ಚೀನಾ ರಾಜಧಾನಿ ಬೀಜಿಂಗ್‌ನ ಶೇ 92 ರಷ್ಟು ಜನರಿಗೆ ಜನವರಿ ಅಂತ್ಯಕ್ಕೆ ಕೋವಿಡ್: ವರದಿ

ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿರುವ 2 ಕೋಟಿ 20 ಲಕ್ಷ ಜನರಿಗೆ ಈ ತಿಂಗಳ ಅಂತ್ಯದ ವೇಳೆಗೆ ಕೋವಿಡ್ ತಗುಲುತ್ತದೆ ಎಂದು ಹೊಸ ಅಧ್ಯಯನ ವರದಿಯೊಂದು ತಿಳಿಸಿದೆ. ಚೀನಾದಲ್ಲಿ ಕೊರೊನಾವೈರಸ್ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿರುವ ಅಂಕಿ–ಅಂಶಗಳನ್ನು ಆಧರಿಸಿ ವರದಿ ಪ್ರಕಟಿಸಲಾಗಿದೆ.
'ನೇಚರ್ ಮೆಡಿಸಿನ್' ನಿಯತಕಾಲಿಕೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಚೀನಾ ರಾಜಧಾನಿಯ ಶೇ 92ರಷ್ಟು ಜನರು ಈ ತಿಂಗಳ ಅಂತ್ಯದ ವೇಳೆಗೆ ಕೋವಿಡ್‌ಗೆ ತುತ್ತಾಗಲಿದ್ದಾರೆ. ಕಳೆದ ವರ್ಷ ಡಿಸೆಂಬರ್ 22ರ ಹೊತ್ತಿಗೆ ಶೇ 76 ರಷ್ಟು ಜನರಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಸೋಂಕು ನಿಯಂತ್ರಣ ಸಲುವಾಗಿ ದೇಶದಾದ್ಯಂತ ಜಾರಿಗೊಳಿಸಿದ್ದ ಕಠಿಣ ನಿರ್ಬಂಧಗಳ ವಿರುದ್ಧ ಅಲ್ಲಿನ ನಾಗರಿಕರು ಪ್ರತಿಭಟನೆ ನಡೆಸಿದ್ದರು. ಹೀಗಾಗಿ ನಿರ್ಬಂಧಗಳನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ಸಡಿಲಿಸಲಾಗಿತ್ತು. 'ಶೂನ್ಯ ಕೋವಿಡ್ ನೀತಿ'ಯನ್ನೂ ಡಿಸೆಂಬರ್‌ನಲ್ಲಿ ಹಿಂಪಡೆಯಲಾಗಿತ್ತು. ಇದಾದ ಬಳಿಕ ಸೋಂಕು ತೀವ್ರವಾಗಿ ಹರಡುತ್ತಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕು ತಗುಲುವ ಪ್ರಮಾಣವೂ ಏರಿಕೆಯಾಗಿದೆ. ಸದ್ಯ ಒಬ್ಬ ಸೋಂಕಿತನಿಂದ ಸರಾಸರಿ 3.44 ಮಂದಿಗೆ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಚೀನಾದಲ್ಲಿ ಕೋವಿಡ್ ಉಲ್ಬಣ: ಝೆಜಿಯಾಂಗ್ ನಗರದಲ್ಲಿ ನಿತ್ಯ 10 ಲಕ್ಷ ಪ್ರಕರಣ
ಕೋವಿಡ್ ಪರಿಸ್ಥಿತಿಯಲ್ಲಿಯೇ ಮುನ್ನಡೆಯಲು ಸರ್ಕಾರವು ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಚೀನಾದಾದ್ಯಂತ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿವೆ. ಇದರಿಂದ ಚೀನಾದ ಆರ್ಥಿಕತೆಗೂ ಪೆಟ್ಟು ಬಿದ್ದಿದೆ. ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಏರಿದೆ. ಸಾವಿನ ಸಂಖ್ಯೆ ಹೆಚ್ಚಾಗಿದ್ದು ಸ್ಮಶಾನಗಳೂ ತುಂಬಿತುಳುಕುತ್ತಿವೆ ಎಂದು ಮಾಧ್ಯಮಗಳು ವರದಿ ಪ್ರಕಟಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.