ಅಪರೂಪಕ್ಕೆ ಸೀರೆ ಉಡುವ ಅವಳು ಅಂದು ತುಸು ಕಷ್ಟಪಟ್ಟೇ ರೇಷ್ಮೆ ಸೀರೆ ಉಟ್ಟಿದ್ದಳು. ಇಷ್ಟದ ವಿನ್ಯಾಸದ ರವಿಕೆಯನ್ನೂ ತೊಟ್ಟಿದ್ದಳು. ಗೃಹಪ್ರವೇಶಕ್ಕೆ ಬಂದಿದ್ದ ಅತಿಥಿಗಳನ್ನು ವಿಚಾರಿಸುತ್ತಲೇ, ಆಗಬೇಕಾದ ಕೆಲಸಗಳತ್ತಲೂ ಚಿತ್ತವಿಟ್ಟಿದ್ದಳು. ಅಪರೂಪಕ್ಕೆ ಬಂದಿದ್ದ ಗೆಳತಿ, ಇವಳನ್ನು ನೋಡಿದ್ದೇ ತಡ, ‘ಅಯ್ಯೋ, ನಿನ್ನ ಬಾಯ್ಫ್ರೆಂಡ್ ಹೊರಗೆ ಬಂದಿದ್ದಾನೆ ನೋಡು!’ ಅಂದಾಗ, ಇವಳು ಒಂದು ಸೆಕೆಂಡ್ ಕಾಣಬಾರದ್ದು ಕಂಡಿತು ಎಂಬಂತೆ ಹೊರಗೆ ತುಸು ಕಾಣುತ್ತಿದ್ದ ತನ್ನ ಬ್ರಾ ಸ್ಟ್ರಿಪ್ ಅನ್ನು ಒಳಗೆಳೆಂದುಕೊಂಡು ನಿಟ್ಟುಸಿರುಬಿಟ್ಟಳು.

ಕಚೇರಿಯಲ್ಲಿ ತನ್ಮಯಳಾಗಿ ಕೆಲಸ ಮಾಡುತ್ತಿದ್ದ ಅವಳ ಬಳಿ ಸಹೋದ್ಯೋಗಿ ಗೆಳತಿ ಬಂದು ಹಾಯ್ ಅಂದವಳೇ, ನಿಧಾನಕ್ಕೆ ಅವಳ ಹೆಗಲ ಮೇಲೆ ಕೈಹಾಕಿ, ಇಣುಕುತ್ತಿದ್ದ ಬ್ರಾ ಪಟ್ಟಿಯನ್ನು ಒಳಗೆ ತೂರಿಸಿದಳು.

ಕಾಲೇಜು ಸಹಪಾಠಿಯೊಬ್ಬ ಯುವತಿಯ ಹತ್ತಿರಕ್ಕೆ ಬಂದು, ‘ನಿನ್ನ ಬ್ರಾ ಕಾಣಿಸ್ತಾ ಇದೆ ನೋಡು’ ಎಂದು ಮೆಲ್ಲಗೆ ಉಸುರಿದ್ದ. ತಕ್ಷಣವೇ ನಕ್ಕ ಆ ಯುವತಿ, ‘ಕಂಡರೆ ಕಾಣಲಿ ಬಿಡು. ಯಾಕೆ ತಲೆಕೆಡಿಸಿಕೊಳ್ಳುವೆ. ಅದೂ ಕೂಡಾ ಬಟ್ಟೆ ತಾನೇ’ ಎಂದು ನುಡಿದಿದ್ದಳು.

ಹೆಣ್ಣುಮಕ್ಕಳು ಧರಿಸುವ ಬ್ರಾ ಪಟ್ಟಿಯೊಂದು ಹೊರಗೆ ಗೋಚರಿಸಿದಾಗ ಅದನ್ನು ಕಂಡವರೇಕೆ ಏನೋ ಆಗಿದೆ ಎಂಬಂತೆ ವರ್ತಿಸುತ್ತಾರೆ?. ಧರಿಸುವ ಉಡುಪಿನ ಭಾಗವೊಂದು ಹೊರಗೆ ಗೋಚರಿಸಿದಾಗ ಅದನ್ನು ಸಹಜ ಎಂಬಂತೆ ಸ್ವೀಕರಿಸಲು ಸಾಧ್ಯವಿಲ್ಲವೇ? ಎಂದು ಯೋಚಿಸಿದಾಗ ಹೆಣ್ಣುಮಕ್ಕಳ ಒಳಉಡುಪಿನ ಕುರಿತು ನಾವಿನ್ನೂ ಆರೋಗ್ಯಕರವಾಗಿ ಚಿಂತನೆ ನಡೆಸಲು ಸಾಧ್ಯವಾಗಿಲ್ಲವೆಂಬುದು ಅರಿವಿಗೆ ಬರುತ್ತದೆ.

ಆಕೆ ಗೃಹಿಣಿಯೇ ಆಗಿರಲಿ, ಅಧಿಕಾರಿಯೋ, ವಿಮಾನದ ಪೈಲಟೋ, ಗಗನಯಾತ್ರಿಯೋ ಆಗಿರಲಿ ಅವಳನ್ನು ದೇಹದ ಪರಿಧಿಯಾಚೆಗೆ ನೋಡುವ ದೃಷ್ಟಿಕೋನವಿನ್ನೂ ಪೂರ್ಣಪ್ರಮಾಣದಲ್ಲಿ ರೂಪುಗೊಂಡಿಲ್ಲವೆಂದೇ ಹೇಳಬಹುದು. ಮಹಿಳೆಯ ಎದೆಯನ್ನು ರಕ್ಷಿಸುವ, ಅವಳಲ್ಲೊಂದು ಆತ್ಮವಿಶ್ವಾಸವನ್ನು ತುಂಬುವ ಬ್ರಾ ಅನ್ನು ಒಂದು ಉಡುಪಾಗಿ ನೋಡುವ ಬದಲು ನಾನಾರ್ಥ, ಭಾವಗಳಲ್ಲೂ ಪರಿಭಾವಿಸಲಾಗುತ್ತಿದೆ.

ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳು ಧರಿಸುವ ಉಡುಪುಗಳನ್ನು ಸಮಾಜ ತುಸು ಹೆಚ್ಚೇ ಗಮನಿಸುತ್ತಿರುತ್ತದೆ. ಅಂಥದ್ದರಲ್ಲಿ ಅವಳು ಧರಿಸುವ ಬ್ರಾ ಪಟ್ಟಿಯೊಂದು ಹೊರಗೆ ಇಣುಕಿದರೆ, ಏನೋ ಅಚಾತುರ್ಯವಾಯಿತು ಎನ್ನುವಂತೆಯೇ ಭಾವಿಸಲಾಗುತ್ತದೆ. ಆದರೆ, ಅದೇ ಪುರುಷನೊಬ್ಬನ ಒಳಉಡುಪು ತುಸು ಇಣುಕಿದರೂ, ಆತನ ಬೆನ್ನ ಕೆಳಗಿನ ಭಾಗ ತುಸು ಕಂಡರೂ ನಕ್ಕೂ ಸುಮ್ಮನಾಗುತ್ತೇವೆಯೇ ವಿನಾಃ ಅವಳ ಬ್ರಾ ಪಟ್ಟಿಯನ್ನು ಸರಿಪಡಿಸಿದಂತೆ ಸರಿಪಡಿಸಲು ಯಾರೂ ಮುಂದಾಗುವುದಿಲ್ಲ.

ಬ್ರಾ ಪಟ್ಟಿ ಕಾಣಿಸುವಿಕೆಯೇ ಕೆಲವೊಮ್ಮೆ ಆಕೆಯ ವ್ಯಕ್ತಿತ್ವ, ನಡತೆಯನ್ನೂ ಅಳೆಯುವ ಮಾನದಂಡವಾದ ಉದಾಹರಣೆಗಳು ಹೇರಳವಾಗಿವೆ. ಇದಕ್ಕೆ ನಮ್ಮ ಕಿರುತೆರೆ, ಸಿನಿಮಾಗಳ ಕೊಡುಗೆಯೇನೂ ಕಡಿಮೆಯಿಲ್ಲ. ಇಂದಿಗೂ ವೇಶ್ಯೆಯೊಬ್ಬಳನ್ನು ಚಿತ್ರಿಸುವಾಗ ಉದ್ದೇಶಪೂರ್ವಕವಾಗಿಯೇ ಅವಳ ಬ್ರಾ ಪಟ್ಟಿಯನ್ನು ಕಾಣಿಸುವಂತೆ ತೋರಿಸಲಾಗುತ್ತದೆ. ಹೀಗಿರುವಾಗ ಅವಳು ತನ್ನ ಕಂಫರ್ಟ್ಗಾಗಿ ಧರಿಸುವ ಒಳಉಡುಪೊಂದು ತುಸು ಹೊರಗೆ ಇಣುಕಿದಾಗ, ಅವಳು ಮುಜುಗರಕ್ಕೊಳಗಾಗುವಂತೆ ಮಾಡುವಂಥ ಘಟನೆಗಳು ಹೊಸತೇನಲ್ಲ. ಕೆಲ ಹೆಣ್ಣುಮಕ್ಕಳೂ ಬ್ರಾ ಪಟ್ಟಿ ಹೊರಗೆ ಕಂಡಾಕ್ಷಣ ವಿಪರೀತ ಮುಜುಗರ ಅನುಭವಿಸುವುದುಂಟು. ಏನೋ ಆಗಬಾರದ್ದು ಆಯಿತು ಎಂಬಂತೆ ಮಂಕಾಗುವುದೂ ಇದೆ. ತಲೆಮಾರಿನಿಂದ ತಲೆಮಾರಿಗೆ ಯೋಚನೆ ಭಿನ್ನವಾಗಿರುವಂತೆ ಇದೂ ಕಾಲಕ್ರಮೇಣ ಬದಲಾಗಬಹುದು.

ಹೆಣ್ಣನ್ನು ತನ್ನ ಅಧೀನದಲ್ಲಿಟ್ಟುಕೊಳ್ಳ ಬಯಸುವ ಪುರುಷ ಪ್ರಧಾನ ಮನಃಸ್ಥಿತಿಯೇ ಇದಕ್ಕೆ ಕಾರಣ ಎಂದು ಒಂದು ಸಾಲಿನಲ್ಲಿ ಹೇಳಿಬಿಡಹುದು. ಹೆಣ್ಣನ್ನು ಮಾನಸಿಕ ನೆಲೆಗಿಂತಲೂ ದೈಹಿಕ ನೆಲೆಯಲ್ಲೇ ನೋಡುವ ದೃಷ್ಟಿಕೋನವನ್ನು ಪ್ರಜ್ಞಾಪೂರ್ವವಾಗಿಯೇ ಬದಲಿಸಿಕೊಳ್ಳುವ ಅಗತ್ಯವಿದೆ.

ಇಂದಿಗೂ ಹೆಣ್ಣುಮಕ್ಕಳು ತಮ್ಮ ಒಳಉಡುಪುಗಳನ್ನು ರಾಜಾರೋಷವಾಗಿ ಮನೆಯ ಬಾಲ್ಕನಿಯಲ್ಲಿ ಚೆನ್ನಾಗಿ ಬೀಳುವ ಬಿಸಿಲಿನಲ್ಲಿ ಒಣಗಿ ಹಾಕಲೂ ಹಿಂಜರಿಯುವಂಥ ವಾತಾವರಣವಿದೆ.

ಕೆಲ ಹೆಣ್ಣುಮಕ್ಕಳು ಇಂದಿಗೂ ತಮ್ಮ ಒಳಉಡುಪುಗಳನ್ನು ತಮ್ಮ ಮನದೊಳಗಿನ ಬೇಗುದಿಯನ್ನು ಬಚ್ಚಿಟ್ಟುಕೊಂಡಂತೆಯೇ ಬಚ್ಚಿಟ್ಟುಕೊಳ್ಳುವುದುಂಟು. ಮುಟ್ಟಾದ ಬಟ್ಟೆಗಳನ್ನು ಗುಟ್ಟಾಗಿ ಒಗೆದು ಅಷ್ಟೇ ಗುಟ್ಟಾಗಿ ಒಣಗಿಸಿದಂತೆ ಇಂದಿಗೂ ಅನೇಕ ಹೆಣ್ಣುಮಕ್ಕಳು ತಮ್ಮ ಒಳಉಡುಪುಗಳನ್ನು ಕನಿಷ್ಠ ಸರಿಯಾಗಿ ಬಿಚ್ಚಿಯೂ ಒಣಗಿಸಲಾರರು. ಅಲ್ಲೆಲ್ಲೋ ಮೂಲೆಯಲ್ಲೋ, ಸಂದಿಯಲ್ಲೋ ಇಲ್ಲವೇ ಒಂದು ಬಟ್ಟೆಯೊಳಗೇ ಕಾಣದಂತೆ ಅದರ ಮೇಲೆ ಬಿಸಿಲು ಅಷ್ಟಾಗಿ ಬೀಳದಂತೆ ಮುಚ್ಚಟೆಯಾಗಿ ಒಣಗಿಸುವುದುಂಟು.

ಹೀಗಿರುವಾಗ ಇನ್ನು ಒಳ ಉಡುಪುಗಳ ಬಗ್ಗೆ ಚರ್ಚೆಯಿರಲಿ, ಅದರ ಮಾತು ಆಡುವುದೂ ಕಷ್ಟ. ಇದಕ್ಕೆ ಸೆಡ್ಡು ಹೊಡೆಯುವಂತೆ ಇತ್ತೀಚೆಗೆ ಫೇಸ್ಬುಕ್, ಇನ್ಸ್ಟಾಗ್ರಾಂ ರೀಲ್ಗಳಲ್ಲಿ ಹೆಣ್ಣುಮಕ್ಕಳೇ ಎಂಥ ಬ್ರಾ ಆಯ್ಕೆ ಮಾಡಿಕೊಳ್ಳಬೇಕು, ಯಾವ ಬ್ರ್ಯಾಂಡ್ ಚೆನ್ನಾಗಿದೆ, ಯಾವ ಅಳತೆ ಸೂಕ್ತ ಇತ್ಯಾದಿಗಳ ಕುರಿತು ಮಾಹಿತಿ, ಜಾಹೀರಾತು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಂತೂ ಹೌದು.

ಬ್ರಾ ಪಟ್ಟಿ ಹೊರಗೆ ಕಾಣಿಸುವ ಕುರಿತು ಕೆಲವರು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆಧುನಿಕ ಮನೋಭಾವ ಹೆಣ್ಣುಮಕ್ಕಳು ಪಟ್ಟಿ ಕಂಡರೂ ಅದು ಸಹಜವೆಂಬಂತೆ ಇರುತ್ತಾರೆ. ಎಷ್ಟೋ ಉಡುಪುಗಳಿಗೆ ಬ್ರಾ ಪಟ್ಟಿಗಿಂತಲೂ ಸಣ್ಣ ಪಟ್ಟಿಗಳಿರುವುದುಂಟು. ಅಂತೆಯೇ ತುಸು ಹೊಕ್ಕಳು ಕಾಣುವಂತೆ ಧರಿಸುವ ಘಾಗ್ರಾ ಚೋಲಿ, ಲಂಗದಾವಣಿ, ಸ್ಲೀವ್ ಲೆಸ್ ಟಾಪ್, ಬ್ಲೌಸ್ಗಳನ್ನು ಧರಿಸುವವರನ್ನು ಕಣ್ಣರಳಿಸಿ ನೋಡುವವರು ಬ್ರಾ ಪಟ್ಟಿ ಕಂಡಾಕ್ಷಣ ಏನೋ ಆಯಿತೆಂಬಂತೆ ವರ್ತಿಸುವುದೂ ಉಂಟು. ಬ್ರಾ ಪಟ್ಟಿ ಹೊರಗೆ ಕಂಡರೆ ಅವಳ ಅಂತರಂಗವೇ ಬಹಿರಂಗವಾದಂತೆ ಅರ್ಥೈಸುವುದೂ ಇದೆ. ಅವಳನ್ನು ಆ ಪಟ್ಟಿಯಿಂದಾಚೆಗೆ ನೋಡುವ ಯೋಚನೆಗಳನ್ನು ಇನ್ನಾದರೂ ರೂಢಿಸಿಕೊಳ್ಳುವ, ಅವಳೂ ತನ್ನ ಸಹಜೀವಿ ಎಂಬುದನ್ನು ಅರ್ಥೈಸಿಕೊಳ್ಳುವ ಚಿಂತನೆಗಳನ್ನು ಸಹಜವಾಗಿ ರೂಢಿಸಿಕೊಳ್ಳುವ ಅಗತ್ಯವಿದೆ. ಅಷ್ಟಕ್ಕೂ ಬ್ರಾ ಪಟ್ಟಿ ಕಂಡರೆ ಕಾಣಲಿ ಬಿಡಿ! ಅದು ನೋಡುವವರ ಸಮಸ್ಯೆ. ಧರಿಸಿದವರದ್ದಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.