ಸೊಮಾಲಿಯಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಐವರ ಸಾವು, 14 ಮಂದಿಗೆ ಗಾಯ

ಇಸ್ತಾನ್‌ಬುಲ್: ‘ಸೊಮಾಲಿಯಾದ ರಾಜಧಾನಿ ಮೊಗಾದಿಶುವಿನಲ್ಲಿ ಶನಿವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಟರ್ಕಿಯ ಇಬ್ಬರು ನಾಗರಿಕರು ಸೇರಿದಂತೆ ಒಟ್ಟು ಐದು ಮಂದಿ ಮೃತಪಟ್ಟಿದ್ದು, 14 ಜನ ಗಾಯಗೊಂಡಿದ್ದಾರೆ’ ಎಂದು ಟರ್ಕಿಯ ಆರೋಗ್ಯ ಸಚಿವ ಫಹಾರೆತಿನ್ ಕೊಕಾ ತಿಳಿಸಿದ್ದಾರೆ.
ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಅಲ್ ಶಾಬಬ್ ಸಂಘಟನೆಯು ಈ ದಾಳಿಯ ಹೊಣೆ ಹೊತ್ತುಕೊಂಡಿದೆ.
‘ಬಾಂಬ್ ದಾಳಿಯಲ್ಲಿ ಟರ್ಕಿಯ ಮೂವರು ನಾಗರಿಕರು ಸೇರಿದಂತೆ ಒಟ್ಟು 14 ಮಂದಿ ಗಾಯಗೊಂಡಿದ್ದು, ಅವರಿಗೆ ಮೊಗಾದಿಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಫಹಾರೆತಿನ್ ಅವರು ಟ್ವೀಟ್ ಮಾಡಿದ್ದಾರೆ.
‘ಟರ್ಕಿಯ ಕಂಪನಿಯು ಮೊಗಾದಿಶು–ಅಫ್ಗಾಯ್ ರಸ್ತೆ ನಿರ್ಮಾಣದ ಗುತ್ತಿಗೆ ಪಡೆದಿದೆ. ಈ ಕಂಪನಿಯ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ನಡೆಸಿರುವ ಈ ದಾಳಿಯು ಖಂಡನಾರ್ಹವಾದುದು. ಇದೊಂದು ಹೇಯ ಕೃತ್ಯ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಣೆ ತಿಳಿಸಿದೆ.
‘ಟರ್ಕಿಯ ಸೇನಾ ನೆಲೆಯಿಂದ 15 ಕಿ.ಮೀ. ದೂರದಲ್ಲಿ ಈ ದಾಳಿ ನಡೆದಿದೆ. ದಾಳಿಕೋರರು ದ್ವಿಚಕ್ರ ವಾಹನ ಬಳಸಿ ಈ ಕೃತ್ಯ ಎಸಗಿದ್ದಾರೆ’ ಎಂದು ಟರ್ಕಿ ಭದ್ರತಾ ಪಡೆಯ ಮೂಲಗಳು ಹೇಳಿವೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.