ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿ ಹಬ್ಬಕ್ಕೆ ಸಿಹಿ ಸಿಹಿ ಖಾದ್ಯ

ನಮ್ಮೂರ ಊಟ
Last Updated 20 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಸಿಹಿಕಹಿಯ ಹಬ್ಬ ಯುಗಾದಿ. ಬೇವಿನ ಕಹಿಯೊಂದಿಗೆ ಸರಿದೂಗಿಸಲು ಅದೆಷ್ಟು ಸಿಹಿಯ ಸವಿಯಾದರೂ ಸಾಲದು. ಈ ನಿಟ್ಟಿನಲ್ಲಿ ಹಲವಾರು ಸಿಹಿಯಡುಗೆ ವಿಧಾನದ ವಿವರವನ್ನು ಸವಿತಾ ಬೆಂಗಳೂರು ನೀಡಿದ್ದಾರೆ.

ಬೇವು -ಬೆಲ್ಲದ ಶರಬತ್ತು
ಸಾಮಗ್ರಿ: ಅರ್ಧ ಕಪ್ ಬೇವಿನ ಕುಡಿ ಹಾಗೂ ಹೂವು, 2 ಕಪ್ ಪುಟಾಣಿ (ಹುರಿಗಡಲೆ), ಒಂದು ಕಪ್ ಬೆಲ್ಲ, ನಾಲ್ಕು ಚಮಚ ತುರಿದ ಕೊಬ್ಬರಿ, ಒಂದು ಕಪ್ ಗಸಗಸೆ ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ,  ಅರ್ಧ ಕಪ್ ಹುಣಸೆ ಹಣ್ಣಿನ ನೀರು, ಅರ್ಧ ಕಪ್ ತುರಿದ ಮಾವಿನ ಕಾಯಿ, ಕಾಲು ಕಪ್ ಕಲ್ಲು ಸಕ್ಕರೆ, ಒಂದು ಚಮಚ ಏಲಕ್ಕಿ ಪುಡಿ, ಕಾಲು ಕಪ್ ಊತುತ್ತಿ, ಚಿಟಿಕೆಯಷ್ಟು ಉಪ್ಪು, ನಾಲ್ಕು ಚಮಚ ನಿಂಬೆ ರಸ.

ವಿಧಾನ: ದ್ರಾಕ್ಷಿ, ಊತುತ್ತಿ ಗೋಡಂಬಿ, ಬಾದಾಮಿ, ಪಿಸ್ತಾ, ಗಸೆಗಸೆ, ಕಲ್ಲು ಸಕ್ಕರೆ, ಕೊಬ್ಬರಿ ಎಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ತರಿತರಿಯಾಗಿ ಪುಡಿಮಾಡಿಕೊಳ್ಳಿ (ನೀರು ಸೇರಿಸಬಾರದು). ಪ್ಯಾನ್‌ನಲ್ಲಿ ನೀರು ಹಾಕಿ ಅದಕ್ಕೆ ಪುಡಿ ಮಾಡಿದ ಪುಟಾಣಿ ಹಿಟ್ಟು, ಹುಣಸೆ ಹಣ್ಣಿನ ರಸ, ತುರಿದ ಮಾವಿನ ಕಾಯಿ, ಬೆಲ್ಲದ ಪುಡಿ, ಕುಟ್ಟಿ ಪುಡಿ ಮಾಡಿದ ಒಣ ಹಣ್ಣುಗಳು, ಏಲಕ್ಕಿ ಪುಡಿ, ನಿಂಬೆ ರಸ, ಉಪ್ಪು ಹಾಕಿ ಕೈಯಿಂದ ಚೆನ್ನಾಗಿ ಕಲೆಸಿ. ಕೊನೆಗೆ ಬೇವಿನ ಕುಡಿ ಹಾಗೂ ಹೂ ಅನ್ನು ಚಿಕ್ಕ ಪೀಸ್ ಮಾಡಿಕೊಂಡು ಇದರಲ್ಲಿ ಹಾಕಿ ಮಿಕ್ಸ್ ಮಾಡಿದರೆ ಯುಗಾದಿಯ ವಿಶೇಷ ಬೇವು- ಬೆಲ್ಲ ಶರಬತ್ತು ಸವಿಯಲು ಸಿದ್ಧ.

ಸಿಹಿ ಶಂಕರ ಪೋಳೆ

ಸಾಮಗ್ರಿ: ರವೆ ನಾಲ್ಕು ಲೋಟ, ಅಕ್ಕಿ ಹಿಟ್ಟು ಒಂದೂವರೆ ಲೋಟ, ಮೈದಾಹಿಟ್ಟು ಒಂದೂವರೆ ಲೋಟ, ರುಚಿಗೆ ಸಕ್ಕರೆ, ರುಚಿಗೆ ಉಪ್ಪು, ತುಪ್ಪ ಒಂದೂವರೆ ಲೋಟ ತುಪ್ಪ, ಕರಿಯಲು ಸ್ವಲ್ಪ ಎಣ್ಣೆ

ವಿಧಾನ: ಮೊದಲು ಸಕ್ಕರೆಯನ್ನು ನೀರಿನಲ್ಲಿ ಕರಗಿಸಿ ಒಂದೆಡೆ ಇಟ್ಟುಕೊಳ್ಳಿ. ಮೇಲೆ ತಿಳಿಸಿರುವ ಪ್ರಮಾಣದ ರವೆ, ಅಕ್ಕಿ ಹಿಟ್ಟು, ಮೈದಾ, ಉಪ್ಪನ್ನು ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ತುಪ್ಪ ಹಾಗೂ ಕರಗಿಸಿದ ಸಕ್ಕರೆ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಚಪಾತಿಗೆ ಮಾಡುವ ರೀತಿಯಲ್ಲಿ ಉಂಡೆ ಕಟ್ಟಿ ಲಟ್ಟಿಸಿ. ಬೇಕಾದ ಆಕಾರಕ್ಕೆ ಲಟ್ಟಿಸಿದ ಹಿಟ್ಟನ್ನು ಕತ್ತರಿಸಿಕೊಳ್ಳಿ. ಎಣ್ಣೆಯಲ್ಲಿ ಕರಿಯಿರಿ. ಇಷ್ಟು ಮಾಡಿದರೆ ಸಿಹಿಯಾಗಿರುವ ಶಂಕರ ಪೋಳೆ ತಿನ್ನಲು ಸಿದ್ಧ.

ಸೋರೆಕಾಯಿ ಸಿಹಿ ಪಾಯಸ

ಸಾಮಗ್ರಿ: ಸೋರೆಕಾಯಿ  ಒಂದು, ಸಕ್ಕರೆ ಐದಾರು ಚಮಚ, ಬೆಲ್ಲ ಮುಕ್ಕಾಲು ಕಪ್, ತೆಂಗಿನ ತುರಿ ಒಂದು ಕಪ್, ಏಲಕ್ಕಿ 4, ರುಚಿಗೆ ಉಪ್ಪು, ಅಕ್ಕಿ ಅರ್ಧ ಲೋಟ, ನೀರು 3 ಲೋಟ.

ವಿಧಾನ: ಮೊದಲು ಅಕ್ಕಿಯನ್ನು ನೀರಿನಲ್ಲಿ 10ರಿಂದ 15 ನಿಮಿಷ ನೆನೆಸಿ ಇಡಬೇಕು. ಸೋರೆಕಾಯಿಯ ಸಿಪ್ಪೆ ಮತ್ತು ಬೀಜ ತೆಗೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಇದಕ್ಕೆ ನೀರು, ಬೆಲ್ಲ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿ. ನೆನೆಸಿಟ್ಟ ಅಕ್ಕಿಯನ್ನು ತೊಳೆದು ಮಿಕ್ಸಿಯಲ್ಲಿ ರುಬ್ಬಿ. ಇದನ್ನು ಬೇಯಿಸಿದ ಸೋರೆಕಾಯಿಗೆ ಹಾಕಿ 15 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ಆಗಾಗ್ಗೆ ಕೈಯಾಡಿಸುತ್ತಿರಿ. ಇದಕ್ಕೆ ತೆಂಗಿನತುರಿ ಮತ್ತು ಏಲಕ್ಕಿಯನ್ನು ನುಣ್ಣಗೆ ರುಬ್ಬಿಕೊಂಡು ಕುದಿಯುತ್ತಿರುವ ಪಾಯಸಕ್ಕೆ ಹಾಕಿದರೆ ಘಮಘಮಿಸುವ ಸಿಹಿ ಪಾಯಸ ಸಿದ್ಧ.

ಬಾದಾಮಿ ಹಲ್ವ

ಸಾಮಗ್ರಿ: 1ಕಪ್ ಬಾದಾಮಿ, 1ಕಪ್ ಸಕ್ಕರೆ, ಅರ್ಧ ಬಟ್ಟಲು ಖೋವಾ, 1 ಕಪ್ ತುಪ್ಪ, 3 ಚಮಚ ಬೆಣ್ಣೆ, 1 ಚಮಚ ಏಲಕ್ಕಿ ಪುಡಿ, ಚಿಟಿಕೆ ಕೇಸರಿದಳ, ಚಿಟಿಕೆ ಕೇಸರಿ ಬಣ್ಣ, ಕೇಸರಿದಳ-2 ಚಿಟಿಕೆ.

ವಿಧಾನ: ಬಾದಾಮಿಯನ್ನು ಹಿಂದಿನ ರಾತ್ರಿ ತಣ್ಣೀರಿನಲ್ಲಿ ನೆನೆಸಿಡಿ. ನೆನೆಸಿಡಲು ಮರೆತು ಹೋದರೆ ಒಂದು ಪಾತ್ರೆಯಲ್ಲಿ ನೀರನ್ನು ಕಾಯಿಸಿ ಬಿಸಿ ಮಾಡಿ. ಈ ನೀರಿನಲ್ಲಿ ಬಾದಾಮಿಯನ್ನು ಮುಕ್ಕಾಲು ಗಂಟೆಯಿಂದ ಒಂದು ಗಂಟೆಯವರೆಗೆ ನೆನೆಯಲು ಬಿಡಿ. ಇನ್ನೊಂದು ಕಡೆ ಹಾಲನ್ನು ಬಿಸಿ ಮಾಡಿ ಅದರಲ್ಲಿ ಕೇಸರಿಯನ್ನು ನೆನೆಸಿ. ಸಕ್ಕರೆಯನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ನೆನೆಯಲು ಬಿಡಿ. ಬಾದಾಮಿಯ ಸಿಪ್ಪೆ ತೆಗೆದು ಅದಕ್ಕೆ ಸ್ವಲ್ಪ ಹಾಲು ಬೆರೆಸಿ ಮಿಕ್ಸಿ ಮಾಡಿ. ಪ್ಯಾನ್‌ನಲ್ಲಿ ತುಪ್ಪ ಬಿಸಿ ಮಾಡಿ ಅದರಲ್ಲಿ ಬಾದಾಮಿಯ ಈ ಮಿಶ್ರಣ ಹಾಕಿ ತಳಹತ್ತದಂತೆ ಕೈಯಾಡಿಸುತ್ತಾ ಇರಿ. ಅದಕ್ಕೆ ಖೋವಾ ಸೇರಿಸಿ ಪುನಃ ಕೈಯಾಡಿಸಿ. ಪುನಃ ತುಪ್ಪ ಹಾಕಿ ಒಂದು ನಿಮಿಷ ಕಲಕಿ. ಮಿಕ್ಕ ಹಾಲನ್ನು ಅದಕ್ಕೆ ಬೆರೆಸಿ ಕಲಕುತ್ತಿರಿ. ಈ ಮಿಶ್ರಣಕ್ಕೆ ಸಕ್ಕರೆ ಪುಡಿಯನ್ನು ಸ್ವಲ್ಪ ಸ್ವಲ್ಪವಾಗಿ ಹಾಕುತ್ತಾ, ಕೈಯಾಡಿಸಿ. ಸಕ್ಕರೆ ಕರಗಿದ ಮೇಲೆ, ಸ್ವಲ್ಪ ಸ್ವಲ್ಪವೇ ತುಪ್ಪು ಹಾಕುತ್ತಿರಿ. ಒಂದು ಮಾತು ನೆನಪಿಡಿ. ಎಷ್ಟು ಕಲಕುತ್ತಾ ಇರುತ್ತೀರೋ ಅಷ್ಟು ಒಳ್ಳೆಯದು. ಕೈಬಿಟ್ಟರೆ ತಳ ಹಿಡಿಯುವುದು ಗ್ಯಾರೆಂಟಿ. ತುಪ್ಪವೆಲ್ಲಾ ಹೀರಿಕೊಡು, ಅಂಚು ಬಿಡಲು ಶುರುವಾಗುತ್ತದೆ. ಘಮ್ ಎಂದು ಸುವಾಸನೆ ಬಂದಾಗ ಕೇಸರಿ ಬಣ್ಣ, ಏಲಕ್ಕಿ ಪುಡಿ, ಕೆಸರಿದಳ ಸೇರಿಸಿ ಕಲುಕಿ.

ಬಾಳೆಹಣ್ಣಿನ ಶ್ಯಾವಿಗೆ ಒತ್ತು

ಸಾಮಗ್ರಿ: ಎರಡೂವರೆ ಕಪ್ ಅಕ್ಕಿ, 14 ಬಾಳೆಹಣ್ಣು , ಅರ್ಧ ಕಪ್ ಬೆಲ್ಲ, ಉಪ್ಪು ರುಚಿಗೆ, ಏಲಕ್ಕಿ 6-7.

ವಿಧಾನ: ಅಕ್ಕಿಯನ್ನು ನಾಲ್ಕೈದು ಗ೦ಟೆ  ನೆನೆಸಿಡಿ. ನಂತರ ತೊಳೆದು ಮಿಕ್ಸಿ ಮಾಡಿ. ಸ್ವಲ್ಪ ಸುತ್ತು ಮಿಕ್ಸಿ ತಿರುಗಿಸಿದ ನಂತರ ಅದಕ್ಕೆ ಬಾಳೆಹಣ್ಣು ಹಾಗೂ ಏಲಕ್ಕಿ ಸೇರಿಸಿ ಮತ್ತೆ ಮಿಕ್ಸಿ ಮಾಡಿ. ಅದಕ್ಕೆ  ಬೆಲ್ಲ ಮತ್ತು ಉಪ್ಪು ಸೇರಿಸಿ ಒಂದು ಸುತ್ತು ತಿರುಗಿಸಿ. ಈ ಮಿಶ್ರಣವನ್ನು ಇಡ್ಲಿ ಮಾಡುವ ಪಾತ್ರೆಯಲ್ಲಿ ಅರ್ಧ ಗಂಟೆ ಒಲೆ ಮೇಲೆ ಇಡಿ. ಇದು ಬಿಸಿಬಿಸಿಯಿರುವಾಗಲೇ  (ತಣ್ಣಗಾಗಲು ಬಿಡಬೇಡಿ) ಶ್ಯಾವಿಗೆ ಮಟ್ಟಿನಿ೦ದ ಒತ್ತಿದರೆ ಬಾಳೆಹಣ್ಣಿನ ಶ್ಯಾವಿಗೆ ಒತ್ತು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT