ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನವೆಂಬ ಮರದ ನೆರಳಿನಲ್ಲಿ...

Published 26 ಜನವರಿ 2024, 23:33 IST
Last Updated 26 ಜನವರಿ 2024, 23:33 IST
ಅಕ್ಷರ ಗಾತ್ರ
ಭಾರತ ಸಂವಿಧಾನದ ಅಂತಿಮ ಕರಡನ್ನು ಸರ್ಕಾರದ ಅಂಗೀಕಾರಕ್ಕೆ ಮಂಡಿಸಿದ್ದು 1949ರ ನ. 26ರಂದು. ಅದೇ ದಿನ ಸ್ವೀಕಾರವೂ ಆಯಿತು. ಆದರೆ, ಸಂವಿಧಾನ ಅನುಷ್ಠಾನಕ್ಕೆ ಬಂದಿದ್ದು 1950ರ ಜ. 26. ಹಾಗಾಗಿ, ಈ ದಿನವನ್ನು ಗಣರಾಜ್ಯೋತ್ಸವನ್ನಾಗಿ ಆಚರಿಸಲಾಗುತ್ತದೆ.ಸಂವಿಧಾನದ ಮೂಲ ಆಶಯವಾಗಿರುವ ಸಮಾನತೆಯು, ಸ್ತ್ರೀ ಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದೆ. ಈ ಬಗ್ಗೆ ಸಾಧಕಿಯರ ಅನಿಸಿಕೆಗಳನ್ನು ಮಂಜುಶ್ರೀ ಎಂ. ಕಡಕೋಳ ನಿರೂಪಿಸಿದ್ದಾರೆ.

ಶೋಷಿತರ ಪಾಲಿನ ಬೆಳಕು

ಜಾತಿ, ಧರ್ಮ ಯಾವುದೇ ಇರಲಿ ದಮನಿತರಾಗಿ ಬದುಕುತ್ತಿರುವ ಮಹಿಳೆಯರಿಗೆ ಸಮಾನ ಅವಕಾಶ ನೀಡಿದ್ದು ಸಂವಿಧಾನ. ಸಂವಿಧಾನ ಕಲ್ಪಿಸಿರುವ ಸಮಾನತೆಯ ಅಂಶಗಳು ಮಹಿಳೆಯರ ಪಾಲಿಗೆ ಬೆಳಕಾಗಿದೆ. ಈ ಬೆಳಕಿನ ಆಧಾರದಲ್ಲೇ ತಾವು ಸಬಲರಾಗಿ ಮತ್ತೊಬ್ಬರ ನೋವಿಗೆ ಸ್ಪಂದಿಸಿದ ಅನೇಕ ಮಹಿಳೆಯರು ನಮ್ಮ ನಡುವೆ ಇದ್ದಾರೆ. ನೋವು, ಸವಾಲುಗಳಿಗೆ ಎದೆಗುಂದದೆ ಸಂವಿಧಾನದ ಬಲದಿಂದಲೇ ಎಲ್ಲವನ್ನೂ ಎದುರಿಸಿದ ಗಟ್ಟಿಗಿತ್ತಿಯರು ಇವರು.

ಆತ್ಮಗೌರವದಿಂದ ಬದುಕುವ, ಸರ್ವರೂ ಸಮಾನರು ಎಂದು ಸಾರುವ ಈ ನೆಲದ ಸಂವಿಧಾನ ಸದಾ ನಮ್ಮ ಜೊತೆಗಿರುತ್ತದೆ ಎಂಬ ಭರವಸೆಯನ್ನೂ ಅವರು ನೀಡಿದ್ದಾರೆ. ಸಾಮಾಜಿಕ ಕಟ್ಟುಪಾಡು, ಹೆಣ್ಣು ಎಂಬ ನಿರ್ಬಂಧದಲ್ಲಿ ಕಳೆದು ಹೋಗಿರುವ ಮಹಿಳೆಯರಿಗೆ ಸಂವಿಧಾನ ಬಲ ನೀಡುತ್ತದೆ ಎಂದು ಪ್ರತಿಪಾದಿಸುತ್ತಿರುವವರಲ್ಲಿ ಮಂಜುಳಾ ಮುನವಳ್ಳಿ, ಅಕ್ಷತಾ ಕೆ.ಸಿ, ದು. ಸರಸ್ವತಿ ಹಾಗೂ ಫಾತಿಮಾ ರಲಿಯಾ ಮುಂಚೂಣಿಯಲ್ಲಿದ್ದಾರೆ.

ರಂಗಭೂಮಿ, ಸಾಮಾಜಿಕ ಚಳವಳಿ, ನ್ಯಾಯಾಂಗ, ಸಾಹಿತ್ಯ ಕ್ಷೇತ್ರಗಳಲ್ಲಿ ಸಂವಿಧಾನದ ಆಶಯಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿರುವ ಇವರ ಜೀವನಾನುಭವದ ಮಾತುಗಳು ನೋವಿನಲ್ಲಿ ಮಿಂದೆದ್ದೂ ಸುಮ್ಮನಿರುವ ಮಹಿಳೆಯರಿಗೆ ಪ್ರೇರಣಾ ಶಕ್ತಿ ಆಗಿವೆ.

ಸ್ತ್ರೀ ಸಬಲೀಕರಣ

ಹೆಣ್ಣು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂಬ ಕಾಲದಿಂದಲೂ ಆಕೆ ಶಿಕ್ಷಣ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ಥಾನಮಾನಗಳಿಂದ ವಂಚಿತಳಾಗಿದ್ದಳು. ಆದರೆ, ಇಂದು ಮಹಿಳೆಯೊಬ್ಬರು ದೇಶದ ರಾಷ್ಟ್ರಪತಿಯಾಗಿದ್ದಾರೆ ಎಂದರೆ ಅದಕ್ಕೆ ಸಂವಿಧಾನವೇ ಕಾರಣ. ಧಾರ್ಮಿಕ ನಂಬಿಕೆ ಏನೇ ಆಗಿರಲಿ, ಇಂದು ಮಹಿಳೆ ಪ್ರಗತಿ ಸಾಧಿಸಲು ಹಿಂದಿರುವುದು ಸಂವಿಧಾನವೇ ಹೊರತು ಬೇರಾವುದೂ ಅಲ್ಲ.

ಸುಮಾರು 142 ವರ್ಷಗಳ ಹಿಂದೆ ಕಾರ್ನಾಲಿಯಾ ಸೊರಾಬ್ಜಿ ಎನ್ನುವ ಮಹಿಳೆ ಕಾನೂನು ಪದವಿ ಪೂರೈಸಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ವಕೀಲಿಕೆ ವೃತ್ತಿ ಅರಂಭಿಸಿದಾಗ, ಅಲ್ಲಿನ ಪುರುಷ ಪ್ರಧಾನ ವ್ಯವಸ್ಥೆ ಕಾರ್ಯನಿರ್ವಹಿಸಲು ಬಿಡಲಿಲ್ಲ. ಆದರೆ, ಇಂದು ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಯ ಸ್ಥಾನವನ್ನು ಅಲಂಕರಿಸಿದ್ದಾರೆ. ಇದಕ್ಕೆ ಕಾರಣ ಸಂವಿಧಾನದಲ್ಲಿರುವ ಸಮಾನತೆಯ ಅಂಶ. ನಾನು ಕೂಡಾ ವಕೀಲಳಾಗಿ ಜನಸಾಮಾನ್ಯರ ಪರ ಕೆಲಸ ಮಾಡಲು ಅವಕಾಶ ಕೊಟ್ಟಿದ್ದು ಸಂವಿಧಾನವೇ. ಮಹಿಳೆ ಪುರುಷನಷ್ಟೇ ಸಮರ್ಥಳಾಗಿದ್ದಾಳೆ. ಇಂದು ಎಲ್ಲ ಕ್ಷೇತ್ರಗಳಲ್ಲೂ ಅವಳ ಅಸ್ತಿತ್ವಕ್ಕೆ ಕಾರಣವಾಗುತ್ತಿರುವುದು ಸಂವಿಧಾನವೇ. ನಮ್ಮ ಸಂವಿಧಾನ ನಮ್ಮ ಹೆಮ್ಮೆ.

- ಮಂಜುಳಾ ಮುನವಳ್ಳಿ, ಹೈಕೋರ್ಟ್ ವಕೀಲೆ,ಬೆಂಗಳೂರು

‌ಘನತೆಯ ಬದುಕಿಗೆ ದಾರಿ...

ಇಂದು ನಾವು ಕುಡಿಯುತ್ತಿರುವ ನೀರು, ಉಣ್ಣುತ್ತಿರುವ ಅನ್ನ ಡಾ.ಬಿ.ಆರ್. ಅಂಬೇಡ್ಕರ್ ಅವರಿಂದ ದೊರೆತದ್ದು. ಸಂವಿಧಾನ ಇಲ್ಲದಿದ್ದರೆ ನಾನು ಲಿಂಗತ್ವ ಅಲ್ಪಸಂಖ್ಯಾತಳು ಎಂದು ಹೇಳಿಕೊಳ್ಳಲು ಆಗುತ್ತಿರಲಿಲ್ಲ. ಸಮಾಜವನ್ನು ಪ್ರಶ್ನಿಸಲು ಸಾಧ್ಯವಾಗುತ್ತಿರಲಿಲ್ಲ. ವಿವಿಧ ಧರ್ಮಗಳಿರುವ ದೇಶದಲ್ಲಿ ದಲಿತಳಾಗಿ, ಲಿಂಗತ್ವ ಅಲ್ಪಸಂಖ್ಯಾತಳಾಗಿರುವ ನನ್ನನ್ನು ಸಾಮಾಜಿಕ, ಕೌಟುಂಬಿಕ ಮೌಲ್ಯಗಳು ಹೆಣ್ಣೆಂದು ಒಪ್ಪಿಕೊಂಡಿಲ್ಲ. ಆದರೆ, ಸಂವಿಧಾನದ ಮೌಲ್ಯ ನನ್ನನ್ನು ಒಪ್ಪಿಕೊಂಡಿದೆ. ಎಲ್ಲರೂ ನನ್ನನ್ನು ಆಚೆ ಇಟ್ಟಾಗ ನನ್ನನ್ನು ಒಪ್ಪಿಕೊಂಡಿದ್ದು ಬಾಬಾ ಸಾಹೇಬರು ನೀಡಿದ ಸಂವಿಧಾನ ಮಾತ್ರ.

ಕತ್ತಲೆಯ ಹಿಂದೆ ನನ್ನನ್ನು ಹೆಣ್ಣೆಂದು ಒಪ್ಪಿಕೊಳ್ಳುವವರು ಬೆಳಕಿನಲ್ಲಿ ಒಪ್ಪಿಕೊಳ್ಳಲು ಹಿಂಜರಿಯುತ್ತಾರೆ. ಸಂವಿಧಾನದ ಅರಿವು ಮೂಡಿದಾಗ ಪರ್ಯಾಯ ದಾರಿ, ಘನತೆಯ ಬದುಕು ಯಾವುದು ಎಂಬ ಮನವರಿಕೆಯಾಯಿತು. ತಳಸಮುದಾಯದ ಹೆಣ್ಣುಮಕ್ಕಳು ಹಿಂದೆ ತಮ್ಮ ತಂದೆ, ಗಂಡ ಯಾವ ಕೆಲಸ ಮಾಡುತ್ತಿದ್ದರೋ ಅದೇ ಕೆಲಸ ಮಾಡಿಕೊಂಡಿರಬೇಕೆಂದು ಸಮಾಜ ಹೇಳುತ್ತದೆ. ಆದರೆ, ಚಪ್ಪಲಿ ಹೊಲೆಯುವ ಕುಟುಂಬದ ಹೆಣ್ಣುಮಗಳು ಕೂಡಾ ಸ್ಪೀಕರ್ ಆಗಬಲ್ಲಳು ಎಂಬ ಆತ್ಮವಿಶ್ವಾಸ, ನಂಬಿಕೆ ಮೂಡಿಸಿದ್ದು ಸಂವಿಧಾನ. ಟೋಲ್‌ಗಳಲ್ಲಿ ಭಿಕ್ಷೆ ಬೇಡುತ್ತಿದ್ದ ನಾನೀಗ ಸಾಮಾಜಿಕ ಕಾರ್ಯಕರ್ತೆ ಆಗಿದ್ದೇನೆ. ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಭರವಸೆಯ ತೀರ್ಪುಗಳನ್ನು ನ್ಯಾಯಾಲಯಗಳು ನೀಡಿದ್ದು ಸಂವಿಧಾನದ ಮೌಲ್ಯಗಳ ಆಧಾರ ಮೇಲೆಯೇ. ದೇವರು–ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ದೇವದಾಸಿಯರನ್ನಾಗಿ ಮಾಡಲಾಗಿದೆ. ಆದರೆ, ಸಂವಿಧಾನ ಮಾತ್ರ ಮಹಿಳೆಯರನ್ನು ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿ, ನ್ಯಾಯಮೂರ್ತಿಯನ್ನಾಗಿ ಮಾಡಿದೆ ಎಂಬುದನ್ನು ಸದಾ ನೆನಪಿನಲ್ಲಿಡಬೇಕು.

- ಅಕ್ಷತಾ ಕೆ.ಸಿ.,ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ನಾಯಕಿ

ಸಂವಿಧಾನವೇ ಎಲ್ಲವೂ...

ನನಗೆ ಭಾರತೀಯತೆ ಧರ್ಮವಾದರೆ, ಸಂವಿಧಾನವೇ ಧಾರ್ಮಿಕ ಗ್ರಂಥವಿದ್ದಂತೆ. ಶ್ರೇಣೀಕೃತ ಸಮಾಜದಲ್ಲಿ ಅತ್ಯಂತ ದಮನಕ್ಕೊಳಗಾದ ಜಾತಿಯಲ್ಲಿ ಹುಟ್ಟಿದ ನಾನು ಸಂವಿಧಾನದ ಕಾರಣಕ್ಕಾಗಿಯೇ ಶಿಕ್ಷಣ ಪಡೆದೆ, ಉದ್ಯೋಗ ಮಾಡಿದೆ. ನನ್ನಿಷ್ಟದ ರಂಗಭೂಮಿ, ಆ್ಯಕ್ಟಿವಿಸಂ ಅನ್ನು ಆರಿಸಿಕೊಂಡೆ. ಸರ್ಕಾರವನ್ನು ಪ್ರಶ್ನಿಸುವ ವಾಕ್ ಸ್ವಾತಂತ್ರ್ಯವನ್ನು ಕೂಡಾ ಪಡೆದದ್ದು ಇದೇ ಸಂವಿಧಾನದಿಂದಲೇ. ಎಲ್ಲದಕ್ಕಿಂತ ಮುಖ್ಯವಾಗಿ ಘನತೆಯಿಂದ ಬದುಕಲು ಕಾರಣವಾಗಿದ್ದು, ಶಿಕ್ಷಣ ಮತ್ತು ಉದ್ಯೋಗದ ಸಂದರ್ಭದಲ್ಲಿ ನಾನು ಜಾತೀಯತೆ ಹಾಗೂ ಹೆಣ್ಣು ಅನ್ನುವ ಕಾರಣಕ್ಕಾಗಿ ಎದುರಾದ ಸವಾಲುಗಳನ್ನು ಎದುರಿಸಲು ಬಲ ನೀಡಿದ್ದು ಸಂವಿಧಾನ. ಅದೇ ನಮಗೆ ಶಕ್ತಿ. ಇಂದು ಭಾರತದ ಸಕಲ ದುಡಿಯುವ ಜನರು ಹಾಗೂ ಹೆಣ್ಣುಮಕ್ಕಳು ನಿತ್ಯವೂ ಸಂವಿಧಾನ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳಬೇಕು. ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು, ವಿಚ್ಛೇದನ ಹಕ್ಕು, ಶೈಕ್ಷಣಿಕ, ಔದ್ಯೋಗಿಕ ಹಕ್ಕು ಹೀಗೆ ಎಲ್ಲವೂ ದೊರೆತಿರುವುದು ಸಂವಿಧಾನದ ಆಧಾರದಿಂದಲೇ.

ನಮ್ಮ ಸಂವಿಧಾನವು ಬರೀ ಹಕ್ಕುಗಳ ಬಗ್ಗೆ ಮಾತ್ರವಲ್ಲ ಕರ್ತವ್ಯಗಳ ಬಗ್ಗೆಯೂ ಹೇಳುತ್ತದೆ. ಪ್ರತಿಯೊಬ್ಬರೂ ತಮ್ಮ ಏಳಿಗೆ, ಅಸ್ಮಿತೆಯನ್ನು ಸಾಧಿಸಿಕೊಳ್ಳಬೇಕು ಎಂಬ ಆಶಯವನ್ನೂ ನೀಡಿದೆ. ಬಹುತ್ವದ ಕಾರಣಕ್ಕಾಗಿ ಎಲ್ಲವನ್ನೂ ಸೌಹಾರ್ದವಾಗಿ ನಡೆಸಲು ದೇಶವು ಗಣರಾಜ್ಯವಾಗಿದೆ. ಬಹುತ್ವ ಹಾಗೂ ಪ್ರಜಾಪ್ರಭುತ್ವದ ಆಶಯವುಳ್ಳ ಸಂವಿಧಾನ ಪ್ರತಿ ಜೀವವೂ ಅನನ್ಯ ಎನ್ನುತ್ತದೆ. ಭಿನ್ನ ಧರ್ಮ, ಸಂಸ್ಕೃತಿ, ಜನಾಂಗವಿರುವ ಈ ದೇಶದಲ್ಲಿ ಉಡುವ ಬಟ್ಟೆ, ಉಣ್ಣುವ ಅನ್ನ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಅಷ್ಟೇಕೆ ರಾಮಾಯಣವೂ ಬದಲಾಗುತ್ತದೆ. ಹೀಗೆ ಹಲವು ಧಾರೆಗಳ ಭಾರತ ನಮ್ಮದು. ಇದನ್ನು ಗೌರವಿಸುವ ಈ ನೆಲದ ಕಾನೂನು ಸಂವಿಧಾನ.

- ದು. ಸರಸ್ವತಿ, ಸಾಮಾಜಿಕ ಕಾರ್ಯಕರ್ತೆ

ಬೆಳಕಿನ ದಾರಿ ತೋರಿತು...

ನಮ್ಮ ಸಂವಿಧಾನ ನನಗೆ ನೀಡಿದ ಮೂಲಭೂತ ಹಕ್ಕುಗಳಲ್ಲಿ ಮೊದಲನೆಯದು ಸಮಾನತೆಯ ಹಕ್ಕು. ಆ ಹಕ್ಕನ್ನು ಸಂವಿಧಾನ ನನಗೆ ನೀಡಿರದೇ ಇದ್ದರೆ ನಾನು ನನ್ನ ಸ್ವತಂತ್ರ ವ್ಯಕ್ತಿತ್ವದ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ.

ಇಂಥವರು ಮಾತ್ರ ಓದಬೇಕು, ಹೆಣ್ಣು ಮಕ್ಕಳಿಗೆಲ್ಲಾ ಶಾಲೆ ನಿಷಿದ್ಧ ಎನ್ನುವ ಕಾಲದಲ್ಲಿ ನನ್ನಮ್ಮ ಶಾಲೆಯ ಮೆಟ್ಟಿಲು ಹತ್ತಿದ್ದರು. ಹಾಗೆ ಅವರನ್ನು ಓದಿಸಿದ್ದು ಅಜ್ಜ. ಅವರಿಗೆ ಬೆಂಗಾವಲಾಗಿ ನಿಂತದ್ದು ಅಜ್ಜಿ. ಅವರಿಬ್ಬರಿಗೂ ಬದುಕು ಕಟ್ಟಿಕೊಳ್ಳಲು ಓದುವುದು ಮುಖ್ಯ ಎನ್ನುವ ಬೆಳಕಿನ ದಾರಿ ತೋರಿದ್ದು ಸಂವಿಧಾನ ಮತ್ತು ಬಾಬಾ ಸಾಹೇಬರು.

ಅಮ್ಮ ಓದಿದ್ದರಿಂದ ನನಗೂ ಓದಲು ಸಾಧ್ಯವಾಯಿತು. ಇಲ್ಲಿ ಇದನ್ನು ಬರೆಯಲೂ ಸಾಧ್ಯವಾಯಿತು. ನನ್ನ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವಲ್ಲಿ ಮತ್ತು ಸಮಾಜದ ಮುಂದೆ ನಿಲ್ಲುವಲ್ಲಿ ಓದು ಹಾಗೂ ಬರವಣಿಗೆಯ ಪಾತ್ರ ಅಗಾಧವಾದದ್ದು. ಇವೆರಡನ್ನೂ ನಾನು‌ ಪಡೆದುಕೊಂಡದ್ದು ಶಿಕ್ಷಣದ ಮೂಲಕ. ಆದರೆ, ಜಾತಿ, ಧರ್ಮ, ಹೆಣ್ಣು, ಗಂಡು , ಭಾಷೆ, ಉಡುಗೆ, ತೊಡುಗೆ, ಜನಾಂಗ, ಸಮುದಾಯ, ಆಚಾರ–ವಿಚಾರ, ವೈಯಕ್ತಿಕ ನಂಬಿಕೆಗಳು ಇವೆಲ್ಲವನ್ನೂ ಒಳಗೊಂಡು ಮತ್ತು ಮೀರಿಯೂ ಶಾಲೆಯ ಬಾಗಿಲನ್ನು ಎಲ್ಲರಿಗೆ ತೆರೆದಿಟ್ಟದ್ದು ಸಂವಿಧಾನ.

- ಫಾತಿಮಾ ರಲಿಯಾ, ಕವಯತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT