ಭಾನುವಾರ, 11 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ವರ್ಷಗಳ ಸುದೀರ್ಘ ಹೋರಾಟ; ಅಫ್ಗನ್‌ನಲ್ಲಿ ಅಮೆರಿಕ ಮಾಡಿದ ಖರ್ಚೆಷ್ಟು?

Last Updated 17 ಆಗಸ್ಟ್ 2021, 8:36 IST
ಅಕ್ಷರ ಗಾತ್ರ

ನವದೆಹಲಿ: ಅಫ್ಗಾನಿಸ್ತಾನ ಸೇನೆಗೆ ಅಮೆರಿಕ ಪಡೆಗಳ ಬೆಂಬಲ ಕ್ಷೀಣಿಸುತ್ತಿದ್ದಂತೆ ಒಂದೇ ತಿಂಗಳಲ್ಲಿ ತಾಲಿಬಾನಿಗಳು ಮತ್ತೆ ಅಫ್ಗನ್‌ನಲ್ಲಿ ಅಧಿಕಾರ ಸ್ಥಾಪಿಸಿದ್ದಾರೆ. 20 ವರ್ಷಗಳ ಬಳಿಕ ಅಫ್ಗಾನಿಸ್ತಾನ ತಾಲಿಬಾನಿಗಳ ಕೈವಶವಾಗಿದೆ. ಸೇನಾ ಪಡೆಗಳ ನಿಯೋಜನೆಗೆ ತಗಲುವ ವೆಚ್ಚವೂ ಸಹ ಯುದ್ಧ ಪೀಡಿತ ಭೂಮಿಯಿಂದ ಅಮೆರಿಕ ಹಿಂದೆ ಸರಿಯಲು ಕಾರಣ ಎಂದು ವಿಶ್ಲೇಷಿಸಲಾಗಿದೆ.

9/11 ದುರ್ಘಟನೆಯ ಬಳಿಕ ಸುದೀರ್ಘ 20 ವರ್ಷಗಳು ಅಫ್ಗಾನಿಸ್ತಾನದಲ್ಲಿ ನೆಲೆಯೂರಿದ್ದ ಅಮೆರಿಕದ ಸೇನಾ ಪಡೆಗಳು ಈಗ ತವರಿಗೆ ಮರಳುತ್ತಿವೆ. ಈವರೆಗೂ ಅಮೆರಿಕ ಲಕ್ಷಾಂತರ ಕೋಟಿ ಡಾಲರ್‌ಗಳನ್ನು ಅಫ್ಗನ್‌ನಲ್ಲಿ ಭದ್ರತಾ ವ್ಯವಸ್ಥೆ ನಿಯೋಜನೆಗೆ ಖರ್ಚು ಮಾಡಿದೆ. ಟ್ರಿಲಿಯನ್‌ಗಟ್ಟಲೆ ಹಣವನ್ನು ಸಾಲ ಮಾಡಿ ಅಮೆರಿಕ ಅಫ್ಗನ್‌ನಲ್ಲಿ ನಿಯಂತ್ರಣ ಕಾಯ್ದುಕೊಂಡಿತ್ತು. ಆ ಖರ್ಚಿನ ಹೊರೆಯು ಅಮೆರಿಕನ್ನರ ಮೇಲಿದೆ.

ಅಮೆರಿಕದ ನಾಲ್ವರು ಅಧ್ಯಕ್ಷರಿಂದ ನಿಗಾ, ಸಾವಿರಾರು ಜನರ ಶ್ರಮ ಮತ್ತು ಜೀವ, ಟ್ರಿಲಿಯನ್‌ ಗಟ್ಟಲೆ ಡಾಲರ್‌ ವೆಚ್ಚ, ಎರಡು ದಶಕಗಳ ಹೋರಾಟ,.. ಈ ಎಲ್ಲ ಪ್ರಯತ್ನಗಳನ್ನು ತಾಲಿಬಾನಿಗಳು ಕೆಲವೇ ದಿನಗಳಲ್ಲಿ ಹಾಳು ಗೆಡವಿದ್ದಾರೆ.

ಅಫ್ಗಾನಿಸ್ತಾನದಲ್ಲಿ ಅಮೆರಿಕದ ಖರ್ಚು

ಬ್ರೌನ್‌ ಯೂನಿವರ್ಸಿಟಿಯ ಅಂದಾಜಿನ ಪ್ರಕಾರ, ಅಮೆರಿಕವು ಅಫ್ಗಾನಿಸ್ತಾನದಲ್ಲಿ 2 ಲಕ್ಷ ಕೋಟಿ (ಟ್ರಿಲಿಯನ್‌) ಡಾಲರ್‌ಗೂ ಹೆಚ್ಚು ವೆಚ್ಚ ಮಾಡಿದೆ. 80,000 ಕೋಟಿ ಡಾಲರ್‌ ನೇರವಾಗಿ ಹಣ ವಿನಿಯೋಗಿಸಿರುವುದು ಹಾಗೂ ಅಫ್ಗಾನ್‌ ಸೇನೆಗೆ ತರಬೇತಿ ನೀಡಲು 8,300 ಕೋಟಿ ಡಾಲರ್‌ ವ್ಯಯಿಸಲಾಗಿದೆ.

ಅಮೆರಿಕದ ಸಿರಿವಂತರಾದ ಜೆಫ್‌ ಬೆಜೋಸ್‌, ಎಲಾನ್‌ ಮಸ್ಕ್‌, ಬಿಲ್‌ ಗೇಟ್ಸ್‌ ಹಾಗೂ 30 ಮಂದಿ ಶ್ರೀಮಂತರ ಒಟ್ಟು ಮೌಲ್ಯವನ್ನು ಸೇರಿಸಿದರೆ ಆಗುವ ಮೊತ್ತಕ್ಕಿಂತಲೂ ಅಧಿಕ ಹಣವನ್ನು ತಾನಿಬಾನಿಗಳನ್ನು ನಿಯಂತ್ರಿಸಲು ಅಮೆರಿಕ ಬಳಕೆ ಮಾಡಿರುವುದಾಗಿ ಅಂದಾಜಿಸಲಾಗಿದೆ. ಅಫ್ಗನ್‌ನಲ್ಲಿ ಅಮೆರಿಕದ ಸಮರದ ಖರ್ಚಿನ ಸಾಲವು 2050ರ ವೇಳೆಗೆ 6.5 ಟ್ರಿಲಿಯನ್‌ ಡಾಲರ್‌ ಮುಟ್ಟಲಿದೆ ಎಂದು ಬ್ರೌನ್‌ ಯೂನಿವರ್ಸಿಟಿ ವಿಶ್ಲೇಷಿಸಿದೆ. ಅಂದರೆ, ಪ್ರತಿ ಅಮೆರಿಕನ್‌ ಪ್ರಜೆಯ ಮೇಲೆ 20,000 ಡಾಲರ್‌ (₹ 14.85 ಲಕ್ಷ) ಹೊರೆ ಬೀಳಲಿದೆ.

ಅಫ್ಗಾನಿಸ್ತಾನದಲ್ಲಿ ತಾಲಿಬಾನಿಗಳ ಎದುರಿನ ಹೋರಾಟಗಳಲ್ಲಿ 20 ವರ್ಷಗಳಲ್ಲಿ 2021ರ ಏಪ್ರಿಲ್‌ ವರೆಗೂ ಅಮೆರಿಕ 2,448 ಸಿಬ್ಬಂದಿಯನ್ನು ಕಳೆದುಕೊಂಡಿದೆ. ದೇಶದ ಪರವಾಗಿ ಕಾರ್ಯಾಚರಣೆಗೆ ನಿಯೋಜನೆಯಾಗುವ ಸಿವಿಲಿಯನ್‌ ಕಾಂಟ್ರಾಕ್ಟರ್‌ಗಳ ಪೈಕಿ 4,000 ಜನರು, ಅಫ್ಗನ್‌ ಸೇನಾ ಪಡೆ ಮತ್ತು ಪೊಲೀಸ್‌ ಸಿಬ್ಬಂದಿಯಲ್ಲಿ 66,000ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. 72 ಮಂದಿ ಪತ್ರಕರ್ತರ ಹತ್ಯೆಯಾಗಿದೆ.

ಸಂಘರ್ಷದಲ್ಲಿ 47,245 ನಾಗರಿಕರು ಮೃತಪಟ್ಟರೆ, ತಾಲಿಬಾನ್‌ ಸೇರಿದಂತೆ ವಿರೋಧಿ ಬಣದ 51,191 ಮಂದಿ ಬಲಿಯಾಗಿರುವುದಾಗಿ ಬ್ರೌನ್‌ ಯೂನಿವರ್ಸಿಟಿ ಅಧ್ಯಯನದಿಂದ ತಿಳಿದಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT