ಶುಕ್ರವಾರ, ಸೆಪ್ಟೆಂಬರ್ 24, 2021
27 °C

ದೇಶದಲ್ಲಿನ ಅಸ್ಥಿರತೆಗೆ ಪರಿಹಾರ: ರಾಜೀನಾಮೆಗೆ ಮುಂದಾದರೇ ಅಫ್ಗನ್‌ ಅಧ್ಯಕ್ಷ?

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಕಾಬೂಲ್: ದೇಶದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಜನರ ಸ್ಥಳಾಂತರ ಮತ್ತು ಹಿಂಸೆಗೆ ತಡೆಯೊಡ್ಡುವ ಕೆಲಸವನ್ನು ತಮ್ಮ ಸರ್ಕಾರ ಮಾಡಲಿದೆ ಎಂದು ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ನಾಗರಿಕರಿಗೆ ಭರವಸೆ ನೀಡಿದ್ದಾರೆ.

ಅಫ್ಗಾನಿಸ್ತಾನದ ನಾಗರಿಕರನ್ನು ಉದ್ದೇಶಿಸಿ ದೂರದರ್ಶನದಲ್ಲಿ ಶನಿವಾರ ಭಾಷಣ ಮಾಡಿರುವ ಅವರು, 'ದೇಶದಲ್ಲಿನ ಅಸ್ಥಿರತೆ, ಹಿಂಸೆ ಮತ್ತು ಜನರ ಸ್ಥಳಾಂತರಕ್ಕೆ ನಾವು ತಡೆಯೊಡ್ಡಲಿದ್ದೇವೆ. ಇದು ನಾನು ನಿಮಗೆ ನೀಡುತ್ತಿರುವ ಭರವಸೆಯಾಗಿದೆ' ಎಂದು ತಿಳಿಸಿದ್ದಾರೆ

ಕಳೆದ 20 ವರ್ಷಗಳಲ್ಲಿ ದೇಶವು ಗಳಿಸಿರುವ ಸ್ಥಿರತೆಯನ್ನು ಹಿಮ್ಮೆಟ್ಟಿಸಲು ನಮ್ಮ ಸರ್ಕಾರ ಬಿಡುವುದಿಲ್ಲ ಎಂದು ಅಶ್ರಫ್ ಘನಿ ಹೇಳಿದ್ದಾರೆ.

"ಅಫ್ಗನ್ನರ ಮೇಲೆ ಯುದ್ಧವನ್ನು ಹೇರವುದಕ್ಕೆ ನಾವು ಅವಕಾಶ ನೀಡುವುದಿಲ್ಲ. ಇಲ್ಲಿ ಮತ್ತಷ್ಟು ಹತ್ಯೆಗಳು ನಡೆಯುವುದು, ಸಾರ್ವಜನಿಕ ಆಸ್ತಿಗಳನ್ನು ನಾಶವಾಗುವುದು ನಮಗೆ ಬೇಕಿಲ್ಲ' ಎಂದೂ ಅಶ್ರಫ್‌ ಘನಿ ತಿಳಿಸಿದ್ದಾರೆ.

ಘನಿ ಅವರು ತಮ್ಮ ರಾಜೀನಾಮೆ ನಿರ್ಧಾರವನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಅನೇಕ ಸುದ್ದಿವಾಹಿನಿಗಳು ವರದಿ ಮಾಡಿದ್ದವು. ಆದರೆ, ಅಫ್ಗನ್‌ ಅಧ್ಯಕ್ಷರು ಶನಿವಾರ ಮಾಡಿದ ಭಾಷಣದಲ್ಲಿ ರಾಜೀನಾಮೆ ವಿಷಯವನ್ನು ಪ್ರಸ್ತಾಪಿಸಿಲ್ಲ. ರಾಜೀನಾಮೆ ಬಗೆಗಿನ ವರದಿಗಳನ್ನೂ ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲ ಎಂಬುದು ಅವರ ಮಾತುಗಳಲ್ಲಿ ಪ್ರತಿಧ್ವನಿಸಿದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿದೆ.

'ಅಫ್ಗಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪಿಸುವುದರ ಬಗ್ಗೆ ರಾಜಕೀಯ ವಿಶ್ಲೇಷಕರು, ಹಿರಿಯ ನಾಯಕರು, ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲು ಆರಂಭಿಸಿದ್ದೇವೆ. ಸಧ್ಯದಲ್ಲೇ ಇದಕ್ಕೊಂದು ನ್ಯಾಯಸಮ್ಮತವಾದ ಪರಿಹಾರ ಕಂಡುಕೊಳ್ಳಲಿದ್ದೇವೆ' ಎಂದು ಅಶ್ರಫ್‌ ಘಣಿ ಹೇಳಿದ್ದಾರೆ.

ಓದಿ: 

ತಾಲಿಬಾನ್‌ ಇತ್ತೀಚಿನ ದಿನಗಳಲ್ಲಿ ತನ್ನ ಪ್ರಾಬಲ್ಯವನ್ನು ತೀವ್ರ ಗತಿಯಲ್ಲಿ ಸಾಧಿಸುತ್ತಿರುವುದು ಅಫ್ಗಾನಿಸ್ತಾನದ ಸರ್ಕಾರವನ್ನು ಚಿಂತೆಗೀಡು ಮಾಡಿದೆ.

ಹಲವೆಡೆ ಯುದ್ಧದ ಸ್ಥಳಗಳಿಂದ ವಿಶೇಷ ಕಾರ್ಯಾಚರಣೆ ಪಡೆಗಳೇ ಪಲಾಯನಗೈದಿವೆ. ಅಪಾರ ವೆಚ್ಚ ಮಾಡಿ ತರಬೇತಿ ಪಡೆದಿದ್ದರೂ ಸೇನಾ ಪಡೆಗಳು ಯುದ್ಧ ಭೂಮಿಯಿಂದ ಓಡಿ ಹೋಗುತ್ತಿರುವುದು ಏಕೆ ಎನ್ನುವ ಪ್ರಶ್ನೆ ಸರ್ಕಾರವನ್ನು ಕಾಡುತ್ತಿದೆ.

ಓದಿ: 

ಹಲವೆಡೆ ಸಂಭವಿಸಿರುವ ಹಿಂಸಾಚಾರದಿಂದಾಗಿ ಸಾವಿರಾರು ಮಂದಿ ಕಾಬೂಲ್‌ನಲ್ಲಿ ಆಶ್ರಯ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು