ಶುಕ್ರವಾರ, ನವೆಂಬರ್ 27, 2020
24 °C

ಕಾಬೂಲ್‌ ವಿಶ್ವವಿದ್ಯಾಲಯದ ಮೇಲೆ ಗುಂಡಿನ ದಾಳಿ: 20ಕ್ಕೂ ಹೆಚ್ಚು ಜನರ ಸಾವು?

ಎಪಿ Updated:

ಅಕ್ಷರ ಗಾತ್ರ : | |

ಕಾಬೂಲ್‌ ವಿಶ್ವವಿದ್ಯಾಲಯದಲ್ಲಿ ಭದ್ರತಾ ಸಿಬ್ಬಂದಿ

ಕಾಬೂಲ್‌: ಬಂದೂಕುಧಾರಿ ವ್ಯಕ್ತಿಗಳು ಕಾಬೂಲ್‌ ಯೂನಿರ್ವಸಿಟಿಯಲ್ಲಿ ಸೋಮವಾರ ಗುಂಡಿನ ಮಳೆಗರೆದಿದ್ದು, ಕನಿಷ್ಠ 25 ಮಂದಿ ಸಾವಿಗೀಡಾಗಿದ್ದಾರೆ ಹಾಗೂ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಅಫ್ಗಾನಿಸ್ತಾನದ ರಾಜಧಾನಿಯ ಪ್ರಮುಖ ವಿದ್ಯಾ ಕೇಂದ್ರವಾಗಿರುವ ಕಾಬೂಲ್‌ ಯೂನಿವರ್ಸಿಟಿಯಲ್ಲಿ ಪುಸ್ತಕ ಮೇಳ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಫ್ಗಾನಿಸ್ತಾನದಲ್ಲಿನ ಇರಾನ್‌ನ ರಾಯಭಾರಿ ಸಹ ಭಾಗಿಯಾಗಿದ್ದರು ಎಂದು ವರದಿಯಾಗಿದೆ. ಗುಂಡಿನ ದಾಳಿಯಿಂದ ವಿಶ್ವವಿದ್ಯಾಲಯದಲ್ಲಿ ಸಾವಿಗೀಡಾಗಿರುವವರ ವಿವರವನ್ನು ಅಫ್ಗಾನಿಸ್ತಾನ ಆಂತರಿಕ ವ್ಯವಹಾರಗಳ ಸಚಿವಾಲಯದ ವಕ್ತಾರ ತಾರಿಕ್‌ ಅರಿಯಾನ್‌ ಬಹಿರಂಗ ಪಡಿಸಿಲ್ಲ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಸುಮಾರು 20 ಜನ ಮೃತಪಟ್ಟಿದ್ದಾರೆ.

'ಮೂವರು ಹಂತಕರು ದಾಳಿ ನಡೆಸಿದ್ದು, ಎಲ್ಲ ದಾಳಿಕೋರರು ಗುಂಡಿನ ಚಕಮಕಿಯಲ್ಲಿ ಹತ್ಯೆಯಾಗಿದ್ದಾರೆ' ಎಂದು ವಕ್ತಾರರು ಹೇಳಿದ್ದಾರೆ.

'ಈ ದಾಳಿಯಲ್ಲಿ ಭಾಗಿಯಾಗಿಲ್ಲ' ಎಂದು ತಾಲಿಬಾನ್‌ ಪ್ರಕಟಣೆ ಹೊರಡಿಸಿದೆ. ಅಮೆರಿಕ ಬೆಂಬಲಿತ ಸರ್ಕಾರದೊಂದಿಗೆ ದಂಗೆಕೋರರ ಶಾಂತಿ ಮಾತುಕತೆ ಮುಂದುವರಿದಿರುವ ನಡುವೆಯೇ ಈ ದಾಳಿ ನಡೆದಿದೆ. ಕತಾರ್‌ನಲ್ಲಿ ಸಂಧಾನ ಮಾತುಕತೆ ನಡೆಯುತ್ತಿದ್ದು, ಅಮೆರಿಕ ಯುದ್ಧದಿಂದ ಹೊರಗುಳಿಯುವ ನಿಟ್ಟಿನಲ್ಲಿ ಸಹಕಾರಿಯಾಗುವ ಸಾಧ್ಯತೆ ಇದೆ.

ದಿಢೀರ್ ಎದುರಾದ ಗ್ರೆನೇಡ್‌ಗಳ ಸ್ಫೋಟ, ಆಟೊಮ್ಯಾಟಿಕ್‌ ಬಂದೂಕುಗಳಿಂದ ನಡೆದ ಗುಂಡಿನ ದಾಳಿಯು ವಿಶ್ವವಿದ್ಯಾಲಯದ ಆವರಣದಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಸಿತು. ವಿದ್ಯಾರ್ಥಿಗಳು ಜೀವ ರಕ್ಷಣೆಗಾಗಿ ತಪ್ಪಿಸಿಕೊಂಡು ಓಡುತ್ತಿದ್ದರು. ಕೆಲ ಸಮಯದಲ್ಲಿಯೇ ಅಫ್ಗಾನಿಸ್ತಾನದ ಭದ್ರತಾ ಪಡೆ ಸಿಬ್ಬಂದಿ ಹೋರಾಟ ನಡೆಸಿದರು  ಮತ್ತು ರಕ್ಷಣಾ ಕಾರ್ಯಕ್ಕೆ ಮುಂದಾದರು. ಸುಮಾರು ಐದು ಗಂಟೆಗಳ ಹೋರಾಟದಲ್ಲಿ ಹಲವು ಮಂದಿ ಸಾವಿಗೀಡಾಗಿದ್ದಾರೆ.

ವಿಶ್ವವಿದ್ಯಾಲಯದ ಪೂರ್ವ ಭಾಗದಲ್ಲಿ ದಾಳಿ ನಡೆದಿರುವುದಾಗಿ ವಿದ್ಯಾರ್ಥಿ ಅಹ್ಮದ್‌ ಸಮಿಮ್‌ ಪತ್ರಕರ್ತರಿಗೆ ತಿಳಿಸಿದ್ದಾರೆ. ದಾಳಿಕೋರರು ಪಿಸ್ತೂಲ್‌ಗಳು ಹಾಗೂ ಕಲಾಶ್ನಿಕೋವ್ ರೈಫಲ್‌ಗಳ ಮೂಲಕ ದಾಳಿ ನಡೆಸುತ್ತಿದ್ದರೆಂದು ಹೇಳಿದ್ದಾರೆ. ಕಾನೂನು ಮತ್ತು ಪತ್ರಿಕೋದ್ಯಮ ವಿಷಯಗಳ ಬೋಧನೆ ನಡೆಯುವ ವಿಭಾಗಗಳ ಸಮೀಪ ದಾಳಿ ನಡೆದಿದೆ. ವಿಶ್ವವಿದ್ಯಾಲಯದಲ್ಲಿ ಸುಮಾರು 17,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಅಫ್ಗಾನಿಸ್ತಾನ ಮಾಧ್ಯಮ ವರದಿ ಪ್ರಕಾರ, ವಿಶ್ವವಿದ್ಯಾಲಯದಲ್ಲಿ ಪುಸ್ತಕ ಮೇಳ ಆಯೋಜಿಸಲಾಗಿತ್ತು ಹಾಗೂ ಗುಂಡಿನ ದಾಳಿ ನಡೆದ ಸಂದರ್ಭದಲ್ಲಿ ಹಲವು ಗಣ್ಯರು ಭಾಗಿಯಾಗಿದ್ದರು. ಯಾವುದೇ ಗುಂಪು ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಇಸ್ಲಾಮಿಕ್‌ ಸ್ಟೇಟ್‌ ಗುಂಪು ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಅಫ್ಗಾನಿಸ್ತಾನದಲ್ಲಿ ಅಲ್ಪ ಸಂಖ್ಯಾತ ಶಿಯಾ ಮುಸ್ಲೀಮರ ವಿರುದ್ಧ ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ಗುಂಪು ಸಮರ ಸಾರಿದ್ದು, 2014ರಿಂದ ಅವರನ್ನು ಗುರಿಯಾಗಿಸಿ ಹಲವು ಬಾರಿ ದಾಳಿ ನಡೆದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು