ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೌರತ್ವ ಕಾಯ್ದೆ –2021‘ ಮಂಡನೆ– ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಅನುಕೂಲ?

1.1 ಕೋಟಿ ದಾಖಲೆ ರಹಿತ ವಲಸಿಗರಿಗೆ ಅನುಕೂಲ ಕಲ್ಪಿಸುವ ಕಾಯ್ದೆ
Last Updated 19 ಫೆಬ್ರುವರಿ 2021, 6:53 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಕಾನೂನಿನ ಸ್ಥಾನಮಾನವಿಲ್ಲದೇ ಅಮೆರಿಕದಲ್ಲಿ ನೆಲೆಸಿರುವ 1.1 ಕೋಟಿ ವಲಸಿಗರಿಗೆ ಪೌರತ್ವ ಒದಗಿಸುವ ‘ಪೌರತ್ವ ಕಾಯ್ದೆ –2021‘ ಅನ್ನು ಅಮೆರಿಕದ ಸಂಸತ್‌ನಲ್ಲಿ (ಕಾಂಗ್ರೆಸ್‌)ಮಂಡಿಸಲಾಗಿದೆ.‌ ಇದು ಅಂಗೀಕಾರವಾದರೆ ಸಾವಿರಾರು ಭಾರತೀಯರಿಗೂ ಅನುಕೂಲವಾಗಲಿದೆ.

ಈ ಮಸೂದೆ, ಉದ್ಯೋಗ ಆಧಾರಿತ ವಲಸೆ ವ್ಯವಸ್ಥೆಯನ್ನು ಬದಲಿಸುವ ಮೂಲಕ ಆರ್ಥಿಕತೆ ಅಭಿವೃದ್ಧಿಗೆ ನೆರವಾಗುತ್ತದೆ. ಉದ್ಯೋಗ ಆಧರಿತ ಗ್ರೀನ್‌ ಕಾರ್ಡ್‌ (ಕಾಯಂ ಪೌರತ್ವ) ವಿತರಣೆಯ ಮೇಲೆ ಇದ್ದ ದೇಶವಾರು ಮಿತಿಯನ್ನು ರದ್ದುಗೊಳಿಸಿ, ಅಮೆರಿಕದ ವಿಶ್ವವಿದ್ಯಾಲಯಗಳಿಂದ (ಸೈನ್ಸ್, ಟೆಕ್ನಾಲಜಿ, ಇಂಗ್ಲಿಷ್‌ , ಮ್ಯಾಥಮ್ಯಾಟಿಕ್ಸ್ –ಎಸ್‌ಟಿಇಎಂ) ಡಿಗ್ರಿ ಪಡೆದವರಿಗೆ ಅಮೆರಿಕದಲ್ಲಿ ನೆಲಸಲು ಅನುಕೂಲ ಕಲ್ಪಿಸಲಿದೆ.

ಕೈಗಾರಿಕೆಗಳಲ್ಲಿ ಕಡಿಮೆ ವೇತನಕ್ಕೆ ದುಡಿಯುವವರಿಗೆ ಗ್ರೀನ್‌ ಕಾರ್ಡ್‌ಗಳನ್ನು ಪಡೆಯುವುದನ್ನು ಸುಲಭಗೊಳಿಸುತ್ತದೆ. ಎಚ್‌1ಬಿ ವೀಸಾ ಹೊಂದಿರುವ ನೌಕರರ ಸಂಗಾತಿಗೆ (ಪತಿ ಅಥವಾ ಪತ್ನಿ) ನೌಕರಿ ದೃಢೀಕರಣ ನೀಡುತ್ತದೆ. ಎಚ್‌1ಬಿ ಹೊಂದಿರುವವರ ಮಕ್ಕಳು ಈ ವ್ಯವಸ್ಥೆಯಿಂದ ಹೊರಗುಳಿಯುವುದನ್ನು ತಪ್ಪಿಸುತ್ತದೆ.

ಈ ಮಸೂದೆ, ಅಮೆರಿಕ ಸಂಸತ್ತಿನ ಎರಡೂ ಸದನಗಳಲ್ಲಿ (ಪ್ರಜಾಪ್ರತಿನಿಧಿ ಸಭೆ ಮತ್ತು ಸೆನೆಟ್) ಅಂಗೀಕರಿಸಲ್ಪಟ್ಟು, ಅಧ್ಯಕ್ಷ ಜೋ ಬಿಡನ್ ಅವರು ಸಹಿ ಹಾಕಿದರೆ, ದಾಖಲೆರಹಿತ ಮತ್ತು ಕಾನೂನಿನ ಸ್ಥಾನಮಾನವಿಲ್ಲದೇ ಅಮೆರಿಕಕ್ಕೆ ಬಂದು ನೆಲೆಸಿರುವ ಲಕ್ಷಾಂತರ ವಿದೇಶಿ ಪ್ರಜೆಗಳಿಗೆ ಪೌರತ್ವ ಲಭ್ಯವಾಗುತ್ತದೆ. ಮಾತ್ರವಲ್ಲ, ಈ ಕಾಯ್ದೆಯಿಂದ ಸಾವಿರಾರು ಭಾರತೀಯ ಐಟಿ ಕ್ಷೇತ್ರದ ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬದವರಿಗೆ ತುಂಬಾ ಪ್ರಯೋಜನವಾಗುತ್ತದೆ.

ಮಸೂದೆ ಮಂಡನೆ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಮಸೂದೆ ಸಿದ್ಧಪಡಿಸಿರುವ ಸೆನೆಟರ್ ಬಾಬ್ ಮೆನೆಂಡೆಜ್ ಮತ್ತು ಮೆಕ್ಸಿಕೊ ಮೂಲದ ಸದಸ್ಯೆಲಿಂಡಾ ಸ್ಯಾನ್‌ಚೆಝ್‌ ‘ ಪೌರತ್ವ ಕಾಯ್ದೆ 2021‘ ನೈತಿಕ ಮತ್ತು ಆರ್ಥಿಕ ಅಗತ್ಯತೆಯ ಜತೆಗೆ, ಎಲ್ಲರನ್ನೂ ಒಳಗೊಳ್ಳುತ್ತಾ, ವಲಸೆ ಸುಧಾರಣೆಯ ದೃಷ್ಟಿಯನ್ನು ವಿಸ್ತರಿಸಲಿದೆ ಎಂದು ಹೇಳಿದರು.

‘ನಾನು ಮೆಕ್ಸಿಕೊದಿಂದ ವಲಸೆ ಬಂದಿರುವ ಪೋಷಕರ ಮಗಳು. ವಿದೇಶಿಯರು ಯಾವುದೇ ಭಯವಿಲ್ಲದೇ ಅಮೆರಿಕದಲ್ಲಿ ನೆಲಸಲು ಅನುಕೂಲವಾಗುವಂತಹ ವಲಸೆ ವ್ಯವಸ್ಥೆಯನ್ನು ರೂಪಿಸಲು ನನ್ನ ಜೀವನವನ್ನೇ ಸಮರ್ಪಿಸಿದ್ದೇನೆ. ನನ್ನ ಪೋಷಕರಂತೆ ಉತ್ತಮ ಜೀವನ ನಡೆಸಲು ಹಾಗೂ ದೇಶ ಅಭಿವೃದ್ಧಿ ಹೊಂದಲು ನ್ಯಾಯಯುತ ಅವಕಾಶ ನೀಡುವ ವ್ಯವಸ್ಥೆ ನಿರ್ಮಾಣಕ್ಕೆ ಬದ್ಧಳಾಗಿ ಕೆಲಸ ಮಾಡಿದ್ದೇನೆ‘ ಎಂದು ಲಿಂಡಾ ಸ್ಯಾನ್‌ಚೆಝ್‌ ಹೇಳಿದರು.

‘ವಲಸಿಗರು ನಮ್ಮ ದೇಶ ಮತ್ತು ಸಮಾಜಕ್ಕೆ ಶ್ರೇಷ್ಠವಾದ ಕೊಡುಗೆ ನೀಡುತ್ತಾರೆ. ಅವರು ಸ್ವಂತ ಉದ್ದಿಮೆ ನಡೆಸುತ್ತಾರೆ. ತೆರಿಗೆ ಪಾವತಿಸುತ್ತಾರೆ. ತಮ್ಮ ಮಕ್ಕಳಿಗೂ ತೆರಿಗೆ ಬಗ್ಗೆ ತಿಳಿಸಿ ಹೇಳುತ್ತಾರೆ. ಅವರು ನಮ್ಮ ಸಹ ನೌಕರರು, ನೆರೆಹೊರೆಯವರು ಮತ್ತು ಸ್ನೇಹಿತರು‘ ಎಂದು ಸ್ಯಾನ್‌ಚೆಝ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT