ಸೋಮವಾರ, ಸೆಪ್ಟೆಂಬರ್ 27, 2021
22 °C

ಅಫ್ಗಾನಿಸ್ತಾನ: ಬಿರುಸು ಪಡೆದ ತೆರವು ಕಾರ್ಯ

ಎಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಅಫ್ಗಾನಿಸ್ತಾನದಲ್ಲಿರುವ ಅಮೆರಿಕದ ನಾಗರಿಕರನ್ನು ಸುರಕ್ಷಿತವಾಗಿ ತೆರವುಗೊಳಿಸಲು ತಾಲಿಬಾನ್‌ ಸಮ್ಮತಿಸಿದೆ. ಆದರೆ, ತೆರವು ಕಾರ್ಯಾಚರಣೆಗೆ ಎಷ್ಟು ಸಮಯ ನೀಡಲಿದೆ ಎನ್ನುವುದರ ಬಗ್ಗೆ ಇನ್ನೂ ಮಾತುಕತೆ ನಡೆಯುತ್ತಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್‌ ಸುಲಿವನ್‌ ಹೇಳಿದ್ದಾರೆ.

ತೆರವು ಕಾರ್ಯಾಚರಣೆ, ಆ. 31ರ ಒಳಗಾಗಿ ಮುಗಿಯಬೇಕೆಂದು ಅಧ್ಯಕ್ಷ ಜೋ ಬೈಡನ್‌ ಹೇಳಿದ್ದರು.

ಆದರೆ, ಅಮೆರಿಕವು ಇದುವರೆಗೆ 13 ವಿಮಾನಗಳಲ್ಲಿ 3,200 ಜನ ರನ್ನು ಮಾತ್ರ ತೆರವು ಮಾಡುವಲ್ಲಿ ಯಶಸ್ವಿ ಯಾಗಿದೆ. ಇನ್ನೂ 11 ಸಾವಿರಕ್ಕೂ ಹೆಚ್ಚು ಜನರನ್ನು ಕರೆತರುವ ಸವಾಲಿದೆ. ಅಮೆರಿಕದ ಸಾವಿರಾರು ಸೈನಿಕರು ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಸ್ವದೇಶಕ್ಕೆ ಮರಳಲು ಜಮಾಯಿಸಿದ್ದಾರೆ.

ಮಂಗಳವಾರದಂದು 13 ವಿಮಾನ ಗಳಲ್ಲಿ ಅಮೆರಿಕದ 1,100 ನಾಗರಿಕರು, ಕಾಯಂ ನಿವಾಸಿಗಳು ಹಾಗೂ ಅವರ ಕುಟುಂಬದವರನ್ನು ಕಾಬೂಲ್‌ನಿಂದ ಕರೆತರಲಾಗಿದೆ.  ಕಾಬೂಲ್‌ನಿಂದ ತೆರವು ಕಾರ್ಯಾಚರಣೆಯ ಉಸ್ತುವಾರಿ ಗಾಗಿ, ಅಫ್ಗಾನಿಸ್ತಾನದಲ್ಲಿ ಅಮೆರಿಕದ ಮಾಜಿ ರಾಯಭಾರಿ ಜಾನ್‌ ಬಾಸ್‌ ಅವರನ್ನು ಹಾಗೂ  ವಿಮಾನ ನಿಲ್ದಾಣದ ಭದ್ರತಾ ಕಾರ್ಯದ ಹೊಣೆ ನೋಡಿಕೊಳ್ಳಲು ವಿಶೇಷ ಕಾರ್ಯಾ ಚರಣೆ ಅಧಿಕಾರಿ, ಸೇನೆಯ ಮೇಜರ್‌ ಜನರಲ್‌ ಕ್ರಿಸ್ಟೊಫರ್‌ ಡೊನೊ ಅವ ರನ್ನು ಕಳುಹಿಸುತ್ತಿರುವುದಾಗಿ ಅಮೆರಿಕ ಹೇಳಿದೆ. 

ದಿನಕ್ಕೆ ಹಲವಾರು ಸಲ ತಾಲಿಬಾನ್‌ ಕಮಾಂಡರ್‌ಗಳನ್ನು ಸಂಪರ್ಕಿಸಿ, ವಿಮಾನ ನಿಲ್ದಾಣದಲ್ಲಿ ಘರ್ಷಣೆ ಆಗದಂತೆ ನೋಡಿಕೊಳ್ಳುವಂತೆ ಹೇಳ ಲಾಗಿತ್ತು. ಹೀಗಾಗಿಯೇ ತಾಲಿಬಾನ್‌ ಪಡೆಯು ತೆರವಿಗೆ ಅಡ್ಡಿಪಡಿಸುತ್ತಿಲ್ಲ ಎಂದೂ ಪೆಂಟಗಾನ್ ವಕ್ತಾರ ಜೋನ್‌ ಕಿರ್ಬೈ ಬಹಿರಂಗಪಡಿಸಿದ್ದಾರೆ.

ರಾತ್ರಿಯೊಂದರಲ್ಲೇ ವಾಯುಪಡೆಯ ಒಂಬತ್ತು ವಿಮಾನಗಳು ಶಸ್ತ್ರಾಸ್ತ್ರ ಹಾಗೂ 1,000 ಸೇನಾ ಸಿಬ್ಬಂದಿಯೊಂದಿಗೆ ಅಮೆರಿಕ ತಲುಪಿವೆ. ಅಮೆರಿಕದ 165 ನಾಗರಿಕರೂ ಸೇರಿದಂತೆ ಏಳು ವಿಮಾನಗಳಲ್ಲಿ 800 ಜನರನ್ನು ಕಾಬೂಲ್‌ನಿಂದ ತೆರವು ಮಾಡಲಾಗಿದೆ. ಸದ್ಯಕ್ಕೆ 4,000ಕ್ಕೂ ಹೆಚ್ಚು ಅಮೆರಿಕ ಪಡೆಯ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿ ಇದ್ದಾರೆ. ಮುಂದಿನ ದಿನಗಳಲ್ಲಿ  ಗಂಟೆ ಗೊಂದರಂತೆ ವಿಮಾನದ ವ್ಯವಸ್ಥೆ ಮಾಡಿ, ದಿನಕ್ಕೆ ಐದರಿಂದ ಒಂಬತ್ತು ಸಾವಿರ ಜನರನ್ನು ತೆರವು ಮಾಡುವ ಗುರಿ ಇದೆ ಎಂದು ಕಿರ್ಬೈ ಹೇಳಿದ್ದಾರೆ.

ದಿನವೊಂದಕ್ಕೆ ಸಾವಿರ ಜನರನ್ನು ಅಫ್ಗಾನಿಸ್ತಾನದಿಂದ ತೆರವುಗೊಳಿಸಲು ನಿರ್ಧರಿಸಿದ್ದಾಗಿ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ವಕ್ತಾರ ಬುಧವಾರ ತಿಳಿಸಿದ್ದಾರೆ.

ಅಫ್ಗನ್ ನಿರಾಶ್ರಿತರಿಗೆ, ಆರಂಭಿಕ ಹಂತದಲ್ಲಿ 5,000 ಸ್ಥಳಗಳಲ್ಲಿ ಆಶ್ರಯ ನೀಡುವುದಾಗಿ ಬ್ರಿಟನ್‌ ಮಂಗಳವಾರ ಘೋಷಿಸಿದೆ. 

ಕಾಬೂಲ್‌ನಲ್ಲಿದ್ದ ತನ್ನ ನಾಗರಿಕರ ತೆರವಿಗಾಗಿ, ಫ್ರಾನ್ಸ್‌ ದೇಶವು ಮಂಗಳವಾರ ಕಳುಹಿಸಿದ್ದ ಮೊದಲ ವಿಮಾನದಲ್ಲಿ ಭಾರತದ 21 ಜನರೂ ಸುರಕ್ಷಿತವಾಗಿ ಪ್ಯಾರಿಸ್‌ ತಲುಪಿದ್ದಾರೆ. ಅದರಲ್ಲಿ ಅಫ್ಗಾನಿಸ್ತಾನದ 200 ಜನರೂ ಇದ್ದರು. ಅಮೆರಿಕ ಪಡೆಯ ಸಿಬ್ಬಂದಿಯು ಡಚ್‌ ಪ್ರಯಾಣಿಕರನ್ನು ತಡೆದುದರಿಂದ, ತನ್ನ ನಾಗರಿಕರ ತೆರವಿಗಾಗಿ ಬಂದಿದ್ದ ಡಚ್‌ ವಿಮಾನವು ಹಾಗೆಯೇ ವಾಪಸ್‌ ಹೋಗಿದೆ.

ತನ್ನೊಂದಿಗೆ ಕೆಲಸ ಮಾಡುತ್ತಿರುವ ಅಫ್ಗನ್ನರನ್ನು ತೆರವುಗೊಳಿಸುವುದಕ್ಕಾಗಿ,  ಇಟಲಿಯ ಏಳು ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.  ಮೊದಲ ತಂಡದಲ್ಲಿ 85 ಜನರನ್ನು ತೆರವುಗೊಳಿಸಲಾಗಿದೆ.

ಸ್ಪೇನ್‌ನ ಮೊದಲ ವಿಮಾನವೂ ಕಾಬೂಲ್‌ನತ್ತ ಹೊರಟಿದ್ದು, ಸದ್ಯ ದಲ್ಲೇ ಮತ್ತೆರಡು ವಿಮಾನಗಳು ಕಾರ್ಯಾ ಚರಣೆಗೆ ಇಳಿಯುವುದಾಗಿ ಸ್ಪೇನ್‌ ಪ್ರಧಾನಿ ಪೆಡ್ರೊ ತಿಳಿಸಿದ್ದಾರೆ.

ಸ್ವೀಡನ್‌, ತನ್ನ ರಾಯಭಾರ ಕಚೇರಿಯ ಎಲ್ಲ ಸಿಬ್ಬಂದಿಯನ್ನೂ ತೆಗೆದುಹಾಕಿದ್ದು, ಆಸ್ಟ್ರಿಯಾ ಹಾಗೂ ರೊಮೇನಿಯಾ ಕೂಡ ಅದೇ ಹೆಜ್ಜೆ ಇರಿಸಿವೆ. ನಾರ್ವೆಯ 14 ಮಂದಿ ಬುಧವಾರ ತೆರವುಗೊಂಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು