ಪಾಕಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ : 17 ಮಂದಿ ಸಾವು, 95 ಜನರಿಗೆ ಗಾಯ

ಪೇಶಾವರ: ಪಾಕಿಸ್ತಾನದ ವಾಯುವ್ಯ ನಗರವಾದ ಪೇಶಾವರದ ಮಸೀದಿಯೊಂದರಲ್ಲಿ ಸೋಮವಾರ ಮಧ್ಯಾಹ್ನ ಪ್ರಾರ್ಥನೆಯ ವೇಳೆ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ. ದುರ್ಘಟನೆಯಲ್ಲಿ 17 ಜನ ಸಾವಿಗೀಡಾಗಿದ್ದು, 95 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಾಹ್ನ 1.40 ರ ಸುಮಾರಿಗೆ ಇಲ್ಲಿನ ಪೊಲೀಸ್ ಲೈನ್ಸ್ ಪ್ರದೇಶದ ಬಳಿ ಪ್ರಾರ್ಥನೆಯ ವೇಳೆ ಆತ್ಮಹತ್ಯಾ ದಾಳಿ ನಡೆದಿದ್ದು, ಸ್ಫೋಟದಲ್ಲಿ ಪೊಲೀಸರು, ಆರೋಗ್ಯ ಅಧಿಕಾರಿಗಳು, ಭದ್ರತಾ ಸಿಬ್ಬಂದಿಗಳಿಗೆ ಹೆಚ್ಚು ಹಾನಿಯಾಗಿದೆ ಎಂದು ಮೂಲಗಳು ಹೇಳಿವೆ.
ಭೀಕರ ಸ್ಫೋಟದಿಂದ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿದ್ದು, ಅದರ ಅಡಿಯಲ್ಲಿ ಹಲವಾರು ಮಂದಿ ಸಿಲುಕಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಸ್ಫೋಟದಲ್ಲಿ 17 ಜನರು ಸಾವಿಗೀಡಾಗಿದ್ದು, 95 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹೆಚ್ಚಾಗಿ ಪೊಲೀಸರಿದ್ದರು ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
ಗಾಯಾಳುಗಳನ್ನು ಪೇಶಾವರದ ಲೇಡಿ ರೀಡಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡವರಲ್ಲಿ 13 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಪೇಶಾವರದ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸಂತ್ರಸ್ತರಿಗಾಗಿ ರಕ್ತದಾನ ಮಾಡುವಂತೆ ಆಸ್ಪತ್ರೆ ನಾಗರಿಕರಲ್ಲಿ ಮನವಿ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.