ಭಾನುವಾರ, ಮಾರ್ಚ್ 29, 2020
19 °C

ಸಾಂಪ್ರದಾಯಕ ಸೀರೆಗೆ ವೆಸ್ಟರ್ನ್ ಬ್ಲೌಸ್!

ಭಾರ್ಗವಿ ಕೆ.ಆರ್. Updated:

ಅಕ್ಷರ ಗಾತ್ರ : | |

Prajavani

ನಾರಿಯರು ಹೆಚ್ಚು ಇಷ್ಟಪಡುವ ಸಾಂಪ್ರದಾಯಕ ಉಡುಗೆ ಸೀರೆ. ಅದೇ ಸಾಂಪ್ರದಾಯಿಕ ಸೀರೆಗೆ ಸ್ವಲ್ಪ ಪಾಶ್ಚಾತ್ಯ ಫ್ಯಾಷನ್‌ ಸ್ಪರ್ಶ ಕೊಟ್ಟು ಸೀರೆಯ ಮೆರುಗನ್ನು ಇನ್ನಷ್ಟು ಹೆಚ್ಚಿಸುತ್ತಿದೆ ವೆಸ್ಟರ್ನ್ ಬ್ಲೌಸ್.

ಈಗ ಟ್ರೆಂಡ್‌ನಲ್ಲಿ ಇರುವ ಇಂಡೋ-ವೆಸ್ಟರ್ನ್ ವಿನ್ಯಾಸದ ಸೀರೆಯ ಬ್ಲೌಸ್ ಫ್ಯಾಷನ್ ಪ್ರಪಂಚದಲ್ಲಿ ತುಂಬಾ ಸದ್ದು ಮಾಡುತ್ತಿದೆ.

ಪ್ರತಿದಿನ ಕಚೇರಿ ಕೆಲಸಕ್ಕೆ ಹೋಗುವವರಿಗೆ ವೆಸ್ಟರ್ನ್ ಶೈಲಿಯ ಉಡುಪು ಹಾಗೂ ಸಲ್ವಾರ್ ಕಮೀಜ್ ಹಾಕಿ ಬೋರ್ ಆಗಬಹುದು. ಇನ್ನೇನಾದರೂ ಹೊಸತನ್ನು ಯತ್ನಿಸಬೇಕು, ಆದರೆ ಪೂರ್ತಿ ಸಾಂಪ್ರದಾಯಕ ಆಗಿರಬಾರದು ಎನ್ನುವವರಿಗೆ ಕೂಡ ಬೇಕಾದಷ್ಟು ಆಯ್ಕೆಗಳಿವೆ. ನೀವು ಫ್ಯಾಷನ್ ಪ್ರಿಯರಾಗಿದ್ದಲ್ಲಿ ಇಂಡೋ- ವೆಸ್ಟರ್ನ್ ವಿನ್ಯಾಸದ ರವಿಕೆಯನ್ನು ಧರಿಸಿ ನೋಡಬಹುದು. ಅಷ್ಟೇ ಅಲ್ಲದೆ ಇದರಲ್ಲಿ ಮಾಮೂಲಿ ಸೀರೆಗೆ ಹೊಂದುವ ರವಿಕೆಯನ್ನು ಜೋಡಿಸಿಕೊಳ್ಳುವ ಕೆಲಸವೂ ಇರುವುದಿಲ್ಲ. ಹಾಗಾದರೆ ಯಾವ ರೀತಿಯ ವೆಸ್ಟರ್ನ್ ಟಾಪ್‌ಗಳನ್ನು ಸಾಂಪ್ರದಾಯಕ ಸೀರೆಯೊಂದಿಗೆ ಹಾಕಿ ಅಂದವಾಗಿ ಕಾಣಿಸಿಕೊಳ್ಳಬಹುದು ಎಂದು ನೋಡೋಣ.

ಡೆನಿಮ್ ಬ್ಲೌಸ್‌: ಫ್ಯಾಷನ್ ಜಗತ್ತಿನಲ್ಲಿ ಎಷ್ಟೇ ಬದಲಾವಣೆಗಳಾದರೂ ಡೆನಿಮ್ ಟಾಪ್‌ ನಿತ್ಯ ನೂತನ ಎನ್ನಬಹುದು. ಅವುಗಳನ್ನು ಧರಿಸಿದರೆ ತುಂಬಾ ಆರಾಮದಾಯಕ ಎನಿಸುತ್ತದೆ.

ನೀವು ಯಾವುದೇ ರಂಗಿನ ಹತ್ತಿ, ಲಿನನ್ ಹಾಗೂ ಕೈಮಗ್ಗದ ಸೀರೆಗಳ ಜೊತೆ ಸಾಂಪ್ರದಾಯಕ ರವಿಕೆ ಬದಲು ಡೆನಿಮ್ ಕ್ರಾಪ್ ಟಾಪ್ ಹಾಗೂ ಡೆನಿಮ್ ಫ್ಯಾನ್ಸಿ ಟಾಪ್‌ಗಳನ್ನು ಹಾಕಬಹುದು.

ಟೀ ಶರ್ಟ್, ಕ್ರಾಪ್ ಟಾಪ್ ಬ್ಲೌಸ್‌: ಎಷ್ಟೋ ಸಲ ಸಿನಿಮಾ ತಾರೆಯರು ಸೀರೆಯ ಜೊತೆ ಟೀ ಶರ್ಟ್‌ ಹಾಕಿರುವುದನ್ನು ನೋಡಿರಬಹುದು. ಈ ಉಡುಗೆ ಹಿತಮಿತವಾದ ಮೇಕಪ್ ಜೊತೆಗೆ ಒಂದು ರೀತಿಯ ಆಧುನಿಕ ಸ್ಪರ್ಶ ನೀಡುತ್ತದೆ. ಅದೇ ರೀತಿ ನೀವು ಕಾಣಬೇಕಾದರೆ ನಿಮ್ಮಲ್ಲಿರುವ ಕಪ್ಪು ಅಥವಾ ಬಿಳಿಯ ಟೀ ಶರ್ಟ್‌ಗೆ ವಿರುದ್ಧ ಬಣ್ಣದ ಶಿಫಾನ್, ಜಾರ್ಜೆಟ್, ಕ್ರೇಪ್, ಹತ್ತಿ, ಲಿನನ್ ಇವುಗಳಲ್ಲಿ ಯಾವುದಾದರೂ ಸೀರೆಯನ್ನು ಹೊಂದಿಸಿಕೊಳ್ಳಿ. ಈ ರೀತಿಯ ನಿಮ್ಮ ಉಡುಗೆ ನಿಮ್ಮ ಮೆರುಗನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಆಫ್ ಶೋಲ್ಡರ್ ಬ್ಲೌಸ್: ಇಂಡೋ ವೆಸ್ಟರ್ನ್ ಫ್ಯಾಷನ್‌ ಮಾಡ ಬಯಸುವವರು ಆಫ್‌ ಶೋಲ್ಡರ್ ರವಿಕೆಗಳನ್ನು ಧರಿಸಬಹುದು. ಆಫ್ ಶೋಲ್ಡರ್ ರವಿಕೆಗಳನ್ನು ನೀವು ಯಾವುದೇ ರೀತಿಯ ವಿನ್ಯಾಸದ ಹಾಗೂ ಸರಳ ಸೀರೆಗಳ ಜೊತೆ ಹಾಕಬಹುದು. ಇದು ನಿಮಗೆ ಆಧುನಿಕ ಹಾಗೂ ಲಾವಣ್ಯಮಯ ನೋಟವನ್ನು ನೀಡುತ್ತದೆ.

ಶರ್ಟ್: ಫಾರ್ಮಲ್ ಶರ್ಟ್ ಅದರಲ್ಲೂ ಬಿಳಿ ಶರ್ಟ್ ಎಲ್ಲಾ ಬಣ್ಣದ ಸೀರೆಗೂ ಒಂದು ರೀತಿಯ ಜಾದೂ ಸ್ಪರ್ಶ ನೀಡುತ್ತದೆ. ಇದರ ಜೊತೆಗೆ ಬ್ಲ್ಯಾಕ್‌ ಮೆಟಲ್ ಅಥವಾ ಬೆಳ್ಳಿಯ ಆಭರಣ ಧರಿಸಿದರೆ ಒಟ್ಟಾರೆ ಸೌಂದರ್ಯ ಅದ್ಭುತವಾಗಿರುತ್ತದೆ.

ಉದ್ದನೆಯ ಟಾಪ್ ಅಥವಾ ಟ್ಯುನಿಕ್‌: ಸೀರೆಗೆ ಹೊಂದಿಕೆಯಾಗುವ ರವಿಕೆ ಯಾವಾಗಲೂ ಗಿಡ್ಡನೆಯ ಅಥವಾ ಕ್ರಾಪ್ ಟಾಪ್‌ ಆಗಿರಬೇಕಿಲ್ಲ. ನಿಮ್ಮಿಷ್ಟದ ಉದ್ದನೆಯ ಟಾಪ್ ಅಥವಾ ಟ್ಯುನಿಕ್‌ ಅನ್ನು ಹೊಂದಿಸಬಹುದು. ಇದು ಅಪರೂಪದ ಫ್ಯೂಷನ್ ಅಂದ ನೀಡುತ್ತದೆ.

ಇಂತಹ ಫ್ಯಾಷನ್ ಟ್ರೆಂಡ್‌ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಅಂದವಾಗಿ ಕಾಣುವುದು ಎಂಬ ಭಾವನೆ ಕೆಲವರ ಮನಸ್ಸಿನಲ್ಲಿ ಇರುತ್ತದೆ. ಯಾವುದೇ ಉಡುಗೆ ಇರಲಿ, ನಮಗೆ ಹೊಂದಿಕೊಳ್ಳುವಂತಾಗಲು ಅದನ್ನು ಧರಿಸಿದಾಗ ನಿಭಾಯಿಸಬಹುದು ಎಂಬ ಆತ್ವವಿಶ್ವಾಸ ಇರಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)