ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರೂ ಸಾಧಕಿಯರೇ

Last Updated 5 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಪ್ರತಿಬಾರಿಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲೂ ಜಗತ್ತಿನಾದ್ಯಂತ ‌ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಸಮಾಜಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರ, ಸಾಧಕಿಯರ ವ್ಯಕ್ತಿಚಿತ್ರ, ಸಿನಿಮಾ, ಅವರ ಜೀವನ ಆಧರಿಸಿದ ಪುಸ್ತಕಗಳು ಬಿಡುಗಡೆಯಾಗುತ್ತವೆ. ಶತಮಾನಗಳ ಕಾಲ ಕೈಕೋಳ ತೊಡಿಸಿಕೊಂಡಂತೆ ಕೂತಿದ್ದ, ತನ್ನಿಂದೇನೂ ಘನವಾದದ್ದು ಸಾಧಿಸಲು ಸಾಧ್ಯವಿಲ್ಲ ಎಂದು ನಂಬಿಸಲ್ಪಟ್ಟಿದ್ದ ಸಮುದಾಯವೊಂದರ ಸಾಧನೆಯನ್ನು ಜಗತ್ತಿನ‌ ಮುಂದೆ ತೆರೆದಿಟ್ಟು ಆತ್ಮವಿಶ್ವಾಸ ತುಂಬುವ ಕೆಲಸ ಆಗಬೇಕಾದದ್ದೇ.

ಆದರೆ, ಸಾಧಕಿಯರನ್ನು ಗುರುತಿಸುವುದು ಹೇಗೆ? ಅದಕ್ಕಿರುವ ಮಾನದಂಡಗಳು ಯಾವುವು? ಗಮನಸೆಳೆಯುವ ಕ್ಷೇತ್ರಗಳಾದ ವಿಜ್ಞಾನ, ಸಾಹಿತ್ಯ, ಸಿನಿಮಾ ಮುಂತಾದವುಗಳಲ್ಲಿ ಗುರುತಿಸಿಕೊಂಡ, ಎತ್ತರಕ್ಕೆ ಏರಿದ ಮಹಿಳೆಯರನ್ನು ಮಾತ್ರ ಸಾಧಕಿಯರು ಎನ್ನಬೇಕೇ‌? ಹಾಗಿದ್ದರೆ ನಮ್ಮ ಹಳ್ಳಿಗಳಲ್ಲಿ ಗಂಡಿಗೆ ಸರಿಸಮಾನವಾಗಿ ಕೆಲಸ ಮಾಡುವ, ಯಾರ ಹಂಗಿಗೂ ಒಳಗಾಗದೆ ತಮ್ಮ ಅನ್ನವನ್ನು ತಾವೇ ದುಡಿದುಕೊಳ್ಳುತ್ತಿರುವ, ಕುಟುಂಬಕ್ಕೆ ಆಧಾರವಾಗಿರುವ ತಮ್ಮ ತಮ್ಮ ಸಣ್ಣ ಗದ್ದೆಗಳಲ್ಲೇ ನೇಗಿಲು ಹಿಡಿದು ಉಳುಮೆ ಮಾಡುವ, ಪೆಟ್ರೋಲ್ ಬಂಕ್‌ಗಳಲ್ಲಿ ರಾತ್ರಿ ಹಗಲಿನ ವ್ಯತ್ಯಾಸವಿಲ್ಲದೆ ದುಡಿಯುವ, ನೂರು ವಿರೋಧದ ಮಾತುಗಳನ್ನು ಬೆನ್ನಿಗೆ ಕಟ್ಟಿಕೊಂಡೇ ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಳಹಿಸುವ ಸಂಪ್ರದಾಯಸ್ಥ ಮನೆತನದ ಅಮ್ಮಂದಿರ ದಿಟ್ಟತನಗಳೆಲ್ಲ ಯಾಕೆ ಸಾಧಕಿಯರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ?

ಹಾಗೆ ನೋಡುವುದಾದರೆ 'ಅಂತರಾಷ್ಟ್ರೀಯ ಮಹಿಳೆಯರ ದಿನ' ಎನ್ನುವ ಉದಾತ್ತ ಕಲ್ಪನೆ ಮೊದಲ ಬಾರಿ ಹುಟ್ಟಿದ್ದು ಉತ್ತರ ಅಮೆರಿಕ ಮತ್ತು ಯೂರೋಪ್‌ನಲ್ಲಿ ನಡೆದ ಕೂಲಿ ಚಳವಳಿಯಲ್ಲಿ (ಲೇಬರ್ ಮೂವ್‌ಮೆಂಟ್ಸ್). ಸಮಾನ‌ ಕೆಲಸಕ್ಕೆ ಸಮಾನ ವೇತನ ಬೇಕು ಎನ್ನುವ ಹಕ್ಕೊತ್ತಾಯವೇ ಮೊದಲ ‘ಮಹಿಳೆಯರ ದಿನ’ಕ್ಕೆ ಪ್ರೇರಣೆ. ಪ್ರೇಮಿಗಳ ದಿನ, ತಾಯಂದಿರ ದಿನ‌ ಅಥವಾ ಇನ್ನುಳಿದ 'ದಿನ'ಗಳಂತೆ ಇದು ಸಂಭ್ರಮದಿಂದ, ಖುಶಿಯಿಂದ, ಪ್ರೀತಿಯಿಂದ ಹುಟ್ಟಿಕೊಂಡ ಆಚರಣೆ ಅಲ್ಲ. ತಮ್ಮ ನ್ಯಾಯಯುತ ಹಕ್ಕನ್ನು ದಕ್ಕಿಸಿಕೊಳ್ಳಲು, ತಮಗೆ ಸಿಗಬೇಕಾದ ಅವಕಾಶಗಳನ್ನು ದೊರಕಿಸಿಕೊಳ್ಳಲು ಕ್ಲಾರಾ ಜೆಟ್‌ಕಿನ್ ಎಂಬ ಮಹಿಳೆ ತುಳಿದ ಅತ್ಯಂತ ಸಂಘರ್ಷಪೂರ್ಣ ಹೋರಾಟಕ್ಕೆ ಸಿಕ್ಕ ಗೆಲುವನ್ನು, ಹೋರಾಟದ ಹಾದಿಯಲ್ಲಿನ ಅವರ ಬದ್ಧತೆಯನ್ನು ಸ್ಮರಿಸಿಕೊಳ್ಳಲಿರುವ ದಿನ. ಈ ಅರ್ಥದಲ್ಲಿ ನೋಡುವುದಾದರೆ ನಗರಕೇಂದ್ರಿತ, ಸುಶಿಕ್ಷಿತ, ದುಡಿಯುವ, ತಮ್ಮ ಅಹವಾಲುಗಳನ್ನು ಸ್ಪಷ್ಟ ಮಾತುಗಳಲ್ಲಿ ಹೇಳಬಲ್ಲ, ಗಮನಸೆಳೆಯುವ ಕ್ಷೇತ್ರಗಳಲ್ಲಿ ಕೆಲಸ ಮಾಡುವವರದು ಮಾತ್ರ ಸಾಧನೆಯಲ್ಲ, ಯಾವ ಪ್ರಚಾರವನ್ನೂ ಬಯಸದೆ, ಅದರ ಬಗ್ಗೆ ಕಿಂಚಿತ್ತು ಸುಳಿವೂ ಇಲ್ಲದೆ, ಮಾಧ್ಯಮಗಳ, ಸೋಶಿಯಲ್ ಮೀಡಿಯಾ ಎಂಬ ವರ್ಚುವಲ್ ಜಗತ್ತಿನಿಂದ ನೂರಾರು ಮೈಲಿ‌ ಅಂತರ ಕಾಯ್ದುಕೊಂಡು ಒಂದು ಸಮಾಜದ ಯೋಚನಾ ಕ್ರಮವನ್ನು ಬದಲಿಸುವ ಲಕ್ಷಾಂತರ ಮಹಿಳೆಯರದ್ದೂ ಸಾಧನೆಯೇ.

'ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ' ಥೀಮ್‌ನಲ್ಲಿ ಈ ವರ್ಷ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ನ್ಯಾಯ, ಘನತೆ ಮತ್ತು‌‌ ಭರವಸೆಯನ್ನು ಪ್ರತಿನಿಧಿಸುವ ಈ ಬಾರಿಯ ಥೀಮ್‌ಅನ್ನು ಓದಿಕೊಂಡಾಗ, ಮನಸ್ಸಲ್ಲಿ ಅನುರಣಿಸಿಕೊಂಡಾಗೆಲ್ಲ ನನಗೆ‌ ನಮ್ಮೂರಿನ ಹೈಸ್ಕೂಲಿನ‌ ಪಕ್ಕ ಪುಟ್ಟ ಮನೆ ಮಾಡಿಕೊಂಡಿದ್ದ ಲಲಿತಮ್ಮ ನೆನಪಾಗುತ್ತಾರೆ.

ಜೀವನ ನಿರ್ವಹಣೆಗಾಗಿ ಸಣ್ಣದೊಂದು ಗದ್ದೆ ಇಟ್ಟುಕೊಂಡಿದ್ದ ಅವರು ತಮ್ಮ ಗಂಡನ‌ ಜೊತೆಗೂಡಿ ಬೆಳಗ್ಗೆ ಎಂಟುಗಂಟೆಗೇ ಮಧ್ಯಾಹ್ನದ ಬುತ್ತಿಯನ್ನೂ‌ ಕಟ್ಟಿಕೊಂಡು ಹೊಲಕ್ಕೆ ಹೊರಟರೆ ಮರಳುತ್ತಿದ್ದುದು ಸಂಜೆ ಆರು ಗಂಟೆಗೆ. ಹಾಗೆ ಹೋಗುವಾಗೆಲ್ಲಾ ತಮ್ಮ ಮನೆಯ ಪುಟ್ಟ ಗೇಟ್‌ಅನ್ನು ತೆರೆದಿಟ್ಟೇ ಹೋಗುತ್ತಿದ್ದ ದಂಪತಿಯೆಂದರೆ‌ ನಮಗೆ ತೀರದ ಅಚ್ಚರಿ.

ಹೈಸ್ಕೂಲ್ ದಿನಗಳ ಸಹಜ ಕುತೂಹಲದಿಂದ ನಾವು ಕೆಲ ಹೆಣ್ಣುಮಕ್ಕಳು ಆ ಮನೆಯ ಸುತ್ತ ವಿನಾಕಾರಣ ಠಳಾಯಿಸುತ್ತಿದ್ದೆವು.

ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ‌ ಅವರ ಮನೆಯ ಅಂಗಳದಲ್ಲಿದ್ದ ಸಂಪಿಗೆ ಮರದಡಿ ಕುಳಿತುಕೊಳ್ಳುವುದೆಂದರೆ ನಮಗೆಲ್ಲಾ ಒಂದು ರೀತಿಯ ಸಂಭ್ರಮ. ಆ ದಂಪತಿಗೆ‌ ನಮ್ಮ ಕಿತಾಪತಿ ಮೊದಲೇ ಗೊತ್ತಿತ್ತೋ‌ ಇಲ್ಲವೋ ಗೊತ್ತಿಲ್ಲ, ಒಂದಿನ ಮರಕ್ಕೆ ತಾಗಿಸಿಕೊಂಡಂತೆ ಸಣ್ಣ ಸ್ಟೂಲ್ ಒಂದನ್ನು ಇಟ್ಟು ಅದರ ಮೇಲೆ ಮಣ್ಣಿನ‌ ಮಡಕೆಯಲ್ಲಿ ನೀರು ತುಂಬಿಸಿಟ್ಟಿದ್ದರು, ಮೇಲೊಂದು ಸ್ಟೀಲ್ ಲೋಟ ಕೂಡ. ಅದುವರೆಗೆ ಆಟ, ತಮಾಷೆ ಮಾತ್ರ ಮಾಡುತ್ತಿದ್ದ ನಮಗೆ ಅಲ್ಲಿನ ಯಾವ ವಸ್ತುಗಳನ್ನೂ ಮುಟ್ಟಬಾರದು, ಹಾಳುಗೆಡವಬಾರದು ಎನ್ನುವ ಜ್ಞಾನೋದಯ ಅವತ್ತಾಗಿತ್ತು. ಕಾರಣವೇ ಇಲ್ಲದೆ ನಮ್ಮ ಮೇಲೆ ಕಾಳಜಿ ತೋರುವ ದಂಪತಿಯ ಮೇಲೆ ಪ್ರೀತಿ ಹುಟ್ಟಿತ್ತು.

ಮಾತಾಡಿಸೋಣ ಎಂದರೆ‌ ಅವರು ಸಿಗುತ್ತಲೇ ಇರಲಿಲ್ಲ. ಸಿಕ್ಕರೂ ಗದ್ದೆ, ಕೆಲಸ ಎಂದು ಬ್ಯುಸಿ ಆಗಿರುತ್ತಿದ್ದ ಅವರನ್ನು ಸುಮ್ಮನೆ ಕೆದಕಿ ಮಾತಾಡಿಸುವ ಧೈರ್ಯವೂ ನಮಗಿರಲಿಲ್ಲ. ಆದರೆ, ಒಂದಿನ ಮಾತಾಡಿಸಲೇಬೇಕಾದ ಜರೂರತ್ತು ಒದಗಿಬಂದಿತ್ತು. ಆ ದಿನ ಶಾಲೆಯಲ್ಲಿ ನೀರಿರಲಿಲ್ಲ. ನಮ್ಮ ಕ್ಲರ್ಕ್ ಸಂಕು ಅಣ್ಣ ಅದೆಲ್ಲಿಂದಲೋ ಎರಡು ಕೊಡ ನೀರು ಕುಡಿಯಲು ಎತ್ತಿಕೊಂಡು ಬಂದಿದ್ದರು. ಶೌಚಕ್ಕಾಗಲೀ, ಊಟ ಮಾಡಿ ಕೈ ತೊಳೆಯಲಾಗಲೀ ನೀರಿರಲಿಲ್ಲ.

'ದುರ್ಭಿಕ್ಷದಲ್ಲಿ ಅಧಿಕ ಮಾಸ' ಎಂಬಂತೆ ನಮ್ಮ ಗೆಳತಿಯೊಬ್ಬಳು ಅದೇ ದಿನ ಮೊದಲ ಬಾರಿ ಮುಟ್ಟಾಗಿದ್ದಳು. ನಮ್ಮಲ್ಲಿ ಅನೇಕರಿಗೆ ಆಗ ಮುಟ್ಟಿನ ಅನುಭವವಾಗಲೀ, ಅದು ತಂದೊಡ್ಡುವ ಸಂಕಟವಾಗಲೀ ಗೊತ್ತಿರಲಿಲ್ಲ. ಆಗ ನಮ್ಮಲ್ಲಿ ಇದ್ದುದು ಬಟ್ಟೆಯಲ್ಲಾಗುವ ಕಲೆ ಯಾರಿಗೂ ಗೊತ್ತಾಗಬಾರದು ಎನ್ನುವ ಪರಮ ಮುಗ್ಧ ನಂಬಿಕೆಯೊಂದೇ. ಆ ಗೆಳತಿ ಹೊಟ್ಟೆನೋವಿನಿಂದ ಮುಲುಗುಡುತ್ತಿದ್ದರೆ ನಮ್ಮಲ್ಲಿ ಕೆಲವರಿಗೆ ಮುಸಿ ಮುಸಿ ನಗು. ಆದರೆ ಅದು ಎಷ್ಟು ಯಾತನಾಮಯವಾಗಿರುತ್ತದೆ ಎಂಬುವುದು ಅರಿವಾಗಲು ಹೆಚ್ಚು ಹೊತ್ತೇನೂ ಹಿಡಿಯಲಿಲ್ಲ.

ಮಹಿಳಾ ಅಧ್ಯಾಪಕರಿಲ್ಲದ ನಾವು ಬೇರೆ ಯಾವುದೇ ಆಯ್ಕೆಗಳಿಲ್ಲದೆ ಅವಳನ್ನು ಕರೆದುಕೊಂಡು ಲಲಿತಮ್ಮನ ಮನೆಯ ಕಡೆ ಹೊರಟೆವು. ನಮ್ಮ‌ ಪುಣ್ಯಕ್ಕೆ ಅವರು ಆ ದಿನ ಮನೆಯಲ್ಲೇ ಇದ್ದರು.‌ ಆ ಮನೆಯೊಳಗೆ ಎಂದೂ ಪ್ರವೇಶಿಸದೇ ಇದ್ದ ನಾವು ಬಾಗಿಲಲ್ಲಿ ನಿಂತು ಆಚೀಚೆ ನೋಡುತ್ತಿದ್ದರೆ ಅವರೇ ಬಂದು ವಿಚಾರಿಸಿ ನಮ್ಮೆಲ್ಲರನ್ನು ಮನೆಯೊಳಗೆ ಕರೆಸಿ ಒಂದು ಚಾಪೆ ಹಾಸಿ ಕೂರಿಸಿ ಅಳುತ್ತಿದ್ದ ಅವಳಿಗೆ ಸಾಂತ್ವನ ಹೇಳಿ, ‘ಇದೆಲ್ಲಾ ಹುಡುಗಿಯೊಬ್ಬಳ ಬದುಕಲ್ಲಿ ನಡೆಯಲೇಬೇಕಾದ ಸಂಗತಿ. ಅಳುವಂಥದ್ದು, ದುಃಖ ಪಡುವಂಥದ್ದು ಏನೂ ಇಲ್ಲ. ಈ ನೋವಿಗೆ, ಸಂಕಟಕ್ಕೆಲ್ಲಾ ಅಳುತ್ತಾ ಕೂರಬಾರದು’ ಎಂದು ಹೇಳಿ ಅವರದೇ ಮರದಲ್ಲಿ ಬೆಳೆದ ಎಳನೀರೊಂದನ್ನು ಕೊಯ್ದು ಅವಳಿಗೆ ಕೊಟ್ಟು, ತುಂಬು ಆತ್ಮೀಯತೆಯಿಂದ ಬಚ್ಚಲು ಕೋಣೆಗೆ ಕರೆದುಕೊಂಡು ಹೋಗಿ ಮುಟ್ಟಿನ ದಿನಗಳಲ್ಲಿ ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ಹೇಳಿಕೊಟ್ಟರು.‌ ಗೆಳತಿಯ ಹೊಟ್ಟೆ ನೋವಿನ ನೆಪದಲ್ಲಿ ಇಡೀ ದಿನ ಕ್ಲಾಸಿಗೆ ಚಕ್ಕರ್ ಹಾಕಿದ ನಾವು ಸಂಜೆಯವರೆಗೂ ಆ ಮನೆಯಲ್ಲಿದ್ದು ನಂತರ ಮನೆಗೆ ಮರಳಿದವು.

ಮರುದಿನ ಬೆಳಗ್ಗೆ ಎಂದಿನಂತೆ ಶಾಲೆಗೆ ಹೋಗಬೇಕಾದರೆ ಶಾಲೆಯ ಹತ್ತಿರ ನಿಂತಿದ್ದ ಅವರು ನಮ್ಮನ್ನು‌‌ ಕರೆದುಕೊಂಡು‌ ಹೋಗಿ ಅವರ ಮನೆಯ ಕಿಟಕಿಯಲ್ಲಿ ಒಂದು‌ ಪೆಟ್ಟಿಗೆಯಲ್ಲಿ ಒಂದಿಷ್ಟು ಸ್ಯಾನಿಟರಿ ಪ್ಯಾಡ್‌ಗಳನ್ನೂ ಪಕ್ಕದಲ್ಲೇ ಕಿಂಡಿ ಹೊಂದಿರುವ ಸಣ್ಣದೊಂದು ಡಬ್ಬವನ್ನೂ ತೋರಿಸಿ ‘ಓದೋ ಮಕ್ಕಳು ನೀವು, ಮುಟ್ಟಿನ ಕಾರಣದಿಂದ ಪಾಠಗಳು ತಪ್ಪಬಾರದು. ಬೇಕೆಂದಾಗೆಲ್ಲಾ ಇಲ್ಲಿ ಬಂದು ಈ ಪೆಟ್ಟಿಗೆಯಿಂದ ಪ್ಯಾಡ್ ತೆಗೆದುಕೊಂಡು ಕೈಯಲ್ಲಿ‌ ದುಡ್ಡಿದ್ದರೆ ಅದರ ದುಡ್ಡನ್ನು ಈ ಡಬ್ಬಕ್ಕೆ ಹಾಕಿ ಹೋಗಿ. ದುಡ್ಡಿಲ್ಲದಿದ್ದರೂ ಪ್ಯಾಡ್ ಬಳಸಲು ಹಿಂಜರಿಯಬೇಡಿ’ ಅಂದಿದ್ದರು. ಆಗಿನ್ನೂ ಸರ್ಕಾರದ ‘ಸಖಿ’ ಪ್ಯಾಡ್ ಶಾಲೆಗಳಲ್ಲಿ ಬಂದಿರಲಿಲ್ಲ. ಈಗಷ್ಟೇ ಬದುಕನ್ನು ನೋಡಲು ಆರಂಭಿಸಿದ್ದ ನಮಗೆ ಅವರು ಅವರಿಗೇ ಗೊತ್ತಿಲ್ಲದಂತೆ ಒಂದು ವಿಶಿಷ್ಟ ಆತ್ಮವಿಶ್ವಾಸ ತುಂಬಿದ್ದರು.

ಈಗ ಯೋಚಿಸುವಾಗ ಧರಿಸುವ ಬಟ್ಟೆಯ ಕಾರಣದಿಂದ ಸುಶಿಕ್ಷಿತರೇ ಶಿಕ್ಷಣ ನಿರಾಕರಿಸುತ್ತಿರುವಾಗ ಅಕ್ಷರ ಜ್ಞಾನವಿಲ್ಲದ, ನಮ್ಮ ಜನಪ್ರಿಯ ಮಹಿಳಾ ವಾದಗಳು ಹುಟ್ಟುಹಾಕಿರುವ ಯಾವ ಫ್ರೇಮಿನೊಳಗೂ ನಿಲ್ಲದ ಲಲಿತಮ್ಮನಂಥವರು ಕ್ಲಾರಾ ಜೆಟ್‌ಕಿನ್‌ನ ನಿಜದ ವಾರಸುದಾರರಂತೆ ತೋರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT