ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ನಿತ್ಯ 36 ಸಾವಿರ ಚೀನಿಯರ ಸಾವು?

ಕೋವಿಡ್‌: ಸ್ವತಂತ್ರ ಮುನ್ಸೂಚನೆ ಸಂಸ್ಥೆ ಏರ್‌ಫಿನಿಟಿ ಅಂದಾಜು
Last Updated 23 ಜನವರಿ 2023, 5:06 IST
ಅಕ್ಷರ ಗಾತ್ರ

ಬೀಜಿಂಗ್‌ : ಚೀನಾದಲ್ಲಿ ದೈನಂದಿನ ಕೋವಿಡ್ ಸಾವುಗಳ ಸಂಖ್ಯೆ ಚಾಂದ್ರಮಾನ ಹೊಸ ವರ್ಷಾಚರಣೆ ದಿನಗಳಲ್ಲಿ 36,000ಕ್ಕೆ ತಲುಪುವ ಸಾಧ್ಯತೆಗಳಿವೆ ಎಂದು ಸ್ವತಂತ್ರ ಮುನ್ಸೂಚನೆ ಸಂಸ್ಥೆ ‘ಏರ್‌ಫಿನಿಟಿ’ ಅಂದಾಜು ಮಾಡಿದೆ.

ದೇಶದಲ್ಲಿ ಕೋವಿಡ್ ನಿರ್ಬಂಧವನ್ನು ಡಿಸೆಂಬರ್‌ನಲ್ಲಿ ಪೂರ್ಣ ಸಡಿಲಿಸಿದ ನಂತರ 6 ಲಕ್ಷಕ್ಕೂ ಹೆಚ್ಚು ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಸಂಸ್ಥೆಯು ಹೇಳಿದೆ.

ಚಿಕಿತ್ಸಾಲಯಗಳು, ತುರ್ತು ಚಿಕಿತ್ಸೆ ಕೊಠಡಿಗಳಲ್ಲಿ ದಾಖಲಾದವರು ಮತ್ತು ಗಂಭೀರ ಸ್ಥಿತಿಯಲ್ಲಿರುವ ಕೋವಿಡ್‌ ರೋಗಿಗಳ ದಾಖಲಾತಿ ಸಂಖ್ಯೆಯು ಉತ್ತುಂಗವನ್ನು ಸ್ಥಿತಿ ತಲುಪಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ಅಧಿಕಾರಿ ಗುವೊ ಯಾನ್ಹಾಂಗ್ ಅವರೂ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಚಾಂದ್ರಮಾನ ಹೊಸ ವರ್ಷಾಚರಣೆ ಹಿನ್ನೆಲೆ, ಆಪ್ತರ ಭೇಟಿ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಲಕ್ಷಾಂತರ ಜನರು ದೇಶದಾದ್ಯಂತ ಪ್ರಯಾಣಿಸಿದ್ದಾರೆ. ಇದು, ಸೋಂಕು ಏರಿಕೆಗೆ ಕಾರಣವಾಗಬಹುದು ಎಂದು ಹೇಳಲಾಗಿದೆ.

ಸೋಂಕು ಪ್ರಮಾಣ ಏರಿಕೆ ಜೊತೆಗೆ ಹೆಚ್ಚಿನ ಕಡೆಗಳಲ್ಲಿ ವೈದ್ಯಕೀಯ ಸಂಪನ್ಮೂಲಗಳ ಕೊರತೆ ಇದೆ ಎಂಬ ಬಗ್ಗೆ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ದೀರ್ಘ ಸಮಯದಿಂದ ಕುಟುಂಬ ಸದಸ್ಯರ ಜತೆ ಸೇರುವ ನಿರೀಕ್ಷೆಯಲ್ಲಿ ಕಾಯುತ್ತಿದ್ದ ಲಕ್ಷಾಂತರ ಜನರು ಚಂದ್ರನ ಹೊಸ ವರ್ಷಾಚರಣೆಗಾಗಿ ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಪ್ರಯಾಣ ಮಾಡಿದ್ದಾರೆ. ಇದರಿಂದ ಕೋವಿಡ್‌ ಇನ್ನಷ್ಟು ಉಲ್ಬಣಿಸುವ ಆತಂಕ ಚೀನಾದಲ್ಲಿ ಎದುರಾಗಿದೆ.

ಹಬ್ಬದ ವಲಸೆಯು ಸೋಂಕು ಹರಡಲು ಕಾರಣವಾಗಬಹುದು. ಆದರೆ, ಹಬ್ಬದ ನಂತರದ ತಿಂಗಳುಗಳಲ್ಲಿ ದೇಶದಲ್ಲಿ ಸೋಂಕಿನ ಎರಡನೇ ಅಲೆ ಕಾಣಿಸುವುದಿಲ್ಲ. ದೇಶದ ಜನಸಂಖ್ಯೆಯಲ್ಲಿ ಶೇ 80ರಷ್ಟು ಜನರು ಈಗಾಗಲೇ ಸೋಂಕಿಗೆ ಒಳಗಾಗಿದ್ದಾರೆ ಎಂದು ಚೀನಾದ ಸಾಂಕ್ರಾಮಿಕ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ (ಸಿಡಿಸಿ) ಮುಖ್ಯ ಸಾಂಕ್ರಾಮಿಕ ರೋಗತಜ್ಞ ವು ಜುನೌ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ಹಂಚಿಕೊಂಡಿದ್ದಾರೆ.

‌ನಿರ್ಬಂಧ ತೆರವು: ಚಂದ್ರನ ಹೊಸ ವರ್ಷಾಚರಣೆ

ಚೀನಿಯರು ದೇಶದಲ್ಲಿ ಕೋವಿಡ್‌ ಸೋಂಕು ಉತ್ತುಂಗದಲ್ಲಿ ಇದ್ದರೂ ಲೆಕ್ಕಿಸದೇ ಶನಿವಾರ ಮತ್ತು ಭಾನುವಾರ ಚಾಂದ್ರಮಾನ ಹೊಸ ವರ್ಷಾರಂಭವನ್ನು ಕುಟುಂಬ ಸದಸ್ಯರು, ಬಂಧುಮಿತ್ರರು ಒಟ್ಟಿಗೆ ಸೇರಿ ಸಂಭ್ರಮದಿಂದ ಆಚರಿಸಿದರು.

ಚೀನಾ ಶೂನ್ಯ ಕೋವಿಡ್‌ ನೀತಿ ಅನುಸರಿಸಲು ಹೇರಿದ್ದ ಕಠಿಣ ಮಾರ್ಗಸೂಚಿಗಳಿಂದಾಗಿ ಮೂರು ವರ್ಷಗಳಿಂದ ಜನರಿಗೆ ಒಟ್ಟಿಗೆ ಸೇರಲು ಸಾಧ್ಯವಾಗಿರಲಿಲ್ಲ. ದೀರ್ಘ ಸಮಯದ ನಂತರ ಪುನರ್ಮಿಲನಗೊಂಡ ಕೂಡುಕುಟುಂಬಗಳ ಸದಸ್ಯರು ಒಟ್ಟಿಗೆ ದೇವಾಲಯಗಳಿಗೆ ತೆರಳಿ, ದರ್ಶನ ಪಡೆದರು.

ದೇಶದ ಹಲವೆಡೆ ಜನರು ಇತ್ತೀಚೆಗೆ ಸರ್ಕಾರದ ವಿರುದ್ಧ ತಿರುಗಿಬಿದ್ದು, ಶೂನ್ಯ ಕೋವಿಡ್‌ ನೀತಿ ಕೈಬಿಡುವಂತೆ ಪ್ರತಿಭಟಿಸಿದ್ದರು. ಇದಕ್ಕೆ ಮಣಿದ ಅಧ್ಯಕ್ಷ ಷಿ ಜಿನ್‌ಪಿಂಗ್ ನೇತೃತ್ವದ ಸರ್ಕಾರ ‘ಶೂನ್ಯ ಕೋವಿಡ್‌’ ನೀತಿ ಇತ್ತೀಚೆಗೆ ಹಿಂತೆಗೆದುಕೊಂಡಿದೆ. ಇದರಿಂದ ಕುಟುಂಬ ಕೂಡಿಕೊಳ್ಳುತ್ತಿರುವ ಜನತೆಗೆ ಈ ಬಾರಿಯ ಹೊಸ ವರ್ಷ ವಿಶೇಷತೆಯಿಂದ ಕೂಡಿತ್ತು.

2019ರ ಕೊನೆಯಲ್ಲಿ ಮೊದಲು ಕೋವಿಡ್‌ ವೈರಸ್ ಸೋಂಕುಗಳು ವರದಿಯಾದ ಕೇಂದ್ರ ಚೀನಾದ ವುಹಾನ್ ನಗರದ ನಿವಾಸಿಗಳು ಶನಿವಾರ ರಾತ್ರಿ ಚಂದ್ರ ವರ್ಷದ ಆಗಮನವನ್ನು ಪಟಾಕಿಗಳನ್ನು ಸಿಡಿಸಿ ಆಚರಿಸಿದರು. ಸೋಂಕಿಗೆ ಬಲಿಯಾದ ತಮ್ಮ ಪ್ರೀತಿಪಾತ್ರರಿಗೆ ಹೂಗುಚ್ಛ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT