ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಮ್ಮು ಸಿರಪ್ ವಿಷವಾದಾಗ...

Last Updated 10 ಮಾರ್ಚ್ 2023, 12:26 IST
ಅಕ್ಷರ ಗಾತ್ರ

ಬ್ರಿಟನ್: ಕೆಮ್ಮು, ಶೀತ ಮತ್ತು ಅಲರ್ಜಿಯಿಂದ ಗುಣಮುಖವಾಗಲು ಮಕ್ಕಳಿಗೆ ನೀಡುವ ಔಷಧಿ ತಯಾರಿಸಲು ಬಳಸುವ ಪದಾರ್ಥಗಳಿಗೆ ಕಳೆದ ವರ್ಷ ಜಾಗತಿಕವಾಗಿ ಸುಮಾರು 2.5 ಬಿಲಿಯನ್ ಡಾಲರ್‌ (250 ಕೋಟಿ) ವಿನಿಯೋಗಗೊಂಡಿದೆ ಎಂದು ಬ್ರಿಟನ್ ಮೂಲದ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಯುರೋಮಾನಿಟರ್ ತಿಳಿಸಿದೆ.

ಆಫ್ರಿಕಾದ ಗ್ಯಾಂಬಿಯಾ ದೇಶ ಮಕ್ಕಳಿಗಾಗಿ ಕೆಮ್ಮು ಸಿರಪ್‌ ಅನ್ನು ಭಾರತದಿಂದ ಆಮದು ಮಾಡಿತ್ತು. ಅದು ಮಕ್ಕಳ ಸಾವಿಗೆ ಕಾರಣವಾಗಿತ್ತು. ತನಿಖೆ ಹಾಗೂ ಪರಿಶೀಲನೆಯ ನಂತರ ಆ ಜೌಷಧಿಯು ಎರಡು ವಿಷಕಾರಿ ಪದಾರ್ಥಗಳಿಂದ ಕಲುಷಿತಗೊಂಡಿರುವುದು ಆರೋಗ್ಯ ಅಧಿಕಾರಿಗಳಿಗೆ ಕಂಡುಬಂತು. ಶೀತ ಜ್ವರವನ್ನು ಕಡಿಮೆ ಮಾಡಲು ನೀಡುವ ಸಿರಪ್‌ನಲ್ಲಿ ಮುಖ್ಯವಾಗಿ ಗ್ಲಿಸರಿನ್ ಅಥವಾ ಪ್ರೊಪೆಲಿನ್ ಗ್ಲೈಕಾಲ್‌ ಪದಾರ್ಥ ಬೆರೆಸಲಾಗುತ್ತದೆ. ಇದು ಸಿರಪ್‌ಗೆ ಸಿಹಿ ರುಚಿ ನೀಡುವುದರಿಂದ ನುಂಗಲು ಸುಲಭವಾಗಿದೆ. ಗ್ಯಾಂಬಿಯಾದ ಮಕ್ಕಳ ಸಾವಿಗೆ ಸಿರಪ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆಲಿನ್ ಗ್ಲೈಕಾಲ್ (ಇಜಿ) ಮತ್ತು ಡೈಥೆಲಿನ್ ಗ್ಲೈಕಾಲ್ (ಡಿಇಜಿ) ಪದಾರ್ಥ ಬಳಸಿರುವುದು ಕಾರಣ. ಈ ಎರಡೂ ಪದಾರ್ಥಗಳು ಪ್ರೊಪಿಲೆನ್‌ ಗ್ಲೈಕಾಲ್‌ನ ಉಪ ಉತ್ಪನ್ನಗಳಾಗಿವೆ ಎಂದು ಅಮೆರಿಕದ ಫಾರ್ಮಾಕೋಪಿಯಾ ಸಂಸ್ಥೆಯ ನಿರ್ದೇಶಕರಾದ ಡಾ ಚೈತನ್ಯ ಕುಮಾರ್ ಕೋಡೂರಿ ಹೇಳಿದ್ದಾರೆ.

ಕೆಮ್ಮು ಔಷಧಿ ತಯಾರಿಸುವ ತಯಾರಕರು ಮೊದಲು ಪ್ರೊಪೆಲಿನ್ ಗ್ಲೈಕಾಲ್‌ ಅನ್ನು ಶುದ್ಧೀಕರಿಸಬೇಕು. ಅದರಲ್ಲಿನ ವಿಷಾಂಶವನ್ನು ತೆಗೆದು ಹಾಕಬೇಕು. ಮಕ್ಕಳ ಕೆಮ್ಮು ಸಿರಪ್‌ನಲ್ಲಿ ಬಳಸುವ ಡೈಥೆಲಿನ್ ಗ್ಲೈಕಾಲ್ ಮತ್ತು ಎಥೆಲಿನ್ ಗ್ಲೈಕಾಲ್ ಪ್ರಮಾಣವು ಶೇ. 0.10 ಅಥವಾ 100ಎಂಎಲ್ ಸಿರಪ್‌ಗೆ 0.10ಗ್ರಾಂ ಆಗಿರಬೇಕು ಎಂಬ ಅಂತರರಾಷ್ಟ್ರೀಯ ಮಾನದಂಡವಿದೆ ಎಂದು ಅವರು ತಿಳಿಸಿದರು.

ಪ್ರೊಪೆಲೆನ್ ಗ್ಲೈಕಾಲ್ ವಿಷಕಾರಿಯಲ್ಲದಿದ್ದರೂ ಅದರ ಉಪ ಉತ್ಪನ್ನವಾದ ಎಥೆಲಿನ್ ಗ್ಲೈಕಾಲ್ ಮತ್ತು ಡೈಥೆಲಿನ್ ಗ್ಲೈಕಾಲ್‌ ಪ್ರಮಾಣಕ್ಕಿಂತ ಹೆಚ್ಚಾಗಿ ಬಳಸಿದರೆ ಹಾನಿಕಾರಕವಾಗಿದ್ದು ಮೂತ್ರಪಿಂಡ ವೈಫಲ್ಯಕ್ಕೂ ಕಾರಣವಾಗುತ್ತದೆ. ತುರ್ತಾಗಿ ಚಿಕಿತ್ಸೆ ನೀಡದಿದ್ದರೆ ಸಾವಿಗೂ ಕಾರಣವಾಗುತ್ತದೆ ಎಂದು ರೋಗ ಶಾಸ್ತ್ರಜ್ಞರು ಹೇಳುತ್ತಾರೆ.

ಕೆಮ್ಮು ಸಿರಪ್‌ನ ಡೋಸ್‌ನ ನಿರ್ಧರಿಸುವಿಕೆ ಅದನ್ನು ತೆಗೆದುಕೊಳ್ಳುವ ವ್ಯಕ್ತಿಯ ತೂಕವನ್ನು ಅವಲಂಬಿಸಿರುತ್ತದೆ. ಆದರೆ ಮಕ್ಕಳು ತೂಕ ಕಡಿಮೆಯಿದ್ದು ಡೋಸ್‌ನ ಪರಿಣಾಮ ತಡೆಯಲು ವಯಸ್ಕರಿಗಿಂತ ಹೆಚ್ಚು ದುರ್ಬಲರಾಗಿರುತ್ತಾರೆ.

ತಯಾರಿಕರ ಅಜಾಗರುಕತೆಯಿಂದ ಕಲಬೆರಕೆ ಸಂಭವಿಸಬಹುದು ಎಂದೂ ಕುಮಾರ್ ಕೋಡೂರಿ ಹೇಳುತ್ತಾರೆ. ಪ್ರೊಪೆಲಿನ್ ಗ್ಲೈಕಾಲ್‌ನ ಉಪ ಉತ್ಪನ್ನವಾದ ಎಥೆಲಿನ್ ಗ್ಲೈಕಾಲ್ ಮತ್ತು ಡೈಥೆಲಿನ್ ಗ್ಲೈಕಾಲ್‌ಗಳು ಅಗ್ಗದ ಬೆಲೆಗೆ ಸಿಗುವ ಕಾರಣ ಬಹಳ ಹಿಂದಿನಿಂದಲೂ ಅದನ್ನು ಸಿರಪ್‌ ಉತ್ಪಾದಿಸುವ ಕೈಗಾರಿಕೆಗಳು ಬಳಸುತ್ತಿವೆ.

ಪ್ಯಾರಸಿಟಮಾಲ್ ಸಿರಪ್‌ಗಳಲ್ಲಿನ ಡೈಥೆಲಿನ್ ಗ್ಲೈಕಾಲ್‌ನಿಂದಾಗಿ 1990ರಲ್ಲಿ ಹೈಟಿಯಲ್ಲಿ ಸುಮಾರು 90 ಮಕ್ಕಳು ಮತ್ತು ಬಾಂಗ್ಲಾದೇಶದಲ್ಲಿ 200 ಕ್ಕೂ ಹೆಚ್ಚು ಮಕ್ಕಳು ಅಸುನೀಗಿದ್ದರು.

ವಿಶ್ವ ಆರೋಗ್ಯ ಸಂಸ್ಥೆಯು ಔಷಧಿ ತಯಾರಿಕೆಗೆ ಬಳಸುವ ಪದಾರ್ಥಗಳ ಪರೀಕ್ಷೆಯ ಮಾರ್ಗಸೂಚಿಗಳನ್ನು ಬಿಗಿಗೊಳಿಸಿದೆ. ಆದರೆ, ಉತ್ಪಾದನೆ ಮತ್ತು ಬಳಕೆ ಎರಡರಲ್ಲೂ ಕಾನೂನು ಜಾರಿಗೊಳಿಸುವುದು ಆಯಾಯ ದೇಶಗಳಿಗೆ ಸಂಬಂಧಿಸಿದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT