ಶುಕ್ರವಾರ, ಜನವರಿ 21, 2022
29 °C

ಬಾಂಗ್ಲಾ ಕೋಮು ಘರ್ಷಣೆ| ಅತ್ಯಾಚಾರಗಳಾಗಿಲ್ಲ, ದೇವಾಲಯಗಳು ನಾಶವಾಗಿಲ್ಲ: ಸ್ಪಷ್ಟನೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಬಾಂಗ್ಲಾದೇಶದಲ್ಲಿನ ಇತ್ತೀಚಿನ ಹಿಂಸಾಚಾರಗಳ ಕುರಿತು ಅಲ್ಲಿನ ವಿದೇಶಾಂಗ ಸಚಿವ ಡಾ.ಎ.ಕೆ.ಅಬ್ದುಲ್ ಮೊಮೆನ್ ಹೇಳಿಕೆ ಬಿಡುಗಡೆ ಮಾಡಿದ್ದು, ವದಂತಿಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಇತ್ತೀಚಿನ ಕೋಮುಗಲಭೆಗಳಲ್ಲಿ ದೇಶದಲ್ಲಿ ಯಾರೊಬ್ಬರ ಮೇಲೂ ಅತ್ಯಾಚಾರ ನಡೆದಿಲ್ಲ ಮತ್ತು ಒಂದೇ ಒಂದು ಹಿಂದೂ ದೇವಾಲಯವೂ ಧ್ವಂಸವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಇತ್ತೀಚಿನ ಹಿಂಸಾಚಾರದಲ್ಲಿ ಕೇವಲ 6 ಜನರು ಮೃತಪಟ್ಟಿದ್ದಾರೆ. ಅದರಲ್ಲಿ ನಾಲ್ವರು ಮುಸ್ಲಿಮರು, ಇಬ್ಬರು ಹಿಂದೂಗಳು. ಇವರೆಲ್ಲರೂ ಪೊಲೀಸರ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟವರು,’ ಎಂದು ಅವರು ತಿಳಿಸಿದ್ದಾರೆ. ಈ ಕುರಿತು ರಾಷ್ಟ್ರೀಯ ಸುದ್ದಿ ಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ. 

‘ಇಬ್ಬರು ಹಿಂದೂಗಳ ಪೈಕಿ ಒಬ್ಬರದ್ದು ಸಹಜ ಸಾವಾಗಿದ್ದರೆ, ಇನ್ನೊಬ್ಬರು ಕೊಳಕ್ಕೆ ನೆಗೆದು ಪ್ರಾಣ ಕಳೆದುಕೊಂಡಿದ್ದಾರೆ. ಹಿಂಸಾಚಾರದ ವೇಳೆ ಅತ್ಯಾಚಾರಗಳು ನಡೆದಿಲ್ಲ. ಮತ್ತು, ಒಂದೇ ಒಂದು ದೇವಾಲಯವೂ ನಾಶಗೊಂಡಿಲ್ಲ. ಆದರೆ, ದೇವಾಲಯಗಳಲ್ಲಿದ್ದ ವಿಗ್ರಹಗಳು ಭಗ್ನಗೊಂಡಿವೆ. ಹಿಂಸಾಚಾರ ದುರದೃಷ್ಟಕರ, ನಡೆಯಬಾರದಿತ್ತು. ಆದರೆ ಸರ್ಕಾರ ತಕ್ಷಣ ಕ್ರಮ ಕೈಗೊಂಡಿದೆ,’ ಎಂದು ಅವರು ತಿಳಿಸಿದ್ದಾರೆ.

‘ದುಷ್ಕರ್ಮಿಗಳನ್ನು ಬಂಧಿಸಲಾಗಿದೆ. ದುರ್ಘಟನೆಯಲ್ಲಿ 20 ಮನೆಗಳನ್ನು ಸುಟ್ಟುಹಾಕಲಾಗಿದೆ. ಅವುಗಳನ್ನು ಈಗ ಮರುನಿರ್ಮಾಣ ಮಾಡಲಾಗಿದೆ. ಎಲ್ಲರಿಗೂ ಪರಿಹಾರ ಸಿಕ್ಕಿದೆ. ಹೆಚ್ಚಿನ ಪರಿಹಾರ ಕಲ್ಪಿಸುವ ಕಾರ್ಯದ ಕಡೆಗೂ ಪ್ರಯತ್ನಗಳು ನಡೆಯುತ್ತಿವೆ,’ ಎಂದು ಮೊಮೆನ್ ತಿಳಿಸಿದ್ದಾರೆ.

‘ಕೆಲವು ಮಾಧ್ಯಮಗಳು ಮತ್ತು ವ್ಯಕ್ತಿಗಳು ಕಟ್ಟುಕತೆಗಳನ್ನು ಹರಡುತ್ತಿದ್ದಾರೆ,’ ಎಂದು ಆರೋಪಿಸಿದ ಸಚಿವ ಮೊಮೆನ್, ಧಾರ್ಮಿಕ ಸಾಮರಸ್ಯಕ್ಕೆ ಬದ್ಧವಾಗಿರುವ ಸರ್ಕಾರವನ್ನು ಮುಜುಗರಕ್ಕೀಡು ಮಾಡಲು ಇದನ್ನು ಮಾಡಲಾಗಿದೆ ಎಂದಿದ್ದಾರೆ.

‘ಇತ್ತೀಚಿನ ವರ್ಷಗಳಲ್ಲಿ, ಬಾಂಗ್ಲಾದೇಶದ ಪ್ರತಿಯೊಂದು ಪ್ರದೇಶಗಳಲ್ಲೂ ಪೂಜಾ ಮಂಟಪಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಅವುಗಳಿಗೆ ಸರ್ಕಾರವು ಹಣ ಪಾವತಿಸುತ್ತಿದೆ,‘ ಎಂದು ಸಚಿವ ಮೊಮೆನ್ ಒತ್ತಿ ಹೇಳಿದರು.

ಪೂಜಾ ಮಂಟಪವೊಂದರಲ್ಲಿ ಆರಾಧಕರು, ಉಸ್ತುವಾರಿಗಳು ಇಲ್ಲದ ಸಮಯದಲ್ಲಿ ಮಾದಕ ವ್ಯಸನಿಯೊಬ್ಬ ಖುರಾನ್ ಪ್ರತಿಯನ್ನು ದೇವರ ಪಾದದ ಬಳಿ ಬಿಟ್ಟು ಹೋಗಿದ್ದ. ಇನ್ನೊಬ್ಬ ವ್ಯಕ್ತಿ ಅದರ ಫೋಟೋ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದ. ಇದೇ ಕಾರಣಕ್ಕೆ ಕೋಮು ಘರ್ಷಣೆಗಳು ನಡೆದಿವೆ ಎಂದು ಬಾಂಗ್ಲಾದೇಶ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು