ಶನಿವಾರ, ಡಿಸೆಂಬರ್ 5, 2020
21 °C

ಇಸ್ಲಾಮೋಫೋಬಿಯಾ ನಿಷೇಧಿಸಿ: ಫೇಸ್‌ಬುಕ್‌ಗೆ ಪತ್ರ ಬರೆದ ಪಾಕ್ ಪ್ರಧಾನಿ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಫೇಸ್‌ಬುಕ್‌ನಲ್ಲಿ ಹೆಚ್ಚಾಗುತ್ತಿರುವ ‘ಇಸ್ಲಾಮೊಫೋಬಿಯಾ’ (ಇಸ್ಲಾಂ ಬಗ್ಗೆ ಭೀತಿ) ಪೋಸ್ಟ್‌ಗಳಿಗೆ ಕಡಿವಾಣ ಹಾಕಬೇಕು ಎಂದು ಫೇಸ್‌ಬುಕ್‌ ಸಿಇಒ ಮಾರ್ಕ್‌ ಝೂಕರ್‌ಬರ್ಗ್‌ಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪತ್ರ ಬರೆದಿದ್ದಾರೆ.

‘ಫೇಸ್‌ಬುಕ್‌ನಲ್ಲಿ ಇಸ್ಲಾಮೋಫೋಬಿಯಾ ಹೆಚ್ಚಾಗಲು ಭಾರತ ಮತ್ತು ಫ್ರಾನ್ಸ್‌ ಮುಖ್ಯ ಕಾರಣ’ ಎಂದು ಇಮ್ರಾನ್ ಖಾನ್ ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.

‘ಫೇಸ್‌ಬುಕ್‌ನಂಥ ಸಾಮಾಜಿಕ ಮಾಧ್ಯಮ ವೇದಿಕೆಗಳು ಜಗತ್ತಿನಲ್ಲಿ ಇಸ್ಲಾಮೊಫೋಬಿಯಾ ಮೂಲಕ ದ್ವೇಷ, ತೀವ್ರಗಾಮಿತನ ಮತ್ತು ಹಿಂಸೆ ಹೆಚ್ಚಾಗಲು ಕಾರಣವಾಗುತ್ತಿವೆ ಎಂಬುದನ್ನು ನಿಮ್ಮ ಗಮನಕ್ಕೆ ತರಲೆಂದು ಈ ಪತ್ರ ಬರೆಯುತ್ತಿದ್ದೇನೆ’ ಎಂದು ಇಮ್ರಾನ್ ಖಾನ್ ತಮ್ಮ ಪತ್ರದ ಉದ್ದೇಶವನ್ನು ತಿಳಿಸಿದ್ದಾರೆ.

ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರಿಕ ನೋಂದಣಿ ವಿರೋಧಿ ಪ್ರತಿಭಟನೆಗಳನ್ನು ಇಮ್ರಾನ್‌ಖಾನ್ ಉಲ್ಲೇಖಿಸಿದ್ದಾರೆ. ಕೋವಿಡ್ ಹರಡಲು ತಬ್ಲೀಗಿ ಜಮಾತ್‌ ಕಾರಣವೆಂದು ಕೆಲವರು ಹೇಳಿದ್ದನ್ನು ಪ್ರಸ್ತಾಪಿಸಿರುವ ಇಮ್ರಾನ್, ‘ಈ ಎಲ್ಲ ಬೆಳವಣಿಗೆಗಳಿಗೆ ಇಸ್ಲಾಮೊಫೋಬಿಯಾ ಮುಖ್ಯ ಕಾರಣ’ ಎಂದು ದೂರಿದ್ದಾರೆ.

ತಪ್ಪು ಮಾಹಿತಿ ಹಂಚುವ ಮೂಲಕ ಇಸ್ಲಾಂ ಬಗ್ಗೆ ಭೀತಿ ಹುಟ್ಟಿಸುವ ಪೋಸ್ಟ್‌ಗಳ ಬಗ್ಗೆ ಫೇಸ್‌ಬುಕ್‌ ನಿಗಾ ವಹಿಸಬೇಕು. ಹತ್ಯಾಕಾಂಡಗಳ (ತಡೆಗಟ್ಟುವಿಕೆ) ಬಗ್ಗೆ ವಹಿಸಿದಷ್ಟೇ ಎಚ್ಚರಿಕೆಯನ್ನು ಫೇಸ್‌ಬುಕ್ ಇಸ್ಲಾಮೊಫೋಬಿಯಾ ಬಗ್ಗೆಯೂ ವಹಿಸಬೇಕು ಎಂದು ಇಮ್ರಾನ್ ಖಾನ್ ಆಗ್ರಹಿಸಿದ್ದಾರೆ.

‘ಫ್ರಾನ್ಸ್‌ನಲ್ಲಿ ಇಸ್ಲಾಂ ಧರ್ಮವನ್ನು ಭಯೋತ್ಪಾದನೆಯ ಜೊತೆಗೆ ತಳಕು ಹಾಕಿ ನೋಡಲಾಗುತ್ತಿದೆ. ಇಸ್ಲಾಂ ಮತ್ತು ನಮ್ಮ ಪವಿತ್ರ ಪ್ರವಾದಿಯ ಬಗ್ಗೆ ಅವಹೇಳನಕಾರಿ ವ್ಯಂಗ್ಯಚಿತ್ರಗಳು ಪ್ರಕಟಗೊಳ್ಳಲು ಅವಕಾಶ ನೀಡಲಾಗುತ್ತಿದೆ’ ಎಂದು ಇಮ್ರಾನ್ ದೂರಿದ್ದಾರೆ.

ಇಮ್ರಾನ್‌ ಖಾನ್ ಪತ್ರಕ್ಕೆ ಪ್ರತಿಕ್ರಿಯಿಸಿರುವ ಫೇಸ್‌ಬುಕ್‌ನ ವಕ್ತಾರೆ, ‘ಜನಾಂಗ, ರಾಷ್ಟ್ರೀಯತೆ ಮತ್ತು ಧರ್ಮವನ್ನು ಆಧರಿಸಿದ ದಾಳಿಗಳನ್ನು ಫೇಸ್‌ಬುಕ್ ಬೆಂಬಲಿಸುವುದಿಲ್ಲ. ದ್ವೇಷವನ್ನು ಪ್ರೋತ್ಸಾಹಿಸುವುದಿಲ್ಲ. ದ್ವೇಷ ಹರಡುವಂಥ ಪೋಸ್ಟ್‌ಗಳನ್ನು ನಮ್ಮ ಅರಿವಿಗೆ ಬಂದ ತಕ್ಷಣ ತೆಗೆದುಹಾಕುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು