ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಚರ..! ಮಾತಿಗೆ ಮರುಳಾಗಿ ಬೆತ್ತಲಾದರು

Published 3 ನವೆಂಬರ್ 2023, 23:55 IST
Last Updated 3 ನವೆಂಬರ್ 2023, 23:55 IST
ಅಕ್ಷರ ಗಾತ್ರ

‘ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯೊಂದರ ಹಿರಿಯ ಎಂಜಿನಿಯರ್ ನಾನು. ದಿನಕ್ಕೆ 8 ಗಂಟೆ ಕೆಲಸ. ಕೈ ತುಂಬ ಸಂಬಳ. ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಪತ್ನಿ ಹಾಗೂ ಮಕ್ಕಳು ಊರಿಗೆ ಹೋಗಿದ್ದು, ಇದುವರೆಗೂ ಬಂದಿಲ್ಲ. ವಾರದಲ್ಲಿ ಎರಡು ದಿನ ಕಚೇರಿ ಕೆಲಸ ಹಾಗೂ ಮೂರು ದಿನ ಮನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಶನಿವಾರ ಹಾಗೂ ಭಾನುವಾರ ಬಂದರೆ, ಎಲ್ಲಾದರೂ ಸುತ್ತಾಡಬೇಕು ಹಾಗೂ ಯಾರನ್ನಾದರೂ ಭೇಟಿಯಾಗಬೇಕೆಂದು ಅನಿಸುತ್ತದೆ. ಇದರ ನಡುವೆಯೇ, ನನಗೆ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಆ್ಯಪ್‌ ಎಂದರೆ ಹೆಚ್ಚು ಇಷ್ಟ. ಎರಡೂ ಕಡೆಯೂ ನನ್ನದೇ ಖಾತೆ ತೆರೆದು, ಸಾಫ್ಟ್‌ವೇರ್ ಎಂಜಿನಿಯರ್ ಎಂಬುದಾಗಿ ‘ಬಯೋ’ ಬರೆದುಕೊಂಡು ಸ್ಟೈಲೀಶ್ ಫೋಟೊ ಅಪ್‌ಲೋಡ್ ಮಾಡಿದ್ದೇನೆ. ದಿನದಲ್ಲಿ ಕನಿಷ್ಠ 1 ಗಂಟೆ ಹಾಗೂ ಗರಿಷ್ಠ 3 ಗಂಟೆ ಫೇಸ್‌ಬುಕ್–ಇನ್‌ಸ್ಟಾಗ್ರಾಂ ಬಳಸುತ್ತೇನೆ. ಪುರುಷರು ಹಾಗೂ ಮಹಿಳೆಯರು, ಇಬ್ಬರೂ ಸ್ನೇಹಿತರಿದ್ದಾರೆ. ಬಹುತೇಕರು ಪರಿಚಿತರು. ಅವರೆಲ್ಲರ ಜೊತೆ ನಿತ್ಯವೂ ಚಾಟಿಂಗ್ ಸಹ ಮಾಡುತ್ತಿರುತ್ತೇನೆ. ಹೊಸ ಸ್ನೇಹಿತರಿಗಾಗಿಯೂ ಹುಡುಕಾಡುತ್ತಿರುತ್ತೇನೆ’

‘ಹೀಗೆ, 2023ರ ಮಾರ್ಚ್‌ ತಿಂಗಳಿನಲ್ಲಿ ‘ಕ್ಯೂಟ್ ಸಾಕ್ಷಿ ವರ್ಮಾ’ ಹೆಸರಿನಲ್ಲಿ ಫೇಸ್‌ಬುಕ್‌ ಖಾತೆಗೆ ಫ್ರೇಂಡ್ ರಿಕ್ವೆಸ್ಟ್ ಬಂದಿತ್ತು. ಖಾತೆ ಪರಿಶೀಲಿಸಿದಾಗ, ಯುವತಿಯ ಹಲವು ಫೋಟೊಗಳಿದ್ದವು. ಜೊತೆಗೆ, ಕಾಲೇಜೊಂದರ ವಿದ್ಯಾರ್ಥಿನಿ ಎಂಬುದಾಗಿ ಯುವತಿ ಬರೆದುಕೊಂಡಿದ್ದಳು. ಅದಕ್ಕೆ ಸಂಬಂಧಪಟ್ಟ ಕಾಲೇಜು ಫೋಟೊಗಳನ್ನೂ ಅಪ್‌ಲೋಡ್ ಮಾಡಿದ್ದಳು. ಯುವತಿ ನೋಡಲು ಚೆಂದವಿದ್ದಳು. ಅಪರಿಚಿತರಿದ್ದರೂ ಮುಂದೆ ಪರಿಚಿತರಾಗಬಹುದೆಂದು ತಿಳಿದು, ಫ್ರೆಂಡ್‌ ರಿಕ್ವೆಸ್ ಸ್ವೀಕರಿಸಿದೆ.’

‘ಎರಡು ದಿನ ಬಿಟ್ಟು, ಯುವತಿಯ ಖಾತೆಯಿಂದ ‘ಹಾಯ್ ಗುಡ್ ಮಾರ್ನೀಂಗ್’ ಎಂಬ ಸಂದೇಶ ಬಂತು. ಚೆಂದದ ಹುಡುಗಿ ಸಂದೇಶ ಕಳುಹಿಸಿದ್ದಾಳೆಂದು ಖುಷಿಯಿಂದ ಪ್ರತಿಕ್ರಿಯಿಸಿದ್ದೆ. ಇದಾದ ನಂತರ, ಪರಸ್ಪರ ಮಾತುಕತೆ ಆರಂಭವಾಯಿತು. ಯುವತಿ ತನ್ನ ಹವ್ಯಾಸ ಹಾಗೂ ತನ್ನ ತಂದೆ–ತಾಯಿ ಬಗ್ಗೆ ಮಾತನಾಡಿದಳು. ನಾನೂ ನನ್ನ ಬಗ್ಗೆ ಹೇಳಿಕೊಂಡೆ. ಹೀಗೆ... ನಾಲ್ಕು ದಿನ ಚಾಟಿಂಗ್ ನಡೆಯಿತು. ಲೈಂಗಿಕವಾಗಿ ಪ್ರಚೋದಿಸುವ ಹಲವು ಎಮೋಜಿಗಳನ್ನು ಯುವತಿ ಕಳುಹಿಸಲಾರಂಭಿಸಿದ್ದಳು. ಯುವತಿ ನನ್ನನ್ನು ಇಷ್ಟಪಡುತ್ತಿರಬಹುದೆಂದು ತಿಳಿದು, ನಾನೂ ಅದೇ ರೀತಿಯ ಎಮೋಜಿ ಕಳುಹಿಸಿದೆ. ಇದಾಗಿ ಒಂದೇ ದಿನದಲ್ಲಿ ಇಬ್ಬರೂ ಪರಸ್ಪರ ಹತ್ತಿರವಾದೆವು. ಪರಸ್ಪರ ಭೇಟಿಯಾಗುವ ಮಾತುಗಳೂ ಆರಂಭವಾದವು. ಆದರೆ, ಸದ್ಯಕ್ಕೆ ಕಾಲೇಜು ಇರುವುದಾಗಿ ಯುವತಿ ಹೇಳಿದ್ದಳು.’

‘ಭೇಟಿಯಾಗಿ 6ನೇ ದಿನದಂದು ಸಂದೇಶ ಕಳುಹಿಸಿದ್ದ ಯುವತಿ, ‘ನಿಮ್ಮ ಮಾತು ನನಗೆ ಇಷ್ಟವಾಗಿದೆ. ನನಗೂ ಗೆಳೆಯನಿಲ್ಲ. ನಿಮ್ಮೊಂದಿಗೆ ನಾನು ಖಾಸಗಿ ಕ್ಷಣಗಳನ್ನು ಕಳೆಯಬೇಕು. ನಿಮ್ಮನ್ನು ನೇರವಾಗಿ ಭೇಟಿಯಾಗಬೇಕು. ಅಥವಾ ವಿಡಿಯೊ ಕರೆಯನ್ನಾದರೂ ಮಾಡಿ’ ಎಂದಿದ್ದಳು. ಆಕೆಯೇ ಆಹ್ವಾನ ನೀಡಿದ್ದರಿಂದ, ಮತ್ತಷ್ಟು ಪ್ರಚೋದನೆಗೊಂಡೆ. ರಾತ್ರಿ 8 ಗಂಟೆ ಸುಮಾರಿಗೆ ಕೊಠಡಿಯಲ್ಲಿ ಏಕಾಂಗಿಯಾಗಿ ಕುಳಿತಿರುವಾಗ, ‘ವಿಡಿಯೊ ಕಾಲ್ ಮಾಡು’ ಎಂದು ಆಕೆಗೆ ಸಂದೇಶ ಕಳುಹಿಸಿದ್ದೆ. ಇದಾದ ಕೆಲ ನಿಮಿಷಗಳಲ್ಲಿ ಯುವತಿ ಕಡೆಯಿಂದ ವಿಡಿಯೊ ಕರೆ ಬಂತು.’

‘ಕರೆ ಸ್ವೀಕರಿಸುತ್ತಿದ್ದಂತೆ, ಯುವತಿ ಕಾಣಿಸಿದಳು. ‘ಹಾಯ್‘ ಎನ್ನುತ್ತಲೇ ಯುವತಿ, ತನ್ನ ಬಟ್ಟೆಗಳನ್ನು ಬಿಚ್ಚಿ ನಗ್ನಳಾದಳು. ನನಗೂ ಬಟ್ಟೆ ಬಿಚ್ಚುವಂತೆ ಹೇಳಿದಳು. ನಾನೂ ನಗ್ನನಾದೆ. ಮೂರು ನಿಮಿಷಗಳಲ್ಲಿ ಕರೆ ಕಡಿತವಾಯಿತು. ಪುನಃ ಕರೆ ಮಾಡಿದರೆ, ಯುವತಿ ಸ್ವೀಕರಿಸಲಿಲ್ಲ.’

‘ಮರುದಿನ ಬೆಳಿಗ್ಗೆ ನನ್ನ ಮೊಬೈಲ್‌ ವಾಟ್ಸ್‌ಆ್ಯಪ್‌ಗೆ ಅಪರಿಚಿತ ನಂಬರ್‌ನಿಂದ ವಿಡಿಯೊ ಬಂದಿತ್ತು. ಅದನ್ನು ತೆರೆದು ನೋಡಿದಾಗ, ನನ್ನದೇ ನಗ್ನ ವಿಡಿಯೊವಾಗಿತ್ತು. ‘ನಮ್ಮ ಯುವತಿ ಜೊತೆಗೆ ಸಂಬಂಧವಿಟ್ಟುಕೊಂಡಿದ್ದಿಯಾ. ನಿನ್ನ ನಗ್ನ ವಿಡಿಯೊ ನಮಗೆ ಸಿಕ್ಕಿದೆ. ಇದನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತೇವೆ. ನಿನ್ನ ಪತ್ನಿ, ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕಳುಹಿಸುತ್ತೇವೆ’ ಎಂಬ ಸಂದೇಶವೂ ಬಂದಿತ್ತು.’

‘ವಿಡಿಯೊ ಹೊರಗೆ ಬಂದರೆ, ಮರ್ಯಾದೆ ಹೋಗುತ್ತದೆಂದು ಭಯವಾಯಿತು. ಅಪರಿಚಿತ ನಂಬರ್‌ಗೆ ಕರೆ ಮಾಡಿ, ವಿಡಿಯೊ ಡಿಲೀಟ್ ಮಾಡಿ ಎಂದೆ. ಹಿಂದಿಯಲ್ಲಿ ಮಾತನಾಡುತ್ತಿದ್ದ ಅಪರಿಚಿತ, ‘ನಮಗೆ ₹ 25 ಸಾವಿರ ನೀಡಬೇಕು’ ಎಂದಿದ್ದ. ಕೂಡಲೇ ಆತನಿಗೆ ಹಣ ಕಳುಹಿಸಿದ್ದೆ. ‘ಯುವತಿಗೆ ಅನ್ಯಾಯ ಮಾಡಿದ್ದಿಯಾ. ವಿಡಿಯೊ ಸಮೇತ ಸಿಬಿಐಗೆ ದೂರು ನೀಡುತ್ತಿದ್ದೇವೆ’ ಎಂದು ಅಪರಿಚಿತ ಹೇಳಿದ್ದ. ದೂರು ನೀಡದಿರಲು ಪುನಃ ₹ 50 ಸಾವಿರ ಪಡೆದಿದ್ದ. ಇದಾದ ನಂತರ, ಯುಟ್ಯೂಬ್‌ನಲ್ಲಿ ವಿಡಿಯೊ ಅಪ್‌ಲೋಡ್ ಮಾಡಿ ಲಿಂಕ್ ಕಳುಹಿಸಿದ್ದ. ‘ಈಗಾಗಲೇ ಯುಟ್ಯೂಬ್‌ನಲ್ಲಿ ವಿಡಿಯೊ ಅಪ್‌ಲೋಡ್ ಆಗಿದೆ. ಅದನ್ನು ಅಳಿಸಿ ಹಾಕಲು ₹ 25 ಸಾವಿರ ಕೊಡು’ ಎಂದಿದ್ದ. ಅವಾಗಲೂ ಹಣ ಕಳುಹಿಸಿದ್ದೆ. ಹೀಗೆ... ಎರಡು ದಿನ ನಾನಾ ರೀತಿಯಲ್ಲಿ ಬ್ಲ್ಯಾಕ್‌ಮೇಲ್ ಮಾಡಿದ್ದ ಅಪರಿಚಿತ, ಒಟ್ಟು ₹ 5.80 ಲಕ್ಷ ಪಡೆದಿದ್ದ. ಪುನಃ ಹಣಕ್ಕೆ ಬೇಡಿಕೆ ಇರಿಸಿದಾಗ, ಸ್ನೇಹಿತರ ಬಳಿ ವಿಷಯ ತಿಳಿಸಿದ್ದೆ. ಅವರ ಸಲಹೆಯಂತೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದೇನೆ.'

‘ಅಪರಿಚಿತ ಖಾತೆಯಿಂದ ರಿಕ್ವೆಸ್ಟ್ ಬಂದಾಗ, ನಾನು ಎಚ್ಚರಿಕೆ ವಹಿಸಬೇಕಿತ್ತು. ಎಚ್ಚರ ತಪ್ಪಿ, ಬ್ಲ್ಯಾಕ್‌ಮೇಲ್ ಜಾಲದೊಳಗೆ ಸಿಲುಕಿಕೊಂಡೆ. ಅಪರಿಚಿತ ಖಾತೆಯಿಂದ ಬರುವ ರಿಕ್ವೆಸ್ಟ್ ಹಾಗೂ ಕರೆಗಳು, ಸಂದೇಶಗಳ ಬಗ್ಗೆ ಜನರು ಎಚ್ಚರಿಕೆ ವಹಿಸಿ. ನನ್ನಂತೆ ಹಣ ಕಳೆದುಕೊಳ್ಳಬೇಡಿ.’

– ದೂರುದಾರ

ಬೆತ್ತಲೆಗೊಳಿಸಿ ಬ್ಲ್ಯಾಕ್‌ಮೇಲ್ ಮಾಡುವ ಜಾಲ ಸಕ್ರಿಯ
ಚೆಂದದ ಯುವತಿಯರ ಫೋಟೊ ಬಳಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆ ತೆರೆದು, ಅಮಾಯಕರನ್ನು ಬಲೆಗೆ ಬೀಳಿಸಿ ನಗ್ನಗೊಳಿಸಿ ಬ್ಲ್ಯಾಕ್‌ಮೇಲ್ ಮಾಡಿ ಹಣ ಗಳಿಸುವ ಜಾಲ ಸಕ್ರಿಯವಾಗಿದೆ. ಕೆಲ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು, ಕೆಲ ವಕೀಲರು, ಕೆಲ ಪೊಲೀಸರು, ಕೆಲ ವೈದ್ಯರು, ನಿವೃತ್ತ ನೌಕರರು, ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಉದ್ಯಮದಾರರು, ವ್ಯಾಪಾರಿಗಳು, ಖಾಸಗಿ ಕಂಪನಿ ನೌಕರರು ಸೇರಿದಂತೆ ಹಲವರು ಜಾಲದಲ್ಲಿ ಸಿಲುಕಿ ಲಕ್ಷ ಲಕ್ಷ ಕಳೆದುಕೊಂಡಿದ್ದಾರೆ. ಇಂಥ ಜಾಲದ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT