ಮಂಗಳವಾರ, ಮಾರ್ಚ್ 28, 2023
31 °C

ಚೀನಾ–ಭಾರತ ಗಡಿ ಸಮಸ್ಯೆ: ಪರಸ್ಪರ ಸ್ವೀಕಾರಾರ್ಹ ಪರಿಹಾರಕ್ಕೆ ಚೀನಾ ಸಿದ್ಧ –ವಾಂಗ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಚೀನಾ– ಭಾರತ ನಡುವೆ ಪರಸ್ಪರ ಸ್ವೀಕಾರಾರ್ಹ ಪರಿಹಾರ ಕಂಡುಕೊಳ್ಳಲು ಚೀನಾ ಸಿದ್ಧವಾಗಿದೆ. ಮಾತುಕತೆಗಳ ಮೂಲಕ ಈ ಸಮಸ್ಯೆಗೆ ‘ತುರ್ತು ಚಿಕಿತ್ಸೆ’ ನೀಡಬೇಕಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ತಿಳಿಸಿದ್ದಾರೆ.

ತಜಕಿಸ್ತಾನದ ದುಶಾಂಬೆಯಲ್ಲಿ ಬುಧವಾರ ನಡೆದ ಶಾಂಘೈ ಸಹಕಾರ ಸಂಘಟನೆಯ (ಎಸ್‌ಒಒ) ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು, ಪೂರ್ವ ಲಡಾಖ್‌ ಅಸ್ತಿತ್ವದಲ್ಲಿರುವ ಪರಿಸ್ಥಿತಿಯು ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು.

ಪೂರ್ವ ಲಡಾಖ್‌ನಲ್ಲಿರುವ ವಾಸ್ತವ ನಿಯಂತ್ರಣ ರೇಖೆ ಬಳಿಯ ಯಥಾಸ್ಥಿತಿಯಲ್ಲಿ ಯಾವುದೇ ರೀತಿಯ ಏಕಪಕ್ಷೀಯ ಬದಲಾವಣೆಯೂ ಭಾರತಕ್ಕೆ ಸ್ವೀಕಾರಾರ್ಹವಲ್ಲ. ಪೂರ್ವ ಲಡಾಖ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಂತಿ ಮತ್ತು ನೆಮ್ಮದಿ ಪುನಃಸ್ಥಾಪನೆಯ ನಂತರವೇ ಒಟ್ಟಾರೆ ಸಂಬಂಧಗಳು ಬೆಳೆಯುತ್ತವೆ ಎಂದು ಜೈಶಂಕರ್‌ ಸ್ಪಷ್ಟಪಡಿಸಿದ್ದರು.

ಜೈಶಂಕರ್ ಅವರೊಂದಿಗಿನ ವಾಂಗ್ ಮಾತುಕತೆ ಕುರಿತು ಚೀನಾ ವಿದೇಶಾಂಗ ಸಚಿವಾಲಯ ಗುರುವಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ಈಗಾಗಲೇ ಭಾರತ- ಚೀನಾ ಸಂಬಂಧಗಳು ‘ತಳ ಮಟ್ಟದಲ್ಲಿವೆ’, ಗಾಲ್ವಾನ್ ಕಣಿವೆ ಮತ್ತು ಪಾಂಗಾಂಗ್‌ ಸರೋವರದಿಂದ ಸೈನ್ಯವನ್ನು ಹಿಂತೆಗೆದುಕೊಂಡ ಬಳಿಕ ಗಡಿಯಲ್ಲಿನ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ತಿಳಿಸಿದೆ.

ಉಭಯ ದೇಶಗಳ ಸಂಬಂಧಗಳು ‘ತಳ ಮಟ್ಟ’ದಲ್ಲಿಯೇ ಇರುವುದರಿಂದ, ಇದು ‘ಯಾರ ಹಿತಾಸಕ್ತಿ’ಯನ್ನೂ ಕಾಯುವುದಿಲ್ಲ ಎಂದು ವಾಂಗ್‌ ಹೇಳಿದ್ದಾರೆ.

ಚೀನಾ–ಭಾರತದ ಗಡಿಯ ಈಗಿನ ಪರಿಸ್ಥಿತಿಗೆ ಚೀನಾ ಕಾರಣವಲ್ಲ ಎಂಬ ತನ್ನ ಹಿಂದಿನ ನಿಲುವನ್ನೇ ಪುನರುಚ್ಚರಿಸಿರುವ ವಾಂಗ್‌, ಮಾತುಕತೆ ಮತ್ತು ಸಮಾಲೋಚನೆಯ ಮೂಲಕ ಪರಸ್ಪರ ಸ್ವೀಕಾರಾರ್ಹ ಪರಿಹಾರ ಕಂಡುಕೊಳ್ಳಲು ಚೀನಾ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು