ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಲದ ಬದುಕಿನಲ್ಲಿ ಹಲವು ಕಲಿಕೆಗಳು

Last Updated 17 ಮಾರ್ಚ್ 2023, 21:00 IST
ಅಕ್ಷರ ಗಾತ್ರ

ಶಿರಸಿ ತಾಲ್ಲೂಕು ಎಸಳೆಯ ಶೋಭಾ ಆರೇರಾ ಅವರಿಗೆ 2 ಎಕರೆ ಜಮೀನಿದೆ, ಆದರೆ ಹೊಳೆ ನೀರು ಪ್ರವಾಹ ಬಂದು ಅಲ್ಲಿ ಬೇಸಾಯ ಮಾಡುವುದು ಕಷ್ಟ. ಭೂಮಿ ಸವುಳಾಗಿದೆ. ಮೊದಲು ಈ ಜಮೀನಿನಲ್ಲಿ ಭತ್ತ ಬೆಳೆಯುತ್ತಿದ್ದರು. ಇವರ ಗಂಡ ಗಣಪತಿ ಲಾರಿ ಕೆಲಸಕ್ಕೆ ಹೋಗುತ್ತಿದ್ದು, ಮೂರು ವರ್ಷಗಳಿಂದ ಕಣ್ಣಿನ ಸಮಸ್ಯೆಯಿಂದಾಗಿ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದಾರೆ. ಈ ದಂಪತಿಗೆ ನಾಲ್ಕು ಜನ ಮಕ್ಕಳು. ಒಂದು ಗಂಡು, ಮೂರು ಹೆಣ್ಣು. ಒಬ್ಬ ಮಗಳಿಗೆ ಮದುವೆಯಾಗಿದ್ದು ಉಳಿದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾ ಅಮ್ಮನ ರೊಟ್ಟಿ ಉದ್ಯಮಕ್ಕೆ ಸಹಕರಿಸುತ್ತಿದ್ದಾರೆ.

ಶೋಭಾ 4ನೇ ತರಗತಿ ಓದಿದ್ದಾರೆ. ತವರುಮನೆ ಹಾನಗಲ್. 1999ರಲ್ಲಿ ಮದುವೆ ಆಯಿತು. ಆಗ ಜೀವನ ನಿರ್ವಹಣೆಗಾಗಿ ತಮ್ಮ ಗದ್ದೆಯಲ್ಲಿ ದುಡಿಯುತ್ತಾ ಕೂಲಿಗೆ ಹೋಗುತ್ತಿದ್ದರು. ₹25 ಕೂಲಿ ದೊರೆಯುತ್ತಿದ್ದ ಕಾಲವದು. ವರ್ಷದಲ್ಲಿ ಕೆಲವೇ ತಿಂಗಳು ಕೂಲಿ ಸಿಗುತ್ತಿತ್ತು. ಸಣ್ಣ ಗುಡಿಸಲಿನಲ್ಲಿ ವಾಸ. ಮಳೆ ಬಂದರೆ ನೀರೆಲ್ಲಾ ಒಳಗೆ. ಸಾಲು-ಸಾಲು ಬಾಣಂತನಗಳು. ಮಳೆಗಾಲದಲ್ಲಿ ಮಕ್ಕಳನ್ನು ತವರುಮನೆಗೆ ಕಳಿಸಬೇಕಾದ ಪರಿಸ್ಥಿತಿ. ವಾರಿಗೆಯವರು ಆಡಿಕೊಳ್ಳುತ್ತಿದ್ದರು.

2008ರಿಂದ ಅಡಿಕೆ ತೋಟಗಳಿಗೆ ವಕಾರಿ ಕೆಲಸಕ್ಕೆ ಹೋಗಲು ಶುರು ಮಾಡಿದರು. ಈಗ ಇಡೀ ವರ್ಷ ಕೂಲಿ ದೊರೆಯುತ್ತಿತ್ತು. ಕೂಲಿಯೂ ಸಹ ₹150ಕ್ಕೆ ಏರಿಕೆಯಾಗಿತ್ತು. ಜೊತೆಗೆ ಸಗಣಿಯ ಬೆರಣಿ (ಕುಳ್ಳು) ತಯಾರಿಸಿ ಮಾರಾಟ ಆರಂಭಿಸಿದರು. ಅಡಿಕೆ ತೋಟದ ಕೂಲಿ ಮೊತ್ತವನ್ನು ಮನೆವಾರ್ತೆಗೆ ವ್ಯಯಿಸುತ್ತಾ ಕುಳ್ಳು ಮಾರಾಟದ ಹಣವನ್ನು ಉಳಿತಾಯ ಮಾಡಿದರು. ಆ ಹಣ ಎಷ್ಟು ಗೊತ್ತೇ? ₹ 25000.

ಹದಿನಾಲ್ಕು ವರ್ಷ ಸತತ ಕೂಲಿ ಮಾಡುತ್ತಾ ಜೀವನ ಸಾಗಿಸಿದ್ದರು. ಕೃಷಿಯೂ ಕೈ ಹತ್ತುತ್ತಿರಲಿಲ್ಲ. ಗಂಡನ ಆರೋಗ್ಯವೂ ಅಷ್ಟಕ್ಕಷ್ಟೇ. ಜೊತೆಗೆ ಮನೆ ತುಂಬಾ ಮಕ್ಕಳು. ಅವರ ಭವಿಷ್ಯ ರೂಪಿಸುವುದು ಹೇಗೆಂಬ ಚಿಂತೆ. ‘ಈಗಿರುವ ದುಡಿಮೆಯಲ್ಲಿ ಮಕ್ಕಳಿಗೊಂದು ದಾರಿ ತೋರಿಸುವುದು ಸಾಧ್ಯವೇ ಇಲ್ಲ’ ಅನ್ನಿಸಿ ಬೇರೆ ಏನಾದರೂ ಉದ್ದಿಮೆಗೆ ಕೈಹಾಕಬೇಕು ಅನ್ನಿಸುತ್ತಿತ್ತು.

ಅದು 2013ನೇ ಇಸವಿ. ಮಕ್ಕಳಿಂದಾಗಿ ಮೊಬೈಲೂ ಇವರ ಸಂಗಾತಿಯಾಗಿತ್ತು. ಯೂಟ್ಯೂಬಿನಲ್ಲಿ ಕಣ್ಣು ಹಾಯಿಸುವಾಗ ರೊಟ್ಟಿ ತಯಾರಿಕೆ ಬಗ್ಗೆ ನೋಡಿದ್ದರು. ಅದು ಶೋಭಾ ಅವರ ಮನಸ್ಸಿನಲ್ಲಿ ನಿಂತುಬಿಟ್ಟಿತು. ತವರುಮನೆಯಲ್ಲಿ ರೊಟ್ಟಿ ಮಾಡಿದ ಅನುಭವವಿತ್ತು. ಕೈಯಲ್ಲಿ ₹25 ಸಾವಿರ ಹಣವೂ ಇದ್ದುದರಿಂದ ಹೆಚ್ಚು ಆಲೋಚಿಸದೆ ಹಾವೇರಿಯಿಂದ ರೊಟ್ಟಿ ತಯಾರಿಕೆ ಯಂತ್ರವನ್ನು ಖರೀದಿಸಿಯೇ ಬಿಟ್ಟರು. ಮನೆಯಲ್ಲಿ ಅದನ್ನು ಇಡಲು ಸೂಕ್ತ ಸ್ಥಳವೂ ಇರಲಿಲ್ಲ. ಅಡುಗೆ ಮನೆಯಲ್ಲೇ ಒಂದು ಕಡೆ ಇಟ್ಟರು. ಹೋಳಿ ಹಬ್ಬದಂದು ಅಧಿಕೃತವಾಗಿ ರೊಟ್ಟಿ ತಯಾರಿಕೆ ಆರಂಭವಾಯಿತು. ಅಂದಿನಿಂದ ಈವರೆಗೆ-ಅಂದರೆ ಕಳೆದ 10 ವರ್ಷಗಳಲ್ಲಿ ರೊಟ್ಟಿ ತಯಾರಿಕೆ ಇವರ ಕೈಹಿಡಿದಿದೆ.

ರೊಟ್ಟಿ ತಯಾರಿಸುವುದು, ಹಿಟ್ಟಿನ ಮಿಶ್ರಣ, ಅದರ ಹದ, ಕಡಕ್ ಆಗಲು ಒಣಗಿಸುವುದು ಎಲ್ಲವೂ ಶೋಭಾ ಅವರಿಗೆ ತಿಳಿದಿತ್ತು. ಒಂದೆರಡು ಪ್ರಯತ್ನದ ನಂತರ ಯಂತ್ರದಲ್ಲಿ ರೊಟ್ಟಿ ಮಾಡುವುದು ಸಲೀಸಾಯಿತು. ಆದರೆ ಸಮಸ್ಯೆ ಬಂದಿದ್ದು ಮಾರುಕಟ್ಟೆ ಹುಡುಕುವುದರಲ್ಲಿ. ಮಾರ್ಗದರ್ಶನ ಮಾಡುವವರೂ ಇರಲಿಲ್ಲ. ಆದರೂ ಭಂಡ ಧೈರ್ಯದಿಂದ ಶಿರಸಿಯಲ್ಲಿ ತಾವೇ ತಲೆ ಮೇಲೆ ಹೊತ್ತು ಮಾರಾಟ ಶುರುಮಾಡಿದರು. ಹೋಟೆಲ್‌, ಬೇಕರಿಗಳಿಗೆ ಅಲೆದರು.

ಆರಂಭಿಕ ಹಿನ್ನಡೆಗಳನ್ನು ಮೀರಿ ಮಾರುಕಟ್ಟೆ ಕುದುರಿಸಿ ಕೊಂಡರು ಶೋಭಾ. ಗುಣಮಟ್ಟ ಕಾಪಾಡುವುದು, ಸಮಯಕ್ಕೆ ಸರಿಯಾಗಿ ಸರಬರಾಜು ಮಾಡುವುದು ಇವರ ಕೈಹಿಡಿಯಿತು. ಕೆಲವೊಮ್ಮೆ ಶಿರಸಿಗೆ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದ ಮಕ್ಕಳು ಯಾವುದೇ ಹಿಂಜರಿಕೆ ಇಲ್ಲದೆ ರೊಟ್ಟಿ ತಲುಪಿಸುತ್ತಿದ್ದರು.

2013ರಲ್ಲಿ ಮನುವಿಕಾಸ ಸಂಸ್ಥೆಯ ಪರಿಚಯವೂ ಆಯಿತು. ಸಂಸ್ಥೆಯ ನಿರ್ದೇಶಕರಾದ ಗಣಪತಿ ಭಟ್ ಪರಿಚಯವಾಗಿ, ರೊಟ್ಟಿ ಮಾರಾಟಕ್ಕೆ ಸಹಕರಿಸಲು ಮನವಿ ಮಾಡಿದರು. ಜೊತೆಗೆ ಸಂಸ್ಥೆಯು ರಚಿಸಿದ ಚೌಡೇಶ್ವರಿ ಸ್ವಸಹಾಯ ಸಂಘದ ಸದಸ್ಯರಾದರು. ಮನುವಿಕಾಸ ತನ್ನ ಎಲ್ಲಾ ಕಾರ್ಯಕ್ರಮಗಳಿಗೂ ಇವರಿಂದಲೇ ರೊಟ್ಟಿ ಖರೀದಿಸಲು ಆರಂಭಿಸಿತು.

2017-18ನೇ ಇಸವಿ ಇವರ ರೊಟ್ಟಿ ಉದ್ಯಮಕ್ಕೆ ಮತ್ತೊಂದು ತಿರುವು ತಂದಿತು. ರೊಟ್ಟಿ ತಯಾರಿಸಲು ಖರೀದಿಸಿದ ಯಂತ್ರ ಕಾಲಲ್ಲಿ ತುಳಿದು ಚಾಲನೆ ಮಾಡುವಂತಹದ್ದು. ಇದು ಹೆಚ್ಚು ಶ್ರಮ ಬೇಡುತ್ತಿತ್ತು. ಮಕ್ಕಳು ರೊಟ್ಟಿ ತಯಾರಿಸಲು ಆಯಾಸ ಪಡುತ್ತಿದ್ದರು. ಇದರಿಂದ ಹೊರಬರಲು ಸಂಪೂರ್ಣ ಆಟೊಮ್ಯಾಟಿಕ್ ರೊಟ್ಟಿ ಯಂತ್ರ ಖರೀದಿಸುವ ಬಗ್ಗೆ ಆಲೋಚನೆ ಬಂದಿತ್ತು. ಅದರ ಮೌಲ್ಯ ₹4 ಲಕ್ಷ. ಅಷ್ಟು ಉಳಿತಾಯ ಇವರಲ್ಲಿ ಇರಲಿಲ್ಲ. ಶಿರಸಿಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಿಂದ ಸಾಲ ಪಡೆದು ಖರೀದಿಸಿದರು.

ಕಳೆದ ಐದು ವರ್ಷಗಳಿಂದ ಎರಡೂ ಯಂತ್ರಗಳಿಂದ ರೊಟ್ಟಿ ತಯಾರಿಕೆ ನಡೆಯುತ್ತಿದೆ. ಆಟೋಮ್ಯಾಟಿಕ್ ಯಂತ್ರದಲ್ಲಿ 2000 ರೊಟ್ಟಿ ತಯಾರಿಸಬಹುದು. ಬೇಡಿಕೆಗೆ ಅನುಗುಣವಾಗಿ ರೊಟ್ಟಿ ತಯಾರಿಸಿ ಪೂರೈಸುತ್ತಾರೆ. ತಿಂಗಳಿಗೆ ₹4000 ನಿವ್ವಳ ಆದಾಯ. ಈ ಮೊತ್ತದಲ್ಲಿ ತುಸು ಏರು-ಪೇರು ಆಗಬಹುದು ಎನ್ನುತ್ತಾರೆ ಶೋಭಾ. ಗುಣಮಟ್ಟದ ಜೋಳವನ್ನು ಖರೀದಿಸುವುದು ಇವರ ರೊಟ್ಟಿಗಳ ರುಚಿಯಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ.

ರೊಟ್ಟಿಗಳಿಗೆ ಬೇಡಿಕೆ ಹೆಚ್ಚಾದಂತೆಲ್ಲಾ ವಾರಕ್ಕೆ 2-3 ದಿನ ಹಿಟ್ಟು ಮಾಡಿಸಲು ಹೋಗಬೇಕಿತ್ತು. 2019ರಲ್ಲಿ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ಹಿಟ್ಟಿನ ಗಿರಣಿ ಸ್ಥಾಪನೆಗೆ ಸಹಾಯಧನ ಒದಗಿಸಿದರು. ಮನೆಯ ಮುಂಭಾಗದಲ್ಲಿ ಹಿಟ್ಟಿನ ಗಿರಣಿ ಸ್ಥಾಪಿಸಿದ್ದು, ಈಗ ಸ್ವತಃ ಹಿಟ್ಟು ಮಾಡಿಕೊಳ್ಳುವುದಲ್ಲದೆ ಗ್ರಾಮದ ಇತರರಿಗೂ ಮಾಡಿಕೊಡುತ್ತಿದ್ದಾರೆ. ಅದರಿಂದಲೂ ಸ್ವಲ್ಪ ಆದಾಯ ಬರುತ್ತಿದೆ.

ರೊಟ್ಟಿ ತಯಾರಿಕೆಯಿಂದ ಉಳಿಸಿದ ₹70 ಸಾವಿರ ಹಣದಿಂದ ಎರಡು ಸಿಂಧಿ ಹಸುಗಳನ್ನು ಖರೀದಿಸಿ ದ್ದಾರೆ. ಕರಾವಿನಿಂದ ದಿನಕ್ಕೆ 16 ಲೀಟರ್ ಹಾಲು ಮಾರಾಟ ವಾಗುತ್ತಿದ್ದು, ತಿಂಗಳಿಗೆ ₹7-8 ಸಾವಿರ ಆದಾಯ ಪಡೆಯುತ್ತಿದ್ದಾರೆ. ಹಸುಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಆಲೋಚನೆ ಇದೆ. ಗುಡಿಸಲಿನ ಜಾಗದಲ್ಲಿ ಉತ್ತಮ ಮನೆ ನಿರ್ಮಿಸಿಕೊಂಡಿರುವುದು ವಿಶೇಷ.

ಹೀಗೆ ಶೋಭಾ ಅವರ ಛಲದ ಬದುಕು ಸಾಗುತ್ತಿದೆ. ಇವರ ಉದ್ದಿಮೆ ಪುಟ್ಟದಿರಬಹುದು, ಆದರೆ ಅಲ್ಲಿ ಹಲವು ಕಲಿಕೆಗಳಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT