ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪನಗರದ ‘ವಿಮೆನ್ ಪವರ್‌’: ಸ್ವಚ್ಛ ಪರಿಸರಕ್ಕೆ ಟೊಂಕಕಟ್ಟಿ ನಿಂತ ಮಹಿಳಾ ಶಕ್ತಿ

Last Updated 25 ಜೂನ್ 2022, 1:52 IST
ಅಕ್ಷರ ಗಾತ್ರ

ಇದೊಂದು ಡಿಜಿಟಲ್ ಯುಗದ ವರ್ಚುಯಲ್ ಜಗತ್ತಿನ ಮೂಲಕ ಒಂದು ಬಡಾವಣೆಯ ಪರಿಸರ ಸ್ವಚ್ಛತೆ ಸಾಧಿಸಿದ ಮಹಿಳೆಯರ ಯಶೋಗಾಥೆ.

ನೇರವಾಗಿ ವಿಷಯಕ್ಕೆ ಬರುವುದಾದರೆ, ಈಗಿಲ್ಲಿ ಹೇಳಹೊರಟಿರುವುದು, ಮಹಿಳೆಯರೆಲ್ಲಾ ಅನುಕರಿಸಬಹುದಾದ ಒಂದು ವಾಟ್ಸಆ್ಯಪ್ ಗುಂಪಿನ ಬಗ್ಗೆ. ಅದು ಹತ್ತು ಮಹಿಳೆಯರ ನಿರ್ವಹಣೆಯಲ್ಲಿನ ಇನ್ನೂರೈವತ್ತು ಗೃಹಿಣಿಯರ ಗುಂಪಿನ ಕಾರ್ಯ ಸಾಧನೆ. ಕೊರೊನಾ ಸೋಂಕು ಹರಡುವಿಕೆ ಉತ್ತುಂಗದಲ್ಲಿದ್ದಾಗ ಹುಟ್ಟಿಕೊಂಡ ಆ ಗುಂಪಿನ ಹೆಸರು ‘ವಿಮೆನ್ ಪವರ್- ರೂಪನಗರ’!

ಮೈಸೂರಿನ ರೂಪನಗರ ಬಡಾವಣೆ ಇದರ ಕಾರ್ಯಸ್ಥಾನ. ಈ ಬಡಾವಣೆ ರೂಪುಗೊಂಡಿರುವುದು, ಸಹಕಾರಿ ಕ್ಷೇತ್ರದಲ್ಲಿ ‘ಎ ಗ್ರೇಡ್’ ಸೊಸೈಟಿ ಎಂದು ಪರಿಗಣಿಸಲಾದ ‘ದೀಪಾ ಗೃಹನಿರ್ಮಾಣ ಸಹಕಾರಿ ಸಂಘ’ದ ವತಿಯಿಂದ.

ಮನುಷ್ಯರ ಮಧ್ಯೆ ಅಂತರವಿಡಲೇಬೇಕಾದ, ಆದರೆ ಪರಸ್ಪರ ಮನುಷ್ಯ ಸಂಬಂಧ ಅಗತ್ಯವಾಗಿದ್ದ ಸಂದಿಗ್ಧವನ್ನು ಒಟ್ಟೊಟ್ಟಿಗೇ ಎದುರಿಸಬೇಕಾದ ಸ್ಥಿತಿ ಉಂಟಾಗಿದ್ದು ಕೊರೊನಾ ಸೋಂಕಿನಿಂದ. ಅಂಥ ಪಿಡುಗನ್ನು ನಿಭಾಯಿಸಲು ಸಾಧ್ಯವಾಗಿದ್ದು ವಾಟ್ಸ್‌ಆ್ಯಪ್‌, ಗೂಗಲ್, ಫೋನ್ ಮುಂತಾದ ಆನ್‌ಲೈನ್ ಸೌಕರ್ಯದಿಂದ. ಆಗ ರೂಪುಗೊಂಡಿದ್ದೇ ರೂಪನಗರದ ವಿಮೆನ್ ಪವರ್!

‘ಪವರ್‌’ಗೆ ಶಕ್ತಿ ತುಂಬಿದವರು

ಈ ಗುಂಪಿಗೆ ಚಾಲನೆ ಕೊಟ್ಟು ಒಟ್ಟಾದವರು ವಿವಿಧ ಹಿನ್ನೆಲೆಯ ವಿದ್ಯಾವಂತ ಮಹಿಳೆಯರು. ರೂಪನಗರಕ್ಕೆ ಸೇರಿದ ಕೆನಡಾ ನಿವಾಸಿ ರೂಪಾ ತೂಬಗೆರೆ ಅವರೊಡನೆ ಜೊತೆಯಾದವರು ಮಲ್ಲಮ್ಮ, ಪೂರ್ಣಿಮಾ, ನೀಲಮ್ಮ, ಮಾಯಾ, ವಿದ್ಯಾಪೇಶ್ವ, ಉಮಾ, ಲಕ್ಷ್ಮಿ, ವಿದ್ಯಾ ಸತೀಶ್ ಹಾಗೂ ಪ್ರಿಯಾ ಎಂಬ ಸಮಾಜಪರ ಮಹಿಳೆಯರು. ಇವರಿಗೆ ಒತ್ತಾಸೆಯಾಗಿ ನಿಂತಿದ್ದು 250 ಮಹಿಳೆಯರ ಗುಂಪು!

ಕೋವಿಡ್‌ ಅಲೆಗಳೆದ್ದ ಕಾಲದಲ್ಲಿ ಕುಟುಂಬ ನಿರ್ವಹಣೆಯಲ್ಲಿ ಎದುರಿಸಿದ ಆರೋಗ್ಯ, ಶಿಕ್ಷಣ, ಶುಶ್ರೂಷೆ, ಆಹಾರ, ಖಿನ್ನತೆಯ ನಿಭಾಯಿಸುವಿಕೆ, ಉದ್ಯೋಗ, ಲಸಿಕೆ, ಆಸ್ಪತ್ರೆ, ಸಾರಿಗೆ ಎಂಬ ಹತ್ತುಹಲವು ಕ್ಷಣಕ್ಷಣದ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಇಂಥ ಒಂದು ಗ್ರೂಪ್‌ನ ಅಗತ್ಯ ಪ್ರತಿಯೊಬ್ಬರಿಗೂ ಬೇಕಾಯ್ತು. ಅದಾದ ನಂತರ, ತಮ್ಮ ಬಡಾವಣೆಯ ಸ್ವಚ್ಛತೆ ತಮ್ಮದೇ ಎಂಬ ನಾಗರಿಕ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ಳಬೇಕೆಂಬ ಮನಸ್ಸು ಎಲ್ಲರದ್ದೂ ಆಯಿತು.

ಆಗ ಕಾರ್ಯಪ್ರವೃತ್ತರಾಗಲು, ಈ ಮಹಿಳೆಯರು ತಮ್ಮಲ್ಲೇ ಕೆಲವು ನಿಬಂಧನೆಗಳನ್ನು ಹಾಕಿಕೊಂಡರು. ವಾಟ್ಸ್‌ಆ್ಯಪ್ ಗುಂಪಿನಲ್ಲಿ ಬಡಾವಣೆಯ ಕ್ಷೇಮಾಭಿವೃದ್ಧಿಗೆ ಸಂಬಂಧಿಸಿದ ಮತ್ತು ಪರಿಸರದ ಅರಿವು ಮೂಡಿಸುವ ವಿಷಯಕ್ಕಷ್ಟೆ ಅವಕಾಶ ಎನ್ನುವುದೇ ಆ ನಿಬಂಧನೆ. ಇನ್ನು ಸಾಂಸ್ಕೃತಿಕ ವಾತಾವರಣ ವೃದ್ಧಿಸಲು ಬೇಕಾದ ಸಂಗೀತ, ನೃತ್ಯ, ಸಾಹಿತ್ಯ, ಪಾಕವಿದ್ಯೆ, ಕ್ರೀಡೆ ಮುಂತಾದ ವಿಷಯದಲ್ಲಿ ಪ್ರತಿಭೆ, ಕೌಶಲವಿದ್ದವರ ಪ್ರೋತ್ಸಾಹಕ್ಕೆ ಬೇಕಾದ ಮೆಸೇಜ್‌ಗಳನ್ನು ಬುಧವಾರಕ್ಕಷ್ಟೇ ನಿಗದಿಪಡಿಸಿ, ಅಂದು ಸಂಜೆಗೇ ಅದನ್ನು ಮುಗಿಸುವುದು ಎಂದೂ ತೀರ್ಮಾನವಾಯಿತು.

220 ಎಕರೆ ಪ್ರದೇಶದಲ್ಲಿರುವ ಸಾವಿರಮನೆಗಳ ಈ ಬಡಾವಣೆಯನ್ನು ರೂಪಿಸಿ ಬೆಳೆಸಿದ್ದು, ಮಾಜಿ ವಾಯುಪಡೆ ಯೋಧ ದಿವಂಗತ ಎಸ್ ಸುವರ್ಣ. ಇವರ ಧ್ಯೇಯೋದ್ದೇಶಗಳನ್ನು ಕಟಿಬದ್ಧರಾಗಿ ಮುಂದುವರೆಸುತ್ತಿರುವವರು ಅವರದ್ದೇ ತಂಡದವರಾದ ಸದಾಶಿವ ಪೂಜಾರಿ, ಬಾಲಕೃಷ್ಣ, ಡಾ. ದೀಪಕ್ ಸುವರ್ಣ, ರಾಮಪ್ಪ, ಸುಂದರ್ ಹಾಗೂ ಪುಷ್ಪಾ ಕರ್ಕೆರಾ. ಹಾಗಾಗಿಯೇ ರೂಪನಗರದಲ್ಲಿ ನಾಗರಿಕ ಮೂಲಸೌಲಭ್ಯಗಳೆಲ್ಲವೂ ಸೊಸೈಟಿ ವತಿಯಿಂದ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿವೆ. ಇಂಥ ಬಡಾವಣೆಯಲ್ಲಿ ಕೊರೊನಾ ಸೋಂಕು ಪ್ರತಿ ಮನೆಯನ್ನೂ ದ್ವೀಪಗಳನ್ನಾಗಿಸಿದಾಗ ‘ವಿಮೆನ್-ಪವರ್ ರೂಪನಗರ’ ವಾಟ್ಸಆ್ಯಪ್ ಗುಂಪಿನಲ್ಲಿರುವವರು ಡಿಜಿಟಲ್‌ ಆಗಿ ಪರಸ್ಪರ ದೀಪಗಳಾದರು.

ಮಹಿಳಾ ಶಕ್ತಿಯ ಕಾರ್ಯವೈಖರಿ

ಪ್ರತಿಮನೆಯಿಂದ ತ್ಯಾಜ್ಯ ಸಂಗ್ರಹಿಸಿ ಮರುಬಳಕೆಗೆ ಸಾಗಣೆ
ಪ್ರತಿಮನೆಯಿಂದ ತ್ಯಾಜ್ಯ ಸಂಗ್ರಹಿಸಿ ಮರುಬಳಕೆಗೆ ಸಾಗಣೆ

ಇಡೀ ಬಡಾವಣೆಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಬಿಸಾಡುವಂತಿಲ್ಲ. ಪ್ರತಿ ಮನೆಯಲ್ಲೂ ಒಣಕಸ, ಪ್ಲಾಸ್ಟಿಕ್ ಮತ್ತು ಹಸಿ ತ್ಯಾಜ್ಯ ಪ್ರತ್ಯೇಕಿಸಲೇಬೇಕು. ಹಸಿತ್ಯಾಜ್ಯವನ್ನು ಅವರವರ ಕೈತೋಟಕ್ಕೆ ಗೊಬ್ಬರವಾಗಿ ಪರಿವರ್ತಿಸಿ ಬಳಸಬೇಕು. ಇತರ ಕಸ ಮತ್ತು ಪ್ಲಾಸ್ಟಿಕ್ ಅನ್ನು ಮಹಾನಗರ ಪಾಲಿಕೆ ಮತ್ತು ಮೂಡಾ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರಿಂದ ಮಾನ್ಯತೆ ಪಡೆದ ‘ಜಾಗೃತ್ ಸಂಸ್ಥೆ’ ಮತ್ತು ‘ನಮ್ಮ ಮೈಸೂರು’ ಸಂಸ್ಥೆಯವರ ಸಹಾಯ, ಸಹಕಾರದಿಂದ ಪ್ರತಿವಾರ ಮತ್ತು ತಿಂಗಳಿಗೊಮ್ಮೆ ಮರುಬಳಕೆಗಾಗಿ ಹೊರಸಾಗಿಸಲಾಗುತ್ತಿದೆ‌. ಸಂಸ್ಥೆಯ ಸ್ವಯಂಸೇವಕರು, ಅದರ ರೂವಾರಿಗಳಾದ ದಶರಥ್, ದಿನೇಶ್ ಮತ್ತು ದರ್ಶನ್ ಅವರ ಕಾಳಜಿಯುಕ್ತ ಸಹಕಾರಕ್ಕೆ ಈ ಗುಂಪು ಋಣಿಯಾಗಿದೆ. ಇದಕ್ಕೆ ಬೇಕಾದ ಆರ್ಥಿಕ ಸಹಾಯವನ್ನು ಈ ಸಂಸ್ಥೆ ಗಳಲ್ಲದೆ, ಹೆಸರು ಹೇಳಿಕೊಳ್ಳಲಿಚ್ಛಿಸದ ಬಡಾವಣೆಯ ಮಹಿಳೆಯ ಸಹಾಯ ದೊಡ್ಡ ಮಟ್ಟದಲ್ಲಿ ಸಿಕ್ಕಿದೆ. ಅದಲ್ಲದೆ ಅಗತ್ಯ ಬಿದ್ದರೆ ಈ ಗುಂಪಿನ ಮಹಿಳೆಯರೇ ಸೇರಿ ವೆಚ್ಚ ಭರಿಸಲೂ ತಯಾರಿದ್ದಾರೆ. ಇಂಥ ವಿಷಯಗಳಲ್ಲಿ ಬಡಾವಣೆಯ ಸುಪರ್ದಿವಹಿಸಿರುವ ದೀಪಾ ಸೊಸೈಟಿಯ ಬೆಂಬಲ ಮತ್ತು ಪ್ರೋತ್ಸಾಹ ನಿರಂತರವಾಗಿದೆ.

‘ಈ ಮಹಿಳಾ ಕ್ಷೇಮಾಭಿವೃದ್ಧಿ ಗುಂಪು ತಲೆಯೆತ್ತುವ ಮುನ್ನ, ಬಡಾವಣೆಯ ಒಳಚರಂಡಿಯು ಸ್ಯಾನಿಟರಿ ನ್ಯಾಪ್ಕಿನ್‌ಗಳಿಂದಾಗಿ ಪದೇಪದೇ ಕಟ್ಟಿಕೊಂಡು ಸಮಸ್ಯೆಗಳಾಗುತ್ತಿತ್ತು. ಈಗ ಇವರ ಅರಿವು ಮೂಡಿಸುವ ಶ್ರಮದಿಂದಾಗಿ ನಮಗಿದ್ದ ಬಹು ಮುಖ್ಯ ಸಮಸ್ಯೆಗೆ ಪರಿಹಾರ ಸಿಕ್ಕಿದೆ’ ಎನ್ನುತ್ತಾರೆ ದೀಪಾ ಕೊಆಪರೇಟಿವ್ ಸೊಸೈಟಿ ಸಮಿತಿಯವರು.

‘ಈ ಮಹಿಳಾ ಗುಂಪಿನವರ ನಿರಂತರ ಜನಪರ ಕಾರ್ಯಕ್ರಮಗಳಿಂದಾಗಿ ಇಡೀ ಬಡಾವಣೆಯಲ್ಲಿ ಒಗ್ಗಟ್ಟಿನ, ಕೌಟುಂಬಿಕ ವಾತಾವರಣವಿದೆ. ‘ಅವರ ರಸ್ತೆ ಅವರ ಜವಾಬ್ದಾರಿ’ ಎಂಬ ಪರಿಕಲ್ಪನೆಯಲ್ಲಿ ಆಯಾ ರಸ್ತೆಯ ಮರ ಗಿಡಗಳನ್ನು ಪೋಷಿಸುವ ಹೊಣೆ ಅವರಿಗೇ ಬಂದಿದೆ. ಎಲ್ಲಕ್ಕಿಂತ ಮೈಸೂರಿನ ಬೇರೆ ಕಡೆಗಳಲ್ಲಿ ಕಂಡುಬರುವ ತ್ಯಾಜ್ಯರಾಶಿ, ದುರ್ನಾತ ನಮ್ಮಲ್ಲಿಲ್ಲದಂತೆ ಮಹಿಳೆಯರು ಮುತುವರ್ಜಿ ವಹಿಸುತ್ತಿರುವುದು ಹೆಮ್ಮೆಯ ಸಂಗತಿ’ ಎನ್ನುತ್ತಾರೆ ಸೊಸೈಟಿಯವರು.

ಇಂಥ ಜನಪರ ಕಾರ್ಯಗಳಲ್ಲಿ ತೊಡಗಿರುವ ವಿಮೆನ್ ಪವರ್ ಸದಸ್ಯರು, ‘ನಮ್ಮ ಕನಸುಗಳು ಬಹಳಷ್ಟಿವೆ. ಈಗಷ್ಟೇ ಅಡಿಯಿಟ್ಟಿದ್ದೇವೆ. ಎಲ್ಲರ ಬೆಂಬಲದಿಂದ ನಮ್ಮ ಬಡಾವಣೆಯನ್ನು ಮಾದರಿಯಾಗಿಸಿ, ನಮ್ಮ ರೂಪನಗರ ವಿಮೆನ್ ಪವರ್ ಗುಂಪಿನ ಕೆಲಸ ಮತ್ತಷ್ಟು ಮಹಿಳೆಯರಿಗೆ ಸ್ಫೂರ್ತಿ ತರುವಷ್ಟು ಮಾದರಿಯಾಗಿ, ಆ ಮೂಲಕ ಇತರ ಬಡಾವಣೆಗಳೂ ಸ್ವಚ್ಛವಾಗಲಿ ಎಂಬುದು ನಮ್ಮ ಆಶಯ’ ಎನ್ನುತ್ತಾರೆ!

ವೈವಿಧ್ಯಮಯ ಕಾರ್ಯಕ್ರಮ

‘ಅವರ ರಸ್ತೆ ಅವರ ಜವಾಬ್ದಾರಿ’ ಹಸಿರು ಉಳಿಸಿ ಬೆಳೆಸುವತ್ತ
‘ಅವರ ರಸ್ತೆ ಅವರ ಜವಾಬ್ದಾರಿ’ ಹಸಿರು ಉಳಿಸಿ ಬೆಳೆಸುವತ್ತ

ವಿಮೆನ್ ಪವರ್- ರೂಪನಗರ ಗುಂಪಿನಿಂದ ಆಗಾಗ ಆರೋಗ್ಯ, ಆಯುರ್ವೇದ, ಯೋಗ, ಕೌಟುಂಬಿಕ ಅಗತ್ಯಗಳ ವಿಷಯದಲ್ಲಿ ತಜ್ಞರಿಂದ ಅರಿವಿನ ಉಪನ್ಯಾಸಗಳಾಗುತ್ತಲೇ ಇವೆ. ಎಲ್ಲಕ್ಕಿಂತ ಇಲ್ಲಿನ ಮಹಿಳೆಯರು ‘ಪ್ಲಾಸ್ಟಿಕ್ ರಾಕ್ಷಸ’ ಎಂಬ ಬೀದಿನಾಟಕ ರಚಿಸಿ, ತಮ್ಮ ಶಾಲೆಯ ಗ್ರಾಮೀಣ ಮಕ್ಕಳಿಗೆ ತರಬೇತಿ ನೀಡಿ ನೆರೆಯ ಗ್ರಾಮವಾದ ದಾಸನಕೊಪ್ಪಲಿನಲ್ಲಿ ಪ್ರದರ್ಶಿಸಿ, ಜನರಲ್ಲಿ ಪರಿಸರ ಪ್ರಜ್ಞೆ ಮೂಡಿಸಿದ್ದಾರೆ. ಇನ್ನು ಪ್ರತಿಭಾ ಪುರಸ್ಕಾರ, ರಾಜ್ಯೋತ್ಸವ, ಮಹಿಳಾ ದಿನಾಚರಣೆ ಮುಂತಾದ ಕಾರ್ಯಕ್ರಮಗಳಲ್ಲದೆ, ಶಾಲಾ ಆವರಣದಲ್ಲಿನ ತಮ್ಮ ಕೌಶಲ, ಪ್ರತಿಭೆ, ಪಾಕಪ್ರಾವೀಣ್ಯ, ಕ್ರೀಡೆ, ಮನರಂಜನೆ ಮೊದಲಾದ್ದನ್ನೆಲ್ಲಾ ಆಯೋಜಿಸಿ ಮೇಳವನ್ನೂ ನಡೆಸಲಾಗಿದೆ.

ಚಿತ್ರಗಳು: ವಿಮೆನ್ ಪವರ್ ರೂಪನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT