ನವದೆಹಲಿ: ಅಫ್ಗಾನಿಸ್ತಾನದ ನೆಲವನ್ನು ಬೇರೆ ದೇಶದ ಮೇಲೆ ಭಯೋತ್ಪಾದನೆ ನಡೆಸಲು ಬಳಸಿಕೊಳ್ಳಬಾರದು ಎಂದು ಬ್ರಿಕ್ಸ್ ಸಂಘಟನೆ ಒತ್ತಾಯಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಐದೂ ಸದಸ್ಯ ರಾಷ್ಟ್ರಗಳು ಅಫ್ಗನ್‌ನಲ್ಲಿನ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಭಾರತವು ಆಯೋಜಿಸಿದ್ದ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಷಿ-ಜಿನ್‌ಪಿಂಗ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಫೋಸಾ ಮತ್ತು ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸಾನ್ಯಾರೋ ಭಾಗಿಯಾಗಿದ್ದರು.
ಅಫ್ಗಾನಿಸ್ತಾನದಲ್ಲಿನ ಹಿಂಸಾಚಾರವನ್ನು ಕೊನೆಗೊಳಿಸಿ, ಶಾಂತಿ ಸ್ಥಾಪಿಸಬೇಕಿದೆ. ಅಫ್ಗಾನಿಸ್ತಾನದಲ್ಲಿ ಸುಸ್ಥಿರತೆ, ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಸ್ಥಾಪಿಸಲು ಅಫ್ಗನ್ ಅನ್ನೂ ಒಳಗೊಂಡು ಮಾತುಕತೆ ನಡೆಸಬೇಕು ಎಂದು ಶೃಂಗಸಭೆಯ ಅಂತ್ಯದಲ್ಲಿ ಘೋಷಣೆ ಹೊರಡಿಸಲಾಗಿದೆ.
‘ಭಯೋತ್ಪಾದನೆಯನ್ನು ತಡೆಗಟ್ಟುವುದು ಆದ್ಯತೆಯಾಗಬೇಕು. ಬೇರೆ ದೇಶಗಳ ಮೇಲೆ ಭಯೋತ್ಪಾದನೆ ನಡೆಸಲು ಅಫ್ಗನ್ ನೆಲವನ್ನು ಬಳಸಿಕೊಳ್ಳುವುದನ್ನು ತಡೆಯಬೇಕಿದೆ. ಅಫ್ಗಾನಿಸ್ತಾನದ ಮೂಲಕ ನಡೆಯುವ ಮಾದಕ ವಸ್ತುಗಳ ಕಳ್ಳಸಾಗಣೆಯನ್ನೂ ತಡೆಗಟ್ಟಬೇಕು’ ಎಂದು ಘೋಷಣೆಯಲ್ಲಿ ವಿವರಿಸಲಾಗಿದೆ.
ಭಯೋತ್ಪಾದನೆ ತಡೆಗಟ್ಟಲು ಬ್ರಿಕ್ಸ್ ಕಾರ್ಯ ಯೋಜನೆಗೆ ಸದಸ್ಯ ರಾಷ್ಟ್ರಗಳು ಅನುಮೋದನೆ ನೀಡಿವೆ. ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಬದ್ಧವಾಗಿರುವುದಾಗಿ ಘೋಷಿಸಿವೆ. ಯಾವುದೇ ಧರ್ಮ, ರಾಷ್ಟ್ರ, ನಾಗರಿಕತೆ ಮತ್ತು ಸಾಂಸ್ಕೃತಿಕ ಸಮುದಾಯಗಳ ವಿರುದ್ಧ ನಡೆಯುವ ಭಯೋತ್ಪಾದನೆಯನ್ನು ತಡೆಯಬೇಕು ಎಂದು ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.