ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶ್ಲೀಲ ಕರೆದೂರು ನೀಡಲು ಹಿಂಜರಿಕೆಯೇಕೆ?

Last Updated 8 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಆಕೆ ಸುದ್ದಿವಾಹಿನಿಯಲ್ಲಿ ವರದಿಗಾರ್ತಿ. ಬ್ಯುಸಿ ಕೆಲಸದ ಮಧ್ಯೆ ಆಗಾಗ ರಿಂಗ್‌ ಆಗುವ ಫೋನ್‌ಗೆ ಕಿವಿಗೊಟ್ಟರೆ ಅಪರಿಚಿತನಿಂದ ಅಶ್ಲೀಲ ಮಾತುಗಳು.. ಕರೆಯನ್ನು ಅಲ್ಲಿಗೇ ಕತ್ತರಿಸಿದರೂ, ಆ ನಂಬರ್‌ ಬ್ಲಾಕ್‌ ಮಾಡಿದರೂ ಕೂಡ ಪದೆ ಪದೆ ಬೇರೆ ಬೇರೆ ನಂಬರ್‌ನಿಂದ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಆ ಅಪರಿಚಿತ ವ್ಯಕ್ತಿ. ಕೊನೆಗೆ ಪೊಲೀಸ್‌ಗೆ ದೂರು ಹೋಗಿ ಬಂಧಿಸಿದ್ದು ದೂರದ ಬಿಹಾರದ ವ್ಯಕ್ತಿಯನ್ನು!

ಇದು ಒಬ್ಬಳು ಯುವತಿಯ ಸಮಸ್ಯೆಯಲ್ಲ, ಟ್ರೂಕಾಲರ್‌ ಆ್ಯಪ್‌ ನಡೆಸಿದ ಸಮೀಕ್ಷೆ ಪ್ರಕಾರ, ಭಾರತದಲ್ಲಿ ಪ್ರತಿ ಐವರು ಮಹಿಳೆಯರಲ್ಲಿ ಒಬ್ಬಳು ಮಹಿಳೆಗೆ ಇಂತಹ ಅಶ್ಲೀಲ ಕರೆಗಳು ಅಥವಾ ಎಸ್‌ಎಂಎಸ್‌ ಬರುತ್ತವಂತೆ. ಈಗ ಮೊಬೈಲ್‌ ಫೋನ್‌ ಹೊಂದಿರುವವರಿಗೇನೂ ಕೊರತೆಯಿಲ್ಲ. ಹಳ್ಳಿಗಳಲ್ಲೂ ಕೂಡ ಸ್ಮಾರ್ಟ್‌ಫೋನ್‌ ಮೂಲಕ ಅಂತರ್ಜಾಲದಲ್ಲಿ ಸುತ್ತು ಹೊಡೆಯಲು ನೆಟ್‌ವರ್ಕ್‌ ಲಭ್ಯ. ಈ ಡಿಜಿಟಲ್‌ ಯುಗದಲ್ಲಿ, ಮಾಹಿತಿ ಸೋರಿಕೆಯಾಗುವುದು ಕೂಡ ಹೊಸತೇನಲ್ಲ. ಎಷ್ಟೋ ಬಾರಿ ರಾಂಗ್‌ ಕಾಲ ಬಂದರೆ/ ಹೋದರೆ ಅದನ್ನೇ ಇಟ್ಟುಕೊಂಡು ಕರೆ ಮಾಡುವವರೇನೂ ಕಡಿಮೆಯಿಲ್ಲ. ಹೀಗಿರುವಾಗ ಒಬ್ಬರ ಫೋನ್‌ ನಂಬರ್‌ ಪರಿಚಿತರಿಗಷ್ಟೇ ಸಿಗಬೇಕು, ಗೌಪ್ಯತೆ ಕಾಯ್ದುಕೊಳ್ಳಬೇಕು ಎಂದು ಎಷ್ಟೇ ಯತ್ನಿಸಿದರೂ ಅದು ಸಾಧ್ಯವಿಲ್ಲ.

ಫೋನ್‌ನಲ್ಲಿ ಲೈಂಗಿಕ ಕಿರುಕುಳ

ಸಿಕ್ಕ ಫೋನ್‌ ನಂಬರ್‌ಗೆ, ಅದು ಯುವತಿಗೆ ಸೇರಿದರಂತೂ ಕರೆ ಮಾಡಿ ಮಾತನಾಡುವುದು ಹಲವರ ಸಮಯ ಕೊಲ್ಲುವ ವಿಧಾನ. ಅಪರಿಚಿತ ಯುವತಿಗೆ ಒಬ್ಬ ಪುರುಷ ಕಷ್ಟ– ಸುಖ ವಿಚಾರಿಸಿಕೊಳ್ಳಲು ಕರೆ ಮಾಡುತ್ತಾನೆಯೇ? ‘ಯುವತಿಯ ಬಗ್ಗೆ ಮಾಹಿತಿ ವಿಚಾರಿಸುವುದು.. ನಂತರ ಜನರಲ್‌ ವಿಷಯ ಮಾತನಾಡುತ್ತ ಅಶ್ಲೀಲ ಮಾತುಕತೆಗೆ ತೊಡಗುವುದು ಒಂದು ರೀತಿಯಾದರೆ, ಸೆಕ್ಸ್‌ ಮೇನಿಯ ಇರುವವರು ನೇರವಾಗಿ ಅಶ್ಲೀಲ ಸಂಭಾಷಣೆಗೆ ತೊಡಗುತ್ತಾರೆ, ಲೈಂಗಿಕ ಕಿರುಕುಳಕ್ಕೆ ಶುರು ಮಾಡುತ್ತಾರೆ’ ಎನ್ನುತ್ತಾರೆ ಮನೋಚಿಕಿತ್ಸಕರು.

ನಂಬರ್‌ ಬ್ಲಾಕ್‌ ಮಾಡುವುದು..

ಇಂತಹ ನಡವಳಿಕೆಗೆ ಯುವತಿಯರ ಪ್ರತಿಕ್ರಿಯೆ ಸಾಮಾನ್ಯವಾಗಿ ಹೇಗಿರುತ್ತದೆ ಎಂದರೆ ಅಪರಿಚಿತನ ಜೊತೆ ಮಾತೇಕೆ ಎಂದು ತಕ್ಷಣಕ್ಕೆ ಕರೆ ಕತ್ತರಿಸುತ್ತಾರೆ. ಮಾತುಕತೆ ಸಭ್ಯತೆಯ ಎಲ್ಲೆ ಮೀರಿ ಅನುಚಿತವಾಗಿದ್ದರೆ ಕೆಲವರು ಆಘಾತಕ್ಕೆ ಒಳಗಾಗುವುದಿದೆ. ನಂತರ ಕುಟುಂಬ ಅಥವಾ ಸ್ನೇಹಿತೆಯರ ಜೊತೆ ಮಾತನಾಡಿ ಆ ನಂಬರ್‌ ಅನ್ನು ಬ್ಲಾಕ್‌ ಮಾಡುತ್ತಾರೆ. ಇನ್ನು ಕೆಲವು ದಿಟ್ಟೆಯರು ಧೈರ್ಯ ತಂದುಕೊಂಡು ಪೊಲೀಸ್‌ಗೆ, ಸೈಬರ್‌ ಅಪರಾಧ ವಿಭಾಗಕ್ಕೆ ದೂರು ಕೊಡುವುದಿದೆ.

ಸಮೀಕ್ಷೆಯ ಪ್ರಕಾರ ಶೇ 85ರಷ್ಟು ಮಹಿಳೆಯರು ಇಂತಹ ಫೋನ್‌ ನಂಬರ್‌ ಅನ್ನು ತಕ್ಷಣಕ್ಕೆ ಬ್ಲಾಕ್‌ ಮಾಡುತ್ತಾರಂತೆ. ಆದರೆ ಸಂಬಂಧಪಟ್ಟ ಇಲಾಖೆಗಳಿಗೆ, ಅಧಿಕಾರಿಗಳಿಗೆ ದೂರು ನೀಡುವ ಮಹಿಳೆಯರ ಸಂಖ್ಯೆ ಶೇ 12ರಷ್ಟು ಮಾತ್ರ.

ದೂರು ನೀಡಿ

ಇದಕ್ಕೆ ಹಲವಾರು ಕಾರಣಗಳಿರಬಹುದು. ದೂರು ನೀಡಿದರೆ ಕುಟುಂಬದವರಿಗೆ, ಕೆಲಸ ಮಾಡುವ ಕಚೇರಿಯ ಸಹೋದ್ಯೋಗಿಗಳಿಗೆ ಗೊತ್ತಾಗಿ ಇದೊಂದು ಅವಮಾನ ಎಂದು ಭಾವಿಸುವವರೇ ಅಧಿಕ. ಜೊತೆಗೆ ಪೊಲೀಸ್‌, ಕೋರ್ಟ್‌ ಎಂದು ಓಡಾಡುವ ಮನಃಸ್ಥಿತಿಯೂ ಹಲವರಲ್ಲಿ ಇಲ್ಲ. ತಮ್ಮ ದೂರನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಎಂಬ ಶಂಕೆಯೂ ಇದಕ್ಕೆ ಇನ್ನೊಂದು ಕಾರಣ. ಜೊತೆಗೆ ಇನ್ನೂ ಒಂದು ಅಂಶವನ್ನು ಇಲ್ಲಿ ಪರಿಗಣಿಸಬೇಕಾಗುತ್ತದೆ. ಫೋನ್‌ ಮಾಡಿ ಅನುಚಿತವಾಗಿ ಮಾತನಾಡುವವರು ಪರಿಚಿತರೂ ಇರಬಹುದು. ಮೇಲಧಿಕಾರಿ, ಸಹೋದ್ಯೋಗಿ, ಸಂಬಂಧಿಕರು.. ಹೀಗೆ. ಅಂತಹ ಸಂದರ್ಭದಲ್ಲಿ ಭಯ ಆವರಿಸುವುದು ಸಹಜವೇ. ದೂರು ನೀಡಿದರೆ ಮುಂದಿನ ಪರಿಣಾಮ ಏನಾಗಬಹುದು, ಕಿರುಕುಳ ಇನ್ನಷ್ಟು ಹೆಚ್ಚಬಹುದು, ಉದ್ಯೋಗ ಕಳೆದುಕೊಳ್ಳಬಹುದು... ಹೀಗೆ ಇಂತಹ ಹಿಂಜರಿಕೆಯಿಂದಲೇ ಸುಮ್ಮನಿದ್ದುಬಿಡುತ್ತಾರೆ.

ನಂಬರ್‌ ಬ್ಲಾಕ್‌ ಮಾಡಿದರೆ ಆ ಕ್ಷಣಕ್ಕೆ ಅಂತಹ ಮಹಿಳೆಯರು ಸುರಕ್ಷಿತ ಎನಿಸಬಹುದು. ಆದರೆ ಕಿರುಕುಳ ನೀಡುವವರು ಬೇರೆ ಬೇರೆ ನಂಬರ್‌ಗಳಿಂದ ಪ್ರಯತ್ನಿಸಬಹುದು. ಹಾಗೆಯೇ ಬೇರೆ ಯುವತಿಯರಿಗೆ ಕರೆ ಮಾಡಿ ಕಿರುಕುಳ ನೀಡಬಹುದು. ಅಪರಾಧ ಮನಃಸ್ಥಿತಿಯವರಿಗೆ ಲಗಾಮು ಹಾಕುವವರು ಇಲ್ಲದೇ ಅವರು ಆರಾಮವಾಗಿ ತಮ್ಮ ಹೀನ ನಡವಳಿಕೆಯನ್ನು ಮುಂದುವರಿಸಬಹುದು.

ಇದಕ್ಕೆ ಹೊರತಾಗಿ ಇನ್ನೊಂದು ಕಾರಣವಿದೆ. ಸೈಬರ್‌ ಪೀಡನೆಯ ಈ ಕಾಲದಲ್ಲಿ ನಗರದ ಬಹುತೇಕ ಮಹಿಳೆಯರು ಇದೆಲ್ಲ ಮಾಮೂಲು ಎಂಬಂತಹ ಮನಃಸ್ಥಿತಿ ಹೊಂದಿದ್ದಾರೆ ಎನ್ನಬಹುದು. ಆದರೆ ‘ಇದೆಲ್ಲ ಮಾಮೂಲು’ ಎನ್ನುವ ಮನಃಸ್ಥಿತಿ ಅಷ್ಟು ಒಳ್ಳೆಯದಲ್ಲ. ಇದರಿಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವವರಿಗೆ ಇನ್ನಷ್ಟು ಕುಮ್ಮಕ್ಕು ಕೊಟ್ಟಂತಾಗುತ್ತದೆ. ಕಾನೂನಿನ ಕೈಗೆ ಸಿಕ್ಕಿಹಾಕೊಳ್ಳುವ ಹೆದರಿಕೆಯಿಲ್ಲದೇ ಪೋನ್‌ನಲ್ಲಿ ನೀಡುವ ಕಿರುಕುಳವನ್ನು ಅದರಾಚೆಯೂ ಹೆಚ್ಚಿಸಬಹುದಾದ ಸಾಧ್ಯತೆಯಿದೆ. ಹೀಗಾಗಿ ಪೊಲೀಸ್‌ಗೆ ದೂರು ನೀಡುವುದೊಂದೇ ಇದಕ್ಕಿರುವ ಮಾರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT