ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ವೈದ್ಯಕೀಯ ಸರಕು ಸಾಗಾಣೆ ವಿಮಾನಯಾನ ರದ್ದುಪಡಿಸಿದ ಚೀನಾ

15 ದಿನಗಳ ಕಾಲ ವಿಮಾನಯಾನಕ್ಕೆ ನಿರ್ಬಂಧ
Last Updated 26 ಏಪ್ರಿಲ್ 2021, 15:35 IST
ಅಕ್ಷರ ಗಾತ್ರ

ಬೀಜಿಂಗ್: ಚೀನಾದ ಸರ್ಕಾರಿ ಸಿಚುವಾನ್ ಏರ್‌ಲೈನ್ಸ್ 15 ದಿನಗಳ ಕಾಲ ಭಾರತಕ್ಕೆ ತನ್ನ ಎಲ್ಲ ಸರಕು ವಿಮಾನಗಳ ಪ್ರಯಾಣವನ್ನು ರದ್ದುಗೊಳಿಸಿದೆ. ಇದರಿಂದಾಗಿ ದೇಶಕ್ಕೆ ಅಗತ್ಯವಿರುವ ಆಮ್ಲಜನಕ ಸಾಂದ್ರಕಗಳು ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಖರೀದಿಸುವ ಭಾರತದ ಪ್ರಯತ್ನಕ್ಕೆ ದೊಡ್ಡ ಅಡ್ಡಿಯುಂಟಾಗಿದೆ.

ಸಿಚುವಾನ್ ಏರ್‌ಲೈನ್ಸ್‌ನ ಭಾಗವಾಗಿರುವ ಸಿಚುವಾನ್ ಚುವಾನ್‌ಹಾಂಗ್ ಲಾಜಿಸ್ಟಿಕ್ಸ್ ಕಂಪನಿಯು ತನ್ನ ಮಾರಾಟದ ಏಜೆಂಟರಿಗೆ ಸೋಮವಾರ ಪತ್ರ ಬರೆದಿದ್ದು, ‘ಕ್ಸಿಯಾನ್, ದೆಹಲಿ ಸೇರಿದಂತೆ ಆರು ಮಾರ್ಗಗಳಲ್ಲಿ ತನ್ನ ಸರಕುವಿಮಾನಗಳ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ. ಭಾರತದಲ್ಲಿ ಸಾಂಕ್ರಾಮಿಕ ರೋಗದ ಸ್ಥಿತಿ ಉಲ್ಬಣಗೊಂಡಿದ್ದು, ಈ ನಿಟ್ಟಿನಲ್ಲಿ ಮುಂದಿನ 15 ದಿನಗಳ ಕಾಲ ವಿಮಾನಯಾನವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದೆ.

‘ಭಾರತಕ್ಕೆ ಸರಕು ಸಾಗಣೆ ವಿಮಾನಗಳನ್ನು ರದ್ದುಪಡಿಸಿರುವುದು ನಮ್ಮ ಸಂಸ್ಥೆಗೆ ದೊಡ್ಡ ನಷ್ಟವುಂಟಾಗಿದೆ. 15 ದಿನಗಳ ನಂತರ ನಿರ್ಧಾರ ಬದಲಾವಣೆ ಮಾಡುವ ಕುರಿತು ಚಿಂತನೆ ನಡೆಸಲಾಗುವುದು’ ಎಂದೂ ಕಂಪನಿಯು ಹೇಳಿದೆ.

ಇದರ ನಡುವೆಯೇ ಚೀನಾವು ಭಾರತದಲ್ಲಿ ಉಲ್ಬಣಿಸುತ್ತಿರುವ ಕೋವಿಡ್ –19 ಪ್ರಕರಣಗಳ ನಿಯಂತ್ರಣಕ್ಕೆ ಸಹಾಯ ಮಾಡುವುದಾಗಿ ಪುನರುಚ್ಚರಿಸಿದೆ.

‘ಭಾರತದಲ್ಲಿನ ಸಾಂಕ್ರಾಮಿಕ ರೋಗದ ಪರಿಸ್ಥಿತಿಯನ್ನು ಚೀನಾ ಗಮನಿಸುತ್ತಿದೆ. ಭಾರತದಲ್ಲಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಪರಿಸ್ಥಿತಿಗೆ ಚೀನಾವು ತನ್ನ ಪ್ರಾಮಾಣಿಕ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತದೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಚೀನಾದ ತಯಾರಕರು ಭಾರತಕ್ಕೆ ಸರಬರಾಜು ಮಾಡುತ್ತಿರುವ ವೈದ್ಯಕೀಯ ಸರಬರಾಜುಗಳ ಬೆಲೆ ಹೆಚ್ಚಿಸಿರುವ ಕುರಿತು ಕೇಳಿದ ಪ್ರಶ್ನೆಗೆ ‘ಚೀನಾದಿಂದ ವೈದ್ಯಕೀಯ ಸಾಮಗ್ರಿಗಳನ್ನು ಖರೀದಿಸಲು ಭಾರತವು ಸಿದ್ಧತೆ ನಡೆಸಿದ್ದು, ಇದೊಂದು ವಾಣಿಜ್ಯ ಚಟುವಟಿಕೆಯಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಲ್ಲೆ. ಆದಾಗ್ಯೂ, ಭಾರತವು ನಿರ್ದಿಷ್ಟ ಬೇಡಿಕೆಗಳನ್ನು ಮಂಡಿಸಿದರೆ ಚೀನಾವು ಭಾರತಕ್ಕೆ ತನ್ನ ಸಹಾಯ ಮತ್ತು ಬೆಂಬಲ ನೀಡಲು ಸಿದ್ಧವಾಗಿದೆ’ ಎಂದು ವಾಂಗ್ ವೆನ್ಬಿನ್ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT