ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಳೆ ಡಬ್ಬಿಗೇನು?

...
Published 31 ಮೇ 2024, 18:47 IST
Last Updated 31 ಮೇ 2024, 18:47 IST
ಅಕ್ಷರ ಗಾತ್ರ

ಮಕ್ಕಳಿಗೆ ಇಷ್ಟವಾಗುವ ಆಹಾರ ತಯಾರಿಸಿ ತಿನ್ನಿಸುವುದೆಂದರೆ ಅಮ್ಮಂದಿರಿಗೆ ಏಳು ಕೆರೆ ನೀರು ಕುಡಿದ ಅನುಭವ. ಹಿಂದಿನ ದಿನ ರಾತ್ರಿಯಿಂದಲೇ ಅವರಿಗೆ ಯಾವುದು ಇಷ್ಟ, ಆರೋಗ್ಯಕ್ಕೆ ಯಾವುದು ಒಳ್ಳೆಯದು, ಲಂಚ್‌ ಬಾಕ್ಸ್‌ನಲ್ಲಿ ಏನಿಟ್ಟರೆ ಮಧ್ಯಾಹ್ನ ಹೊಟ್ಟೆ ಸೇರುತ್ತದೆ ಎನ್ನುವ ಚಿಂತೆ ಶುರುವಾಗಿರುತ್ತದೆ. ಬೆಳಿಗ್ಗೆ ಅಮ್ಮಾ ಲಂಚ್‌ ಬಾಕ್ಸ್‌ ರೆಡಿನಾ? ಎಂದು ಕೂಗಿದರೆ ಅಮ್ಮಂದಿರ ಎದೆ ಬಡಿತ ಜೋರಾಗುತ್ತದೆ. ಯೋಚಿಸಿ ಡಬ್ಬಿ ತಯಾರು ಮಾಡುವಷ್ಟರಲ್ಲಿ ಅಮ್ಮಂದಿರು ಹೈರಾಣಾಗಿರುತ್ತಾರೆ.

ಉದ್ಯೋಗದಲ್ಲಿರುವ ಮಹಿಳೆಯರಂತೂ ಬೆಳಗ್ಗೆ ತರಾತುರಿಯಲ್ಲಿ ಸುಲಭದಲ್ಲಿ ಮಾಡುವ ಆಹಾರವನ್ನೇ ಹೆಚ್ಚು ಆಯ್ಕೆ ಮಾಡುತ್ತಾರೆ. ಈ ಮಧ್ಯೆ, ಬೆಳೆಯುವ ವಯಸ್ಸಿನಲ್ಲಿ ಅಗತ್ಯವಾದ ಪೋಷಕಾಂಶವನ್ನು ಪೂರೈಸುವ ಆಹಾರ ನೀಡಬೇಕೆನ್ನುವುದನ್ನು ಮರೆಯುವಂತಿಲ್ಲ.

ಚಪಾತಿಯೊಂದಿಗೆ ‍ಪಲ್ಯ

ಶಾಲೆಯಲ್ಲಿ ಮಕ್ಕಳು ಸ್ವತಃ ಆಹಾರ ಸೇವಿಸುವುದರಿಂದ ತಿನ್ನಲು ಸುಲಭವಾಗಿರುವುದನ್ನು ತಯಾರಿಸಿಕೊಡುವುದು ಒಳ್ಳೆಯದು ಎನ್ನುತ್ತಾರೆ ಆಹಾರ ತಜ್ಞೆ (dietician) ಡಾ. ಹೇಮಾ. ಅದಕ್ಕಾಗಿ ಚಪಾತಿಯೊಳಗೆ ಟೊಮೆಟೊ, ದ್ವಿದಳ ಧಾನ್ಯಗಳಾದ ಅಲಸಂದೆ, ಹುರುಳಿ, ಕಡಲೆಕಾಯಿಗಳ ಪಲ್ಯ, ರೋಸ್ಟ್‌ ಮಾಡಿರುವ ಪನ್ನೀರ್‌, ತರಕಾರಿಗಳ ಪಲ್ಯವನ್ನು ಹಾಕಿ ರೋಲ್‌ನಂತೆ ಮಾಡಿಕೊಟ್ಟರೆ ರುಚಿಸಬಹುದು. ತಿನ್ನಲೂ ಸುಲಭ, ಆರೋಗ್ಯಕ್ಕೂ ಒಳ್ಳೆಯದು.

ಬಗೆ ಬಗೆ ಪರೋಟಾ

ಸಾಮಾನ್ಯವಾಗಿ ಮಕ್ಕಳು ಸೊಪ್ಪು, ತರಕಾರಿಗಳೆಂದರೆ ಮೂಗು ಮುರಿಯುತ್ತಾರೆ. ಹೀಗಾಗಿ ರೊಟ್ಟಿ ಅಥವಾ ಚಪಾತಿ ಹಿಟ್ಟಿನೊಂದಿಗೆ ಸೊಪ್ಪು ಅಥವಾ ತರಕಾರಿಗಳು, ಬೇಯಿಸಿದ ಹಸಿರು ಬಟಾಣಿ, ಹೆಸರುಕಾಳನ್ನು ಸೇರಿಸಿ ಪರೋಟಾದಂತೆ ಮಾಡಿಕೊಡಬಹುದು. ಬೀಟ್ರೂಟ್‌, ಕ್ಯಾರೆಟ್‌ಗಳನ್ನು ರುಬ್ಬಿ ಅದರ ರಸವನ್ನು ಹಿಟ್ಟಿನೊಂದಿಗೆ ಸೇರಿಸಿ ಪರೋಟಾ ರೀತಿ ಮಾಡಿಕೊಟ್ಟರೆ ಬಣ್ಣ ಬಣ್ಣವಾಗಿ ಆಕರ್ಷಕವಾಗಿಯೂ ಕಾಣುತ್ತದೆ. ರುಚಿಯಾಗಿಯೂ ಇರುತ್ತದೆ.

ತರಕಾರಿ ಫ್ರೈಗಳು

ಮಕ್ಕಳು ಬಣ್ಣವನ್ನು ಇಷ್ಟಪಡುತ್ತಾರೆ. ಅವರ ತಿಂಡಿಯಲ್ಲೂ ಬಣ್ಣ ಕಂಡರೆ ಖುಷಿಯಿಂದ ತಿನ್ನುತ್ತಾರೆ. ಊಟದ ಡಬ್ಬಿಯಲ್ಲಿ ತರಕಾರಿಗಳನ್ನು ಫ್ರೈ ಮಾಡಿಕೊಡಿ. ಆಲೂಗೆಡ್ಡೆ, ಹೂಕೋಸು, ಗೆಣಸು, ಬ್ರೊಕೊಲಿಯಂತಹ ತರಕಾರಿಗಳಿಗೆ ಚಿಟಿಕೆ ಉಪ್ಪು, ಕಾಳುಮೆಣಸಿನ ಪುಡಿ ಹಾಕಿದರೆ ರುಚಿ ಹೆಚ್ಚು.

ಚಂದವಾಗಿ ಅಲಂಕರಿಸಿ

ಮಕ್ಕಳಿಗೆ ಊಟದ ಡಬ್ಬಿ ತಯಾರಿಸುವಾಗ ಪೋಷಕಾಂಶದ ಬಗ್ಗೆ ಯೋಚಿಸಿದಷ್ಟೇ ಅವರು ಡಬ್ಬಿಯನ್ನು ಅಲಂಕರಿಸುವುದೂ ಮುಖ್ಯ. . ಒಂದೆಡೆ ಚಪಾತಿ ರೋಲ್‌ಗಳನ್ನಿಟ್ಟರೆ ಅದರ ಎದುರು ಫ್ರೈ ಮಾಡಿದ ತರಕಾರಿಗಳನ್ನಿಡಿ. ಅದರ ಜತೆಗೆ ಚಾಕೋಲೇಟ್ ಬದಲು ಬೆಲ್ಲದ ಲಡ್ಡು, ರಾಗಿ, ಎಳ್ಳಿನ ಹಲ್ವಾಗಳನ್ನಿಡಿ.

ಮನೆಯ ಸದಸ್ಯರು ಕೈಜೋಡಿಸುವುದು ಮುಖ್ಯ

ಎಲ್ಲವನ್ನೂ ಅಮ್ಮಂದಿರೇ ಮಾಡಿಕೊಡಬೇಕು ಎಂದರೆ ಕಷ್ಟ. ಮನೆಯ ಇತರ ಸದಸ್ಯರು ತಮ್ಮ ಕೆಲಸವನ್ನು ಮಾಡಿಕೊಂಡರೆ ಮಹಿಳೆಯರಿಗೆ ತುಸು ಹಗುರವಾಗುತ್ತದೆ. ಮನೆಯಲ್ಲಿರುವ ಅಪ್ಪ, ಅಜ್ಜಿ-ಅಜ್ಜಂದಿರು ಬಾಕ್ಸ್‌ನಲ್ಲಿ ಅಂದಿನ ಆಹಾರವನ್ನು ತುಂಬಿಕೊಡುವುದೋ ಅಥವಾ ಬೆಳಗಿನ ತಿಂಡಿಯನ್ನು ತಿನ್ನಿಸುವುದೋ ಮಾಡಿದರೆ ಮಕ್ಕಳು ಒತ್ತಡವಿಲ್ಲದೆ ಆರಾಮಾಗಿ ತಿಂದು ಶಾಲೆಗೆ ಹೊರಡುತ್ತಾರೆ.

ಬಿಡುವಿನ ವೇಳೆಯಲ್ಲಿ ತಿನ್ನಲು ಸ್ಯ್ನಾಕ್ಸ್‌ ಕೊಡಿ

ದಿನದ ಬಹುತೇಕ ಸಮಯವನ್ನು ಮಕ್ಕಳು ಶಾಲೆಯಲ್ಲೇ ಕಳೆಯುತ್ತಾರೆ. ಹೀಗಾಗಿ ತರಗತಿಗಳ ಬಿಡುವಿನ ವೇಳೆ ತಿನ್ನಲು ಊಟದ ಡಬ್ಬಿಯೊಂದಿಗೆ ಸ್ನ್ಯಾಕ್ಸ್ ಕೂಡ ಇರಲಿ.

ಡ್ರೈಫ್ರೂಟ್ಸ್‌ಗಳ ಲಾಡು, ಒಣದ್ರಾಕ್ಷಿ ಶೇಂಗಾ ಬೀಜದ ಚಿಕ್ಕಿ, ನೆನೆಸಿದ ಬಾದಾಮಿಗಳನ್ನು ಹಾಕಿಕೊಡಿ.

ಪಿಸ್ತಾ, ಗೋಡಂಬಿ, ಕಿವಿ, ಅಂಜೂರ, ಏಪ್ರಿಕಾಟ್‌ನಂತಹ ಒಣ ಹಣ್ಣುಗಳನ್ನಿಡಿ. 

ತಾಜಾ ಹಣ್ಣುಗಳನ್ನು ಕತ್ತರಿಸಿ ಡಬ್ಬಿಯಲ್ಲಿ ಕೊಡಬಹುದು. ನೆನಪಿಡಿ, ಕೆಲವು ಹಣ್ಣಗಳನ್ನು ಹೆಚ್ಚು ಕತ್ತರಿಸಿಟ್ಟರೆ ತಿನ್ನಲು ಯೋಗ್ಯವಾಗಿರುವುದಿಲ್ಲ. ಹೀಗಾಗಿ ಹಣ್ಣುಗಳ ಆಯ್ಕೆಯ ಬಗ್ಗೆ ಗಮನವಿರಲಿ.

ಕ್ಯಾರೆಟ್, ಸೌತೆಕಾಯಿ, ಬೀಟ್ರೂಟ್‌ನಂತಹ ತರಕಾರಿಗಳನ್ನು ಕತ್ತರಿಸಿ ಬಾಕ್ಸ್‌ನಲ್ಲಿಟ್ಟರೆ ಮಕ್ಕಳು ತಿನ್ನಬಹುದು.

ಊಟದ ಡಬ್ಬಿ ಆಯ್ಕೆಯಲ್ಲಿ ಎಚ್ಚರವಿರಲಿ

ಊಟಕ್ಕೆ ಬಿಸಿ ಪದಾರ್ಥಗಳು, ಹಣ್ಣುಗಳನ್ನು ಹಾಕುವುದರಿಂದ ಡಬ್ಬಿಯ ಆಯ್ಕೆಯ ಬಗ್ಗೆ ಗಮನವಿರಬೇಕು. ಪ್ಲಾಸ್ಟಿಕ್‌ ಡಬ್ಬಿಯ ಬಳಕೆ ಬೇಡವೇ ಬೇಡ. ಗ್ಲಾಸ್‌ ಡಬ್ಬಿಗಳನ್ನು ಆಯ್ಕೆ ಮಾಡಿದರೆ ಅವು ಭಾರವಾಗಿರುವುದರಿಂದ ಮಕ್ಕಳಿಗೆ ಕೊಂಡೊಯ್ಯಲು ಕಷ್ಟವಾಗಬಹುದು. ಉತ್ತಮ ಗುಣಮಟ್ಟದ ಸ್ಟೀಲ್‌ ಪಾತ್ರೆಗಳನ್ನು ಬಳಸಬಹುದು. ಅದು ಹಗುರವಾಗಿದ್ದರೆ ಇನ್ನೂ ಒಳ್ಳೆಯದು. 

ಒಂದೇ ಡಬ್ಬಿಯಲ್ಲಿ ಹಲವು ಕಂಪಾರ್ಟ್‌ಮೆಂಟ್‌ಗಳಿರುವ ಡಬ್ಬಿ ಕೊಂಡರೆ ಒಂದರಲ್ಲೇ ಎಲ್ಲಾ ಬಗೆಯ ಆಹಾರವನ್ನು ಹಾಕಿಕೊಡಬಹುದು. 

ಮಕ್ಕಳು ಹಟ ಮಾಡುತ್ತಾರೆಂದು ಅವರಿಗಿಷ್ಟದ ತಿಂಡಿಯನ್ನೇ ನೀಡುವುದು ಒಳ್ಳೆಯದಲ್ಲ. ಅನ್ನ–ರಸಂ, ಚಿತ್ರಾನ್ನದಂತಹ ಆಹಾರಗಳಿಂದ ಮಕ್ಕಳಿಗೆ ಪೋಷಕಾಂಶ ಪೂರ್ತಿಯಾಗುವುದಿಲ್ಲ. ಆಹಾರ ಸೇವನೆ ಎಷ್ಟು ಎನ್ನುವುದಕ್ಕಿಂತ ಏನು ಎನ್ನುವುದು ಮುಖ್ಯವಾಗುತ್ತದೆ. ಮಕ್ಕಳಿಗೆ ಚಿಕ್ಕಂದಿನಂದಲೇ ಆಹಾರದ ಆಯ್ಕೆಯ ಬಗ್ಗೆ ಅರಿವು ಮೂಡಿಸಬೇಕು. ಋತುಮಾನದ ಹಣ್ಣುಗಳು, ತರಕಾರಿಗಳಿಂದ ತಯಾರಿಸಿದ ಆಹಾರ ಮಕ್ಕಳನ್ನು ಆರೋಗ್ಯವಾಗಿರುವಂತೆ ಮಾಡುತ್ತದೆ.

ಡಾ ‌‌| ಹೇಮಾ ಅರವಿಂದ್, ಡಯೆಟಿಷಿಯನ್‌, ರಾಮಯ್ಯ ಆಸ್ಪತ್ರೆ ಬೆಂಗಳೂರು 

ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT