ಲಾಸ್ ಏಂಜಲೀಸ್: ‘ಚೀನಾದ ಲೂನಾರ್ ಹೊಸ ವರ್ಷಾಚರಣೆ’ ಪ್ರಯುಕ್ತ ಅಮೆರಿಕದ ಕ್ಯಾಲಿಪೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್‌ನಲ್ಲಿ ಸಂಭ್ರಮಾಚರಣೆ ನಡೆಸುತ್ತಿದ್ದ ಗುಂಪಿನ ಮೇಲೆ ಆಗಂತುಕ ನಡೆಸಿದ ಭೀಕರ ಗುಂಡಿನ ದಾಳಿಗೆ ಮೃತಪಟ್ಟವರ ಸಂಖ್ಯೆ 10 ಕ್ಕೆ ಏರಿದೆ.
ಲಾಸ್ ಏಂಜಲೀಸ್‌ನ ಮಾಂಟೆರಿ ಪಾರ್ಕ್‌ನ ಏಷಿಯನ್ ಸಿಟಿಯಲ್ಲಿ ಈ ದುರ್ಘಟನೆ ನಡೆದಿದ್ದು, ಪೊಲೀಸರು ಕೂಡಲೇ ಘಟನಾ ಸ್ಥಳವನ್ನು ಸುತ್ತುವರಿದು ಹಂತಕನ ಹಿಡಿಯಲು ನೋಡಿದರು. ಆದರೆ, ಆತ ವಾಹನವೊಂದರಲ್ಲಿ ಅವಿತು ಸ್ವತಃ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಮಾಂಟೆರಿ ಪಾರ್ಕ್‌ನ ಡ್ಯಾನ್ಸ್ ಕ್ಲಬ್‌ಗೆ ಅರೆ ಸ್ವಯಂಚಾಲಿತ ಗನ್ ಹಿಡಿದು ನುಗ್ಗಿದ ಹಂತಕ, ಮನಸೋಇಚ್ಚೆ ಗುಂಡಿನ ದಾಳಿ ನಡೆಸಿದ್ದ. ಘಟನೆಯಲ್ಲಿ 16 ಜನ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಲಾಸ್ ಏಂಜಲೀಸ್‌ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಭ್ರಮಾಚರಣೆಯಲ್ಲಿ ಚೀನಾದವರೇ ಹೆಚ್ಚಾಗಿದ್ದರು. ಇವರ ಮೇಲೆ ಗುಂಡಿನ ದಾಳಿ ಮಾಡಿದ ವ್ಯಕ್ತಿ ಕೂಡ ಏಷಿಯನ್. ಆತ ಚೀನಾ ಮೂಲದ ವಲಸಿಗ. ಇತ್ತೀಚೆಗಷ್ಟೇ ಆತ ಕ್ಯಾಲಿಪೋರ್ನಿಯಾಕ್ಕೆ ಬಂದಿದ್ದ ಎಂದು ಹೇಳಿರುವ ಪೊಲೀಸರು ಆತನ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.
ಈ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಅವರ ಪತ್ನಿ ಜಿಲ್ ಬೈಡನ್ ಆಘಾತ ವ್ಯಕ್ತಪಡಿಸಿದ್ದು, ಘಟನೆಯಲ್ಲಿ ಗಾಯಗೊಂಡವರು ಬೇಗ ಚೇತರಿಸಿಕೊಳ್ಳುವಂತೆ ಪ್ರಾರ್ಥಿಸಿದ್ದಾರೆ. ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇನೆ ಎಂದು ಜೋ ಬೈಡನ್ ಹೇಳಿದ್ದಾರೆ.