ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ತಾಲಿಬಾನ್‌ ಬರ್ತಿದೆ...ಕಾಪಾಡಿ': ಅಫ್ಗನ್‌ ಮಹಿಳೆಯ ಕೂಗು ವಿಡಿಯೊದಲ್ಲಿ ದಾಖಲು

Last Updated 19 ಆಗಸ್ಟ್ 2021, 5:07 IST
ಅಕ್ಷರ ಗಾತ್ರ

ಕಾಬೂಲ್‌: ತಾಲಿಬಾನಿಗಳಿಂದ ತಪ್ಪಿಸಿಕೊಂಡು ಯಾವುದಾರೂ ದೇಶಕ್ಕೆ ವಲಸೆ ಹೋಗಲು ಅಫ್ಗನ್‌ನ ಬಹಳಷ್ಟು ಜನರು ವಿಮಾನ ನಿಲ್ದಾಣಗಳ ಹೊರಗೆ ಕಾದು ಕುಳಿತಿದ್ದಾರೆ. ಇನ್ನೂ ಕೆಲವರು 'ದಯಮಾಡಿ ನಮ್ಮನ್ನು ಹೊರ ಹೋಗಲು ಬಿಡಿ...' ಎಂದು ಅಮೆರಿಕ ಪಡೆಗಳನ್ನು ಅಂಗಲಾಚುತ್ತಿದ್ದಾರೆ. 'ತಾಲಿಬಾನ್‌ ಬರ್ತಿದೆ...' ಎಂದು ಬೇಲಿಯ ಹಿಂದೆ ಮಹಿಳೆಯೊಬ್ಬರು ರೋದಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಕಾಬೂಲ್‌ನಲ್ಲಿ ಸೃಷ್ಟಿಯಾಗಿರುವ ಗೊಂದಲಮಯ ಪರಿಸ್ಥಿತಿಯನ್ನು ಈ ವಿಡಿಯೊ ಬಿಂಬಿಸುವಂತಿದೆ. ಅಮೆರಿಕ ಸೇನಾ ಪಡೆಗಳು, ಅಮೆರಿಕನ್ನರು ಹಾಗೂ ಮಿತ್ರ ರಾಷ್ಟ್ರಗಳ ನಾಗರಿಕರನ್ನು ಸುರಕ್ಷಿತವಾಗಿ ಅಫ್ಗನ್‌ನಿಂದ ಹೊರ ಹೋಗಲು ಸಹಕಾರ ನೀಡುತ್ತಿವೆ. ಈ ನಡುವೆ ಅಫ್ಗಾನಿಸ್ತಾನದ ಸಾವಿರಾರು ಜನರು ಗುಂಪು ಗುಂಪಾಗಿ ವಿಮಾನ ನಿಲ್ದಾಣಕ್ಕೆ ನುಗ್ಗಿದ್ದಾರೆ ಹಾಗೂ ಅಮೆರಿಕ ವಾಯುಪಡೆ ವಿಮಾನಗಳನ್ನು ಏರಿದ್ದಾರೆ. ಅಮೆರಿಕ ಸೇನೆಯು ವಿಮಾನ ನಿಲ್ದಾಣದಲ್ಲಿ ಜನರ ಸಂಚಾರವನ್ನು ನಿಯಂತ್ರಿಸಿದ್ದು, ತಾಲಿಬಾನಿಗಳಿಂದ ರಕ್ಷಣೆಗಾಗಿ ಮೊರೆಯಿಡುತ್ತಿದ್ದಾರೆ.

ಬೇಲಿಯ ತಡೆಯಿಂದ ಮಹಿಳೆ ಕೂಗುತ್ತ, ಅಮೆರಿಕ ಪಡೆಗಳ ನೆರವು ಕೋರುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಇದು ಕಾಬೂಲ್‌ನ ಹಮಿದ್‌ ಕರ್ಜಾಯಿ ವಿಮಾನ ನಿಲ್ದಾಣದಲ್ಲಿ ಸೆರೆಯಾಗಿರುವ ದೃಶ್ಯಗಳು ಎನ್ನಲಾಗಿದೆ. ಭಾನುವಾರ ಅಫ್ಗಾನಿಸ್ತಾನವನ್ನು ತಾಲಿಬಾನ್‌ ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ, ಜನರನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಹಿನ್ನಡೆಯುಂಟಾಗಿದೆ.

ಮಂಗಳವಾರ 13 ವಿಮಾನಗಳ ಮೂಲಕ 1,100 ಅಮೆರಿಕದ ನಾಗರಿಕರನ್ನು ಕಾಬೂಲ್‌ ವಿಮಾನ ನಿಲ್ದಾಣದಿಂದ ಏರ್‌ಲಿಫ್ಟ್‌ ಮಾಡಲಿದೆ ಎಂದು ಶ್ವೇತ ಭವನ ತಿಳಿಸಿದೆ.

ವಿಮಾನ ನಿಲ್ದಾಣ ತಲುಪಲು ತಾಲಿಬಾನಿಗಳು ತಡೆಯೊಡ್ಡುತ್ತಿದ್ದಾರೆ. ಜನರನ್ನು ತಾಲಿಬಾನಿಗಳು ತಳ್ಳಿ ಅಥವಾ ಹೆದರಿಸಿ, ಇಲ್ಲವೇ ಹಲ್ಲೆ ಮಾಡಿ ವಾಪಸ್‌ ಕಳುಹಿಸುತ್ತಿದ್ದಾರೆ. ಸೂಕ್ತ ದಾಖಲೆಗಳು ಇದ್ದವರಿಗೆ ಮಾತ್ರವೇ ವಿಮಾನ ನಿಲ್ದಾಣದೊಳಗೆ ಪ್ರವೇಶ ನೀಡುತ್ತಿದ್ದಾರೆ. ಒಮ್ಮೆ ದ್ವಾರ ತೆರೆಯುತ್ತಿದ್ದಂತೆ ಜನರು ಗುಂಪುಗಳಲ್ಲಿ ನುಗ್ಗಲು ಪ್ರಯತ್ನಿಸುತ್ತಿದ್ದು, ಅವರನ್ನು ನಿಯಂತ್ರಿಸಲು ತಾಲಿಬಾನಿಗಳು ಗುಂಡು ಹಾರಿಸುವ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ.

ಈಗಾಗಲೇ 2,200ಕ್ಕೂ ಹೆಚ್ಚು ನಾಗರಿಕರು ಮತ್ತು ರಾಜತಾಂತ್ರಿಕ ಅಧಿಕಾರಿಗಳನ್ನು ಅಫ್ಗಾನಿಸ್ತಾನದಿಂದ ಮಿಲಿಟರಿ ವಿಮಾನಗಳು ಹೊತ್ತು ಸಾಗಿವೆ.

ವಿಮಾನಗಳ ಹಿಂದೆ ಓಡುವುದು, ಒಬ್ಬರ ಮೇಲೊಬ್ಬರು ಬಿದ್ದು, ಎದ್ದು ವಿಮಾನದೊಳಗೆ ಧುಮುಕುತ್ತಿರುವುದು, ಹಾರಾಟಕ್ಕೆ ಮುಂದಾದ ವಿಮಾನಗಳ ರೆಕ್ಕೆಗಳನ್ನು ಹಿಡಿದು ಸಾಗಲು ಪ್ರಯತ್ನಿಸಿರುವುದು ವಿಡಿಯೊಗಳಲ್ಲಿ ದಾಖಲಾಗಿವೆ. ವಿಮಾನವೊಂದು ಎತ್ತರದಲ್ಲಿ ಹಾರುತ್ತಿರುವಾಗ ರೆಕ್ಕೆಗಳನ್ನು ಹಿಡಿದು ಕುಳಿತಿದ್ದ ಇಬ್ಬರು ಕೆಳಗೆ ಬಿದ್ದಿರುವ ವಿಡಿಯೊಗಳು ವೈರಲ್‌ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT