ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡುವಿನೊಳಗೆ ಕಾರ್ಯ ಮುಗಿಸುವುದು ತಾಲಿಬಾನ್‌ ಸಹಕಾರವನ್ನು ಅವಲಂಬಿಸಿದೆ: ಬೈಡನ್‌

Last Updated 25 ಆಗಸ್ಟ್ 2021, 6:57 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಫ್ಗಾನಿಸ್ತಾನದಿಂದ ನಿಗದಿತ ಗಡುವಿನೊಳಗೆ (ಆಗಸ್ಟ್‌ 31) ಸ್ಥಳಾಂತರಿಸುವ ಕಾರ್ಯಾಚರಣೆ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಬಿರುಸಿನಿಂದ ಕೆಲ ಮಾಡುತ್ತಿದೆ. ಗಡುವು ಮುಗಿದ ಬಳಿಕ ದೇಶದ ಸೈನ್ಯವನ್ನು ಅಲ್ಲಿರಿಸುವ ಯಾವುದೇ ಯೋಜನೆ ಅಮೆರಿಕಕ್ಕೆ ಇಲ್ಲ. ಆದರೆ ಇದೆಲ್ಲ ನಿಗದಿಯಂತೆ ನಡೆಯಬೇಕು ಎಂಬುದು ತಾಲಿಬಾನ್‌ಗಳು ನೀಡುವ ಸಹಕಾರವನ್ನು ಅವಲಂಬಿಸಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ತಿಳಿಸಿದ್ದಾರೆ.

ಪ್ರಸ್ತುತ ಕಾಬೂಲ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 5,800 ಅಮೆರಿಕದ ಸೈನಿಕರು ಇದ್ದಾರೆ.

‘ನಾವು ಇದೇ 31ರೊಳಗೆ ಸ್ಥಳಾಂತರಿಸುವ ಕಾರ್ಯಾಚರಣೆ ಮುಗಿಸುವ ವೇಗದಲ್ಲಿದ್ದೇವೆ. ಎಷ್ಟು ಬೇಗ ಈ ಕಾರ್ಯ ಮುಗಿಸುತ್ತೇವೆಯೋ ಅಷ್ಟು ಒಳ್ಳೆಯದೇ. ಈ ಕಾರ್ಯಾಚರಣೆಯು ನಿತ್ಯ ನಮ್ಮ ಸೈನಿಕರಿಗೆ ಹೆಚ್ಚಿನ ಅಪಾಯವನ್ನು ತಂದೊಡ್ಡುತ್ತಿದೆ’ ಎಂದು ಬೈಡನ್‌ ಮಂಗಳವಾರ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಆದರೆ ಗಡುವಿನೊಳಗೆ ಈ ಕಾರ್ಯ ಮುಗಿಯಬೇಕು ಎಂಬುದು ತಾಲಿಬಾನ್ ನೀಡುವ ಸಹಕಾರವನ್ನು ಅವಲಂಬಿಸಿದೆ’ ಎಂದ ಅವರು, ‘ಕಾಬೂಲ್‌ನಲ್ಲಿ ವಿಮಾನ ನಿಲ್ದಾಣದ ಹೊರಗಿರುವವರನ್ನು ಒಳಗೆ ಕರೆ ತರುವ ಕೆಲಸಗಳು ತ್ವರಿತವಾಗಿ ಆಗಬೇಕು, ಅದರ ಜತೆಗೆ ನಮ್ಮ ಕಾರ್ಯಾಚರಣೆಗೆ ಯಾವುದೇ ಅಡೆತಡೆಗಳು ಉಂಟಾಗದಂತೆ ತಾಲಿಬಾನ್‌ಗಳು ನೋಡಿಕೊಳ್ಳಬೇಕು’ ಎಂದು ಹೇಳಿದರು.

ಕಾಬೂಲ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲಿಬಾನ್ ವಕ್ತಾರ ಝಬೀವುಲ್ಲಾ ಮುಜಾಹಿದ್, ‘ಅಮೆರಿಕ ತಾನೇ ನಿಗದಿಪಡಿಸಿರುವ ಗಡುವನ್ನು ಪಾಲಿಸಬೇಕು. ಅದರ ನಂತರ ನಾವು ಅಫ್ಗನ್ನರನ್ನು ಹೊರಗೆ ಕರೆದೊಯ್ಯಲು ಬಿಡುವುದಿಲ್ಲ’ ಎಂದು ಹೇಳಿದ್ದಾರೆ.

‘ಅಮೆರಿಕ ಈ ಕಾರ್ಯವನ್ನು ವಿಳಂಬ ಮಾಡಿದರೆ, ಇಲ್ಲಿನ ಅಮೆರಿಕ ಪಡೆಗಳ ವಿರುದ್ಧ ಯುದ್ಧ ಮಾಡಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.

ಇದರ ಬೆನ್ನಲ್ಲೇ ಜೋ ಬೈಡನ್‌ ಅವರು, ಅಫ್ಗನ್‌ನಿಂದ ಇದೇ 31ರೊಳಗೆ ಜನರನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಇತರ ಅಥವಾ ಸಾಂದರ್ಭಿಕ ಯೋಜನೆಗಳನ್ನು ಸಿದ್ಧಪಡಿಸಿ, ಅನುಷ್ಠಾನಗೊಳಿಸುವಂತೆ ಪೆಂಟಗನ್‌ ಮತ್ತು ವಿದೇಶಾಂಗ ಇಲಾಖೆಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT