಯಾಧಿಯಿಂದ ಬಾಡದಿರಲಿ ಬದುಕು

ವಿನುತ ಮುರಳೀಧರ Updated:

ಅಕ್ಷರ ಗಾತ್ರ : | |

Prajavani

‘ಕೊರೊನಾ ಬಂದ ಮೇಲೆ ಇವಳು ಎಷ್ಟೊತ್ತಿಗೆ ನೋಡಿದರೂ ಕೈ ತೊಳಿತಾನೇ ಇರ್ತಾಳೆ. ದಿನವಿಡೀ ಇದೇ ಕೆಲಸ. ಒಂದು ಸಲ ತೊಳೆದು ಐದು ನಿಮಿಷವೂ ಆಗಿರಲ್ಲ, ಮತ್ತೆ ಸಿಂಕ್ ಹತ್ರ ಓಡ್ತಾಳೆ. ನಂಗಂತೂ ಹೇಳಿ ಹೇಳಿ ಸಾಕಾಗಿ ಹೋಯಿತು. ತೊಳೆದೂ ತೊಳೆದೂ ಇವಳ ಕೈಯೆಲ್ಲಾ ಹೇಗಾಗಿ ಬಿಟ್ಟಿದೆ ನೋಡಿ. ಹೇಗೆ ಬಿಡಿಸೋದು ಅಂತನೇ ಗೊತ್ತಾಗ್ತಿಲ್ಲ. ನೀವು ಏನಾದರೂ ಪರಿಹಾರ ಹೇಳ್ತೀರೇನೋ ಅಂತ ಕರೆದುಕೊಂಡು ಬಂದೆ’ ಒಂದೇ ಉಸಿರಲ್ಲಿ ತಮ್ಮ ಅಳಲು ತೋಡಿಕೊಂಡರು ಹನ್ನೆರಡರ ಹರೆಯದ ಮಗಳೊಂದಿಗೆ ಆಪ್ತಸಮಾಲೋಚನೆಗೆಂದು ಬಂದಿದ್ದ ಆ ಮಹಿಳೆ.

‘ದಿನಕ್ಕೆ ಏಳೆಂಟು ಸಲ ಸ್ನಾನ ಮಾಡಿದ್ರೂ ಮನಸ್ಸಿಗೆ ಸಮಾಧಾನ ಇಲ್ಲ, ಇನ್ನೂ ಈ ಹಾಳ್ ಕೊರೊನಾ ರೋಗಾಣುಗಳು ಪೂರ್ತಿ ಹೋಗಿಲ್ಲ ಅನಿಸುತ್ತೆ. ತರಕಾರಿ, ಪಾತ್ರೆ, ಬಟ್ಟೆ, ಬಚ್ಚಲು, ಟಾಯ್ಲೆಟ್‌ನೆಲ್ಲಾ ಒಂದ್ಸಲ ತೊಳೆದಿರ‍್ತೀನಿ, ಆದ್ರೂ ಕ್ರಿಮಿಗಳು ಉಳ್ಕೊಂಡ್ರೆ ಅಂತ ಹೆದರಿಕೆ ಶುರುವಾಗಿ ಮತ್ತೆ ಕ್ಲೀನಿಂಗ್‌ಗೆ ಹೊರಡ್ತೀನಿ. ಮನಸ್ಸಿಗೆ ಬರೀ ಕಿರಿಕಿರಿ. ಸಮಯ ಪೂರ್ತಿ ಇದಕ್ಕೇ ಬೇಕು. ಗಂಡ, ಮಕ್ಕಳ ಕಡೆ ಗಮನ ಕೊಡೋಕೆ ಆಗುತ್ತಿಲ್ಲ. ಒಂದೊಂದು ಸಲ ತಲೆ ಪೂರ್ತಿ ಕೆಟ್ಟೋಗಿ ಸಾಯಬೇಕು ಅನ್ಸುತ್ತೆ. ಈ ಯೋಚನೆಗಳಿಂದ ವಿಪರೀತ ತ್ರಾಸಾಗುತ್ತಿದೆ..’ ಮೂವತ್ತರ ಹರೆಯದ ಯುವತಿ ತಮ್ಮ ನೋವು ತೋಡಿಕೊಳ್ಳುತ್ತಾ ಕಣ್ಣೀರು ಹಾಕಿದರು.

ಹೌದು, ಕೋವಿಡ್ ಸಾಂಕ್ರಾಮಿಕ ರೋಗ ಕಾಣಿಸಿದ ನಂತರದಿಂದ ಈ ಪರಿಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಏರುಮುಖದಲ್ಲಿದೆ. ಕೊರೊನಾ ಅಂಟದಂತೆ ತಡೆಯಲು ಆಗಾಗ ಕೈ ತೊಳೆಯಬೇಕು, ಸ್ಯಾನಿಟೈಸ್ ಮಾಡಿಕೊಳ್ಳಬೇಕು ಎಂಬ ಎಚ್ಚರಿಕೆಯ ಮಾತುಗಳನ್ನು ಅತಿಯಾಗಿ ಪಾಲಿಸಿ ಈ ಬಗೆಯ ಗೀಳಿನ ಸಮಸ್ಯೆ ಹಠಾತ್ ಹೆಚ್ಚಳವಾಗಿದೆ. ಯಾವುದೇ ಆಲೋಚನೆ, ಅನುಮಾನ, ವಿಚಾರ ಅಥವಾ ಘಟನೆ ಮನಸ್ಸಿನೊಳಗೆ ಪದೇ ಪದೇ ಬರುವುದೇ ಗೀಳು ಚಟದ ಕಾಯಿಲೆ. ಇಲ್ಲಿ ವ್ಯಕ್ತಿಯೊಬ್ಬ ಒಂದೇ ವರ್ತನೆಯನ್ನು ಪುನಃ ಪುನಃ ಪ್ರದರ್ಶಿಸುತ್ತಾನೆ. ಇಂತಹ ಯೋಚನೆಗಳು ಒಳ್ಳೆಯದಲ್ಲ, ಮನಸ್ಸಿನೊಳಗೆ ಬಿಟ್ಟುಕೊಳ್ಳಬಾರದೆಂದು ತಿಳಿದಿದ್ದರೂ ತಡೆಯುವುದು ಅಸಾಧ್ಯವೆನಿಸುತ್ತದೆ.

ಲಕ್ಷಣಗಳು

ಪದೇ ಪದೇ ಸ್ನಾನ ಮಾಡೋದು, ಕೈ-ಕಾಲು, ಪಾತ್ರೆ, ಬಟ್ಟೆ, ತರಕಾರಿಗಳನ್ನೆಲ್ಲಾ ತೊಳೆಯುತ್ತಲೇ ಇರುವುದು, ಸ್ಟವ್, ಲೈಟ್ ಸ್ವಿಚ್‌, ನಲ್ಲಿಗಳನ್ನು ಆಫ್ ಮಾಡಿದ್ದೇನೋ ಇಲ್ವೋ ಎಂದು ಮತ್ತೆ ಮತ್ತೆ ಪರೀಕ್ಷಿಸೋದು, ಹೊರ ಹೋಗುವಾಗ ಮನೆಯ ಬೀಗ ಸರಿಯಾಗಿ ಹಾಕಿದೆಯೋ ಇಲ್ಲವೋ ಎಂದು ನಾಲ್ಕಾರು ಬಾರಿ ಎಳೆದೆಳೆದು ನೋಡುವುದು, ಸಂಶಯ ಪ್ರವೃತ್ತಿ, ಯಾರನ್ನೇ ನೋಡಲಿ ಲೈಂಗಿಕ ಭಾವನೆ ಕೆರಳುವುದು, ದೇವರನ್ನು ಕಂಡಾಕ್ಷಣ ಕೆಟ್ಟ ಯೋಚನೆ ಬಂದು ಬಯ್ಯಬೇಕೆನಿಸುವುದು, ಕೆಲವೊಂದು ಸ್ತೋತ್ರಗಳನ್ನು ಇಷ್ಟು ಬಾರಿ ಹೇಳಿದರೆ ಅಂದುಕೊಂಡ ಕೆಲಸವಾಗುತ್ತದೆ ಎಂಬ ಭಾವನೆ, ದಾರಿಯಲ್ಲಿ ನಡೆದು ಹೋಗುವಾಗ ಲೈಟ್‌ಕಂಬ, ಮರಗಳನ್ನು ಒಂದಷ್ಟು ಸಲ ಮುಟ್ಟಿ ಮುನ್ನಡೆದರೆ ಒಳ್ಳೆಯದಾಗತ್ತೆ ಎಂಬ ಆಲೋಚನೆ, ದುಡ್ಡು ಕೊಡಬೇಕಿದ್ದಾಗ ಪದೇ ಪದೇ ನೋಟುಗಳನ್ನು ಎಣಿಸುವುದು, ಬೇರೆಯವರಿಗೆ ಬಯ್ಯಬೇಕು, ಹೊಡಿಬೇಕು, ಹಿಂಸಿಸಬೇಕು ಎಂಬ ಅನಿಸಿಕೆ... ಈ ರೀತಿ ಸಹಜತೆಗಿಂತ ವಿಪರೀತವಾದ ಮನೋಭಾವವೇ ಗೀಳುರೋಗದ ಪ್ರಮುಖ ಲಕ್ಷಣ.

ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೆಲವು ಕೆಲಸಗಳನ್ನು ಮಾಡಲೇಬೇಕೆಂಬ ಆಂತರಿಕ ಒತ್ತಡ ಉಂಟಾಗಿ ಅವುಗಳನ್ನು ಮಾಡಲಾಗದಿದ್ದರೆ ವಿಪರೀತ ತಳಮಳ, ಹಿಂಸೆಯೆನಿಸುವುದು. ಕೆಲವೊಮ್ಮೆ ಒತ್ತಡ ಅತಿಯಾಗಿ ಆತ್ಮಹತ್ಯೆಗೂ ಪ್ರಯತ್ನಿಸುವರು.

ಮೆದುಳಿನ ಸೆರಟೋನಿನ್ ಎಂಬ ನರವಾಹಕದ ಅಸಮತೋಲನವೇ ಗೀಳು ಮನೋಬೇನೆಗೆ ಕಾರಣ. ಆನುವಂಶೀಯತೆ, ಮೆದುಳಿನ ಸೋಂಕು, ಹಾರ್ಮೋನ್‌ಗಳ ಏರುಪೇರು, ವಿಪರೀತ ಒತ್ತಡ, ಅತಿಭಯದಿಂದಲೂ ಈ ಸಮಸ್ಯೆ ಹುಟ್ಟಿಕೊಳ್ಳಬಹುದು. ಗೀಳು ವ್ಯಾಧಿ ಜೀವ ತೆಗೆಯದಿದ್ದರೂ ಜೀವನವನ್ನು ಹಾಳುಮಾಡಬಲ್ಲದು. ಮಕ್ಕಳು ಓದಿನಲ್ಲಿ ಹಿಂದೆ ಬೀಳುವರು. ತಮ್ಮ ವರ್ತನೆಯಿಂದ ಅಪಹಾಸ್ಯಕ್ಕೀಡಾಗಬಹುದೆಂಬ ಚಿಂತೆಯಿಂದ ಸಾಮಾಜಿಕವಾಗಿ ಹಿಂಜರಿಯುವರು. ಯಾವುದೇ ಕೆಲಸವನ್ನು ಪೂರ್ಣವಾಗಿ ಮಾಡಲು ಸಾಧ್ಯವಾಗದಿರುವುದು, ಕುಟುಂಬದಲ್ಲಿ ಒಡಕು, ವಿಚ್ಛೇದನ, ಹತಾಶೆ, ಖಿನ್ನತೆ, ಆತ್ಮಹತ್ಯೆಯ ಆಲೋಚನೆ... ಇವೆಲ್ಲಾ ಗೀಳುರೋಗಿಗಳು ಸಾಮಾನ್ಯವಾಗಿ ಅನುಭವಿಸುವ ತೊಂದರೆಗಳು.

ಪರಿಹಾರವೇನು?

ಗೀಳು ಸಮಸ್ಯೆಗೆ ಉತ್ತಮ ಪರಿಹಾರಗಳಿವೆ. ಬೇಗನೆ ಗುರುತಿಸಿ ಚಿಕಿತ್ಸೆ ಪಡೆದಾಗ ಸಂಪೂರ್ಣ ಗುಣ ಸಾಧ್ಯ. ಮಾಟ, ಮಂತ್ರ-ತಂತ್ರಗಳೆಂದು ಮೂಢನಂಬಿಕೆಗೆ ಮೊರೆ ಹೋಗದೆ ಲಕ್ಷಣಗಳು ಕಂಡಾಗ ತಡಮಾಡದೆ ಮನೋಚಿಕಿತ್ಸಕರ ನೆರವು ಪಡೆಯಬೇಕು. ಈ ಕಾಯಿಲೆಗೆ ಪರಿಣಾಮಕಾರಿ ಔಷಧಗಳಿವೆ. ಜೊತೆಗೆ ಬೇಡದ ಆಲೋಚನೆಗಳು ಮನಸ್ಸಿಗೆ ಬಾರದಂತೆ ಹತೋಟಿ ಸಾಧಿಸಲು ವರ್ತನಾ ಚಿಕಿತ್ಸೆ, ಸಾಂತ್ವನ, ಸಮಾಧಾನ ಹೇಳಬಲ್ಲ ಮನೋಚಿಕಿತ್ಸೆ, ಮನಸ್ಸನ್ನು ಉಲ್ಲಾಸಗೊಳಿಸುವ ಧ್ಯಾನ, ಯೋಗ, ಸಂಗೀತ, ಪ್ರಾಣಾಯಾಮದಂತಹ ಅಭ್ಯಾಸಗಳು ರೋಗವನ್ನು ಗುಣಪಡಿಸುವಲ್ಲಿ ಸಹಕಾರಿ. ಇವೆಲ್ಲದರ ಜೊತೆಗೆ ಕುಟುಂಬದ ಸಂಪೂರ್ಣ ಸಹಕಾರವಿದ್ದಾಗ ಮಾತ್ರ ಈ ಮಾನಸಿಕ ಕಾಯಿಲೆಯನ್ನು ಗೆಲ್ಲಬಹುದು.

ಮಕ್ಕಳು, ಮಹಿಳೆಯರಲ್ಲಿ ಹೆಚ್ಚು

ಮಾಧ್ಯಮಗಳಲ್ಲಿ ಪ್ರಸಾರವಾಗುವ ಸುದ್ದಿಗಳನ್ನು ನೋಡಿ ಭಯ ಬೀಳುವ ಹೆಣ್ಣುಮಕ್ಕಳು ಪದೇ ಪದೇ ಕೈ ತೊಳೆಯುವುದು, ಸ್ಯಾನಿಟೈಸರ್ ಬಳಸುವುದು, ಹೊರಗಡೆಯಿಂದ ತಂದಿರುವುದನ್ನು ತೊಳೆಯುತ್ತಲೇ ಇರುವುದು ಮಾಡುತ್ತಿದ್ದಾರೆ. ಇದು ಅವರಲ್ಲಿ ಗೀಳಾಗಿ ಮಾರ್ಪಟ್ಟಿದೆ. ಹೆಣುಮಕ್ಕಳಲ್ಲಿ ಭಯದೊಂದಿಗೆ ಕುಟುಂಬದವರೆಲ್ಲರೂ ಸಾಯುತ್ತಾರೆ, ನಮ್ಮ ಕುಟುಂಬವನ್ನು ರಕ್ಷಿಸಬೇಕು ಎನ್ನುವ ಕಾಳಜಿ ಕೂಡ ಗೀಳಿಗೆ ಕಾರಣವಾಗಿದೆ. ಹೆಣ್ಣುಮಕ್ಕಳಲ್ಲಿ ಮೊದಲು ಗೀಳಿನ ಸಮಸ್ಯೆ ಇದ್ದರೂ ಅದು ಅವರ ಜೀವನಶೈಲಿ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ. ಆದರೆ ಕೊರೊನಾದಿಂದ ಉಂಟಾದ ಗೀಳು ಅವರ ಜೀವನಶೈಲಿಯ ಜೊತೆಗೆ ಚರ್ಮದ ಸಮಸ್ಯೆಗೂ ಕಾರಣವಾಗಿದೆ.

ಲೇಖಕಿ: ಆಪ್ತ ಸಮಾಲೋಚಕಿ, ತೀರ್ಥಹಳ್ಳಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು