ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮಹಿಳೆಯರಿಗಷ್ಟೇ ಶಾಸ್ತ್ರಗಳೇಕೆ?

Last Updated 18 ಫೆಬ್ರುವರಿ 2021, 6:40 IST
ಅಕ್ಷರ ಗಾತ್ರ

ಸಾಮಾಜಿಕ ಜಾಲತಾಣಗಳಲ್ಲಿ ಜ್ಯೋತಿಷ್ಯಗಳ ಹೆಸರಿನಲ್ಲಿ ಏನೆಲ್ಲ ಬರೀತಿದಾರೆ? ಒಮ್ಮೆ ಕಣ್ಣು ಹಾಯಿಸೋಣ. ಇಲ್ಲಿ ಬರೆದಿರುವುದು ಯಾವುದೂ ಶಾಸ್ತ್ರೋಕ್ತವಲ್ಲ. ಉದಾಹರಣೆಗಳಷ್ಟೆ. ಯಾರೂ ಏನನ್ನೂ ನಂಬಬೇಕಿಲ್ಲ.

ರಾತ್ರಿ ಗಂಡನ ಕಾಲೊತ್ತುವ ಮಹಿಳೆಯರಿದ್ದರೆ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ತಲೆಬಾಚದ ಹೆಣ್ಣುಮಕ್ಕಳಿದ್ದರೆ, ತಲೆಗೂದಲನ್ನು ಕಟ್ಟದೇ ಇದ್ದಲ್ಲಿ ದಾರಿದ್ರ್ಯ ನೆಲೆಸುತ್ತದೆ

ಉಬ್ಬು ಹಲ್ಲಿರುವ ಹೆಣ್ಣುಮಕ್ಕಳನ್ನು ಮದುವೆಯಾಗಬಾರದು

ದಪ್ಪ ಸ್ತನಗಳಿರುವ ಮಹಿಳೆಯರನ್ನ ನಂಬಬಾರದು

ದೊಡ್ಡ ನಿತಂಬಗಳಿದ್ದರೆ ಸಂತಾನ ಭಾಗ್ಯ ಲಭ್ಯ

ಈ ರಾಶಿಯ ಹೆಣ್ಣುಮಕ್ಕಳಿಗೆ ನೀವು ಪ್ರೀತಿಯನ್ನು ತೋರಿಸಿದರೆ ಅವರು ಕೂಡಲೇ ಒಪ್ಪುತ್ತಾರೆ.

ಈ ರಾಶಿಯ ಹೆಣ್ಣುಮಗಳನ್ನು ಮದುವೆಯಾದರೆ ನಿಮ್ಮದು ಸದಾ ಸುಖೀ ದಾಂಪತ್ಯ. ಅವರಿಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಹೆಚ್ಚು.

ಈ ರಾಶಿಯ ಹೆಣ್ಣುಮಕ್ಕಳನ್ನು ಮದುವೆಯಾಗಲೇಕೂಡದು. ಅವರು ಹಟಮಾರಿಗಳಾಗಿರುತ್ತಾರೆ. ಗಂಡನ ಮೇಲೆ ಸವಾರಿ ಮಾಡುತ್ತಾರೆ...

ಇದಷ್ಟೇ ಅಲ್ಲ, ಕತ್ತಿನ ಮೇಲೆ ಮಚ್ಚೆ ಇದೆಯೇ, ಹೊಟ್ಟೆ ಮೇಲಿದೆಯೇ? ಸ್ತನದ ಮೇಲಿದೆಯೇ? ಇದ್ದರೆ ಯಾವ ಭಾಗದಲ್ಲಿದೆ? ಶಕುನ ಏನು ಹೇಳುತ್ತದೆ?

ಹೀಗೆ ಹತ್ತು ಹಲವು ರಾಶಿ ಭವಿಷ್ಯಗಳ ವಿಶ್ಲೇಷಣೆ ಹಾಗೂ ಆಂಗಿಕ ಶಾಸ್ತ್ರಗಳ ಹೆಸರಿನಲ್ಲಿ ದೇಹದ ಅವಯವಗಳನ್ನೆಲ್ಲ ವರ್ಣಿಸಿ, ಇದು ಹೀಗಿದ್ದರೆ, ಹಾಗೆ.. ಹಾಗಿದ್ದರೆ ಹೀಗೆ.. ಎಂದು ಬರೆಯುವವರೇ ಹೆಚ್ಚು.

ಸಮಸ್ಯೆ ಇವರ ಶಾಸ್ತ್ರಗಳ ಬಗ್ಗೆ ಅಲ್ಲ. ಆದರೆ ಹೀಗೆ ಬರೆಯುವುದು, ಹೆಂಗಳೆಯರನ್ನು ನೇರವಾಗಿ ಹೀಗಳೆದಂತೆ ಅಲ್ಲವೆ?

ಇವರ ಶಾಸ್ತ್ರಗಳು ಏನಾದರೂ ಹೇಳಲಿ, ಆದರೆ ಒಂದು ಗುಂಪಿನ ಮಹಿಳೆಯರನ್ನು ಹೀಗೆ ಸಾರಾಸಗಟಾಗಿ ಅಲ್ಲಗಳೆಯುವುದು ಅಥವಾ ಹೊಗಳಿ ದೇವತೆಯ ಸ್ಥಾನಕ್ಕೇರಿಸುವುದು ಯಾವ ಸೀಮೆಯ ನ್ಯಾಯ?

ಜ್ಯೋತಿಷ್ಯ ಶಾಸ್ತ್ರಕ್ಕೆ ಬಂದರೆ ಪಂಚ ಭವತಿಃ, ಪಂಚ ನ ಭವತಿಃ ಅಂತಾರೆ. ಅರ್ಧದಷ್ಟು ಮಾತ್ರ ಸತ್ಯವೆಂಬುದನ್ನು ಶಾಸ್ತ್ರಗಳೇ ಹೇಳಿರುವಾಗ, ಉಳಿದರ್ಧ ಜನರನ್ನೂ ಒಂದು ಗುಂಪಿಗೆ ಸೇರಿಸುವುದು ಸೂಕ್ತವೆ?

ಇದನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳು ಎಲ್ಲ ತಜ್ಞರ ಬಳಿ ಇದ್ದರೆ ಇರಲಿ. ಅದನ್ನು ಅವರ ಬಳಿ ಕೇಳಲು ಬಂದವರಿಗೆ ತಮ್ಮ ಜ್ಞಾನವನ್ನು ಹಂಚಲಿ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಅಗತ್ಯವಿರಲಿ, ಇಲ್ಲದಿರಲಿ ಎಲ್ಲವನ್ನೂ ಜಗಜ್ಜಾಹೀರುಗೊಳಿಸಿದರೆ, ಅಂಥ ಲಕ್ಷಣಗಳಿರುವ ಮಹಿಳೆಯರ ಮನಸಿನ ಮೇಲೆ ಏನು ಪರಿಣಾಮ ಬೀರಬಹುದು?

ಗಂಡನಾದವನು, ಅಪ್ಪನಾದವನು ದುರ್ಬಲ ಮನಸಿನವನಾಗಿದ್ದಲ್ಲಿ ಎಲ್ಲ ಅನಿಷ್ಟಕ್ಕೂ ಈ ಹೆಣ್ಣುಮಗುವಿನ ಅಂಗಾಂಗಗಳು, ಹುಟ್ಟಿದ ರಾಶಿಯೇ ಕಾರಣ ಎಂಬಂತೆ ಹಿಂಸೆ ನೀಡಿದರೆ...?

ಇಂಥ ಭವಿಷ್ಯಗಳು, ಒಳಿತಾಗಲಿ ಎಂಬ ಉದ್ದೇಶದಿಂದಲೇ ಬರೆದಿದ್ದರೂ ಒಳಿತಾಗುತ್ತಿದೆಯೇ? ಕೆಡುಕಾಗುತ್ತಿದೆಯೇ ಇವೆರಡರ ಅಂದಾಜಿಲ್ಲದಿದ್ದಲ್ಲಿ ಮತ್ತೆ ಹೀಗೆ ಬರೆಯುವುದರ ಹಿಂದಿನ ಉದ್ದೇಶವೇನು?

ಸ್ವಾಮೀಜಿಗಳೇ, ಕೇರಳದ ಮಾಂತ್ರಿಕರೇ, ಜ್ಯೋತಿಷಿಗಳೇ.. ಇಂಥ ಜ್ಞಾನವನ್ನು ನಿಮಗೇ ಸೀಮಿತಗೊಳಿಸಿ. ನಿಮ್ಮ ಬಳಿ ಬರುವ ಭಕ್ತರು, ದಕ್ಷಿಣೆ ಕೊಟ್ಟು ಇಂಥ ಸಲಹೆಗಳನ್ನು ಕೇಳಿದಾಗ ಧಾರಾಳವಾಗಿ ನೀಡಿ. ಅದಕ್ಕೆ ಹೇಗಿದ್ದರೂ ಕಚೇರಿಗಳಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಕೊಟ್ಟಂತೆ, ವಿಡಿಯೊಗಳನ್ನು ಹರಿಬಿಟ್ಟು ಹೀಗೆ ಅನಗತ್ಯ ಜ್ಞಾನ ಹಂಚುವ ಅಗತ್ಯವೇ ಇಲ್ಲ.

ಇಷ್ಟಕ್ಕೂ ದೇಹ, ಗಾತ್ರ, ಬಣ್ಣ, ಹಲ್ಲು, ತುಟಿ, ಕಟಿ, ನಿತಂಬ ಇವೆಲ್ಲಕ್ಕೂ, ಸ್ವಭಾವಗಳಿಗೂ ಸಂಬಂಧ ಕಲ್ಪಿಸುವುದೇ ಬಾಲಿಶತನ. ಒಳಿತಿಗೂ ಕೆಡುಕಿಗೂ ಮನೆಗೆ ಬರುವ ಹೆಣ್ಣುಮಗಳ ಕಾಲ್ಗುಣ ಕಾರಣ ಎನ್ನುವ ನಮ್ಮ ಸಮಾಜದಲ್ಲಿ ಇಂಥ ಉಚಿತ ಸಲಹೆಗಳನ್ನು ಹರಿಬಿಡುವುದರಿಂದ ಆಗುತ್ತಿರುವ ಲಾಭ ಏನು? ಅದು ಜ್ಯೋತಿಷಿಗಳಿಗೆ ಗೊತ್ತು.

ಹಾನಿ ಏನು ಎಂಬುದನ್ನು ನಾವಿಲ್ಲಿ ವಿಶ್ಲೇಷಿಸಬಹುದಾಗಿದೆ. ಬಹುತೇಕರು ತಮ್ಮ ಸಾಮರ್ಥ್ಯವನ್ನು, ಸಂಗಾತಿಯ ಸಾಮರ್ಥ್ಯ, ಧಾರಣಾ ಶಕ್ತಿಯನ್ನು ಇಂಥ ಸಲಹೆಗಳನ್ನು ಅವಲಂಬಿಸುತ್ತಿದ್ದಾರೆ ಎನ್ನವುದೇ ಆತಂಕಕಾರಿಯಾಗಿದೆ.

ಭವಿಷ್ಯದ ನಿರ್ಧಾರಗಳನ್ನು ಹೀಗೆ ಮಾಡಿದರೆ ಹೆಚ್ಚು ಹಾನಿ ಇರಲಿಕ್ಕಿಲ್ಲ. ಆದರೆ ಪ್ರಚಲಿತ ಬಾಂಧವ್ಯಗಳಲ್ಲಿ ಇವು ಬಿರುಕು ತರುತ್ತಿವೆ. ಕಂದರ ಹುಟ್ಟಿಸುತ್ತಿವೆ. ಒಂದು ಜಾಣ ಎನ್ನಬಹುದಾದ ಜನರೇಷನ್‌ ಸಹ, ಈ ಅಕ್ಷರದಿಂದ ಹೆಸರು ಆರಂಭವಾದರೆ ಎಂಬುದನ್ನು ನೋಡುತ್ತದೆ, ನಂಬುತ್ತದೆ ಎಂದರೆ ನಾವೇನು ಮಾಡುತ್ತಿದ್ದೇವೆ?

ಮಗಳ ಮದುವೆಯಾಗದಿರಲು ಉಬ್ಬು ಹಲ್ಲು ಕಾರಣ ಎಂಬುದು ಸೌಂದರ್ಯದ ಕಾರಣಕ್ಕಿಂತಲೂ ಹೀಗೆ ಕೆಲಸಕ್ಕೆ ಬಾರದ ವಾದಗಳಿಂದಾದರೆ ನಾವು ಹಿಂದಕ್ಕೆ ಸಾಗುತ್ತಿದ್ದೇವೆ. ದಪ್ಪ ಸ್ತನಗಳಿಲ್ಲವೆಂಬ ಕಾರಣಕ್ಕೆ ನಿರಾಕರಿಸಿದರೆ, ಕತ್ತಲೆಯೆಡೆಗೆ ನಡೆಯುತ್ತಿದ್ದೇವೆ.

ದೇಹರಚನೆ ಮಗುವನ್ನು ಹೊರಲು, ಹೆರಲು, ಹಾಲುಣಿಸಲು ಅಗತ್ಯವಿರುವಂತೆ ಇದ್ದೇ ಇರುತ್ತದೆ. ಅದಕ್ಕೂ ಇವರ ಆಂಗಿಕ ಶಾಸ್ತ್ರವನ್ನು ಅವಲಂಬಿಸಿದರೆ ಕಸ್ಟಮೈಸ್ಡ್‌ ಹೆಣ್ಣನ್ನು ಸೃಷ್ಟಿಸಬೇಕಾಗುತ್ತದೆ. ಮರು ಸೃಷ್ಟಿಯ ಈ ಕೆಲಸದಲ್ಲಿ ಹಲವರು ತಮ್ಮ ಮಚ್ಚೆಯನ್ನು ಅಳಿಸಿಹಾಕಿ ಎಂದು ಪ್ಲಾಸ್ಟಿಕ್‌ ಸರ್ಜನ್‌ಗಳಲ್ಲಿ ಸಲಹೆ ಕೇಳಲು ಬರುತ್ತಾರೆ.

ಡಾ. ಶ್ರುತಿ ಪಾಂಡೆ ಪ್ರಕಾರ ಕರ್ನಾಟಕದಲ್ಲಿ ಸ್ತನಗಳ ಗಾತ್ರ ಹೆಚ್ಚಿಸಲು, ಬಲಭಾಗದಲ್ಲಿರುವ ಮಚ್ಚೆಯನ್ನು ಅಳಿಸಿ ಹಾಕಲು ಕೇಳಿಕೊಂಡು ಮಹಿಳೆಯರು ಬರುತ್ತಾರೆ. ಅದಕ್ಕೆ ದೊಡ್ಡ ಕಾರಣ, ಇಂಥವೇ ಸಲಹೆ, ಸೂಚನೆಗಳು. ಅವುಗಳಿಂದಾಗಿ ಹೀಗಳೆಯುವಿಕೆ, ಅವಮಾನ, ನಿಂದೆಗಳನ್ನು ಅನುಭವಿಸುತ್ತಾರೆ. ಕೆಲವೆಡೆ ಕೌಟುಂಬಿಕ ದೌರ್ಜನ್ಯಗಳಿಗೂ ಬಲಿಯಾಗಿರುತ್ತಾರೆ.

ಇಷ್ಟಕ್ಕೂ ಜ್ಯೋತಿಷ್ಯ ಮಾಡಬೇಕಾದ ಕೆಲಸ ಎಲ್ಲೆಡೆಯೂ ನಿರಾಶರಾದಾಗ ಒಂದು ನಿರೀಕ್ಷೆಯ ಎಳೆಯನ್ನು ನೀಡಬೇಕು. ಸಮಸ್ಯೆಗಳಿರದೇ ಇದ್ದಲ್ಲಿ ಸಮಸ್ಯೆಯನ್ನು ಹುಟ್ಟಿಸುವ ಈ ಶಾಸ್ತ್ರಕ್ಕೆ ಏನೆಂದು ಕರೆಯಬೇಕು?

ಇಷ್ಟಕ್ಕೂ ಇವನ್ನು ನಂಬುವ ಜನರಿಗೇನೆಂದು ಕರೆಯಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT