ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ತಿಂಗಳು ಕಳೆದರೂ ಉಕ್ರೇನ್‌ ವಿರುದ್ಧ ರಷ್ಯಾಗೆ ಲಭಿಸದ ಗೆಲುವು

ಪೂರ್ವ ಉಕ್ರೇನ್‌ನಲ್ಲಿ ರಷ್ಯಾಗೆ ಹಿನ್ನಡೆ, ಡಾನ್‌ಬಾಸ್‌ನತ್ತ ರಷ್ಯಾ ಚಿತ್ತ
Last Updated 24 ಮೇ 2022, 15:31 IST
ಅಕ್ಷರ ಗಾತ್ರ

ಮಾಸ್ಕೊ: ಜಗತ್ತಿನ ಎರಡನೇ ಬಲಿಷ್ಠ ರಾಷ್ಟ್ರ ರಷ್ಯಾ, ಪುಟ್ಟ ದೇಶ ಉಕ್ರೇನ್ ಮೇಲೆ ಯುದ್ಧ ಆರಂಭಿಸಿ 3 ತಿಂಗಳು ಕಳೆದರೂ ನಿರೀಕ್ಷಿತ ಗೆಲವು ಸಾಧಿಸುವಲ್ಲಿ ವಿಫಲವಾಗಿದೆ.

ರಷ್ಯಾಫೆಬ್ರುವರಿ 24ರಂದು ಉಕ್ರೇನಿನ ವಿರುದ್ಧ ಯುದ್ಧ ಘೋಷಿಸಿದಾಗ, ಕೆಲವೇ ದಿನ ಅಥವಾ ವಾರಗಳಲ್ಲಿ ಗೆಲುವು ಸಾಧಿಸುವ ಉತ್ಸಾಹದಲ್ಲಿತ್ತು. ಪಾಶ್ಚಿಮಾತ್ಯ ವಿಶ್ಲೇಷಕರೂ ಇದೇ ರೀತಿ ಆಗಬಹುದು ಎಂದು ಅಂದಾಜಿಸಿದ್ದರು. ಆದರೆ ಬಲಾಢ್ಯ ರಷ್ಯಾ ಸೈನ್ಯ ವಿರುದ್ಧ ಉಕ್ರೇನ್‌ ಪ್ರಬಲ ಪೈಪೋಟಿ ನೀಡುತ್ತಿದೆ.

ಯುದ್ಧದಲ್ಲಿ ರಷ್ಯಾ ಸದ್ಯ ಸಾಧಿಸಿದ್ದು ಸಣ್ಣ‍ಪುಟ್ಟ ಗೆಲುವು ಮಾತ್ರ. ಉಕ್ರೇನ್‌ ರಾಜಧಾನಿ ಕೀವ್ ಮತ್ತಿತರ ದೊಡ್ಡ ನಗರಗಳ ಮೇಲೆ ರಷ್ಯಾ ಸೇನೆ ಭೀಕರ ದಾಳಿ ನಡೆಸಿದ್ದು, ಸಾಕಷ್ಟು ಸಾವು-ನೋವು ಸಂಭವಿಸಿದೆ. ಇದರ ಹೊರತಾಗಿಯೂ ಉಕ್ರೇನ್‌ ಪಡೆಗಳು ಪ್ರತಿರೋಧ ತೋರಿ ಅವುಗಳನ್ನು ತಮ್ಮ ಹಿಡಿತದಲ್ಲೇ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ.ಪಾಶ್ಚಿಮಾತ್ಯ ರಾಷ್ಟ್ರಗಳು ನೀಡಿದ ಬೆಂಬಲದಿಂದಾಗಿ ಉಕ್ರೇನ್‌, ರಷ್ಯಾ ಪಡೆಗಳನ್ನು ಸಮರ್ಥವಾಗಿ ಎದುರಿಸುತ್ತಿದೆ.

ಉಕ್ರೇನ್‌ ತೋರುತ್ತಿರುವ ಪ್ರತಿರೋಧಕ್ಕೆ ತತ್ತರಿಸಿದ ರಷ್ಯಾ ಕಳೆದ ತಿಂಗಳು ಕೀವ್‌ ಸುತ್ತಮುತ್ತಲಿನ ಪ್ರದೇಶಗಳಿಂದ ತನ್ನ ಸೇನೆಯನ್ನು ವಾಪಸ್‌ ಕರೆಸಿಕೊಂಡಿದೆ. ಬಳಿಕ ಡಾನ್‌ಬಾಸ್‌ನಂಥ ಪೂರ್ವ ಕೈಗಾರಿಕಾ ಪ್ರದೇಶಗಳ ಮೇಲೆ ಗಮನ ಕೇಂದ್ರೀಕರಿಸುವುದಾಗಿ ಘೋಷಿಸಿದೆ. ಅಜೋವ್ ಸಮುದ್ರ ತೀರದ ಮರಿಯುಪೊಲ್‌ ನಗರವನ್ನು ಮಾತ್ರ ಸದ್ಯ ತನ್ನ ವಶಕ್ಕೆ ಪಡೆದುಕೊಂಡಿದೆ.

ರಷ್ಯಾ ಐತಿಹಾಸಿಕ ಸೋಲನುಭವಿಸಲಿದೆ: ನವಾಲ್ನಿ

ಉಕ್ರೇನ್‌ ವಿರುದ್ಧ ಯುದ್ಧ ಘೋಷಿಸಿರುವ ರಷ್ಯಾ ಐತಿಹಾಸಿಕ ಸೋಲನುಭವಿಸಲಿದೆ ಎಂದು ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್‌ನಿ ಅವರು ಹೇಳಿದ್ದಾರೆ.

ವಂಚನೆ ಮತ್ತು ನ್ಯಾಯಾಂಗ ನಿಂದನೆ ಆರೋಪ ಸಂಬಂಧ ಜೈಲಿನಲ್ಲಿರುವ ಅಲೆಕ್ಸಿ ಅವರು ಮಂಗಳವಾರ ವಿಡಿಯೊ ಕಾಲ್ ಮೂಲಕ ಕೋರ್ಟ್‌ ವಿಚಾರಣೆಯಲ್ಲಿ ಪಾಲ್ಗೊಂಡರು.

ಈ ವೇಳೆ, ಪುಟಿನ್‌ ಆರಂಭಿಸಿರುವುದು ಸುಳ್ಳಿನ ಮೇಲೆ ಆಧಾರಿತವಾದ ಮೂರ್ಖತನದ ಯುದ್ಧ. ಪುಟಿನ್‌ ಒಬ್ಬ ಹುಚ್ಚ ಎಂದು ಟೀಕಿಸಿದರು.

‘ಉಕ್ರೇನ್ ಮೇಲೆ ಯುದ್ಧ ಸಾರಿ ಏನನ್ನು ಸಾಧಿಸಲು ಹೊರಟಿದ್ದೀರಿ? ಅಲ್ಪಕಾಲಿಕ ನಿಯಂತ್ರಣವನ್ನು ಬಯಸುತ್ತಿದ್ದೀರಾ, ರಷ್ಯಾದ ಭವಿಷ್ಯಕ್ಕಾಗಿ ಹೋರಾಡುತ್ತಿದ್ದೀರಾ, ನೀವು ಐತಿಹಾಸಿಕ ಸೋಲನುಭವಿಸಲಿದ್ದೀರಿ’ ಎಂದು ಎಚ್ಚರಿಸಿದರು.

ಉಕ್ರೇನಿಗೆ ಮತ್ತಷ್ಟು ಅತ್ಯಾಧುನಿಕ ಶಸ್ತ್ರಾಸ್ತ್ರ: ಅಮೆರಿಕ

ವಾಷಿಂಗ್ಟನ್‌: ರಷ್ಯಾ ವಿರುದ್ಧ ಹೋರಾಡಲು ಉಕ್ರೇನಿಗೆ ಕ್ಷಿಪಣಿ ಸೇರಿದಂತೆ ಮತ್ತಷ್ಟು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ರವಾನಿಸಲು ನಿರ್ಧರಿಸಲಾಗಿದೆ ಎಂದು ಅಮೆರಿಕ ತಿಳಿಸಿದೆ.

ಜಗತ್ತಿನ ಸುಮಾರು 50 ರಕ್ಷಣಾ ನಾಯಕರೊಂದಿಗೆಸೋಮವಾರ ನಡೆದ ಜಾಗತಿಕ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.

ಮರಿಯುಪೋಲ್‌ನಲ್ಲಿ 200 ಮೃತದೇಹ ಪತ್ತೆ

ಕೀವ್‌: ಮರಿಯುಪೊಲ್‌ ನಗರದಲ್ಲಿ 200 ಮೃತದೇಹಗಳು ಪತ್ತೆಯಾಗಿವೆ ಎಂದು ಉಕ್ರೇನ್‌ ಅಧಿಕಾರಿಗಳುಮಂಗಳವಾರ ತಿಳಿಸಿದ್ದಾರೆ.

ಕುಸಿದುಬಿದ್ದ ಅಪಾರ್ಟ್‌ಮೆಂಟ್‌ನ ನೆಲಮಾಳಿಗೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದು, ಅವುಗಳು ಕೊಳೆಯುವ ಹಂತಕ್ಕೆ ತಲುಪಿವೆ ಎಂದು ಹೇಳಿದ್ದಾರೆ.

ರಷ್ಯಾವು ಉಕ್ರೇನ್‌ ಮೇಲೆ ಪೂರ್ಣ ಪ್ರಮಾಣದ ಯುದ್ಧ ಸಾರಿದೆ ಎಂದು ಅಧ್ಯಕ್ಷ ಝೆಲನ್‌ಸ್ಕಿಆರೋಪಿಸಿದ ಕೆಲವೇ ಸಮಯದಲ್ಲಿ 200 ಮೃತದೇಹಗಳು ಪತ್ತೆಯಾಗಿರುವುದನ್ನು ಪ್ರಕಟಿಸಲಾಗಿದೆ.

ಡೆಸ್ನಾದಲ್ಲಿ 87 ಸಾವು:ಕಳೆದ ವಾರ ರಷ್ಯಾ ಪಡೆಗಳು ಡೆಸ್ನಾ ಮೇಲೆ ನಡೆಸಿದ ದಾಳಿಯಲ್ಲಿ 87 ಮಂದಿ ಮೃತಪಟ್ಟಿದ್ದಾರೆ ಎಂದುಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ. ಡೆಸ್ನಾ ಉತ್ತರ ಕೀವ್‌ನಿಂದ 55 ಕಿಲೋಮೀಟರ್‌ ದೂರದಲ್ಲಿದೆ.

ಸೋಮವಾರ ಮಾತನಾಡಿದ ಅವರು, ಡೆಸ್ನಾ, ಚೆರ್ನಿಹಿವ್‌ ಪ್ರದೇಶದಲ್ಲಿ ಭಗ್ನಾವಶೇಷಗಳನ್ನು ತೆಗೆದುಹಾಕುವ ಕಾರ್ಯ ಪೂರ್ಣಗೊಂಡಿದೆ. ಯುದ್ಧ ಆರಂಭವಾದಾಗಿನಿಂದ ರಷ್ಯಾಉಕ್ರೇನ್‌ ಮೇಲೆ 1,474 ಕ್ಷಿಪಣಿ ದಾಳಿ, 3000ಕ್ಕೂ ಹೆಚ್ಚು ವಾಯು ದಾಳಿ ನಡೆಸಿದೆಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT