ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮನ ‘ಸೋಲೊ’ ಹಾಡಿಗೆ ಕಂದನ ಆಲಾಪ

Last Updated 15 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಮಡಿಲಲ್ಲಿ ಮಲಗಿದ ಪುಟ್ಟ ಮಗುವಿನ ಮುಗ್ಧನಗೆ ಯಾರನ್ನು ತಾನೇ ಸಮ್ಮೋಹಗೊಳಿಸುವುದಿಲ್ಲ ಹೇಳಿ. ಮುದ್ದು ಮುಖ, ಎಲ್ಲವನ್ನೂ ಅಚ್ಚರಿಯಿಂದ ನೋಡುವ ಕಂಗಳು, ಬೆಣ್ಣೆಯಂತಹ ಮೃದು ತ್ವಚೆ, ಪುಟ್ಟ ಕೈ– ಕಾಲುಗಳು.. ನೋಡುತ್ತಿದ್ದರೆ ಜಗತ್ತಿನ ನೋವನ್ನೆಲ್ಲ ಮರೆಯಬಹುದು. ಒಂದು ಮಗುವಾದರೂ ಇದ್ದಿದ್ದರೆ ಎಲ್ಲ ಕಷ್ಟ ಮರೆಯಬಹುದಿತ್ತು ಎನ್ನುವವರಿಗೇನೂ ಕೊರತೆಯಿಲ್ಲ. ಅದಕ್ಕೇ ಅಲ್ಲವೇ, ಜನಪದರು ಹೇಳಿದ್ದು ‘ಮಕ್ಕಳಿರಲವ್ವ ಮನೆ ತುಂಬ’ ಎಂದು. 50– 60ರ ದಶಕದಲ್ಲಿ ತಾಯಂದಿರು ಹತ್ತಾರು ಹೆತ್ತರೂ ಸಾಕಲು ಧೃತಿಗೆಡುತ್ತಿರಲಿಲ್ಲ. ಮನೆ ತುಂಬ ಜನರೂ ಇರುತ್ತಿದ್ದರು, ನೋಡಿಕೊಳ್ಳಲಿಕ್ಕೆ.

ಆದರೆ ಈಗ ಕಾಲ ಬದಲಾಗಿದೆ. ಜನ ಬದಲಾಗಿದ್ದಾರೆ. ಗಂಡ– ಹೆಂಡತಿ ಇಬ್ಬರೇ ಇರುವ ವಿಭಕ್ತ ಕುಟುಂಬ. ಗರ್ಭಧಾರಣೆ, ಹೆರಿಗೆ, ಮಗುವಿನ ಸಾಕುವ ಹೊಣೆ ಎಂದೆಲ್ಲ ಕೈತುಂಬ ಸಂಬಳ ತರುವ ಉದ್ಯೋಗದಿಂದ ವಿಮುಖರಾಗಲು ಇಷ್ಟವಿಲ್ಲದೆ ಮಗುವಿನ ಆಗಮನವನ್ನು ಮುಂದೂಡುವವರು ಒಂದು ಕಡೆಯಾದರೆ, ಒಂದಿಷ್ಟು ವರ್ಷ ಆರಾಮವಾಗಿ ಇರೋಣ ಎಂದು ಮದುವೆಯನ್ನೇ ಮುಂದೂಡುವ ಜನರೇಶನ್‌ ಝೆಡ್‌ ಯುವತಿಯರು ಇನ್ನೊಂದು ಕಡೆ. ಆದರೂ ಬಿಡದ ಮಗುವಿನ ಸೆಳೆತ. ಒಂಟಿಯಾದರೇನು, ಕಾಡುವ ಒಂಟಿತನದಿಂದ ಬಿಡುಗಡೆ ಹೊಂದಲು ಮಗುವೊಂದು ಜೊತೆಗಿದ್ದರೆ.. ಗಂಡಸಿನ ಗೊಡವೆ ಇಲ್ಲದೇ ತಂತ್ರಜ್ಞಾನದ ಮೂಲಕ ಮಾಡಿಕೊಂಡರೆ.. ಅದು ತನ್ನ ಗರ್ಭದಿಂದಲೇ ಜನಿಸಬೇಕಿಲ್ಲ, ಬಾಡಿಗೆ ಗರ್ಭ ಸಿಕ್ಕರೆ ಸಾಕು.. ಎನ್ನುವವರೂ ನಮ್ಮ ನಡುವೆಯೇ ಇದ್ದಾರೆ.

ಸೆಲೆಬ್ರಿಟಿಗಳೂ ಬಾಡಿಗೆ ತಾಯಿಯೂ
ಹೌದು. ಬಾಡಿಗೆ ತಾಯಿಯಿಂದ ಮಗು ಪಡೆಯುವ ಟ್ರೆಂಡ್‌ ಈಗ ಜಾಸ್ತಿಯಾಗಿದೆ. ಬಾಡಿಗೆ ತಾಯ್ತನ ದಶಕದ ಹಿಂದೆ ಭಾರತಕ್ಕೆ ಕಾಲಿಟ್ಟಾಗ ಈ ಸೌಲಭ್ಯದ ಪ್ರಯೋಜನ ಪಡೆಯಲು ಹೊರಟಿದ್ದು ಮಕ್ಕಳಿಲ್ಲದ ದಂಪತಿಯೇ. ಕ್ರಮೇಣ ಸಿಂಗಲ್‌ ಪೇರೆಂಟ್‌ ಅದರ ಕಡೆ ಮುಖ ಮಾಡತೊಡಗಿದರು. ಬಾಲಿವುಡ್‌ನ ತುಷಾರ್‌ ಕಪೂರ್‌, ಕರಣ್‌ ಜೋಹರ್‌ ಮತ್ತಿತರ ಅವಿವಾಹಿತ ಪುರುಷರೂ ಆಧುನಿಕ ತಂತ್ರಜ್ಞಾನ, ಬಾಡಿಗೆ ತಾಯಿಯ ಸವಲತ್ತಿನಮೂಲಕ ತಮ್ಮದೇ ಆದ ಮಗು ಪಡೆಯಬಹುದು ಎಂದು ತೋರಿಸಿಕೊಟ್ಟರು. ಈ ಗುಂಪಿಗೆ ಇತ್ತೀಚಿನ ಸೇರ್ಪಡೆ ಟಿವಿ ಧಾರಾವಾಹಿ, ಸಿನಿಮಾ ನಿರ್ಮಾಪಕಿ ಏಕ್ತಾ ಕಪೂರ್‌. ಅವಿವಾಹಿತೆಯಾಗಿಯೇ ಉಳಿಯಲು ನಿರ್ಧರಿಸಿರುವ ಆಕೆ ಕಳೆದ ಏಳು ವರ್ಷಗಳಿಂದ ಐಯುಐ, ಐವಿಎಫ್‌ನಂತಹ ತಂತ್ರಜ್ಞಾನದ ಮೂಲಕ ತಾನೇ ಗರ್ಭ ಧರಿಸಲು ವಿಫಲಳಾದ ನಂತರ ಬಾಡಿಗೆ ತಾಯಿಯ ಮೊರೆ ಹೋಗಿ ಗಂಡು ಮಗು ಪಡೆದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾಳೆ.

ಇದು ಸಾಕಷ್ಟು ಸಂಚಲನ ಮೂಡಿಸಿದ್ದಂತೂ ಹೌದು. ಇದರ ಹಿಂದೆ ಕಾರಣಗಳು ಸಾಕಷ್ಟಿವೆ. ಏಕೆಂದರೆ ಎರಡು ದಶಕಗಳ ಹಿಂದೆ ನಟಿ ಸುಷ್ಮಿತಾ ಸೇನ್‌ ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡಾಗ ಸಂಪ್ರದಾಯಸ್ಥರಷ್ಟೇ ಅಲ್ಲ, ಆಧುನಿಕತೆ ಹೊದ್ದುಕೊಂಡ ಬಾಲಿವುಡ್‌ ಮಂದಿ ಕೂಡ ಗುಸುಗುಸು ಮಾತನಾಡಿಕೊಂಡಿದ್ದರು. ಹತ್ತು ವರ್ಷಗಳ ನಂತರ ಆಕೆಯೇ ಇನ್ನೊಂದು ಹೆಣ್ಮಗುವನ್ನು ದತ್ತು ಪಡೆದಳು. ಈ ಮಧ್ಯೆ ಇನ್ನೂ ಕೆಲವರು ನಟ– ನಟಿಯರು ಆಕೆಯನ್ನೇ ಅನುಸರಿಸಿ ಅದನ್ನೊಂದು ಫ್ಯಾಷನ್‌ ಟ್ರೆಂಡ್‌ ತರಹ ಮಾಡಿಬಿಟ್ಟರು.

ಈಗ ಏಕ್ತಾ ಕಪೂರ್‌ ದತ್ತು ಮಗುವಿನ ಗೊಡವೆ ಬಿಟ್ಟು ತಾನೇ ಗರ್ಭ ಹೊತ್ತು ತಾಯಾಗಲು ಹೊರಟಿದ್ದ ಸುದ್ದಿ ಚರ್ಚೆಯಾಗಿದ್ದು ಇದೇ ಕಾರಣಕ್ಕೆ.

ವೈವಾಹಿಕ ಬಂಧನವೇ ಬೇಕಿಲ್ಲ
ಇದು ಸೆಲೆಬ್ರಿಟಿಗಳ ಮಾತಾಯಿತು. ಆದರೆ ಸಾಮಾನ್ಯರಲ್ಲೂ ಕೂಡ, ವೈವಾಹಿಕ ಬಂಧನದ ಹೊರಗೆ ಮಗು ಪಡೆಯುವುದು ಈಗ ಅವಮಾನವೆಂಬ ಭಾವನೆ ಅಳಿಸಿಹೋಗಿದೆ. ಇದರ ಸುತ್ತ ಹೆಣೆದುಕೊಂಡಿದ್ದ ಅಲಿಖಿತ ನಿಯಮಗಳನ್ನು ಮುರಿದು ಮಗುವಿನ ತಾಯಿಯೆಂಬ ಹೆಮ್ಮೆಯಿಂದ ಬದುಕುತ್ತಿರುವ ಒಂಟಿ ಅವಿವಾಹಿತ ತಾಯಂದಿರು ನಮ್ಮ ನಡುವೆಯೇ ಇದ್ದಾರೆ. ಬೆಳಗಾವಿ ಮೂಲದ ನಯನಾ ಜಾಗೀರ್‌ದಾರ್‌ ಅಂತವರಲ್ಲಿ ಒಬ್ಬರು. ಲಿವ್‌–ಇನ್‌–ರಿಲೇಷನ್‌ಶಿಪ್‌ನಲ್ಲಿದ್ದ 32ರ ಈ ಖಾಸಗಿ ಬ್ಯಾಂಕ್‌ ಅಧಿಕಾರಿ ಗೆಳೆಯನಿಗೆ ಗುಡ್‌ಬೈ ಹೇಳಿದ್ದು ಕೂಡಾ ತನ್ನದೇ ಆದ ಮಗು ಪಡೆಯುವ ವಿಷಯದಲ್ಲಿ ಶುರುವಾದ ಜಗಳದಿಂದಲೇ ಎನ್ನುತ್ತಾಳೆ ನಯನಾ. ಆಕೆ ಮೊರೆ ಹೋಗಿದ್ದು, ಐವಿಎಫ್‌ ತಂತ್ರಜ್ಞಾನವನ್ನು.

‘ನಾನು ಮೊದಲು ಭೇಟಿ ಮಾಡಿದ ಐವಿಎಫ್‌ ಕೇಂದ್ರದ ವೈದ್ಯರು ನಾನು ಅವಿವಾಹಿತೆ ಎಂಬ ಕಾರಣದಿಂದ ಚಿಕಿತ್ಸೆ ನೀಡಲು ನಿರಾಕರಿಸಿದರು. ಬೆಂಗಳೂರಿನಲ್ಲಿ ಇಂತಹ ಸಾಕಷ್ಟು ಕೇಂದ್ರಗಳು ಇವೆಯಲ್ಲ. ಇನ್ನೊಂದು ಚಿಕಿತ್ಸಾ ಕೇಂದ್ರಕ್ಕೆ ಹೋದೆ. ಅದೃಷ್ಟಕ್ಕೆ ಅಲ್ಲಿಯ ವೈದ್ಯೆ ಆಧುನಿಕ ಮನೋಭಾವದವರು. ನನ್ನ ಬೇಡಿಕೆಗೆ ಸಕಾರಾತ್ಮಕವಾಗಿಯೇ ಸ್ಪಂದಿಸಿದರು. ವೀರ್ಯ ಬ್ಯಾಂಕ್‌ನ ನೆರವನ್ನೂ ಕೊಡಿಸಿದರು’ ಎನ್ನುವ ನಯನಾ ಆರ್ಥಿಕ ಸಬಲೀಕರಣ, ಕುಟುಂಬದ ಬೆಂಬಲ ಮುಖ್ಯ ಎನ್ನುತ್ತಾಳೆ.

ಆದರೆ ನಯನಾಳಷ್ಟು ಎದೆಗಾರಿಕೆ ಇಲ್ಲದ ಕೆಲವರು ತೆರೆಮರೆಯ ಹಿಂದೆ ಬಾಡಿಗೆ ತಾಯಿಯ ಮೊರೆ ಹೋದವರಿದ್ದಾರೆ. ದತ್ತು ತೆಗೆದುಕೊಳ್ಳಲು ಒಂಟಿ ಯುವತಿಗೆ ಅನುಮತಿ ಇದ್ದರೂ ಕೂಡ ದತ್ತು ಸ್ವೀಕಾರ ಕೇಂದ್ರಗಳಲ್ಲಿ ದೀರ್ಘ ಕಾಲ ಕಾಯಬೇಕಾಗುತ್ತದೆ. ಹಲವರಿಗೆ ತಮ್ಮದೇ ಜೀನ್ಸ್‌ ಹಂಚಿಕೊಂಡ ಮಗು ಪಡೆಯಬೇಕೆಂಬ ಹಂಬಲ. ಹೀಗಾಗಿ ಐವಿಎಫ್‌, ಬಾಡಿಗೆ ತಾಯಿಯ ಮೂಲಕ ಮಗು ಪಡೆಯಲು ಒಂಟಿ ಯುವತಿಯರು ಮನಸ್ಸು ಮಾಡುತ್ತಿದ್ದಾರೆ.

ಭಾರತ ಇನ್ನೂ ಪೂರ್ತಿಯಾಗಿ ಸಂಪ್ರದಾಯದ ಪೊರೆ ಕಳಚಿ ಈಚೆ ಬಂದಿಲ್ಲ. ಅವಿವಾಹಿತೆ ಐವಿಎಫ್‌ (ತಾಯಿಯಾಗಲು ಬಯಸುವ ಯುವತಿಯ ಅಂಡಾಣು ಅಥವಾ ದಾನವಾಗಿ ಪಡೆದ ಅಂಡಾಣು ಮತ್ತು ವೀರ್ಯ ಬ್ಯಾಂಕ್‌ನಿಂದ ಪಡೆದ ವೀರ್ಯಾಣುವನ್ನು ಪ್ರನಾಳದಲ್ಲಿ ಫಲಿತಗೊಳಿಸಿ ಭ್ರೂಣವನ್ನು ಪುನಃ ತಾಯಿಯ ಗರ್ಭದಲ್ಲಿ ಸ್ಥಾಪಿಸುವುದು) ಮೂಲಕ ಗರ್ಭಿಣಿಯಾದರೂ ಸಮಾಜದ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಬಾಡಿಗೆ ತಾಯಿಯ ಮೂಲಕ ಪಡೆದರೂ ತಂದೆಯ ಹೆಸರಿನ ಕುರಿತು ಪುಕಾರು ಏಳಬಹುದು. ಏನೇ ಆದರೂ ನಿಧಾನಕ್ಕೆ ‘ನಾನೇ ಬೇರೆನೆ, ನನ್ನ ರೀತಿ ಬೇರೇನೆ’ ಎಂಬ ಟ್ರೆಂಡ್‌ ಈ ವಿಷಯದಲ್ಲೂ ಮುಂಚೂಣಿಗೆ ಬರುತ್ತಿದೆ.

**

ಕಾನೂನು ಏನು ಹೇಳುತ್ತದೆ?

ಕೇಂದ್ರ ದತ್ತು ಸ್ವೀಕಾರ ಪ್ರಾಧಿಕಾರದ ನಿಯಮಗಳ ಪ್ರಕಾರ ಒಂಟಿ ಮಹಿಳೆಯೂ ಮಗುವನ್ನು ದತ್ತು ತೆಗೆದುಕೊಳ್ಳಬಹುದು. ವಯಸ್ಸಿನ ಮಿತಿ 55 ವರ್ಷ. ವಾರ್ಷಿಕ ಆದಾಯ ಮತ್ತಿತರ ದಾಖಲೆಗಳನ್ನು ಕೇಂದ್ರಕ್ಕೆ ಸಲ್ಲಿಸಿದ ನಂತರ ದತ್ತು ಸ್ವೀಕಾರ ಏಜೆನ್ಸಿ ಮುಂದಿನ ಪ್ರಕ್ರಿಯೆಗಳನ್ನು ಮಾಡಿಕೊಡುತ್ತದೆ.

ಬಾಡಿಗೆ ತಾಯಿಯ ಮೂಲಕ ಮಗು ಪಡೆಯುವುದಾದರೆ ಒಪ್ಪಂದವನ್ನು ಮಾಡಿಕೊಳ್ಳಬೇಕಾಗುತ್ತದೆ.

**

ಅಂಡಾಣು ಫ್ರೀಜಿಂಗ್‌

ಬಹಳಷ್ಟು ಕಿರಿಯ ವಯಸ್ಸಿನ, ಅವಿವಾಹಿತ ಯುವತಿಯರು ಊಸೈಟ್‌ ಅನ್ನು ನಮ್ಮ ಕೇಂದ್ರದಲ್ಲಿ ಫ್ರೀಜ್‌ ಮಾಡಿದ್ದಾರೆ. ಇದರ ಹಿಂದೆ ಹಲವಾರು ಕಾರಣಗಳಿವೆ. ಮದುವೆಯಾಗಲು ಸೂಕ್ತ ವರ ಸಿಗದೇ ಇರುವಂತಹವರು, ಮದುವೆಯಾದರೂ ಗರ್ಭಧಾರಣೆ ಮುಂದೂಡಿದಂತಹವರು, ಶೈಕ್ಷಣಿಕ ಹಾಗೂ ಉದ್ಯೋಗದ ದೃಷ್ಟಿಯಿಂದ ಸಾಧನೆ ಮಾಡಬೇಕು, ಅಷ್ಟರಲ್ಲಿ ವಯಸ್ಸಾದರೆ ಎಂಬ ಕಾರಣದಿಂದ ಅಂಡಾಣು ಫ್ರೀಜ್‌ ಮಾಡಿದ್ದಾರೆ.
– ಡಾ.ಮಹೇಶ್‌ ಕೋರೆಗಲ್‌, ನೋವಾ ಐವಿಐ ಫರ್ಟಿಲಿಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT