ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ: ನಿನ್ನ ನೀನು ಅರಿತಲ್ಲಿ..

ಮಹಿಳೆಯರು ತಮ್ಮನ್ನು ಅರಿತರೆ ಬದುಕು ಸಂಭ್ರಮಿಸಬಹುದು
ಪ್ರೀತಿ. ಎಮ್. ಸಂಗಮ್
Published 26 ಏಪ್ರಿಲ್ 2024, 22:23 IST
Last Updated 26 ಏಪ್ರಿಲ್ 2024, 22:23 IST
ಅಕ್ಷರ ಗಾತ್ರ

"ಮಹಿಳೆ" ಎನ್ನುವ ಶಬ್ದದಲ್ಲಿ "ಮಹಿ" ಎಂದರೆ ಭೂಮಿ. ಭೂಮಿಗಿರುವಷ್ಟೇ ಅಪಾರ ತಾಳ್ಮೆ, ಭೂಮಿಗಿರುವಷ್ಟೇ ಕ್ಷಮಾ ಗುಣ, ಭೂಮಿಗಿರುವಷ್ಟೇ ಸ್ವೀಕೃತ ಗುಣ ಹೆಣ್ಣಿನಲ್ಲಿದೆ. ಅದಕ್ಕೆ ಅವಳನ್ನು ಮಹಿಳೆ ಎಂದು ಕರೆದದ್ದು.

ಇಂಗ್ಲಿಷ್‌ನಲ್ಲಿ ಮಹಿಳೆಗೆ  Woman ಎನ್ನುತ್ತಾರೆ.  Wo man ಎಂದರೆ Without Man. One who is capable of surviving without man is called Woman.  ಪುರುಷನ ಸಹಾಯವಿಲ್ಲದೆಯೂ ಬದುಕಬಲ್ಲವಳಿಗೆ ಮಹಿಳೆ ಎನ್ನುತ್ತೇವೆ.

ಮನೆಯ ಹೊಸ್ತಿಲನ್ನೂ ಕೂಡ ದಾಟದ ಕಾಲದಲ್ಲಿ ಮಹಿಳೆಯನ್ನು ಈ ಸಮಾಜ ಅಬಲೆ ಎಂದು ಕರೆದಿದ್ದರೂ ಆಗಲೂ ಅವಳು ದುರ್ಬಲ, ಹಾಗೂ ಅಸಹಾಯಕ ಮಹಿಳೆ ಎಂದು ಅರ್ಥೈಸುವುದು ಖಂಡಿತಾ ತಪ್ಪಾಗಿತ್ತು. ಅವಳಿಗೆ ಅಬಲೆ ಎನ್ನುವದಕ್ಕಿಂತ ಬಲೆ ಎನ್ನುವುದು ಹೆಚ್ಚು ಸೂಕ್ತ. ಏನು ಈ ಬಲೆ? ಆಗಲೂ, ಈಗಲೂ , ಯಾವಾಗಲೂ ಅವಳು ತನ್ನವರಿಗಾಗಿ ತನ್ನ ಸುತ್ತಲೂ ಪ್ರೀತಿಯ ಬಲೆಯನ್ನು , ಅಂತಃಕರಣದ ಬಲೆಯನ್ನು, ತಾಳ್ಮೆಯ ಬಲೆಯನ್ನು, ಜವಾಬ್ದಾರಿಯ ಬಲೆಯನ್ನು ನೇಯ್ದು ಕೊಂಡು ಸ್ವತಃ ತಾನೇ ಆ ಬಲೆಯಲ್ಲಿ ಖುಷಿಯಿಂದ ಇರುವಳು. 

ದುರ್ಬಲ, ಹಾಗೂ ಅಸಹಾಯಕ ಎನ್ನುವ ಅರ್ಥದಲ್ಲಿ ಸಮಾಜದಿಂದ 'ಅಬಲೆ' ಎಂದೆನಿಸಿಕೊಂಡಿದ್ದ ಕಾಲದಲ್ಲೂ ಪತಿಯನ್ನು ಕಳೆದುಕೊಂಡ ಮಹಿಳೆ ತನ್ನ ಜೀವನದಲ್ಲಿ ಮತ್ತೊಬ್ಬ ಪುರುಷನಿಗೆ ಅವಕಾಶ ಕೊಡದೇ ಒಬ್ಬಳೇ ತನ್ನ ಮಕ್ಕಳನ್ನು ಸಾಕಿ ಸಲುಹಿದ್ದಾಳೆ, ಅವರ ಜೀವನವನ್ನು ಸಮರ್ಥವಾಗಿ ರೂಪಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಹಾಗಾಗಿ ಅವಳು ಆಗಲೂ ದುರ್ಬಲ, ಹಾಗೂ ಅಸಹಾಯಕ ಮಹಿಳೆ ಎನ್ನುವ ಅರ್ಥವನ್ನು ಸುಳ್ಳಾಗಿಸಿದ್ದಳು.

ಈಗಂತೂ ದೂರ ದೂರಕ್ಕೆ ನೋಡಿದರೂ, ಆಳ ಆಳಕ್ಕೆ ನೋಡಿದರೂ, ವಿವಿಧ ಕೋನದಿಂದ ನೋಡಿದರೂ ಮಹಿಳೆ ಎಲ್ಲ ರೀತಿಯಿಂದಲೂ, ಎಲ್ಲ ಅರ್ಥದಲ್ಲೂ ,ಎಲ್ಲರ ಅರ್ಥದಲ್ಲೂ ಅವಳು ಸಬಲೆ. ಮಹಿಳೆ ಅದೆಷ್ಟು ಸಬಲೆ ಎಂದು ನಿರೂಪಿಸಲು ಅನೇಕ ಉದಾಹರಣೆಗಳಿವೆ.

ಮಹಿಳೆಯು ತನ್ನ ಕುಟುಂಬ ಸದಸ್ಯರ ಮೇಲೆ ಅಗಾಧವಾದ ಅಕ್ಕರೆ, ಸಧೃಡವಾದ ಸೈರಣೆ, ತಡೆಯಿಲ್ಲದೆ ತ್ಯಾಗವನ್ನು ಮೊಗೆ ಮೊಗೆದು ಧಾರೆಯೆರೆದು ತನ್ನವರ ಮನದ ಪುಟದಲ್ಲಿ ಕೇವಲ ತನ್ನ ನೆನಪುಗಳನ್ನು ಬರೆದು ಹೋಗುವುದಷ್ಟೇ ಅಲ್ಲ ಅವಳು ಮನಸ್ಸು ಮಾಡಿದರೆ ಅಮಿತವಾದದ್ದನ್ನು ಸಾಧಿಸಿ ಇತಿಹಾಸವನ್ನು ಬರೆಯಲು ಕೂಡ ಅಷ್ಟೇ ಸಮರ್ಥವಾಗಿದ್ದಾಳೆ. 

ಅದಕ್ಕೆ ಅಲ್ಲವೇ .., ಅವಳು ಸೌಟು ಹಿಡಿಯುವ ಕೈಯಿಂದ ಅಷ್ಟೇ ಸಮರ್ಥವಾಗಿ ದೇಶದ ಚುಕ್ಕಾಣಿ ಹಿಡಿದು ಸೈ ಎನಿಸಿಕೊಂಡು ಇತಿಹಾಸ ಬರೆದಳು.

ಅವಳು ಸದಾ ಪುರುಷ ಪ್ರಧಾನ ಸಮಾಜದ ಬ್ಯಾಟಿಂಗ್ ಗೆ  ಗುರಿಯಾಗುತ್ತಿದ್ದರೂ ಬ್ಯಾಟನ್ನು ಎತ್ತಿ ಕ್ರಿಕೆಟ್ ಆಟದಲ್ಲೇ ಇತಿಹಾಸ ಬರೆದಳು.

ಅವಳು ಹಕ್ಕಿಯಂತೆ ಹಾರಬೇಕೆಂದುಕೊಂಡಾಗಲೆಲ್ಲ ರೆಕ್ಕೆ ಕತ್ತರಿಸಿದರೂ ಲೋಹದ ಹಕ್ಕಿಯನ್ನೇ ಹಾರಿಸಿ ಇತಿಹಾಸ ಬರೆದಳು. 

 ಪಿಎಸ್ ಹುದ್ದೆಯನ್ನಲಂಕರಿಸಿ ಎಲ್ಲ ಕುಖ್ಯಾತಿಗಳಿಗೆ ಕಾರಣವಾಗಿದ್ದ ಒಂದು ಜೈಲಿನಲ್ಲಿಯೇ ಸುಧಾರಣೆ ತಂದು ಕೈದಿಗಳಿಗೆಲ್ಲ ಸಿಂಹಸ್ವಪ್ನವಾಗಿ ಇತಿಹಾಸ ಬರೆದಳು.


ಅವಳು ತನ್ನ ಪತಿ ದುಡಿದು ತರುತ್ತಿದ್ದ ಒಂದೊಂದು ಪೈಸೆಯನ್ನೂ ಅಡುಗೆ ಮನೆಯ ಡಬ್ಬಿಯಲ್ಲಿ ಕೂಡಿಸಿಟ್ಟು ಸಂಸಾರ ಬಂಡಿಯನ್ನು ಸುಸೂತ್ರವಾಗಿ ನಡೆಸಲು ಸಹಾಯ ಮಾಡಿದರೂ ತನ್ನ ಆಸೆ ಆಕಾಂಕ್ಷೆಗಳನ್ನು ಅದೇ ಡಬ್ಬಿಯಲ್ಲಿ ಭದ್ರವಾಗಿ ಮುಚ್ಚಿಡುತ್ತಿದ್ದವಳು ಆರ್ಥಿಕವಾಗಿ ಸಬಲವಾಗಿ ಮುಂದೆ ಮಹಿಳಾ ಉದ್ಯಮಿಯಾಗಿ ಕೂಡ ಇತಿಹಾಸ ಬರೆದಳು.

ಅವಳು ಬೇಯಿಸಿ ಹಾಕಲು ಮಾತ್ರ ಸೀಮಿತ ಅವಳಿಗೇಕೆ ಬೇಕು ಅಕ್ಷರ ಜ್ಞಾನ ಎಂದು ಅಕ್ಷರ ಕಲಿಕೆಯಿಂದ ವಂಚಿತಳಾದವಳು ಅದೇ ಸೌಟು ಹಿಡಿಯುವ ಕೈಯಿಂದಲೇ ಲೇಖನಿ ಹಿಡಿದು ಅಕ್ಷರ ಸಾಮ್ರಾಜ್ಯದ ಅನಭಿಷಕ್ತ ರಾಣಿಯಾಗಿ ಮೆರೆದು ಇತಿಹಾಸ ಬರೆದಳು.

ಅವಳು ಪರ್ವತದಷ್ಟು ಬಂಧಗಳಿಂದ ಸುತ್ತುವರಿದಿದ್ದರೂ ಆ ಎಲ್ಲ ಬಂಧಗಳಿಂದ ಬಿಡಿಸಿಕೊಂಡು ಪರ್ವತಾರೋಹಿಯಾಗಿ ಇತಿಹಾಸ ಬರೆದಳು.

ಅವಳು ಅಂದು ವ್ಯವಹಾರ ಜ್ಞಾನವನ್ನು ಅರಿಯದ ಅಜ್ಞಾನಿ ಆಗಿದ್ದವಳು ಮುಂದೆ ವಿಜ್ಞಾನಿಯಾಗಿ ಇತಿಹಾಸ ಬರೆದಳು. She Rocks wherever she walks...

ಅವಕಾಶ ಸಿಕ್ಕರೆ ಆಕಾಶಕ್ಕೇ ನೆಗೆಯಬಲ್ಲಳು. ತನ್ನ ತಾನು ಅರಿಯಬೇಕು. ತನ್ನ ಸಾಮರ್ಥ್ಯದ ಸಂಪೂರ್ಣ ಉಪಯೋಗ ಪಡೆಯಬೇಕು.

****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT