ಸೋಮವಾರ, ಏಪ್ರಿಲ್ 12, 2021
23 °C
ಐದು ದಿನಗಳ ಬಾಂಗ್ಲಾ ಭೇಟಿಗೆ ತೆರಳಿದ ಸೇನಾ ಮುಖ್ಯಸ್ಥ ನರವಣೆ

ಬಾಂಗ್ಲಾ ವಿಮೋಚನ ಹುತಾತ್ಮ ಯೋಧರಿಗೆ ನಮನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಢಾಕಾ: ಬಾಂಗ್ಲಾ ದೇಶಕ್ಕೆ ಭೇಟಿ ನೀಡಿರುವ ಸೇನಾ ಮುಖ್ಯಸ್ಥ ಜನರಲ್‌ ಎಂ.ಎಂ. ನರವಣೆ, ಬಾಂಗ್ಲಾ ವಿಮೋಚನೆಗಾಗಿ ನಡೆದ ಹೋರಾಟದಲ್ಲಿ ಹುತಾತ್ಮರಾದವರಿಗೆ ಗುರುವಾರ ಗೌರವ ನಮನ ಸಲ್ಲಿಸಿದರು.

ಬಾಂಗ್ಲಾ ಸೇನಾ ಮುಖ್ಯಸ್ಥ ಜನರಲ್ ಅಜೀಜ್ ಅಹ್ಮದ್ ಅವರ ಆಹ್ವಾನದ ಮೇರೆಗೆ ನರವಣೆ ಅವರು ಬಾಂಗ್ಲಾ ದೇಶಕ್ಕೆ ಐದು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಸೇನಾಕುಂಜ್‌ನಲ್ಲಿ  ಜನರಲ್‌ ನರವಣೆ ಅವರನ್ನು ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು.

ಉಭಯ ದೇಶಗಳ ಸಶಸ್ತ್ರ ಪಡೆಗಳ ನಡುವಿನ ಸಂಬಂಧದ ಸುಧಾರಣೆ ಕುರಿತು ಉಭಯ ದೇಶಗಳು ಚರ್ಚೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

‘ಏಪ್ರಿಲ್‌ 8 ರಿಂದ 12ರವರೆಗಿನ ಈ ಭೇಟಿಯು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಬಲಗೊಳ್ಳಲು ನೆರವಾಗಲಿದೆ’ ಎಂದು ಸೇನಾ ವಕ್ತಾರ ಕರ್ನಲ್ ಅಮನ್ ಆನಂದ್‌ ಹೇಳಿದರು.

‘ಜನರಲ್‌ ನರವಣೆ ಅವರು ಬಾಂಗ್ಲಾದೇಶಕ್ಕೆ 5 ದಿನಗಳ ಭೇಟಿ ನೀಡಿದ್ದು, ಮೊದಲನೇ ದಿನ ಶಿಖಾ ಅನಿರ್ಬನ್‌ನಲ್ಲಿ ಬಾಂಗ್ಲಾ ವಿಮೋಚನೆಯಲ್ಲಿ ಹುತಾತ್ಮರಾದವರಿಗೆ ಗೌರವ ನಮನ ಸಲ್ಲಿಸಿದರು. ಬಾಂಗ್ಲಾ ಸೇನೆಯ ಮೂರು ಮುಖ್ಯಸ್ಥರನ್ನು ಅವರು ಭೇಟಿಯಾಗಲಿದ್ದಾರೆ’ ಎಂದು ಎಡಿಜಿ- ಪಿಐ (ಭಾರತೀಯ ಸೇನೆ) ಟ್ವೀಟ್ ಮಾಡಿದೆ.

ಸೇನಾ ಮುಖ್ಯಸ್ಥರು ಏಪ್ರಿಲ್ 11 ರಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ ಅಬ್ದುಲ್ ಮೊಮೆನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

‘ವಿಶ್ವಸಂಸ್ಥೆಯ ಶಾಂತಿ ಬೆಂಬಲ ಕಾರ್ಯಾಚರಣೆ ಕುರಿತ ವಿಚಾರ ಸಂಕಿರಣದಲ್ಲಿ ಭಾರತೀಯ ಸೇನಾ ಮುಖ್ಯಸ್ಥರು ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಭಯೋತ್ಪಾದನೆ ವಿರುದ್ಧ ವಿವಿಧ ದೇಶಗಳು ನಡೆಸುತ್ತಿರುವ ಜಂಟಿ ಸಮರಾಭ್ಯಾಸದ ಸಮಾರೋಪ ಸಮಾರಂಭದಲ್ಲಿಯೂ ಅವರು ಭಾಗವಹಿಸಲಿದ್ದಾರೆ’ ಎಂದು ಭಾರತದ ರಾಯಭಾರ ಕಚೇರಿಯ ಹೇಳಿಕೆ ತಿಳಿಸಿದೆ. 

ಭಾರತ, ಬಾಂಗ್ಲಾ ಸೇನೆಯ ಜೊತೆಗೆ ಭೂತಾನ್‌, ಶ್ರೀಲಂಕಾ, ಅಮೆರಿಕ, ಇಂಗ್ಲೆಂಡ್‌, ಟರ್ಕಿ ಮತ್ತು ಸೌದಿ ಅರೇಬಿಯಾ ಸೇನೆಯೂ ತಾಲೀಮಿನಲ್ಲಿ ಭಾಗವಹಿಸಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು