ಸೋಮವಾರ, ಮೇ 17, 2021
27 °C

ಈ ಸಮಯ ರಸಪಾಕಮಯ..

ಸುಧಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಹಿಂದೆ ಅಡುಗೆಮನೆಗೆ ಹೋಗದವರೂ ಕೂಡ ಈ ಲಾಕ್‌ಡೌನ್‌ ಸಂದರ್ಭದಲ್ಲಿ ಪಾಕ ಪ್ರವೀಣರಾಗಿದ್ದಾರೆ. ಇರುವ ಸಾಮಗ್ರಿಗಳಲ್ಲೇ ಅಚ್ಚುಕಟ್ಟಾಗಿ ಅಡುಗೆ ಮಾಡಿ, ಒತ್ತಡಕ್ಕೂ ಪರಿಹಾರ ಕಂಡುಕೊಂಡಿದ್ದಾರೆ.

ಬೊಗಸೆ ತುಂಬ ಸಮಯ, ರುಚಿಗೆ ತಕ್ಕಷ್ಟು ಅಮ್ಮನ ಸಲಹೆ, ಬೇಕಾದಷ್ಟು ಪ್ರಮಾಣದಲ್ಲಿ ಸಾಮಾಜಿಕ ಮಾಧ್ಯಮ.. ಇವೆಲ್ಲ ಬೇಕಾಗುವ ಸಾಮಗ್ರಿಗಳು ಸೇರಿ ಒಂದು ಅಮೋಘವಾದ ಘಮಘಮಿಸುವ ಅಡುಗೆ ತಯಾರಾಗಲು ಎಷ್ಟು ಹೊತ್ತು ಬೇಕು? ‘ಅರ್ಧ ಗಂಟೆ ಸಾಕು ಬಾಳೆಹಣ್ಣಿನ ಬ್ರೆಡ್‌ ತಯಾರಿಸಲು’ ಎನ್ನುತ್ತಾಳೆ ಕಾಲೇಜಿನ ಶಿಕ್ಷಕಿ ಶಶಿ ವಿನೋದ್‌.

ಹೌದು, ನಿತ್ಯ ಕಾಲೇಜಿಗೆ ಹೋಗಿ ಬರುವಾಗ ಅಡುಗೆ ಮನೆಗೆ ಇಣುಕದ ಶಶಿ ಕಳೆದ ಒಂದು ತಿಂಗಳಿಂದ ಈ ಅಡುಗೆಮನೆಯೆಂಬ ಪುಟ್ಟ ಸಾಮ್ರಾಜ್ಯಕ್ಕೆ ನಿತ್ಯ ಭೇಟಿ ನೀಡಲಾರಂಭಿಸಿದ್ದಾಳೆ. ಆನ್‌ಲೈನ್‌ನಲ್ಲಿ ಪಾಠ ಮಾಡುವುದು ಅಬ್ಬಬ್ಬಾ ಅಂದರೆ ನಿತ್ಯ ಒಂದೆರಡು ಗಂಟೆ ಅಷ್ಟೆ. ಉಳಿದ ಸಮಯ ಕೊಲ್ಲುವುದು ಕಠಿಣವಾದಾಗ ಆಕೆಗೆ ಸುಲಭ ಎನಿಸಿದ್ದು ಅಡುಗೆ. ಇದಕ್ಕೆ ಪ್ರೇರೇಪಣೆ ನೀಡಿದ್ದು ಸಾಮಾಜಿಕ ಮಾಧ್ಯಮ; ಸಾಥ್‌ ನೀಡಿದ್ದು ಅಂತರ್ಜಾಲ.

ಲ್ಯಾಪ್‌ಟಾಪ್‌ ಜೊತೆ ಪಾತ್ರೆಗಳ ಸದ್ದು

ಮಾರ್ಚ್‌ ಮೂರನೇ ವಾರದಲ್ಲಿ ಶುರುವಾದ ಲಾಕ್‌ಡೌನ್‌ನಿಂದ ಹೊರಗೆ ಹೋಗುವ ಮನೆಯ ಬಾಗಿಲು ಬಂದ್‌ ಆದಾಗ ಬಹುತೇಕರಿಗೆ ತೆರೆದುಕೊಂಡಿದ್ದು ಅಡುಗೆಕೋಣೆಯ ಬಾಗಿಲು. ನೈಟಿಯಲ್ಲಿ, ಪೈಜಾಮ– ಟೀ ಶರ್ಟ್‌ನಲ್ಲಿ ಲ್ಯಾಪ್‌ಟಾಪ್‌ನ ಮೇಲೆ ಟಪಟಪ ಸದ್ದು ಮಾಡುತ್ತ ಕೂತವರು ಮಧ್ಯೆ ಮಧ್ಯೆ ಅಡುಗೆಮನೆಗೆ ಹೋಗಿ ಪಾತ್ರೆಗಳ ಸದ್ದು ಹೊರಡಿಸುತ್ತಿದ್ದಾರೆ. ಕಚೇರಿಯ ಇಮೇಲ್‌ ಮೇಲೆ ಕಣ್ಣೋಡಿಸುತ್ತ, ಕೈಯಲ್ಲಿ ಲೋಟ ಚಮಚದಿಂದ ಕಾಫಿಪುಡಿ, ಸಕ್ಕರೆ, ಹಾಲಿನ ಮಿಶ್ರಣವನ್ನು ತಿರುವುತ್ತ ‘ಡಾಲ್ಗೊನ’ ಎಂಬ ಅದ್ಭುತ ರುಚಿಯ ಕಾಫಿ ತಯಾರಿಸುತ್ತಾರೆ. ಡಬ್ಬಿಯಲ್ಲಿ ತಡಕಾಡಿ ಒಂದಿಷ್ಟು ಹಿಟ್ಟನ್ನು ಸುರುವಿಕೊಂಡು, ಕಳಿತು ಇನ್ನೇನು ಹಾಳಾಗುವುದರಲ್ಲಿದ್ದ ಪಚ್ಚ ಬಾಳೆಹಣ್ಣನ್ನು ಕಿವುಚಿ, ಒಂದಿಷ್ಟು ಸಕ್ಕರೆ, ಎಣ್ಣೆ, ಬೇಕಿಂಗ್‌, ಅಡುಗೆ ಸೋಡಾ ಸುರುವಿ ಓವೆನ್‌ ಇಲ್ಲದಿದ್ದರೆ ಏನಂತೆ ಎಂದು ಹೀಟಿಂಗ್‌ ಪ್ಯಾನ್‌ನಲ್ಲೇ ‘ಬನಾನಾ ಬ್ರೆಡ್‌’ ತಯಾರಿಸುತ್ತಾರೆ. ಆರೆಂಜ್‌ ಹನಿ ಕೇಕ್‌, ಟುಟಿ– ಫ್ರೂಟಿ ಬನ್‌ನಿಂದ ಹಿಡಿದು, ಅಜ್ಜಿಯಿಂದ ಕೇಳಿಕೊಂಡು ಅಕ್ಕಿಯ ಕಡುಬಿನವರೆಗೂ ನಳಪಾಕ ಮುಂದುವರಿಯುತ್ತದೆ.

ನವ ಬಾಣಸಿಗರು!

ಕೆಲವರು ಮ್ಯಾಗಿ, ಪಾಸ್ತಾ, ಉಪ್ಪಿಟ್ಟು ಎಂದು ಬೇಸಿಕ್‌ನಲ್ಲಿದ್ದವರು ಮೆಕ್ಸಿಕನ್‌ ಸ್ಟಫ್ಡ್‌ ಕ್ಯಾಪ್ಸಿಕಂ, ಜಪಾನೀಸ್‌ ಫಿಶ್‌ ಸುಶಿ, ಗ್ರಿಲ್ಡ್‌ ಸ್ಪೈಸಿ ಚಿಕನ್‌, ಜಿಂಜರ್‌ ಸೂಪ್‌ನಿಂದ ಹಿಡಿದು ಹಿಂದಿನ ದಿನ ಹೆಚ್ಚಾದ ಅನ್ನದಿಂದ ವಡೆ ಮಾಡುವವರೆಗಿನ ಅನುಭವಿ ಬಾಣಸಿಗರಾಗಿ ಹೊರಹೊಮ್ಮಿದ್ದಾರೆ. ಇದಕ್ಕೆ ಕಾರಣ ಈ ಲಾಕ್‌ಡೌನ್‌ ಎಂಬ ಪ್ರೇರಕ ಶಕ್ತಿ. ಹಾಗಾದರೆ ಈ ಪಾಕ ಪ್ರಾವೀಣ್ಯತೆ ಎಂಬುದು ಹವ್ಯಾಸ ಮಾತ್ರವೇ? ಅಲ್ಲ, ಇದೊಂದು ಅದ್ಭುತ ಒತ್ತಡ ನಿವಾರಕ ಎಂಬುದು ಈ ಒತ್ತಡದ ದಿನಗಳಲ್ಲಿ ಮತ್ತೊಮ್ಮೆ ಸಾಬೀತಾಗುತ್ತಿದೆ. ಲಾಕ್‌ಡೌನ್‌, ಕ್ವಾರೆಂಟೈನ್‌ ಎಂಬ ಪ್ರೇರಕ ಶಕ್ತಿಯಿಂದಾಗಿ ಸದ್ಯಕ್ಕಂತೂ ಬಹುತೇಕರ ನೆಚ್ಚಿನ ಚಟುವಟಿಕೆ. ‘ಒತ್ತಡದಿಂದ ಪಾರಾಗಲು ವಾರಾಂತ್ಯದ ಬೇಕರಿ ತರಗತಿಗೆ ಸೇರಿಕೊಂಡಿದ್ದೆ. ಆದರೆ ಅಡುಗೆಯವಳಿರುವಾಗ ಮನೆಯಲ್ಲಿ ಪ್ರಯೋಗ ಮಾಡಿದ್ದು ಕಡಿಮೆ. ಈಗಂತೂ ಸದ್ಯದ ಪರಿಸ್ಥಿತಿ, ಭವಿಷ್ಯದ ಚಿಂತೆಯಿಂದ ರಕ್ತದೊತ್ತಡ ಜಾಸ್ತಿಯಾಗಿದೆ. ಹೀಗಾಗಿ ಅಡುಗೆ ಮನೆ ಕ್ಲಿನಿಕ್‌ ಇದ್ದಂತೆ’ ಎನ್ನುವ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಗೆಳತಿ ಸುನೀತಾ, ‘ಬಾಳೆಹಣ್ಣಿನ ಪ್ಯಾನ್‌ಕೇಕ್‌ ಮಾಡುವುದೂ ಸುಲಭ, ಮತ್ತೆ ರುಚಿ ಕೂಡ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹರಿಯಬಿಟ್ಟಿದ್ದಾಳೆ.

ಬೇಕಾಗುವ ಸಾಮಗ್ರಿ

ಲಾಕ್‌ಡೌನ್‌ನಿಂದಾಗಿ ನಮಗೆ ಬೇಕಾದಂತಹ ಪದಾರ್ಥಗಳು ಸಿಗುತ್ತಿಲ್ಲ. ಆದರೆ ಮನೆಯಲ್ಲೇ ಇರುವಂತಹ ಅಕ್ಕಿ, ಹಿಟ್ಟು, ಎಣ್ಣೆ, ಸಕ್ಕರೆ, ಕಾಳುಬೇಳೆಗಳು, ಸಂಬಾರು ಪದಾರ್ಥಗಳಿಂದ ಹೊಸ ಹೊಸ ಪ್ರಯೋಗಗಳನ್ನು ಮಾಡಬಹುದು. ‘ಅಡುಗೆ ಮಾಡುವುದೆಂದರೆ ಇಷ್ಟವೇ. ಆದರೆ ಸಮಯ ಸಾಲುತ್ತಿರಲಿಲ್ಲ. ಮನೆಯಿಂದಲೇ ಕಚೇರಿ ಕೆಲಸ ಮಾಡುವ ಈ ಸಂದರ್ಭದಲ್ಲಿ ಬೋರ್‌ ಆದಾಗ ಮಧ್ಯೆ ಮಧ್ಯೆ ಏನಾದರೂ ಮಾಡಿಕೊಂಡು ತಿನ್ನುವುದು ಅಭ್ಯಾಸವಾಗಿದೆ’ ಎನ್ನುವ ಪಿಆರ್‌ ಸಂಸ್ಥೆಯ ಉದ್ಯೋಗಿ ಕಿಶೋರ್‌ ದುಗ್ಗಲ್‌, ‘ಕೆಲವೇ ಕೆಲವು ಸಾಮಗ್ರಿಗಳಿಂದ ಏನೆಲ್ಲಾ ಮಾಡಬಹುದು ಗೊತ್ತೇ? ಬಾಸ್ಮತಿ ಅಕ್ಕಿ ಉಳಿದಿತ್ತು. ಅದಕ್ಕೆ ಚಿಕನ್‌ ಸೇರಿಸಿ ಫಸ್ಟ್‌ಕ್ಲಾಸ್‌ ಚಿಕನ್‌ ಬಿರಿಯಾನಿ ಮಾಡಿದೆ. ಜೊತೆಗೆ ನೂಡಲ್‌ ಸೂಪ್‌’ ಎಂದು ಬಾಯಿ ಚಪ್ಪರಿಸುತ್ತಾನೆ.

ಇದು ಸಂಗಾತಿಗಳ ಮಧ್ಯೆ ಬಾಂಧವ್ಯ ಹೆಚ್ಚಿಸಲೂ ನೆರವಿಗೆ ಬಂದಿದೆ ಗೊತ್ತೇ? ಹೆಂಡತಿಯೊಬ್ಬಳೇ ಅಡುಗೆಮನೆಯಲ್ಲಿ ಗುದ್ದಾಡುವಾಗ ಸುಮ್ಮನೆ ಕುಳಿತಿರಲಾರದ ಪತಿ ತಾನೂ ಕೈ ಜೋಡಿಸಬಹುದು. ಒಂದೊಂದಾಗಿ ಅಡುಗೆ ಪಾಠವನ್ನು ಕಲಿಯಬಹುದು. ತರಕಾರಿ ಸಿಪ್ಪೆ ತೆಗೆಯುವುದು, ಮೊಟ್ಟೆಯ ಮೇಲಿನ ಕವಚ ಪುಡಿಯಾಗದಂತೆ ತೆಗೆದು ಹಾಕುವ ಕಲೆ ರೂಢಿಸಿಕೊಳ್ಳಬಹುದು, ರುಚಿಕರವಾದ ಒಗ್ಗರಣೆ ಹಾಕುವುದನ್ನು ಕಲಿಯಬಹುದು..

ಜೀವನ ಕಲೆ

‘ಬಾಳೆಹಣ್ಣಿನ ಪ್ಯಾನ್‌ಕೇಕ್‌ ಮಾಡುವಾಗ ಮೊಟ್ಟೆಯನ್ನು ಒಡೆದು ಹಾಕಿ ಬೀಟ್‌ ಮಾಡುವುದನ್ನು ಚೆನ್ನಾಗಿ ಕಲಿತಿದ್ದೇನೆ. ಇದು ನಿಜವಾಗಲೂ ಜೀವನ ಕಲೆ’ ಎನ್ನುವ ಕಿಶೋರ್‌, ಲಾಕ್‌ಡೌನ್‌ ಒಮ್ಮೆ ಮುಗಿದ ನಂತರ ಅಡುಗೆಮನೆಯಲ್ಲಿ ಬೇಕಾಗುವಂತಹ ಸಾಮಗ್ರಿಗಳನ್ನು ಜೋಡಿಸುವುದು ಹೇಗೆ ಎಂಬುದನ್ನು ಯುಟ್ಯೂಬ್‌ ನೋಡಿಯೇ ಕಲಿತಿದ್ದಾನಂತೆ.

ಉಳಿತಾಯ ಕೌಶಲ

ಈ ಲಾಕ್‌ಡೌನ್‌ ಎನ್ನುವುದು ಏನೆಲ್ಲಾ ಬದುಕಿನ ಪಾಠ ಕಲಿಸಿದೆ! ಯಾವ ಪದಾರ್ಥವನ್ನೂ ಹಾಳು ಮಾಡದಂತೆ ಅಡುಗೆ ಮಾಡುವ ಕಲೆಯನ್ನು ಹಲವರು ಸಿದ್ಧಿಸಿಕೊಂಡಿದ್ದಾರೆ. ಹೀರೆಕಾಯಿ ಸಿಪ್ಪೆಯ ಚಟ್ನಿ, ಕಿತ್ತಳೆ ಹಣ್ಣಿನ ಸಿಪ್ಪೆಯ ಗೊಜ್ಜು, ಕಲ್ಲಂಗಡಿ ಸಿಪ್ಪೆಯ ತಾಲಿಪಟ್ಟು, ರಸ ಹಿಂಡಿ ಒಣಗಿದ ಲಿಂಬೆ ಸಿಪ್ಪೆಯ ಉಪ್ಪಿನಕಾಯಿ, ಕರಬೂಜ ಹಣ್ಣಿನ ಬೀಜದ ಜ್ಯೂಸ್‌, ಮಟನ್‌ ಎಲುಬಿನ ಸ್ಟಾಕ್‌.. ಲಾಕ್‌ಡೌನ್‌ ನಂತರವೂ ಇದೇ ಉಳಿತಾಯ ಮುಂದುವರಿದರೆ ಆರ್ಥಿಕವಾಗಿ ಸಾಕಷ್ಟು ಉಳಿಸಬಹುದು.

ಗೂಗಲ್‌ನಲ್ಲಿ ಕಳೆದ ಒಂದು ತಿಂಗಳಲ್ಲಿ ಅತಿ ಹೆಚ್ಚು ಅಂದರೆ ಶೇ 54ರಷ್ಟು ಜನ ಹುಡುಕಿದ್ದು ಬಾಳೆಹಣ್ಣಿನ ಬ್ರೆಡ್‌ ತಯಾರಿಸುವ ವಿಧಾನವನ್ನು. ನಟಿ ಆಲಿಯಾ ಭಟ್‌ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಈ ಸರಳ ತಿನಿಸನ್ನು ತಯಾರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು