ಸೋಮವಾರ, ಜುಲೈ 4, 2022
25 °C

ಅಫ್ಗಾನ್: ಹೊಸ ಸರ್ಕಾರ ರಚನೆ ಸಾಧ್ಯತೆ: ಬರದರ್ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಬೂಲ್: ಅಫ್ಗಾನಿಸ್ತಾನದಲ್ಲಿ ಎಲ್ಲರನ್ನೂ ಒಳಗೊಂಡ ಹೊಸ ಸರ್ಕಾರ ರಚಿಸುವ ಸಂಬಂಧ ಚರ್ಚಿಸಲು ತಾಲಿಬಾನಿ ಸಂಘಟನೆಯ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದರ್ ಶನಿವಾರ ಕಾಬೂಲ್‌ಗೆ ಬಂದಿದ್ದಾನೆ.

ಕಾಬೂಲ್‌ಗೆ ಭೇಟಿ ನೀಡಿರುವ ಬರದರ್, ಹೊಸ ಸರ್ಕಾರ ರಚನೆ ಸಂಬಂಧ ಜಿಹಾದಿ ನಾಯಕರು ಮತ್ತು ರಾಜಕಾರಣಿಗಳನ್ನು ಭೇಟಿ ಮಾಡಲಿರುವುದಾಗಿ ಹಿರಿಯ ತಾಲಿಬಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕತಾರ್‌ನಿಂದ ಮಂಗಳವಾರವೇ ಅಫ್ಗಾನಿಸ್ತಾನಕ್ಕೆ ಬಂದಿರುವ ಬರದರ್, ಕಂದಹಾರ್ ಮೂಲಕ ದೇಶ ಪ್ರವೇಶಿಸಿದ್ದಾನೆ. 

ಅಮೆರಿಕದ ಕುಖ್ಯಾತ ಉಗ್ರರ ಪಟ್ಟಿಯಲ್ಲಿರುವ ಖಲೀಲ್ ಹಕ್ಕಾನಿ ಜೊತೆ ಬರದರ್ ಇತ್ತೀಚಿನ ದಿನಗಳಲ್ಲಿ ಕಾಬೂಲ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾನೆ. ಅಮೆರಿಕ, ಖಲೀಲ್ ತಲೆಗೆ 50 ಲಕ್ಷ ಡಾಲರ್ ಬಹುಮಾನ ಘೋಷಿಸಿತ್ತು. 

ಹಕ್ಕಾನಿ ಗುಲ್ಬುದ್ದೀನ್ ಹೆಕ್ಮತ್ಯಾರ್ ಅವರನ್ನು ಬರದರ್ ಭೇಟಿಯಾಗುತ್ತಿರುವುದನ್ನು ತಾಲಿಬಾನ್ ಪರ ಸಾಮಾಜಿಕ ಮಾಧ್ಯಮಗಳು ತೋರಿಸಿವೆ. 1990ರ ದಶಕದ ಅಂತರ್ಯುದ್ಧದ ಸಮಯದಲ್ಲಿ ಪ್ರತಿಸ್ಪರ್ಧಿಯಾಗಿದ್ದ ಈತ, ಅಫ್ಗಾನಿಸ್ತಾನದ ರಾಜಕೀಯದಲ್ಲಿ ಇನ್ನೂ ಪ್ರಭಾವಶಾಲಿ ಎನಿಸಿದ್ದಾನೆ.

ಅಮೆರಿಕದ ಒತ್ತಡದಿಂದ 2010ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಬಂಧನಕ್ಕೊಳಗಾಗಿದ್ದ ಬರದರ್, 2018ರಲ್ಲಿ ಬಿಡುಗಡೆಯಾಗಿದ್ದ. ಕತಾರ್‌ನಲ್ಲಿ ಉಳಿದುಕೊಂಡಿದ್ದ ಈತನನ್ನು ದೋಹಾದಲ್ಲಿರುವ ತಾಲಿಬಾನ್‌ನ ರಾಜಕೀಯ ಕಚೇರಿಯ ಮುಖ್ಯಸ್ಥನನ್ನಾಗಿ ನೇಮಿಸಲಾಗಿತ್ತು. 

ಅಮೆರಿಕದಿಂದ ತೆರವು ನಿರೀಕ್ಷೆಯಲ್ಲಿ ಅಫ್ಗನ್ನರು: 
ಅಫ್ಗಾನಿಸ್ತಾನದಲ್ಲಿ ಯುದ್ಧದ ವೇಳೆ ಸಹಕಾರ ನೀಡಿದ ಅಮೆರಿಕನ್ನರು ಮತ್ತು ಅಫ್ಗಾನಿಸ್ತಾನದ ಪ್ರಜೆಗಳನ್ನು ಅಮೆರಿಕ ತೆರವು ಮಾಡುತ್ತದೆ ಎಂದು ಸಾವಿರಾರು ಜನರು ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಜೊ ಬೈಡನ್ ದೃಢ ನಿಲುವು ಪ್ರಕಟಿಸಲಿದ್ದಾರೆ ಎಂದು ನಿರೀಕ್ಷಿಸಿದ್ದಾರೆ.

ತಾಲಿಬಾನ್ ಪ್ರಾಬಲ್ಯ ಸಾಧಿಸಿದ ಬಳಿಕ, ಅಫ್ಗನ್ ಭಾಷಾಂತರಕಾರರೂ ಸೇರಿದಂತೆ ಇತರರು ಮತ್ತು ಅವರ ಕುಟುಂಬ ಸದಸ್ಯರು ಸ್ಥಳಾಂತರದ ನಿರೀಕ್ಷೆಯಲ್ಲಿದ್ದಾರೆ. ಉಳಿದಿರುವ ಅಮೆರಿಕದ ಸೈನ್ಯವನ್ನು ಹಿಂತೆಗೆದುಕೊಳ್ಳಲು ಆಗಸ್ಟ್ 31ರ ಗಡುವು ಹತ್ತಿರವಾಗುತ್ತಿದೆ. ಆದರೆ ಸೇನೆಯನ್ನು ಅಫ್ಗನ್‌ನಲ್ಲೇ ಮುಂದುವರಿಸುವ ಬಗ್ಗೆ ಬೈಡನ್ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ತಾಲಿಬಾನ್‌ ಬಂಡುಕೋರರಿಂದ ಪ್ರತೀಕಾರದ ಭೀತಿಯಲ್ಲಿರುವ ಜನರು ತೆರವು ಮಾಡುವಂತೆ ಮಾಡುತ್ತಿರುವ ಮನವಿ ವಿಡಿಯೊಗಳು ಪರಿಸ್ಥಿತಿಯ ಚಿತ್ರಣ ಕಟ್ಟುಕೊಡುತ್ತಿದ್ದು, ಬೈಡನ್ ಟೀಕೆಗಳನ್ನು ಎದುರಿಸುತ್ತಿದ್ದಾರೆ.

ಸರ್ಕಾರಿ ನೌಕರರಿಗೆ ತಡೆ:
ಕಾಬೂಲ್‌ನಲ್ಲಿರುವ ಸರ್ಕಾರಿ ನೌಕರರು ಕೆಲಸಕ್ಕೆ ಹೋಗದಂತೆ ತಾಲಿಬಾನ್ ಉಗ್ರರು ತಡೆದಿದ್ದಾರೆ. ಕೆಲಸದ ವಾರ ಆರಂಭದ ಮೊದಲ ದಿನವಾದ ಶನಿವಾರ ಕಚೇರಿಯತ್ತ ಹೊರಟಿದ್ದ ಉದ್ಯೋಗಿಗಳಿಗೆ ತಡೆ ಒಡ್ಡಲಾಗಿದೆ. 

ಆರು ದಿನಗಳ ಹಿಂದೆ ಅಫ್ಗಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ ಸರ್ಕಾರಿ ಕಟ್ಟಡಗಳು, ಬ್ಯಾಂಕುಗಳು, ಪಾಸ್‌ಪೋರ್ಟ್ ಕಚೇರಿಗಳು, ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳು ಬಹುತೇಕ ಬಾಗಿಲಿ ಮುಚ್ಚಿದ್ದವು. ಕೆಲವು ಖಾಸಗಿ ದೂರಸಂಪರ್ಕ ಕಚೇರಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು.

‘ನಾನು ಇಂದು ಬೆಳಿಗ್ಗೆ ಕಚೇರಿಗೆ ಹೋಗಿದ್ದೆ. ಆದರೆ ಬಾಗಿಲಿನ ಬಳಿ ಇದ್ದ ತಾಲಿಬಾನಿಗಳು ಸರ್ಕಾರಿ ಕಚೇರಿಗಳನ್ನು ತೆರೆಯಲು ಯಾವುದೇ ಆದೇಶ ಬಂದಿಲ್ಲ ಎಂದು ಮಾಹಿತಿ ನೀಡಿದರು’ ಎಂಬು
ದಾಗಿ ಸರ್ಕಾರಿ ನೌಕರ ಹಮ್ದುಲ್ಲಾ ಹೇಳಿದ್ದಾರೆ. ಯಾವಾಗ ಕೆಲಸಕ್ಕೆ ಮರಳಬೇಕು ಎಂಬ ಮಾಹಿತಿಗಾಗಿ ಟಿ.ವಿ ಅಥವಾ ರೇಡಿಯೊ ಸುದ್ದಿಗಳನ್ನು ಗಮನಿಸುತ್ತಿರುವಂತೆ ಸಲಹೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು