ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರೆಯದ ಮಗಳು ಸ್ನೇಹಿತೆಯಂತೆ..

ಹರೆಯ
Last Updated 3 ಆಗಸ್ಟ್ 2019, 7:17 IST
ಅಕ್ಷರ ಗಾತ್ರ

ಕಂಗಳಲ್ಲಿ ಮಿಂಚಿನ ಜೊತೆ ಅರಿವಿಲ್ಲದಂತೆ ಇಣುಕುವ ನಾಚಿಕೆ. ನಿಂತಲ್ಲಿ, ಕೂತಲ್ಲಿ ಕನಸು ಕಾಣುವ ಹಂಬಲ. ಭಾವನೆಗಳ ತಾಕಲಾಟದಿಂದ ಓಡುವ ಮನಸ್ಸಿಗೆ ಕಡಿವಾಣ ಹಾಕುವ ರೀತಿ ಹೊಳೆಯದೆ ಕಂಗಾಲಾಗುವ ಹಂತ ಈ ಹದಿಹರೆಯ.

ಈ ಹರೆಯವೇ ಹಾಗೆ. ಬಾಲ್ಯಾವಸ್ಥೆಯಿಂದ ವಯಸ್ಕ ಹಂತವನ್ನು ತಲುಪಿಸುವ ಮುಖ್ಯ ಸೇತುವೆಯಾದರೂ ಈ ಸೇತುವೆಯನ್ನು ದಾಟುವ ಹಾದಿ ಮಕ್ಕಳಿಗೆ, ಅದರಲ್ಲೂ ಹೆಣ್ಣುಮಕ್ಕಳಿಗೆ ತುಸು ಕಠಿಣವೇ. ಹೆಣ್ಣುಮಕ್ಕಳನ್ನು 9 ಅಥವಾ 10 ವರ್ಷಕ್ಕೆಲ್ಲ ಜೈವಿಕವಾಗಿ, ಲೈಂಗಿಕವಾಗಿ ಪಕ್ವಗೊಳಿಸುವ ಈ ಹಂತ ದೇಹದಲ್ಲಿ, ಭಾವನೆಗಳಲ್ಲಿ, ಧೋರಣೆಗಳಲ್ಲಿ, ಸಂಬಂಧಗಳಲ್ಲಿ ತ್ವರಿತಗತಿಯ ಬದಲಾವಣೆಗೆ ಮುನ್ನುಡಿ ಬರೆಯುತ್ತದೆ. ಅವರ ಜೀವನ ಮತ್ತು ಸಾಮಾಜಿಕ ಬದುಕು ಇದ್ದಕ್ಕಿದ್ದಂತೆ ಬದಲಾದ ಹಾಗೆ ಎನಿಸುತ್ತದೆ.

ಜೊತೆಗೆ ಶೈಕ್ಷಣಿಕ ಒತ್ತಡ, ನೃತ್ಯ, ಸಂಗೀತದಂತಹ ಪಠ್ಯೇತರ ಚಟುವಟಿಕೆಗಳು ಎಲ್ಲವೂ ಒಮ್ಮೆಲೇ ಮುಗಿ ಬಿದ್ದಂತಾಗಿ ನಿಭಾಯಿಸುವುದು ಕಷ್ಟಕರವೇ.

ಹೆಣ್ಣುಮಕ್ಕಳಿಗೆ ಒಂದು ರೀತಿಯ ಕಷ್ಟವಾದರೆ, ಆ ಮಕ್ಕಳ ಪೋಷಕರಿಗೂ ಈ ಹಂತವನ್ನು ನಿಭಾಯಿಸುವುದು ಇನ್ನೊಂದು ರೀತಿಯ ಕಷ್ಟ. ಹರೆಯಕ್ಕೆ ಕಾಲಿಟ್ಟ ಮಗಳು ಮನೆಯಿಂದ ಹೊರಹೋದರೆ ಮಡುಗಟ್ಟುವ ಆತಂಕ, ಆಕೆಯ ಸ್ನೇಹಿತ ವೃಂದದ ಬಗ್ಗೆ ಶಂಕೆ.

ಈ ಹೆಣ್ಣುಮಕ್ಕಳೂ ಅಷ್ಟೆ. ಹಾರ್ಮೋನ್‌ಗಳ ತುಂಟಾಟದಿಂದ ಶರೀರದಲ್ಲಾಗುವ ದಿಢೀರ್‌ ಬದಲಾವಣೆಯ ಜೊತೆ ಕ್ಷಣಕ್ಕೊಮ್ಮೆ ಭಾವನೆಗಳೂ ಬದಲಾಗುತ್ತವೆ. ಮಾನಸಿಕ ಅಸ್ಥಿರತೆಯಿಂದಕೆಲವೊಮ್ಮೆ ಅತಿಯಾದ ಸಂತೋಷ, ಕೆಲವೊಮ್ಮೆ ಅತಿಯಾದ ದುಃಖ ಅಥವಾ ಒಂಟಿತನ, ಕುತೂಹಲ ಅಥವಾ ಬೇಸರ, ಆತ್ಮವಿಶ್ವಾಸ ಅಥವಾ ಅನುಮಾನ ಹೀಗೆ ನಾನಾ ಭಾವನೆಗಳಿಗೆ ಗುರಿಯಾಗುತ್ತಾರೆ. ಪ್ರತಿಯೊಂದಕ್ಕೂ ‘ಹೀಗೇಕೆ’ ಎಂದು ನೂರಾರು ಪ್ರಶ್ನೆಗಳು, ಗೊಂದಲಗಳು ಅವರನ್ನು ಕಾಡುತ್ತವೆ.

ಬದಲಾಗುವ ಹರೆಯದ ಮಗಳು

ಈ ಹದಿಹರೆಯದವರ ವರ್ತನೆಯೇ ವಿಚಿತ್ರ. ಮುಗ್ಧೆಯಂತಿದ್ದ ಮಗಳು ಸಣ್ಣಪುಟ್ಟ ಕಥೆ ಕಟ್ಟಿ ಸುಳ್ಳು ಹೇಳಲು ಶುರು ಮಾಡುವುದೂ ಈ ಹಂತದಲ್ಲೇ. ಫೋನ್‌ನಲ್ಲಿ ಸ್ನೇಹಿತರೊಡನೆ ಗಂಟೆಗಟ್ಟಲೆ ಮಾತನಾಡುತ್ತಾಳೆ. ‘ರಹಸ್ಯ’ಗಳನ್ನು ಮುಚ್ಚಿಡುತ್ತಾಳೆ. ಕೆಲವೊಮ್ಮೆ ತಾಯಿಗೆ ಬಹಳ ಹತ್ತಿರವಾದರೆ, ಮತ್ತೊಮ್ಮೆ ತಾಯಿಯೊಡನೆ ಅಪರಿಚಿತಳಂತೆ ವರ್ತಿಸುತ್ತಾಳೆ. ತಾನು ಸ್ವತಂತ್ರವಾಗಿ ಬದುಕಬೇಕು, ಸ್ವತಂತ್ರವಾಗಿ ಯೋಚಿಸಬೇಕು ಎಂದು ಕನಸು ಕಾಣುತ್ತಾಳೆ. ಚಿಕ್ಕ ಮಕ್ಕಳನ್ನು ಬೆಳೆಸಿದಷ್ಟು ಸುಲಭವಾಗಿ ಹರೆಯದ ಮಕ್ಕಳನ್ನು ಬೆಳೆಸಲು ಆಗುವುದಿಲ್ಲ ಎಂಬ ವಾಸ್ತವ ಪೋಷಕರಲ್ಲಿ ಗಾಬರಿ ಮೂಡಿಸುತ್ತದೆ.

ತಮ್ಮ ತಂದೆ– ತಾಯಿಗೆ, ಶಿಕ್ಷಕರಿಗೆ ಯಾವುದು ಕಿರಿಕಿರಿ ಉಂಟು ಮಾಡುತ್ತದೆ ಎಂಬ ಸೂಕ್ಷ್ಮ ತಿಳಿದಿದ್ದರೂ ಅವರಿಗೆ ಕಿರಿಕಿರಿ ಮಾಡಲೆಂದೇ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಕೆಟ್ಟ ಭಾಷೆ ಬಳಸಬಹುದು, ಅವಿಧೇಯತೆಯಿಂದ ಬೇಕೆಂದೇ ಜೋರಾಗಿ ಟಿ.ವಿ. ಹಾಕುವುದು, ಹೋಮ್‌ವರ್ಕ್‌ ಮಾಡದೇ ಇರುವುದು, ಮನೆ ಕೆಲಸದಲ್ಲಿ ನೆರವಾಗದೇ ಇರಬಹುದು.

ಬಹು ಬೇಗ ಕೋಪಿಸಿಕೊಳ್ಳುವುದು, ಸಿಡುಕುವುದು, ರೊಚ್ಚಿಗೇಳುವುದು, ಎಲ್ಲದಕ್ಕೂ ಪ್ರಶ್ನಿಸುವುದು,.. ಹೀಗೆ ಮೂಡ್‌ ಆಗಿಂದಾಗ್ಗೆ ಬದಲಾಗುತ್ತಿರುತ್ತದೆ. ತಮ್ಮ ಶಿಕ್ಷಣ, ಭವಿಷ್ಯದ ಬಗ್ಗೆ ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ.ಬಾಲ್ಯದ ಬಂಧಗಳಿಂದ, ತಂದೆ– ತಾಯಿಯ ಸುರಕ್ಷತೆಯಿಂದ ಹೊರಬಂದು ಸ್ವಂತ ಛಾಪು ಮೂಡಿಸಲು ಹೆಣಗಬಹುದು.

ಲೈಂಗಿಕತೆಯ ಅತಿರೇಕ

ಹೆಣ್ಣುಮಕ್ಕಳು ಹೊಸದಾಗಿ ಆರಂಭವಾದ ಋತುಸ್ರಾವದಿಂದ ಕಂಗಾಲಾಗುವುದಲ್ಲದೇ, ಮೂಡುತ್ತಿರುವ ಮೊಡವೆ, ಸ್ತನಗಳ ಗಾತ್ರ ಕಂಡು ಕುತೂಹಲದಿಂದ ತಲೆ ಕೆಡಿಸಿಕೊಳ್ಳುತ್ತಾರೆ. ಲೈಂಗಿಕತೆಗೆ ಸಂಬಂಧಿಸಿದ ವರ್ತನೆಗಳು ಅತಿರೇಕಕ್ಕೆ ಹೋಗಬಹುದು. ಕೆಲವರು ಅತೀ ನಾಚಿಕೆಯಿಂದ ಹುಡುಗರೊಡನೆ ಮಾತೂ ಆಡುವುದಿಲ್ಲ. ಮತ್ತೆ ಕೆಲವರು ಹುಡುಗರನ್ನು ಛೇಡಿಸುವುದು, ಗೇಲಿ ಮಾಡುವುದು ಮಾಡುತ್ತಾರೆ. ತಂದೆ– ತಾಯಿಯರ ಮುಂದೆ ಒಂದು ರೀತಿ ವರ್ತಿಸುತ್ತಾ, ತಮ್ಮ ಸ್ನೇಹಿತರೊಡನೆ ಭಿನ್ನವಾಗಿ ವರ್ತಿಸುತ್ತಾರೆ. ಹಿರಿಯರೊಡನೆ ಲೆಕ್ಕಾಚಾರವಾಗಿ ವ್ಯವಹರಿಸುತ್ತಾರೆ.

ಪೋಷಕರು ಏನು ಮಾಡಬೇಕು?

ಮಕ್ಕಳು ಅನುಭವಿಸುವ ಒತ್ತಡ ಅರ್ಥ ಮಾಡಿಕೊಳ್ಳಿ.

ಸ್ನೇಹಿತರಂತೆ ಕಾಣಿ.

ಗಂಡ–ಹೆಂಡತಿಯರ ಮಧ್ಯೆ ಸೌಹಾರ್ದ ಇರಬೇಕು. ಯಾವುದೇ ಭಿನ್ನಾಬಿಪ್ರಾಯಗಳಿದ್ದಾಗ ಮಕ್ಕಳು ಎದುರಿಗೆ ಇಲ್ಲದಾಗ ಪರಿಹರಿಸಿಕೊಳ್ಳಿ.

ಹರೆಯದ ಹೆಣ್ಣುಮಕ್ಕಳ ಬಗ್ಗೆ ನಿಗಾ ಇಡಿ. ಆದರೆ ಅವಳಲ್ಲಿ ನಿಮಗೆ ನಂಬಿಕೆ ಇದೆಯೆಂದೂ, ಅವಳೆಂದೂ ದಾರಿ ತಪ್ಪುವುದಿಲ್ಲ ಎಂಬ ವಿಶ್ವಾಸವಿದೆ ಎಂದೂ ಆ ಮಗುವಿಗೆ ಹೇಳಿ.

ಮಗಳು ಸರಿಯಾದ ನಿರ್ಧಾರ ತೆಗೆದುಕೊಂಡಾಗ ಮೆಚ್ಚುಗೆ ಸೂಚಿಸಿ.

ಜೀವನದ ಕಷ್ಟಗಳು ಅವರಿಗೆ ಅರ್ಥವಾಗಲಿ. ನಿಮ್ಮ ಧನಾತ್ಮಕ ಮಾತುಗಳಿಂದ ಆ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಮಕ್ಕಳ ಅನಿಸಿಕೆಯನ್ನು, ಪ್ರಯೋಗಶೀಲತೆಯನ್ನು ಅರ್ಥಮಾಡಿಕೊಳ್ಳಿ. ಮಕ್ಕಳು ತಪ್ಪು ಮಾಡಿದರೂ, ಅದನ್ನೇ ದೊಡ್ಡದಾಗಿ ಮಾಡಿ ಎಲ್ಲರೆದುರು ಹೀಯಾಳಿಸಬೇಡಿ.

ಶಾಲೆಯಲ್ಲಿ ಹೆಚ್ಚು ಅಂಕ ಗಳಿಸುವಂತೆ ಕಾಡಬೇಡಿ. ಇತರ ಮಕ್ಕಳೊಡನೆ ಹೋಲಿಸಬೇಡಿ.

ಈ ವಯಸ್ಸಿನಲ್ಲಿ ಮಕ್ಕಳು ಸ್ನೇಹಿತರನ್ನು ತುಂಬಾ ಹಚ್ಚಿಕೊಳ್ಳುತ್ತಾರೆ. ಸಣ್ಣಪುಟ್ಟ ಜಗಳವನ್ನು ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಾರೆ. ಬದುಕಿನಲ್ಲಿ ಸ್ನೇಹಿತರು ಬರುತ್ತಾರೆ, ಹೋಗುತ್ತಾರೆ. ಆದರೆ ಸಂಬಂಧಗಳೇ ಶಾಶ್ವತ ಎಂದು ತಿಳಿಹೇಳಿ.

ಮಕ್ಕಳು ಯಾವುದೇ ವಿಷಯವನ್ನಾದರೂ ತಂದೆ–ತಾಯಿಯ ಜೊತೆ ಹಂಚಿಕೊಳ್ಳುವಂತಹ ಪ್ರೀತಿ, ಸಲುಗೆ ಕೊಡಬೇಕು.

ಮಕ್ಕಳು ಹೇಗೇ ಇರಲಿ, ಎಂತಹ ಸಂದರ್ಭದಲ್ಲೂ ‘ನಾವು ನಿನ್ನನ್ನು ಅತಿಯಾಗಿ ಪ್ರೀತಿಸುತ್ತೇವೆ, ಸದಾ ನಿನ್ನ ಜೊತೆ ಇರುತ್ತೇವೆ’ ಎಂಬುದನ್ನು ಮಕ್ಕಳಿಗೆ ಅರ್ಥ ಮಾಡಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT