ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ದಿನ: ಒಳಗೊಳ್ಳುವಿಕೆಗಾಗಿ ಪ್ರೇರೇಪಿಸಿ– ಸಹಚರ್ಯದಿಂದ ಸಂಪ್ರೀತ ಬದುಕು..

ಮಹಿಳಾ ದಿನದ ಪ್ರಯುಕ್ತ ಲೇಖನ
Published 1 ಮಾರ್ಚ್ 2024, 16:11 IST
Last Updated 1 ಮಾರ್ಚ್ 2024, 16:11 IST
ಅಕ್ಷರ ಗಾತ್ರ

#InspireInclusion ಈ ವರ್ಷದ ಮಹಿಳಾ ದಿನದ ಆಶಯವಾಗಿದೆ. ಇದನ್ನು ಬದುಕಿದವರು ತಮ್ಮ ಜೀವನದ ಅಮೃತ ಸಿಂಚನವನ್ನು ಇಲ್ಲಿ ಚರ್ಚಿಸಿದ್ದಾರೆ. ಒಳಗೊಳ್ಳುವಿಕೆಯನ್ನು ಪ್ರೇರೇಪಿಸುವ ಈ ನುಡಿಗಳು ಸಹಚರ್ಯ, ಸಾಂಗತ್ಯದಲ್ಲಿರಬೇಕಾದ ಗುಣಗಳನ್ನೂ ಹೇಳಿದ್ದಾರೆ. ಮಹಿಳಾದಿನ ಸಫಲವಾಗಲು ಪುರುಷರ ಹೆಂಗರುಳೂ ಅಷ್ಟೇ ಮುಖ್ಯ.

–––––––

ಮಾರ್ಚ್‌ ಎಂದರೆ ಹೆಣ್ಮಕ್ಕಳ ಮಾಸ..

ಮತ್ತೊಂದು ಮಹಿಳಾ ದಿನಾಚರಣೆ! ಮತ್ತೆಮತ್ತೆ ಅವವೇ ಘೋಷಣೆಗಳು, ನಮ್ಮ ಹಕ್ಕು, ನಮ್ಮ ಸ್ವಾತಂತ್ರ್ಯ, ಸ್ವಾವಲಂಬನೆ... ಅವೇ ಪದಪುಂಜಗಳು... ಅದ್ಧೂರಿ ಕಾರ್ಯಕ್ರಮಗಳು, ಭಾಷಣಗಳು, ಗೌರವ–ಸನ್ಮಾನಗಳು ಕೊಡುಗೆಗಳು... ಇತ್ಯಾದಿ ಇತ್ಯಾದಿ...

ಆದರೆ ಈ ಸಲದ ಥೀಮ್, 'InspireInclusion' ಇದೆಲ್ಲವನ್ನು ಮೀರಿದ ಸಂದೇಶವನ್ನು ಹೊಂದಿದೆ–ಅಂದರೆ ಪ್ರತಿ ಹಂತದಲ್ಲಿ ತಮ್ಮನ್ನು ತಾವು ಒಳ್ಳಗೊಳ್ಳುವುದು ಮತ್ತು ತಮ್ಮವರನ್ನು ಒಡಗೂಡಿಸಿಕೊಳ್ಳುವುದು... ಅವಳ ಬಾಳ ಪಯಣದಲ್ಲಿ, ಸಾಧನೆಯಲ್ಲಿ, ಸವಾಲುಗಳಲ್ಲಿ ಅವನೂ ಒಳಗೊಂಡಾಗ ಮಾತ್ರ ಆ ಬಾಳು ಪರಿಪೂರ್ಣ.

ಹೌದು, ಹೆಣ್ಮಕ್ಕಳ ಬದುಕು ಅರ್ಥಪೂರ್ಣಗೊಳ್ಳಬೇಕಾದರೆ ಮೊದಲು ಅದು ಸಹ್ಯಗೊಳ್ಳಬೇಕು. ಸಹ್ಯಗೊಳ್ಳುವುದು ಎಂದರೆ ಚಂದಗೊಳ್ಳುವುದು ಅಂತಲೇ ಅರ್ಥ. ಅದು ಚಂದಗೊಳ್ಳಬೇಕು ಅಂದರೆ ಅವನೂ ಜೊತೆ ನಿಲ್ಲಬೇಕು, ಒಳಗೊಳ್ಳಬೇಕು. ಇದೇ ಸಂದೇಶವನ್ನು ಈ ಸಲದ ಘೋಷವಾಕ್ಯ ಧ್ವನಿಸುತ್ತದೆ. #InspireInclusion ಅಂದರೆ #ಒಳಗೊಳ್ಳುವಿಕೆಗಾಗಿಪ್ರೇರೇಪಿಸಿ.

ಸಮಾನತೆಗಾಗಿ–ಸಾಧನೆಗಾಗಿ, ಅಸ್ತಿತ್ವಕ್ಕಾಗಿ–ಅಸ್ಮಿತೆಗಾಗಿ, ಪ್ರೀತಿಗಾಗಿ–ಸಾಂಗತ್ಯಕ್ಕಾಗಿ ಅವಳ ಆವೇಗ ಸಹಜ ಮತ್ತು ನಿರಂತರ. ಆದರೆ ಅವಳ ಈ ಎದೆಗುದಿ ತನ್ನದೂ ಎಂದು ಆತ ಗ್ರಹಿಸಿದಾಗ, ಜೊತೆಗೆ ನಿಂತಾಗ, ಕೈಜೋಡಿಸಿದಾಗ ಆ ಕಥೆಯ ಸೊಗಸೇ ಬೇರೆ. ಇದು ಯಾವುದೇ ಒಬ್ಬ ಮಹಿಳೆಯ ಅಥವಾ ಒಂದು ಮಹಿಳಾ ಸಂಘಟನೆಯ, ಒಂದು ಮಹಿಳಾ ಗುಂಪಿನ ಕಥನವಾಗಬಾರದು. ಇಬ್ಬರೂ, ಪ್ರತಿಯೊಬ್ಬರೂ ಅದನ್ನು ತಮ್ಮದೇ ಜಾವಾಬ್ದಾರಿ ಎಂದು ಗ್ರಹಿಸಿದಾಗ ಮಾತ್ರ ಈ ಬದಲಾವಣೆ ಸಾಧ್ಯ.

ಪ್ರತಿಯೊಂದು ಹಂತದಲ್ಲಿ, ಪ್ರತಿ ಹೆಜ್ಜೆಯಲ್ಲಿ, ಪ್ರತಿ ತಿರುವಿನಲ್ಲಿ ಅವಳ ಒಳಗೊಳ್ಳುವಿಕೆ ಮತ್ತು ಅವನ ಸಹಚರ್ಯ ಎರಡೂ ಮೇಳೈಸಬೇಕು. ಅವಳನ್ನು ಅರ್ಥೈಸಿಕೊಳ್ಳುವ, ಗೌರವಿಸುವ ಮತ್ತು ಪ್ರೇರೇಪಿಸುವ ಅಗತ್ಯವನ್ನು ಅವನೂ ಅರ್ಥಮಾಡಿಕೊಳ್ಳಬೇಕು. ಹೀಗೆ ಬದುಕನ್ನು ಸಂಪ್ರೀತಗೊಳಿಸಿಕೊಳ್ಳುವ ಪ್ರಯತ್ನದಲ್ಲಿ ತಮ್ಮ ಕುಟುಂಬವನ್ನು, ತಮ್ಮ ಸುತ್ತಲಿನ ಜನರನ್ನು, ಪುರುಷ ಸಮಾಜವನ್ನು ಒಳಗೊಳ್ಳುವಂತೆ ಪ್ರೇರೇಪಿಸಿದ ಸಾಧಕಿಯರ ಒಡನುಡಿತಗಳ ಪಿಸುಮಾತುಗಳಿಗೆ ವೇದಿಕೆಯಾಗುವುದು ಈ ಸಂಚಿಕೆಯ ಒಳತುಡಿತ. ಸಮಾಜದ ಮುಖ್ಯವಾನಿಗೆ ಬಂದು ತಲುಪಿದ, ಮುಖ್ಯ ಹುದ್ದೆಗಳನ್ನು ಅಲಂಕರಿಸಿರುವ, ಆಡಳಿತದ ಚುಕ್ಕಾಣಿ ಹಿಡಿದಿರುವ ದಿಟ್ಟ ಮಹಿಳೆಯರ ಕಥನಗಳು, ಸ್ಫೂರ್ತಿದಾಯಕ ನುಡಿಗಳು ಇಲ್ಲಿವೆ.

ಗಂಡ್ಮಕ್ಕಳು ಸಂವೇದನಾಶೀಲರಾಗಬೇಕು

#InspireInclusion ಎನ್ನುವುದು ಮನೆಯಿಂದಲೇ ಆರಂಭವಾಗಬೇಕು. ಇಬ್ಬರೂ ಒಂದು ಎನ್ನುವ ಧೋರಣೆ ಮನೆಯಿಂದಲೇ ಬೆಳೆದುಬರಬೇಕು. ನಮ್ಮ ಮನೆಯಲ್ಲಿ ನಮ್ಮ ತಂದೆ ಇಂತಹ ವೈಚಾರಿಕ ದೃಷ್ಟಿಕೋನವನ್ನು ಹೊಂದಿರುವುದರಿಂದಲೇ ನಾನು ಇಲ್ಲಿಯವರೆಗೂ ಬರಲು ಸಾಧ್ಯವಾಯಿತು.

ಅವನ ಬೆಂಬಲವಿಲ್ಲದೇ ಅವಳ ಸಾಧನೆ ಸಾಧ್ಯವೇ ಇಲ್ಲ ಅಂತಲ್ಲ. ಅವಳ ಕನಸು–ಅವಳ ಮಹಾತ್ವಾಕಾಂಕ್ಷೆ ಅವಳೊಬ್ಬಳದೇ, ಅದರಲ್ಲಿ ತನ್ನದೇನೂ ಪಾತ್ರವಿಲ್ಲ ಎಂದು ಗಂಡು ಪರಿಭಾವಿಸಿದಾಗ ಹೆಣ್ಣುಮಕ್ಕಳ ದಾರಿ ತುಸು ನಿಧಾನಗೊಳ್ಳುತ್ತದೆ, ಶ್ರಮಯೂ ಹೆಚ್ಚು. ಆದರೆ, ಅವಳ ಕನಸು ತನ್ನದೂ ಎಂದು ಆತ ಗ್ರಹಿಸಿದಾಗ ಅವಳ ದಾರಿ ಸುಲಲಿತವಾಗುತ್ತದೆ, ಸುಂದರವೂ ಆಗುತ್ತದೆ. ನಾನು ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು ಎಂದು ಕನಸು ಕಂಡಾಗ ನನ್ನ ತಂದೆ ಆ ಕನಸನ್ನು ತಮ್ಮದೆಂದುಕೊಂಡರು ಮತ್ತು ಜೊತೆಗೇ ನಿಂತರು. ಮಗಳು ತಕ್ಕ ಮಟ್ಟಿಗೆ ಓದಿದ್ದಾಳೆ, ಕೈಯಲ್ಲಿ ಕೆಲಸವೂ ಇದೆ, ಆದರೂ ಯಾಕೆ ಇನ್ನೂ ಮದುವೆ ಮಾಡುತ್ತಿಲ್ಲ? ಎನ್ನುವ ನೂರಾರು ಅನುಮಾನಗಳನ್ನು, ಸವಾಲುಗಳನ್ನು, ಪ್ರಶ್ನೆಗಳನ್ನು ನಮ್ಮ ತಂದೆ ಬಹಳ ಗಟ್ಟಿಯಾಗಿ ನಿಂತು ನಿಭಾಯಿಸಿದರು. ಮುಂದೆ ನನ್ನ ಪತಿಯಿಂದಲೂ ಇಂಥದ್ದೇ ಪ್ರೋತ್ಸಾಹ–ಬೆಂಬಲ ದೊರೆಯಿತು. ಹೀಗಾಗಿ, ನಾನು ಧೃತಿಗೆಡುವ, ಅಧೈರ್ಯಗೊಳ್ಳುವ ಸಂದರ್ಭವೇ ಬರಲಿಲ್ಲ. ‘ನಾನಿದ್ದೇನೆ ನಿನ್ನ ಜೊತೆ’ ಎನ್ನುವ ಅಭಯ ನಮ್ಮವರಿಂದ ದೊರೆತಾಗ ಹೆಣ್ಣುಮಕ್ಕಳ ಆತ್ಮಬಲ ಹೆಚ್ಚುತ್ತದೆ. ಹೊರಗಿನಿಂದ ಎದುರಾಗುವ ಪ್ರತಿರೋಧಗಳನ್ನು ಆಕೆ ಹೆಚ್ಚು ದಿಟ್ಟವಾಗಿ, ಸಮರ್ಥವಾಗಿ ಎದುರುಗೊಳ್ಳಲು ಸಿದ್ಧಳಾಗುತ್ತಾಳೆ.

ಇನ್ನು ಸಮಾಜದ ಮನಸ್ಥಿತಿ, ನಿಲುವು, ವಾತಾವರಣದ ಬಗ್ಗೆ ಹೇಳಬೇಕೆಂದರೆ ಪುರುಷರು ಮನೆಯ ಆಚೆಗೆ ಇನ್ನೂ ಹೆಚ್ಚು ಸಂವೇದನಾಶೀಲರಾಗಿ ವರ್ತಿಸಬೇಕಾದ ಅಗತ್ಯವಿದೆ ಎಂದು ನನಗನಿಸುತ್ತದೆ. ಜೊತೆಯಲ್ಲಿ ದುಡಿಯುವ ಹೆಣ್ಣುಮಕ್ಕಳನ್ನು ತಮ್ಮ ಮನೆಯ ಹೆಣ್ಣುಮಕ್ಕಳೇ ಎಂದು ನೋಡುವ ಪ್ರಜ್ಞೆ ಅವರಲ್ಲಿ ಬೆಳೆಯಬೇಕು. ಆಡಳಿತ ಕ್ಷೇತ್ರದಲ್ಲಿ, ಮುಖ್ಯ ಹುದ್ದೆಯಲ್ಲಿದ್ದರೂ ನಾನು ಅಲ್ಲಲ್ಲಿ, ಆಗಾಗ ಪುರುಷರ ವಿರೋಧ, ಅಹಂಕಾರದ ವರ್ತನೆಗಳನ್ನು ಗಮನಿಸಿದ್ದಿದೆ. ಅಲ್ಲಲ್ಲೇ ಅವುಗಳಿಗೆ ತಕ್ಕ ಪ್ರತ್ಯುತ್ತರಗಳನ್ನೂ ರವಾನಿಸಿದ್ದಿದೆ.

ಮಹಿಳೆಯರ ಬದುಕಿನಲ್ಲಿ ಪುರುಷರ ಒಳಗೊಳ್ಳುವಿಕೆ ಪ್ರೀತಿ–ವಿಶ್ವಾಸದಿಂದ ಒಡಮೂಡಬೇಕೇ ಹೊರತು, ಸಂಘರ್ಷದಿಂದ–ಹೋರಾಟದಿಂದ ಸಾಧ್ಯವಿಲ್ಲ.

​–ಕೆ.ಎಂ. ಜಾನಕಿ, ಬಾಗಲಕೋಟೆ ಜಿಲ್ಲಾಧಿಕಾರಿ.

​–ಕೆ.ಎಂ. ಜಾನಕಿ, ಬಾಗಲಕೋಟೆ ಜಿಲ್ಲಾಧಿಕಾರಿ.

​–ಕೆ.ಎಂ. ಜಾನಕಿ, ಬಾಗಲಕೋಟೆ ಜಿಲ್ಲಾಧಿಕಾರಿ.

ಪ್ರೇರಣೆಯ ಆಸರೆ ಬೇಕು

#InspireInclusion ನಾವು, ನಮ್ಮ ದೈನಂದಿನ ಬದುಕಿನ ಪ್ರತಿ ಹೆಜ್ಜೆಯಲ್ಲಿಯೂ ಅಳವಡಿಸಿಕೊಳ್ಳಬೇಕಾದ ಸಂದೇಶವಿದು.

ಕಳೆದ ನಾಲ್ಕು ದಶಕಗಳಿಂದ ನಾನು ಉದ್ಯಮಶೀಲ ಮಹಿಳೆಯರೊಂದಿಗೆ ಕೆಲಸ ಮಾಡುತ್ತ, ಒಡನಾಡುತ್ತ ಬಂದಿದ್ದೇನೆ. ನಾನು ಗ್ರಹಿಸಿದಂತೆ, ನಾನು ಕಂಡಂತೆ, ನಾನು ಅನುಭವಿಸಿದಂತೆ ಹೇಳುವುದಾದರೆ ಇಂದಿನ ಮಹಿಳೆಗೆ ಪ್ರೇರಣೆ ಹಾಗೂ ಪ್ರೋತ್ಸಾಹದ ಅಗತ್ಯ ಹೆಚ್ಚಿದೆ. ಅದು ಒಳಗಿನಿಂದಲೂ ಬರಬೇಕು, ಜೊತೆಗಿರುವವರಿಂದಲೂ ಬರಬೇಕು. ಜೊತೆಗಿರುವವರು ಎಂದರೆ ಪತಿ, ತಂದೆ, ಸಹೋದರ, ಮಗ... ಇವರಷ್ಟೇ ಅಂತಲ್ಲ. ಜೊತೆಗೆ ಕೆಲಸ ಮಾಡುವ ಸಹೋದ್ಯೋಗಿಗಳಿಂದಲೂ, ಸ್ನೇಹಿತರಿಂದಲೂ, ಬಂಧುಗಳಿಂದಲೂ ಪ್ರೋತ್ಸಾಹದ ಒಂದು ಚಪ್ಪಾಳೆ, ಬೆನ್ನು ತಟ್ಟುವಿಕೆ ಅವಳ ಜೀವನದಲ್ಲಿ ಬಹಳ ದೊಡ್ಡ ವ್ಯತ್ಯಾಸವನ್ನು ತರಬಲ್ಲದು.

80ರ ದಶಕದಲ್ಲಿ ಉದ್ಯಮಶೀಲರಾಗಲು ಮುಂದೆ ಬರುವ ಹೆಣ್ಣುಮಕ್ಕಳಿಗೆ ಇದ್ದ ಸವಾಲುಗಳಿಗೂ, ಇಂದಿನ ಮಹಿಳೆಯ ಮುಂದಿರುವ ಸವಾಲುಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಈ ಮಹಿಳೆಗೆ ಮಾಹಿತಿ–ತಂತ್ರಜ್ಞಾನ, ಆರ್ಥಿಕ, ಸಮಾಜಿಕ ಸವಾಲುಗಳಿಗಿಂತ ಸ್ವಪ್ರೇರಣೆ ಹಾಗೂ ತನ್ನವರ ಪ್ರೋತ್ಸಾಹದ ಅಗತ್ಯ ಹೆಚ್ಚಿದೆ.

ಇನ್ನು ಅವಳ ಮುಂದಿನ ಸವಾಲುಗಳ ಬಗ್ಗೆ ಹೇಳುವುದಾದರೆ, ಕಾಲ ಎಷ್ಟೇ ಬದಲಾದರೂ ಮಹಿಳೆ ತನ್ನ ಸಾಮರ್ಥ್ಯವನ್ನು, ತನ್ನ ಪ್ರತಿಭೆಯನ್ನು ತಾನು ನಿರಂತರವಾಗಿ, ಸಾಕ್ಷಿ ಸಮೇತ ಪ್ರಮಾಣೀಕರಿಸಬೇಕಾದ ಪರಿಸ್ಥಿದೆ ಇಂದಿಗೂ ಇದೆ. ಇದು ಬದಲಾಗಬೇಕು. ಅವಳ ಸಾಮರ್ಥ್ಯವನ್ನು–ಪ್ರತಿಭೆಯನ್ನು ನಂಬುವ–ವಿಶ್ವಾಸ ಮಾಡುವ ವಾತಾವರಣ ನಿರ್ಮಾಣವಾಗಬೇಕು. ಇದೇ ಅವರಿಗೆ ನೀಡಬಹುದಾದ ಗೌರವ.

ಮಹಿಳೆಯರ ಸಾಧನೆಯನ್ನು ಗುರುತಿಸುವ, ಪ್ರೇರೇಪಿಸುವ, ಪುಷ್ಟಿ ನೀಡುವ ಕೆಲಸವನ್ನು ಎಫ್‌ಕೆಸಿಸಿಐ ನಿರಂತರವಾಗಿ ಮಾಡುತ್ತ ಬಂದಿದೆ. ಪ್ರತಿಯೊಂದು ಸಂಘ–ಸಂಸ್ಥೆಗಳು, ಸರ್ಕಾರಗಳು ತಮ್ಮ ತಮ್ಮ ನಿಟ್ಟಿನಲ್ಲಿ ಮಹಿಳೆಯರ ಪ್ರಯತ್ನ ಹಾಗೂ ಶ್ರಮವನ್ನು ಗುರುತಿಸುವ, ಪ್ರೋತ್ಸಾಹಿಸುವ, ಅಭಿನಂದಿಸುವ ಹಾಗೂ ಗೌರವಿಸುವ ಮಹತ್ವವನ್ನು ಅರಿಯುವುದೇ ನಿಜವಾದ ಮಹಿಳಾದಿನ.

–ಉಮಾ ರೆಡ್ಡಿ, ಉಪಾಧ್ಯಕ್ಷೆ, ಎಫ್‌ಕೆಸಿಸಿಐ

–ಉಮಾ ರೆಡ್ಡಿ, ಉಪಾಧ್ಯಕ್ಷೆ, ಎಫ್‌ಕೆಸಿಸಿಐ

–ಉಮಾ ರೆಡ್ಡಿ, ಉಪಾಧ್ಯಕ್ಷೆ, ಎಫ್‌ಕೆಸಿಸಿಐ

ಅವನೂ ಜೊತೆಗಿದ್ದಾಗಲೇ ಪರಿಪೂರ್ಣ

#InspireInclusion ಎಂದರೆ ಅವನು ಜೊತೆಗಿರುವುದರ ಮಹತ್ವವನ್ನು ಸಾರುವ ಸಂದೇಶ ಎಂದೇ ವ್ಯಾಖ್ಯಾನಿಸಲು ಬಯಸುತ್ತೇನೆ.

ನಾವು ಏನೇ ಮಾತಾಡಿದರೂ, ಎಷ್ಟೇ ಸ್ವತಂತ್ರವಾಗಿದ್ದರೂ ಅವನೂ ಜೊತೆಗಿದ್ದಾಗಲೇ ಬದುಕು ಪರಿಪೂರ್ಣ. ಒಂದು ಕಚೇರಿಯೇ ಆಗಿರಬಹುದು ಅಥವಾ ಕುಟುಂಬ... ಇಬ್ಬರೂ ಜೊತೆಯಾಗಿ–ಒಂದುಗೂಡಿ ಹೆಜ್ಜೆ ಹಾಕಿದರೆ ಮಾತ್ರ ಆ ದಾರಿ ಸುಗಮ, ಸುಲಲಿತ. ನಾವು ಒಬ್ಬರೇ ನಡೆದರೆ ಹೆಚ್ಚು ದೂರ ನಡೆಯಲಾಗದು; ಜೊತೆಗೂಡಿ ನಡೆದರೆ ಎಷ್ಟು ದೂರ ಬೇಕಾದರೂ ಕ್ರಮಿಸಬಹುದು ಹಾಗೂ ಆ ನಡಿಗೆ ಅಷ್ಟೇ ಚೇತೋಹಾರಿಯೂ ಆಗಿರುತ್ತದೆ.

ನಾನಿರೋದು ಗ್ಲಾಮರ್ ಕ್ಷೇತ್ರವಾಗಿರುವುದರಿಂದ ಹೆಣ್ಣು ಮಕ್ಕಳಿಗಾಗಿ, ಹೆಣ್ಮಕ್ಕಳ ಜೊತೆಗೇ ನನ್ನ ಕೆಲಸ. ಆ ಪ್ರತಿಯೊಬ್ಬರಿಗೂ ಅವರ ಸಂಗಾತಿ ಹಾಗೂ ಕುಟುಂಬದ ನೆರವು ಬೇಕೇ ಆಗುತ್ತದೆ. ಅನೇಕ ಕಡೆ ಇದು ಸಿಗುವುದು ದುರ್ಬಲ. ಅಂಥವರಿಗೆ ಆತ್ಮಬಲ–ಧೈರ್ಯ–ಮಾರ್ಗದರ್ಶನ ನೀಡಿ ಅವರ ಕುಟುಂಬವೂ–ಸಂಗಾತಿಯೂ ಒಳಗೊಳ್ಳುವಂತೆ ಪ್ರೇರೇಪಿಸಲು ಪ್ರಯತ್ನ ಮಾಡುತ್ತಲೇ ಇರುತ್ತೇನೆ.

ಕುಟುಂಬದ ನೆರವಿಲ್ಲದೇ ಬರುವವರನ್ನು ಕೂರಿಸಿ ಬುದ್ಧಿ ಹೇಳಿ, ಅವರ ಮನವೊಲಿಸಿ, ಅವರ ಪ್ರೀತಿ–ವಿಶ್ವಾಸ ಗಳಿಸಿ, ಅನಂತರ ಬನ್ನಿ ಎಂದು ಹೇಳುತ್ತೇನೆ. ಯಾಕೆಂದರೆ ಮನೆಯವರ ವಿರೋಧದ ನಡುವೆ ಬರುವ ಅನೇಕರು ಅರ್ಧದಾರಿಯಲ್ಲೇ ಮರಳಿ ಹೋಗಿದ್ದನ್ನೇ ನಾನು ಹೆಚ್ಚು ಕಂಡಿದ್ದು.

ಮಹಿಳೆಯರ ಬದುಕಿನಲ್ಲಿ ಪುರುಷರ ಉಪಸ್ಥಿತಿ ಎಂತಹ ಬದಲಾವಣೆ ತರಬಲ್ಲದು, ಜೊತೆಗೆ ಅವನಿದ್ದಾನೆ ಎನ್ನುವ ಧೈರ್ಯ ಅವಳಲ್ಲಿ ಎಂತಹ ಆತ್ಮವಿಶ್ವಾಸ ತುಂಬಬಹುದು ಎನ್ನುವುದನ್ನು ಕಂಡಿದ್ದೇನೆ. ಈ ಕ್ಷೇತ್ರದಲ್ಲಿರುವ ಹೆಣ್ಣು ಮಕ್ಕಳ ಬೆನ್ನ ಹಿಂದೆ ಒಂದು ಶಕ್ತಿಯಾಗಿ, ಸ್ಪೂರ್ತಿಯಾಗಿ ನಿಲ್ಲುವ ಪುರುಷರನ್ನು ಅಭಿನಂದಿಸಲು, ಗೌರವಿಸಲು ‘Best Husband’ ಟೈಟಲ್‌ ನೀಡುತ್ತ ಬಂದಿದ್ದೇನೆ. ಅವಳ ಸಾಧನೆಯಲ್ಲಿ ಅವಳ ಪರಿಶ್ರಮ–ಪ್ರತಿಭೆ ಎಷ್ಟು ಮುಖ್ಯವೊ, ನಿನ್ನ ಬೆಂಬಲವೂ ಅಷ್ಟೇ ಮುಖ್ಯ ಎನ್ನುವುದನ್ನು ತಿಳಿಸುವುದು ಇದರ ಉದ್ದೇಶ.

ಅಡೆತಡೆಗಳು ಸವಾಲುಗಳು ಹೆಣ್ಣುಮಕ್ಕಳಿಗೆ ಮನೆಯಿಂದಲೇ ಆರಂಭವಾಗುವುದು. ಅದರಲ್ಲೂ ನಮ್ಮದು ಗ್ಲಾಮರ್ ಕ್ಷೇತ್ರವಾಗಿರುವುದರಿಂದ ಇಲ್ಲಿ ಮಹಿಳೆ ಕಾಲಿಡುವುದೇ ಒಂದು ಸವಾಲು. ಮನೆಯವರಿಂದ, ಬಂಧುಗಳಿಂದ, ಸಮಾಜದಿಂದ ಹಲವಾರು ಪ್ರಶ್ನೆಗಳು, ನಿಬಂಧನೆಗಳು, ಶರತ್ತುಗಳು, ಅನುಮಾನಗಳು, ಅಪನಂಬಿಕೆಗಳು ಎದುರಾಗುತ್ತವೆ. ಆದರೆ ನಿಜವಾದ ಪ್ರತಿಭೆ ಹಾಗೂ ಮನೋಬಲ ಇದ್ದಲ್ಲಿ ಇದ್ಯಾವುದು ಅಡ್ಡಿಯಾಗಲಾರದು. ‘ನಿನ್ನಿಂದ ಏನೂ ಆಗುವುದಿಲ್ಲ’ ಎನ್ನುವವರು ನೂರು ಜನ ಇರಲಿ, ಒಂದಿಬ್ಬರಾದರೂ, ‘ನೀನು ಏನಾದರೂ ಮಾಡಬಲ್ಲೆ’ ಎನ್ನುವವರು ಬೆನ್ನ ಹಿಂದೆ ಇದ್ದರೆ ಸಾಕು. ನಾವು ನಮ್ಮ ಗಮ್ಯವನ್ನು ತಲುಪಬಹುದು.

–ಪ್ರತಿಭಾ ಸಂಶಿಮಠ

ಮಿಸೆಸ್ ಇಂಡಿಯಾ ಕರ್ನಾಟಕ ಸ್ಪರ್ಧೆಯ ಆಯೋಜಕಿ.

–––––––––––––

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT