ಭಾನುವಾರ, ಸೆಪ್ಟೆಂಬರ್ 19, 2021
24 °C

ಪಂಜ್‌ಶೀರ್ ಕಣಿವೆಯಲ್ಲಿ ತೀವ್ರಗೊಳ್ಳುತ್ತಲೇ ಇದೆ ತಾಲಿಬಾನ್‌ ವಿರೋಧಿ ಸಂಘರ್ಷ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಕಾಬೂಲ್‌: ಅಫ್ಗಾನಿಸ್ತಾನ ರಾಜಧಾನಿ ಕಾಬೂಲ್‌ನ ಉತ್ತರ ಭಾಗದಲ್ಲಿರುವ ಪಂಜ್‌ಶೀರ್ ಕಣಿವೆ ತಾಲಿಬಾನಿಗಳಿಗೆ ಪ್ರತಿರೋಧ ಒಡ್ಡುತ್ತಲೇ ಇದೆ. ತಾಲಿಬಾನಿಗಳು ನಡೆಸುತ್ತಿರುವ ದೊಡ್ಡ ಪ್ರಮಾಣದ ದಾಳಿಗಳನ್ನು ಪಂಜ್‌ಶೀರ್ ಕಣಿವೆಯ ಹೋರಾಟಗಾರರು ಹಿಮ್ಮೆಟ್ಟಿಸುತ್ತಲೇ ಇದ್ದಾರೆ.

ರಾಷ್ಟ್ರೀಯ ಪ್ರತಿರೋಧ ಪಡೆಯ (ಎನ್‌ಆರ್‌ಎಫ್‌) ಹೋರಾಟಗಾರರು ತಾಲಿಬಾನ್‌ ಉಗ್ರರನ್ನು ಗುರಿಯಾಗಿಸಿ ಪ್ರತಿದಾಳಿಗಳನ್ನು ನಡೆಸುತ್ತಲೇ ಇದ್ದಾರೆ. ಪತನಗೊಂಡಿರುವ ಆಫ್ಗಾನ್‌ ಭದ್ರತಾ ಪಡೆ ಮತ್ತು ತಾಲಿಬಾನ್‌ ವಿರೋಧಿ ಹೋರಾಟಗಾರರು ಒಂದಾಗಿರುವ ಹಿನ್ನೆಲೆಯಲ್ಲಿ ಸಶಸ್ತ್ರ ಸಂಘರ್ಷ ತೀವ್ರಗೊಳ್ಳುತ್ತಲೇ ಸಾಗಿದೆ.

ಪಂಜ್ಷಿರ್‌ ಬಿಕ್ಕಟ್ಟಿನ ಕುರಿತು ಟ್ವೀಟ್‌ ಮಾಡಿರುವ ಹಿರಿಯ ತಾಲಿಬಾನ್ ಅಧಿಕಾರಿ ಅಮೀರ್ ಖಾನ್, 'ನನ್ನ ಸಹೋದರರೇ, ಮಾತುಕತೆಯ ಮೂಲಕ ಪಂಜ್‌ಶೀರ್ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು. ಆದರೆ, ದುರದೃಷ್ಟವಶಾತ್ ಎಲ್ಲವೂ ವ್ಯರ್ಥವಾಯಿತು' ಎಂದು ತಿಳಿಸಿದ್ದಾರೆ.

'ಈಗ ಮಾತುಕತೆ ವಿಫಲವಾಗಿದೆ ಮತ್ತು ಪಂಜ್ಷಿರ್ ಅನ್ನು ಮುಜಾಹಿದ್ದೀನ್ (ತಾಲಿಬಾನ್) ಸುತ್ತುವರೆದಿದ್ದಾನೆ. ಶಾಂತಿಯುತ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಬಯಸದ ಜನರು ಇನ್ನೂ ಒಳಗಿದ್ದಾರೆ' ಎಂದು ಅವರು ಹೇಳಿದ್ದಾರೆ.

ಪತನಗೊಂಡ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಬಿಸ್ಮಿಲ್ಲಾ ಮೊಹಮ್ಮದಿ ಅವರು 'ಪಂಜ್‌ಶೀರ್ ಮೇಲೆ ಮಂಗಳವಾರ ರಾತ್ರಿ ತಾಲಿಬಾನ್‌ ಮತ್ತೆ ದಾಳಿ ನಡೆಸಿದೆ' ಎಂದು ತಿಳಿಸಿದ್ದಾರೆ.

'ನಿನ್ನೆ(ಮಂಗಳವಾರ) ರಾತ್ರಿ ತಾಲಿಬಾನ್ ಭಯೋತ್ಪಾದಕರು ಪಂಜ್‌ಶೀರ್ ಮೇಲೆ ದಾಳಿ ಮಾಡಿದರು. ಆದರೆ, ಅವರು ಸೋತಿದ್ದಾರೆ' ಎಂದು ಮೊಹಮ್ಮದಿ ಬುಧವಾರ ಟ್ವೀಟ್ ಮಾಡಿದ್ದಾರೆ. ಈ ವೇಳೆ 34 ತಾಲಿಬಾನಿಗಳು ಮೃತಪಟ್ಟಿದ್ದು, 65 ಮಂದಿ ಗಾಯಗೊಂಡಿದ್ದಾರೆ ಎಂದೂ ಅವರು ಹೇಳಿದ್ದಾರೆ.

'ನಮ್ಮ ರಕ್ತದ ಕೊನೆಯ ಹನಿ ಇರುವ ತನಕ ನಾವು ಪಂಜ್‌ಶೀರ್ ಅನ್ನು ರಕ್ಷಿಸಲು ಸಿದ್ಧರಿದ್ದೇವೆ' ಎಂದು ಸುದ್ದಿಸಂಸ್ಥೆ ಎಎಫ್‌ಪಿಗೆ ಅಲ್ಲಿನ ನಿವಾಸಿಯೊಬ್ಬರು ತಿಳಿಸಿದ್ದಾರೆ.

'ಪ್ರತಿಯೊಬ್ಬರ ಭುಜದ ಮೇಲೆ ಆಯುಧವಿದೆ ಮತ್ತು ಗುಂಡು ಹಾರಿಸಲು ಅದು ಸಿದ್ಧವಾಗಿದೆ" ಎಂದು ಇನ್ನೊಬ್ಬ ನಿವಾಸಿ ಹೇಳಿದ್ದಾರೆ.

'ರಷ್ಯನ್ನರ ಆಡಳಿತದಲ್ಲಿ, ಬ್ರಿಟಿಷರ ಆಡಳಿತದಲ್ಲಿ, ತಾಲಿಬಾನ್‌ನ ಹಿಂದಿನ ಆಡಳಿತದಲ್ಲಿ ಪಂಜ್‌ಶೀರ್ ಕಣಿವೆಯನ್ನು ರಕ್ಷಿಸಿಕೊಂಡಿದ್ದೇವೆ. ಅದನ್ನು ನಾವು ಮುಂದುವರಿಸುತ್ತೇವೆ' ಎಂದು ಹೋರಾಟಗಾರನೊಬ್ಬ ತಿಳಿಸಿದ್ದಾನೆ.

ಪಂಜ್‌ಶೀರ್‌ನ ಯುವ ಹೋರಾಟಗಾರ ಅಹಮ್ಮದ್‌ ಮಸೂದ್‌, ಸಾವಿರಾರು ಸ್ಥಳೀಯ ಯೋಧರನ್ನು ಸಜ್ಜುಗೊಳಿಸಿ ಕಣಿವೆಯನ್ನು ಕಾಯಲು ರಕ್ಷಣಾಪಡೆಯನ್ನು ಕಟ್ಟಿಕೊಂಡಿದ್ದಾರೆ.

1980ರ ದಶಕದಲ್ಲಿ ಸೋವಿಯತ್‌ ವಿರುದ್ಧದ ಹೋರಾಟ ಮತ್ತು 1990ರ ದಶಕದಲ್ಲಿ ತಾಲಿಬಾನ್‌ ವಿರುದ್ಧ ಹೋರಾಟದಲ್ಲಿ ಮಸೂದ್‌ ತಂದೆ ಮುಂಚೂಣಿಯಲ್ಲಿ ಇದ್ದರು. ಅವರನ್ನು ‘ಪಂಜ್‌ಶೀರ್‌ನ ಸಿಂಹ’ ಎಂದೇ ಕರೆಯುತ್ತಿದ್ದರು. 2001ರ ಸೆಪ್ಟೆಂಬರ್‌ 11ರ ದಾಳಿಗೆ (9/11) ಎರಡು ದಿನ ಮೊದಲು ಅವರನ್ನು ಅಲ್‌ಖೈದಾ ಹತ್ಯೆ ಮಾಡಿತ್ತು.

ಇವನ್ನೂ ಓದಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು