ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಬದುಕಿನ ಹೊಸ ಟ್ರೆಂಡ್‌ 'ವಾರಾಂತ್ಯದ ದಾಂಪತ್ಯ'

Last Updated 1 ನವೆಂಬರ್ 2019, 19:30 IST
ಅಕ್ಷರ ಗಾತ್ರ

ದಂಪತಿ ತಮ್ಮ ಉದ್ಯೋಗ, ಹೊಣೆಗಾರಿಕೆಯ ಸಲುವಾಗಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದ್ದಾರೆ. ಪರಸ್ಪರರನ್ನು ಬೆಸೆಯುವ, ಪ್ರೀತಿ– ಪ್ರೇಮದ ಕಿಡಿ ಹೊತ್ತಿಸುವ ಆ ಸುಂದರವಾದ, ಸಿಹಿಯಾದ ಕ್ಷಣವನ್ನು ಹಿಡಿದಿಟ್ಟುಕೊಳ್ಳುವುದು ಕಠಿಣವೆನಿಸುತ್ತಿದೆ. ಆದರೆ ವಾರಾಂತ್ಯವನ್ನು ದಾಂಪತ್ಯದ ಸವಿ ಉಳಿಸಿಕೊಳ್ಳಲು ಏಕೆ ಬಳಸಿಕೊಳ್ಳಬಾರದು?

‘ಪ್ರೀತಿ ಎನ್ನುವುದು ಬದುಕಿನ ಐಷಾರಾಮದಲ್ಲಿ ಕಳೆದು ಹೋಗಿದೆ’ ಎಂಬ ಮಾತಿದೆ. ಹೌದು, ಮಾತನಾಡಲು, ಕಾಳಜಿ ವಹಿಸಲು ಸಮಯವೇ ಇಲ್ಲ. ಏಕೆಂದರೆ ನೀವು ಭಯದಲ್ಲೇ ಬದುಕುತ್ತಿದ್ದೀರಿ. ನಗಲು ಹಾಗೂ ಪ್ರೀತಿಸಲು ಕೂಡ ಸಮಯವಿಲ್ಲ. ಏಕೆಂದರೆ ಸಮಯ ಎನ್ನುವುದು ಪ್ರತಿ ಕ್ಷಣ ಜಾರುತ್ತಲೇ ಇರುತ್ತದೆ. ಕೂತು ಮಾತನಾಡಲು, ನಗು, ಅಳು ಹಂಚಿಕೊಳ್ಳಲು ಕೂಡ ಸಮಯವಿಲ್ಲ. ಏಕೆಂದರೆ ನೀವು ಗಾಳಿಯಲ್ಲೇ ಗೋಪುರ ಕಟ್ಟುವಲ್ಲಿ ತುಂಬಾ ಬ್ಯುಸಿ.

ಇದು ಆಧುನಿಕ ದಿನಚರಿಯಲ್ಲಿ ಪ್ರೀತಿ– ಪ್ರೇಮ ಹಾಗೂ ವಿಚ್ಛೇದನ ಕುರಿತಾದ ಕಹಿ ಸತ್ಯ. ಬದುಕು ಎಷ್ಟು ವೇಗವಾಗಿ ಸರಿದು ಹೋಗುತ್ತಿದೆ ಎಂದರೆ ಹೆಚ್ಚಿನ ಸಲ ನಮ್ಮನ್ನು ಹಿಡಿಯಬಹುದಾದ ಕೈಗಳನ್ನು ನಾವು ದೂರ ಸರಿಸುತ್ತೇವೆ. ಮದುವೆಯಾದವರೂ ಕೂಡ ಇದಕ್ಕೆ ಹೊರತಲ್ಲ.

ಶ್ವೇತಾ ಮತ್ತು ಅಭಿಮನ್ಯು ಅವರನ್ನೇ ತೆಗೆದುಕೊಳ್ಳಿ. ಈ ದಂಪತಿಯ ಮಧ್ಯೆ ಪ್ರೇಮವೆಂಬುದು ಸಮಯದ ಜೊತೆಜೊತೆಯೇ ಕಳೆದು ಹೋಗಿದೆ. ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಇಬ್ಬರೂ ತಮ್ಮ ತಮ್ಮ ಉದ್ಯೋಗದಲ್ಲೇ ಬ್ಯುಸಿ. ಒಬ್ಬರು ವೈಟ್‌ಫೀಲ್ಡ್‌ ಆದರೆ, ಇನ್ನೊಬ್ಬರು ಎಲೆಕ್ಟ್ರಾನಿಕ್‌ ಸಿಟಿ. ಕೆಲಸ, ಮಕ್ಕಳು ಎಂಬ ಜವಾಬ್ದಾರಿಯಿಂದ ಇಬ್ಬರ ಬದುಕು ಬಹಳ ವೇಗವಾಗಿ ಚಲಿಸುವ ಬುಲೆಟ್‌ ರೈಲಿನಂತೆ ಆಗಿಬಿಟ್ಟಿದೆ.

ಬೆಳಿಗ್ಗೆಯಿಂದ ರಾತ್ರಿಯವರೆಗೆ ಚಾಕರಿ
ಅವರ ಮುಂಜಾವು ಶುರುವಾಗುವುದೇ ಅರಚಾಟದೊಂದಿಗೆ. ಪರಸ್ಪರ ದೂಷಣೆಯೊಂದಿಗೆ. ಪುಸ್ತಕ, ಉಪಾಹಾರ, ಅಡುಗೆ, ಅದನ್ನು ಪ್ಯಾಕ್‌ ಮಾಡುವುದು.. ಹೀಗೆ ಅವಸರದಲ್ಲೇ ಶುರುವಾಗುತ್ತದೆ. ಮಕ್ಕಳು ಶಾಲೆಗೆ ಸಿದ್ಧವಾದರೆ, ದಂಪತಿ ಇನ್ನೊಂದು ದಿನದ ಚಾಕರಿಗೆ. ಮುಂಜಾನೆ 8ಕ್ಕೆ ಬಿಟ್ಟರೆ ವಾಪಸ್ಸು ಮನೆಗೆ ಕಾಲಿಡುವುದು ರಾತ್ರಿ 8ಕ್ಕೆ!

ದಿನದ ಜಂಜಾಟ ಇಷ್ಟಕ್ಕೇ ಮುಗಿಯುವುದಿಲ್ಲ. ಮಕ್ಕಳ ಮನೆಪಾಠ, ಓದು, ಪ್ರಾಜೆಕ್ಟ್‌, ರಾತ್ರಿಯೂಟ, ಟಿವಿ ವೀಕ್ಷಣೆ.. ನಂತರ ನಿದ್ರೆ. ಖಂಡಿತ ಇದು ವೈವಾಹಿಕ ಬದುಕಿನ ಒಂದು ಸುಂದರ ದೃಶ್ಯವೇನಲ್ಲ. ಇಬ್ಬರ ಮಧ್ಯೆ ಪ್ರೀತಿಯ ಮಾತುಗಳಿಲ್ಲ. ಪ್ರೇಮದ ನೋಟವಿಲ್ಲ. ಮೈಮರೆಸುವ ಸ್ಪರ್ಶ ಸುಖವಿಲ್ಲ. ಯಾವುದೇ ಥ್ರಿಲ್‌ ಇಲ್ಲದೇ ಎಲ್ಲವೂ ಯಾಂತ್ರಿಕ.

ತಮ್ಮ ಮಧ್ಯೆ ಹಿಂದಿನ ಪ್ರೇಮ– ಕಾಮನೆಯನ್ನು ಮರಳಿ ತರಲು ಆಪ್ತ ಸಮಾಲೋಚನೆಗೆ ಬಂದಾಗ ಶ್ವೇತಾ ಹೇಳಿದ್ದಿಷ್ಟೇ. ‘ನಾವು ನಿಜವಾಗಿ ಪರಸ್ಪರ ಮಾತನಾಡುವುದು ವಾರಾಂತ್ಯದಲ್ಲಿ ಮಾತ್ರ. ಅದೂ ಎಷ್ಟು ಸುಸ್ತಾಗಿರುವುದೆಂದರೆ ಮೌನವಾಗಿರುವುದೇ ಹೆಚ್ಚು. ಯಾವುದೋ ಟಿವಿ ಶೋ ನೋಡುತ್ತ ಯಾಂತ್ರಿಕವಾಗಿ ಸಮಯ ಜಾರುವುದೊಂದೇ ಗೊತ್ತು. ನಮಗಿನ್ನೂ ವಯಸ್ಸಿದೆ. ಆದರೂ ಬದುಕಿನಲ್ಲಿ ಸ್ವಾರಸ್ಯವೇ ಮಾಯವಾಗಿದೆ. ವಾರಾಂತ್ಯದಲ್ಲಾದರೂ ಪ್ರೀತಿ– ಕಾಮನೆಯ ಭಾವನೆ ಅರಳಿಸಲು ಏನು ಮಾಡಲಿ?’

ವಾರದ ಕೊನೆಗೆ ಮಧುಚಂದ್ರ..
ಈ ‘ವಾರಾಂತ್ಯದ ದಂಪತಿ’ ಎಂಬುದು ನಗರದ ಬದುಕಿನ ಹೊಸ ಟ್ರೆಂಡ್‌. ದಂಪತಿ ವಾರವಿಡೀ ಅಪರಿಚಿತರಂತೆ ಬದುಕಿ ವಾರದ ಕೊನೆಗೆ ಮಧುಚಂದ್ರ ಆಚರಿಸಲು ಯತ್ನಿಸುತ್ತಾರೆ. ತಮ್ಮ ನಡುವೆ ಇನ್ನೂ ರೋಮಾನ್ಸ್‌ ಅನ್ನು ಉಳಿಸಿಕೊಳ್ಳಲು ಇದು ಹೊಸ ರೀತಿ. ವಾರವಿಡೀ ಕಷ್ಟಪಟ್ಟು ದುಡಿದಿದ್ದಕ್ಕೆ ವಾರಾಂತ್ಯದಲ್ಲಿ ಒಂದಿಷ್ಟು ಆಚರಣೆಗೆ ತೊಡಗುವ ತವಕ. ಇದು ಬದುಕಿಗೆ ಒಂದಿಷ್ಟು ಟಾನಿಕ್‌ ಸುರಿಯುತ್ತದೆ. ವಾರಾಂತ್ಯಕ್ಕೆ ಕಾದು ಕುಳಿತುಕೊಳ್ಳುವ ಉತ್ಸಾಹ ಮೂಡಿಸುತ್ತದೆ.

ಸಂಬಂಧವನ್ನು ಗಟ್ಟಿಗೊಳಿಸುವುದು ಹೇಗೆ?

ಬಂಡೆಗಲ್ಲಿನಂತಹ ನಂಬಿಕೆ:
ಸಂಬಂಧದ ಮೊದಲ ಸ್ತಂಭ ನಂಬಿಕೆ. ಸರಿಯಾದ ಸಂವಹನ ಹಾಗೂ ಮುಕ್ತ ಮನಸ್ಸಿನಿಂದ ವಿಶ್ವಾಸವನ್ನು ಕಟ್ಟಿಕೊಳ್ಳಬೇಕು. ಹೀಗೇ ಎಂದು ನಿರ್ಣಯಿಸುವ ಅಥವಾ ತಿರಸ್ಕರಿಸುವ ಭಯ ಬಿಟ್ಟು ಮುಕ್ತವಾಗಿ ಮಾತನಾಡುವ ಅವಕಾಶ ಸೃಷ್ಟಿಸಿಕೊಳ್ಳಬೇಕು.

ಮಾತು: ಸಂವಹನ ಅತ್ಯಂತ ಮುಖ್ಯ. ರಾಜಕೀಯ, ಗಾಸಿಪ್‌ ಎಂದು ಅರ್ಥಹೀನ ಮಾತುಗಳನ್ನು ಬಿಟ್ಟು ಯಾವುದು ಮುಖ್ಯವೋ ಅದರ ಬಗ್ಗೆ ಮಾತನಾಡಿ. ನಿಮ್ಮ ಭವಿಷ್ಯ, ಹಣಕಾಸು, ಗುರಿ ಸೇರಿದಂತೆ ಯಾವುದು ಮೌಲ್ಯಯುತವೋ ಅದನ್ನೇ ಮಾತನಾಡಿ. ಪರಸ್ಪರ ಕೃತಜ್ಞತೆ, ಮೆಚ್ಚುಗೆ ಇರಲಿ. ಆರೋಗ್ಯಕರ ಮಾತುಕತೆಗೆ ಆದ್ಯತೆ ಕೊಡಿ.

ಒಂದಿಷ್ಟು ಹೊಂದಾಣಿಕೆ: ಒಟ್ಟಿಗೆ ಷಾಪಿಂಗ್‌ ಹೋಗುವುದು ದಂಪತಿಯ ಬಾಂಧವ್ಯದ ದೃಷ್ಟಿಯಿಂದ ಒಳಿತು. ಹೊರಗೆ ಸುತ್ತಾಡಿ. ಸೂಕ್ತ ಎನಿಸಿದ್ದನ್ನು ಖರೀದಿಸಿ. ಒಂದಿಷ್ಟು ಹೊಸ ಟ್ರೆಂಡ್‌ ಉಡುಪು, ಒಡವೆ ಖರೀದಿಸಿ ಖುಷಿಪಡಿ.

ಹೋಟೆಲ್‌ನಲ್ಲಿ ಊಟ: ರಾತ್ರಿಯೂಟಕ್ಕೆ ಹೋಟೆಲ್‌ಗೆ ಹೋಗಿ. ಆರಾಮವಾಗಿ ಕಾಲ ಕಳೆಯಲು ಇದು ಸೂಕ್ತ. ಖರ್ಚಿನ ಬಗ್ಗೆ ಚಿಂತೆ ಬೇಡ. ಇದು ಖಷಿಯಲ್ಲಿ ಹಾಕುವ ಹೂಡಿಕೆ ಎಂದುಕೊಳ್ಳಿ. ಭವಿಷ್ಯಕ್ಕೆಂದು ದೊಡ್ಡ ದೊಡ್ಡ ಯೋಜನೆ ರೂಪಿಸುವಾಗ ಸಣ್ಣಪುಟ್ಟ ಸಂಗತಿಗಳನ್ನು ಮರೆಯದಿರಿ.

ಲೈಂಗಿಕತೆ: ಲೈಂಗಿಕತೆ ಎಂಬುದು ಮನಸ್ಸನ್ನು ನಿರಾಳಗೊಳಿಸುವ, ಒಂದು ರೀತಿ ಧ್ಯಾನದ ನಂತರ ನೀಡುವ ಖುಷಿ. ಸಂತಸದ ವೈವಾಹಿಕ ಬದುಕಿಗೆ ಲೈಂಗಿಕತೆ ಬಹು ಮುಖ್ಯ.

ಮನೆಗೆಲಸ ಕೆಲವು ಸಮಯ ಮರೆಯಿರಿ: ಲಾಂಗ್‌ಡ್ರೈವ್‌, ಸಿನಿಮಾಗೆ ಹೋಗುವ ಆಸೆಯಿದ್ದಾಗ ಮನೆ ಶುಚಿಗೊಳಿಸುವುದು, ವಾರ್ಡ್‌ರೋಬ್‌ ವ್ಯವಸ್ಥಿತವಾಗಿ ಇಡುವುದರ ಬಗ್ಗೆ ಚಿಂತೆ ಬೇಡ. ಹೇಗೆ ಇದೆಯೋ ಹಾಗೇ ಬಿಟ್ಟು ಹೊರಡಿ. ಉಳಿದ ಕೆಲಸ ಆಮೇಲೆ.

ಹವ್ಯಾಸದಲ್ಲೂ ಜೊತೆ ಇರಲಿ: ಫೋಟೊಗ್ರಫಿ, ಅಡುಗೆ, ಸಾಹಸ ಕ್ರೀಡೆ ಅಥವಾ ಫಿಟ್‌ನೆಸ್‌ ಯಾವುದೇ ಇದ್ದರೂ ಸಂಗಾತಿಯನ್ನು ಸೇರಿಸಿಕೊಳ್ಳಿ. ಇಬ್ಬರಿಗೂ ಯಾವುದು ಇಷ್ಟವೋ ಅದನ್ನೇ ನೆಚ್ಚಿಕೊಳ್ಳಿ. ಜೊತೆಯಾಗಿ ಕಾಲ ಕಳೆಯಲು ಇದು ಬಹು ಮುಖ್ಯ.

ಫೋನ್ ದೂರ ಇಡಿ: ಮೊಬೈಲ್‌, ಟಿವಿ, ಲ್ಯಾಪ್‌ಟಾಪ್‌ ಅಥವಾ ಟ್ಯಾಬ್ಲೆಟ್‌ ಎಲ್ಲವೂ ನಿಮ್ಮ ಸಮಯ ಹಾಳುಮಾಡುವ ಸಾಧನಗಳು. ಇವೆಲ್ಲ ಬದಿಗಿಟ್ಟು ಸಂಗಾತಿಯ ಜೊತೆ ಕಾಲ ಕಳೆಯುವುದಕ್ಕೆ ಆದ್ಯತೆ ನೀಡಿ.

* ರಮ್ಯವಾದ ಸಂದೇಶಗಳನ್ನು ಕಳಿಸಿ. ಇದರಿಂದ ವಾರಾಂತ್ಯದಲ್ಲಿ ನಿಮ್ಮ ನಿರೀಕ್ಷೆಗಳು ಎಂದಿಗೂ ಹುಸಿಯಾಗುವುದಿಲ್ಲ.

* ಹೊಸತಾಗಿ ಏನನ್ನಾದರೂ ಮಾಡಲು ಯತ್ನಿಸಿ.

* ಸ್ನೇಹಿತರು, ಬಂಧುಗಳನ್ನು ಭೇಟಿ ಮಾಡಿ. ಚಲನಚಿತ್ರ ವೀಕ್ಷಿಸಿ. ಪ್ರವಾಸಕ್ಕೆ ಹೋಗಿ. ಬದಲಾವಣೆ ಬಹು ಮುಖ್ಯ.

*ಕೊನೆಯದಾಗಿ ಪರಸ್ಪರ ಮೆಚ್ಚುಗೆ, ಗೌರವ ಇರಲಿ. ಅವಲಂಬನೆ ಬೇಡ. ಈಗಿನ ವೇಗವಾದ, ಯಾಂತ್ರಿಕ ಬದುಕಿನಲ್ಲೂ ಹೃದಯದ ಮಿಡಿತವನ್ನು ವೇಗವಾಗಿಡಲು ಸಾಧ್ಯ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT