ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಪಡೆಯ ಶೌರ್ಯವಾಹಿನಿ

Last Updated 6 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಕೋರಮಂಗಲದ 3, 4ನೇ ಬ್ಲಾಕ್‌ನಲ್ಲಿ ಸಂಜೆ ಕಾಲೇಜು ಮುಗಿಸಿ ಮನೆಗೆ ತೆರಳುವ ಯುವತಿಯರನ್ನು ಚುಡಾಯಿಸುತ್ತಿದ್ದ ಯುವಕರ ಗುಂಪು, ಕಳೆದ ಒಂದು ವಾರದಿಂದ ಮೌನವಾಗಿದೆ.

ಸಂಜೆ ಮದ್ಯಪಾನ ಮಾಡಿ, ಮನೆಗೆ ಬಂದು ಪತ್ನಿಗೆ ಥಳಿಸುವ ಗಂಡನಿಗೆ ಮನದಲ್ಲಿ ಭಯ ಮೂಡಿದೆ.ಇದೇನಿದು, ಈ ಮಹಾನಗರದಲ್ಲಿ ಇಂಥ ಬದಲಾವಣೆ?

ಹೌದು! ಇಂಥ ಬದಲಾವಣೆಗೆ ಕಾರಣವಾಗಿರುವುದು ‘ಶೌರ್ಯವಾಹಿನಿ‘ ಎಂಬ ಮಹಿಳಾ ಪೊಲೀಸ್ ಪಡೆಯ ಕಾರ್ಯ ನಿರ್ವಹಣೆ. ಧೈರ್ಯ, ಸಾಹಸಿ ಹೆಣ್ಣುಮಕ್ಕಳಿರುವ ಮಹಿಳಾ ಪೊಲೀಸ್‌ ಪಡೆ, ಒಂದು ವಾರದಿಂದ ಕೋರಮಂಗಲದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಧೈರ್ಯ ಮತ್ತು ಶೌರ್ಯಕ್ಕೆ ಲಿಂಗಭೇದವಿಲ್ಲವೆಂಬುದಿಲ್ಲ ಎಂಬುದನ್ನು ಈ ಪಡೆ ಸಾಬೀತುಪಡಿಸುತ್ತಿದೆ. ಹೆಣ್ಣನ್ನು ಗೋಳು ಹೊಯ್ದುಕೊಳ್ಳುವ ಕಿಡಿಗೇಡಿಗಳಿಗೆ ಚುರುಕು ಮುಟ್ಟಿಸಲು ಈ ಪಡೆಯು ಸರ್ವ ರೀತಿಯಲ್ಲಿಯೂ ಸಜ್ಜಾಗಿದೆ.

ಪುರುಷ ಪೊಲೀಸ್‌ ಸಿಬ್ಬಂದಿಯಂತೆ, ಶೌರ್ಯವಾಹಿನಿ ಸಿಬ್ಬಂದಿ ರಾತ್ರಿ ಹೊತ್ತು ನಗರದ ವಿವಿಧ ಭಾಗಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಸುರಕ್ಷತೆ ಗಾಗಿ ನಗರದಲ್ಲಿ ಪೊಲೀಸ್‌ ಇಲಾಖೆ ಮೊದಲಬಾರಿಗೆ ಮಹಿಳಾ ಪೊಲೀಸ್‌ ಗಸ್ತು ಪಡೆಯನ್ನು ಆರಂಭಿಸಿದೆ.

ದೇಶದಲ್ಲೇ ಇದೇ ಮೊದಲ ಬಾರಿಗೆ ಇಂತಹ ಪಡೆಯನ್ನು ರಚಿಸಲಾಗಿದೆ. ಆರಂಭದ ಹಂತದಲ್ಲಿ 13 ಮಹಿಳಾ ಪೊಲೀಸ್‌ ಸಿಬ್ಬಂದಿ ಚೀತಾ ಬೈಕ್‌ನಲ್ಲಿ ಗಸ್ತು ಹೊಡೆಯಲಿದ್ದಾರೆ. ಹಾಗೆಯೇ ಪಿಂಕ್‌ ಹೊಯ್ಸಳ ವಾಹನದಲ್ಲಿಯೂ ಮಹಿಳಾ ಪೊಲೀಸರೇ ಕಾರ್ಯನಿರ್ವಹಿಸಲಿದ್ದಾರೆ.

ಕೋರಮಂಗಲ, ಎಚ್‌ಎಸ್‌ಆರ್‌ ಲೇಔಟ್‌, ಎಲೆಕ್ಟ್ರಾನಿಕ್‌ಸಿಟಿ ಸೇರಿದಂತೆ ಆಗ್ನೇಯ ವಿಭಾಗದ ಒಂಬತ್ತು ಠಾಣೆಗಳಲ್ಲಿ ಶೌರ್ಯ ವಾಹಿನಿ ಆರಂಭವಾಗಿದೆ. ಕ್ರಮೇಣ ನಗರದ ಎಲ್ಲಾ ಠಾಣೆಗಳಿಗೂ ವಿಸ್ತರಣೆಯಾಗಲಿದೆ. ಆಗ, ಎಲ್ಲ ಠಾಣೆಯ ಮಹಿಳಾ ಸಿಬ್ಬಂದಿ ಈ ಪಡೆ ಸೇರುತ್ತಾರೆ. ಹೆಣ್ಣುಮಕ್ಕಳ ರಕ್ಷಣೆ, ಅಪಘಾತ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಈ ತಂಡಕ್ಕೆ ಮಾಹಿತಿ ನೀಡಬಹುದು. ಪಿಂಕ್‌ ಹೊಯ್ಸಳ ತಂಡಕ್ಕೂ ಬಂದಿರುವ ಪ್ರಕರಣಗಳನ್ನು ಈ ತಂಡ ನಿರ್ವಹಿಸಲಿದೆ.

25 ದಿನ ತರಬೇತಿ

ಈ ಪಡೆಯ ಸಿಬ್ಬಂದಿಗೆ ಬೈಕ್‌ ಚಾಲನೆ, ರಾತ್ರಿ ಗಸ್ತಿನ ಬಗ್ಗೆ 25 ದಿನಗಳು ತರಬೇತಿ ನೀಡಲಾಗಿದೆ. ಇದೇ ಮೊದಲ ಬಾರಿಗೆ ರಾತ್ರಿ ವೇಳೆಯಲ್ಲೂ ಮಹಿಳಾ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ ಎನ್ನುತ್ತವೆ ಪೊಲೀಸ್‌ ಮೂಲಗಳು. ಗಸ್ತು ತಿರುಗುತ್ತಿರುವಾಗ ಸುರಕ್ಷತೆಯ ದೃಷ್ಟಿಯಿಂದ ಮಹಿಳಾ ಪಡೆ ಸಿಬ್ಬಂದಿ ಪುರುಷ ಸಿಬ್ಬಂದಿ ಜೊತೆ ಸಂಪರ್ಕದಲ್ಲಿರುತ್ತಾರೆ.

ಆಗ್ನೇಯ ವಿಭಾಗದ ಒಂಬತ್ತು ಠಾಣೆಗಳಲ್ಲಿ ಪ್ರತಿ ಠಾಣೆಯಿಂದ ಇಬ್ಬರು ಮಹಿಳೆಯರು ಶೌರ್ಯವಾಹಿನಿ ಗಸ್ತು ಪಡೆಯಲ್ಲಿರುತ್ತಾರೆ. ಚೀತಾ ಬೈಕ್‌, ಹೊಯ್ಸಳ ವಾಹನದಲ್ಲಿ ಗಸ್ತು ತಿರುಗಲಿದ್ದಾರೆ. ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು ಹೆಚ್ಚಾಗಿ ಓಡಾಡುವ ಸ್ಥಳಗಳಲ್ಲಿ ಈ ಪಡೆ ಗಸ್ತಿನಲ್ಲಿರುತ್ತದೆ.

#betogetherbengaluru ಅಭಿಯಾನ: ಶೌರ್ಯವಾಹಿನಿ ಪಡೆ ಹಾಗೂ ಅದರ ಕಾರ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಶೌರ್ಯವಾಹಿನಿ #betogetherbengaluru ಅಭಿಯಾನ ಆರಂಭಿಸಿದೆ. ಈ ತಂಡದ ಸದಸ್ಯರು ಪಾರ್ಕ್‌ ಹಾಗೂ ಮಹಿಳೆಯರು ಹೆಚ್ಚಿರುವ ಸ್ಥಳಗಳಿಗೆ ಹೋಗಿ ಅವರನ್ನು ಮಾತನಾಡಿಸಿ, ತೊಂದರೆಕಾಣಿಸಿಕೊಂಡಾಗ ‘ಶೌರ್ಯವಾಹಿನಿ’ ಪಡೆಯನ್ನು ಸಂಪರ್ಕಿಸುವಂತೆ ಜಾಗೃತಿ ಮೂಡಿಸಿದ್ದಾರೆ.

ಐಡಿಯಾ ಹಿಂದೆ

ಶೌರ್ಯವಾಹಿನಿ ಆರಂಭದ ಹಿಂದೆಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂಥ್‌ ಇಶಾ ಪಂಥ್‌ ಅವರ ಚಿಂತನೆಯಿದೆ. ಈಗ ಪೊಲೀಸ್‌ ಇಲಾಖೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿಯಿದ್ದಾರೆ. ಕೆಲವರಿಗೆ ಬೈಕ್‌, ಕಾರು ಓಡಿಸಲು ಗೊತ್ತು. ಹಾಗೇ ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡಲು ಮಹಿಳೆಯರೂ ಸಿದ್ಧರಿರುವಂತೆ ಇಲಾಖೆಯಲ್ಲೂ ಸಾಹಸಿ ಮನೋಭಾವದ ಮಹಿಳೆಯರಿದ್ದಾರೆ. ಅವರ ಸಾಮರ್ಥ್ಯ ಎಲ್ಲರಿಗೂ ಗೊತ್ತಾಗಬೇಕು . ಹಾಗಾಗಿ ಶೌರ್ಯವಾಹಿನಿ ಆರಂಭಕ್ಕೆ ಮುನ್ನುಡಿ ಹಾಕಿದೆ’ ಎನ್ನುತ್ತಾರೆ ಇಶಾ ಪಂಥ್‌.

ವಿದೇಶಗಳಲ್ಲಿ ಬೈಕ್‌ ಹಾಗೂ ಪೊಲೀಸ್‌ ವಾಹನಗಳಲ್ಲಿ ಮಹಿಳಾ ಸಿಬ್ಬಂದಿ ಗಸ್ತು ಮಾಡುತ್ತಾರೆ. ರಾತ್ರಿ ವೇಳೆಯೂ ಅವರು ಕೆಲಸ ಮಾಡುತ್ತಾರೆ. ಆ ವಿಧಾನವನ್ನು ಇಲ್ಲಿ ಆಳವಡಿಸಿಕೊಳ್ಳಲಾಗಿದೆ. ಸಾಮಾನ್ಯವಾಗಿ ಪುರುಷ ಸಿಬ್ಬಂದಿ ಚೀತಾದಲ್ಲಿ ಸಿಟಿ ಗಸ್ತು ಹೊಡೆಯುತ್ತಿದ್ದರು. ಆದರೆ ಇಲಾಖೆಯಲ್ಲಿ ಪುರುಷರಿಗೆ ಸಮಾನವಾಗಿ ಇಂತಹ ಕೆಲಸ ಮಾಡುವ ಮಹಿಳಾ ಸಿಬ್ಬಂದಿಯೂ ಇದ್ದಾರೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT