ಶುಕ್ರವಾರ, ಮಾರ್ಚ್ 31, 2023
26 °C

ಅವಲಂಚಿ ಅರಣ್ಯದಲ್ಲಿ ಸುತ್ತಾಟ

ಡಾ.ಉಮಾಮಹೇಶ್ವರಿ ಎನ್. Updated:

ಅಕ್ಷರ ಗಾತ್ರ : | |

ವರ್ಷಕ್ಕೆ ಒಂದೆರಡು ಬಾರಿ ಊಟಿಗೆ ಭೇಟಿ ನೀಡಿ, ಮೂರು-ನಾಲ್ಕು ದಿನಗಳ ರಜೆಯನ್ನು ಕಳೆಯುವ ರೂಢಿ. ಈ ವರ್ಷದ ಜನವರಿಯಲ್ಲಿಯೂ ಯಥಾಪ್ರಕಾರ ಊಟಿಗೆ ಹೋಗಿಬಂದೆವು.

ಸಾಮಾನ್ಯವಾಗಿ ಊಟಿಗೆ ಹೋದಾಗಲೆಲ್ಲ ದೊಡ್ಡಬೆಟ್ಟ, ಊಟಿಕೆರೆ, ಬೊಟಾನಿಕಲ್ ಗಾರ್ಡನ್, ಕೂನೂರುಗಳಿಗೆ ಹೋಗುವುದು ವಾಡಿಕೆ. ಈ ಬಾರಿ, ನಾವು ನೋಡಿಲ್ಲದ ಜಾಗಕ್ಕೆ ಹೋಗಬೇಕು ಎಂದು ನಿರ್ಧಾರ ಮಾಡಿದ್ದೆವು. ಅದರಂತೆ ಸ್ಥಳೀಯರನ್ನು ವಿಚಾರಿಸಿದೆವು. ಆಗ ಕೇಳಿಬಂದ ಜಾಗದ ಹೆಸರೇ ಅವಲಂಚಿ. ಈ ಜಾಗ ತಮಿಳುನಾಡಿನ ಸಂರಕ್ಷಿತ ಅರಣ್ಯ ಪ್ರದೇಶ. ಊಟಿಯಿಂದ 27 ಕಿ.ಮೀ ದೂರದಲ್ಲಿದೆ.

ನಾವು ಊಟಿಯಿಂದ ಅವಲಂಚಿ ಪ್ರದೇಶದ ಕಾಡು ನೋಡಲು ಹೊರಟೆವು. ಹೋಗುವಾಗ ರಸ್ತೆಯುದ್ದಕ್ಕೂ ಒಂದು ಬದಿಯಲ್ಲಿ ಎತ್ತರದ ಬೆಟ್ಟ, ಇನ್ನೊಂದು ಬದಿಯಲ್ಲಿ ಆಳವಾದ ಕಣಿವೆ. ಎಡ ಬದಿಯಲ್ಲಿ ಚಹಾ ತೋಟಗಳ ಇಳಿಜಾರು. ಜತೆಗೆ ಕ್ಯಾರೆಟ್, ಮೂಲಂಗಿ, ಬೀಟ್ರೂಟ್, ಕೋಸುವಿನಂತಹ ತರಕಾರಿಗಳ ಹೊಲಗಳು. ರಸ್ತೆಯ ಬದಿಯಲ್ಲಿ ಕಟಾವು ಮಾಡಿದ ಬೆಳೆಗಳನ್ನು ಹೊತ್ತೊಯ್ಯಲು ಸಿದ್ಧವಾಗಿ ನಿಂತಿರುವ ಲಾರಿಗಳು.. ಓಹ್! ಅವಲಂಚಿ ತಲುಪುವ ಮುನ್ನವೇ ಕಣ್ಣಿಗೆ ಹಬ್ಬ.

ಅಕ್ಕಪಕ್ಕದ ನಿಸರ್ಗದ ಚೆಲುವು ಸವಿಯುತ್ತ, ಹಾವಿನಂತೆ ಬಳಕುವ ದಾರಿಯಲ್ಲಿ ಹೋಗುತ್ತಿದ್ದೆವು. ಎತ್ತರದ ಹಾದಿಯಲ್ಲಿ ಕ್ರಮಿಸುವಾಗ ಕಣಿವೆಯ ತಳದಲ್ಲಿ ಕಾಣಸಿಗುವ ಜಲಾಶಯಗಳ ದೃಶ್ಯ ನಯನ ಮನೋಹರ. ಇವೆಲ್ಲಾ ಕಾವೇರಿ ನದಿಯ ಶಾಖೆಗಳು. ಭವಾನಿ ನದಿಗೆ ಅಡ್ಡವಾಗಿ ಕಟ್ಟಿರುವ ಅಣೆಕಟ್ಟುಗಳಿಗೆ ಸಂಬಂಧಪಟ್ಟ ಜಲಾಶಯಗಳು. ಈ ಪ್ರದೇಶದಲ್ಲಿ ಒಟ್ಟು ಆರು ಅಣೆಕಟ್ಟುಗಳು ಇವೆ.

ಅವಲಂಚಿ ಅರಣ್ಯವನ್ನು ತಲುಪಿದಾಗ ಪ್ರವೇಶದ್ವಾರಕ್ಕೆ ಬಿದಿರಿನ ಗೇಟ್ ಹಾಕಿತ್ತು. ಜತೆಯಲ್ಲಿ ಕಾವಲುಗಾರ ಕಾಣಿಸಿದ. ಗೇಟು ತೆಗೆದು, ಅಲ್ಲಿಂದ ಎರಡು-ಮೂರು ಕಿ.ಮೀ. ಒಳಗಡೆ ಸಾಗಿದಾಗ ಅರಣ್ಯ ಇಲಾಖೆ ಕಚೇರಿ ಸಿಕ್ಕಿತು. ಜತೆಗೆ ಚಿಕ್ಕ ಹೋಟೆಲ್‌ ಕೂಡ ಇತ್ತು. ಇಲ್ಲಿಂದ ಮುಂದೆ ಖಾಸಗಿ ವಾಹನಗಳ ಪ್ರವೇಶ ನಿಷಿದ್ಧ. ಮುಂದೆ ಅರಣ್ಯ ಇಲಖೆಯ ಜೀಪ್‌ನಲ್ಲೇ ಪ್ರಯಾಣ ಮಾಡಬೇಕು. ಅದಕ್ಕಾಗಿ ನಮ್ಮ ವಾಹನ ಅಲ್ಲೇ ನಿಲ್ಲಿಸಿದೆವು. ಅರಣ್ಯ ಇಲಾಖೆಯಿಂದ ಮುಂದಿನ ಪ್ರಯಾಣಕ್ಕೆ ಪ್ರವೇಶ ಪತ್ರ ಪಡೆದುಕೊಂಡೆವು. ತಲಾ ₹ 150ಯಿಂದ
₹ 1200 ಶುಲ್ಕ ಪಾವತಿಸಿ, ಜೀಪಿನಲ್ಲಿ ಇಡೀ ಕುಟುಂಬದ ಸದಸ್ಯರು ಪ್ರಯಾಣಿಸಲು ಅಣಿಯಾದೆವು. ಇಲ್ಲಿ ಜೀಪ್‌ಗಳು ಕಡಿಮೆ ಇರುವ ಕಾರಣ, ಸಹ ಪ್ರಯಾಣಿಕರ ಜತೆ ಹೊಂದಿಕೊಂಡು ಪ್ರಯಾಣಿಸುವುದು ಒಳ್ಳೆಯದು.

ಮುಂದಿನ ಹಾದಿ ಸ್ವಲ್ಪ ದುರ್ಗಮವಾದದ್ದು. ಜೀಪಿನಲ್ಲಿ ಮಾತ್ರ ಪ್ರಯಾಣಿಸಲು ಸಾಧ್ಯ. ರಸ್ತೆಗಳು ಸರಿ ಇರಲಿಲ್ಲ. ಯಾವುದೋ ಕಾಲದಲ್ಲಿ ಹಾಕಿದ ಡಾಂಬರಿನ ಅವಶೇಷಗಳು ಮಾತ್ರ ಕಾಣುತ್ತಿದ್ದವು. ನಿಧಾನವಾಗಿ ಬೆಟ್ಟವನ್ನು ಏರುವಾಗ ಹೂಕೋಸಿನ ತರಹ ಹಬ್ಬಿರುವ ಹಸಿರುಕಾಡು ಕಂಡಿತು. ಇದನ್ನು ‘ಶೋಲ’ ಕಾಡು ಎನ್ನುತ್ತಾರೆ. ಇಲ್ಲಿರುವ ಮರಗಳು 25 ರಿಂದ 30 ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ನಿತ್ಯ ಹರಿದ್ವರ್ಣ ಸಸ್ಯಗಳು. ದಟ್ಟವಾದ ರೆಂಬೆಗಳು ಇರುವುದರಿಂದ ಮೇಲಿನಿಂದ ನೋಡುವಾಗ ಹೂಕೋಸಿನಂತೆ ಕಾಣಿಸುತ್ತವೆ. ಈ ಕಾಡಿನ ಚೆಲುವನ್ನು ಆಸ್ವಾದಿಸುತ್ತಾ ಮುಂದುವರಿದಾಗ ಜಲಪಾತ ಒಂದರ ಬುಡಕ್ಕೆ ಬಂದು ತಲುಪಿದೆವು. ಸಾಮಾನ್ಯವಾಗಿ ಈ ದಾರಿಯಲ್ಲಿ ಸಂಚರಿಸವಾಗ ಜಿಂಕೆ, ಕಾಡುಕೋಣಗಳು ಸಿಗುತ್ತವೆ.

ಜಲಪಾತದಿಂದ ಮುಂದೆ ಸಾಗಿದಾಗ ರಸ್ತೆಯ ಬಲಭಾಗದಲ್ಲಿ ಕಿರಿದಾದ ನೀರಿನ ಒರತೆಯೊಂದು ಕಂಡಿತು. ಅದೇ ಭವಾನಿ ನದಿಯ ಉಗಮಸ್ಥಾನ. ಈ ನೀರು ರಸ್ತೆಯ ಕೆಳಗಿರುವ ಕಾಲುವೆಯಲ್ಲಿ ಎಡಕ್ಕೆ ಹರಿದು, ಬಂಡೆಯ ಮೇಲಿಂದ ಇನ್ನೊಂದು ಜಲಪಾತವಾಗಿ ಕಣಿವೆಗೆ ಧುಮುಕುತ್ತದೆ. ಇದೊಂದು ಪವಿತ್ರ ಸ್ಥಳ. ಇಲ್ಲಿ ಭವಾನಿ ದೇವಿಯ ಪುಟ್ಟ ದೇವಾಲಯವಿದೆ. ವರ್ಷಕ್ಕೊಮ್ಮೆ ಜನವರಿಯಲ್ಲಿ ಈ ದೇವಾಲಯದ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಮಾತ್ರ ಖಾಸಗಿ ವಾಹನಗಳಿಗೆ ಇಲ್ಲಿಯವರೆಗೆ ಪ್ರವೇಶಕ್ಕೆ ಅನುಮತಿ. ಸಾಧಾರಣ ಮೂರು ಸಾವಿರದಷ್ಟು ಜನ ಜಾತ್ರೆಯಲ್ಲಿ ಭಾಗವಹಿಸುವುದು ವಾಡಿಕೆ.

ಬೆಟ್ಟದ ತುದಿಯಲ್ಲಿ ಮುಂದಿನ ಪಯಣ. ಕಿರಿದಾದ ಹೂ ಬಿಡುವ ಕುರುಚಲು ಗಿಡಗಳ ನಡುವಿನ ದಾರಿ. ಇನ್ನೊಂದು ಬದಿಯಲ್ಲಿ ಇರುವ ಕಂದಕದಲ್ಲಿ ಭವಾನಿ ನದಿ ಹರಿಯುವುದು ಕಾಣಿಸುತ್ತದೆ.

ಪ್ರಯಾಣದ ಕೊನೆಯ ಭಾಗಕ್ಕೆ ತಲುಪಿದಾಗ ಎಡಭಾಗದಲ್ಲಿ ದೊಡ್ಡದಾದ ಜಲಾಶಯ ಕಾಣಸಿಗುತ್ತದೆ. ಬಲಬದಿಯಲ್ಲಿ ಪೈನ್ ಮರಗಳ ಕಾಡಿದೆ. ಈ ಜಲಾಶಯವು ‘ಮೇಲಿನ ಭವಾನಿ’ ಅಣೆಕಟ್ಟಿನ ಹಿನ್ನೀರು. ಈ ಜಲಾಶಯದ ನೀರು ಜಲ ವಿದ್ಯುತ್ ಉತ್ಪಾದನೆ ಮಾಡಲು ಉಪಯೋಗವಾಗುತ್ತದೆ. ಹಿಂತಿರುಗಿ ಬರುವಾಗ ಅದೇ ದಾರಿಯಲ್ಲಿ ಪುನಃ ಅದೇ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಮರಳಿ ಬಂದೆವು.

ಚಿತ್ರಗಳು: ಲೇಖಕರವು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.