ಗುರುವಾರ , ಫೆಬ್ರವರಿ 9, 2023
30 °C

ಡಿ.1ರಿಂದ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ಭಾರತ ಡಿ. 1ರಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸುತ್ತಿದ್ದು, ಭಯೋತ್ಪಾದನೆ ನಿಗ್ರಹ ಮತ್ತು ಬಹುಪಕ್ಷೀಯ ಸಂಬಂಧಗಳ ಸುಧಾರಣೆಯು ದೇಶದ ಆದ್ಯತೆಯಾಗಿರಲಿದೆ ಎಂದು ಭಾರತದ ವಿಶ್ವಸಂಸ್ಥೆಯ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್‌ ತಿಳಿಸಿದ್ದಾರೆ.

ಭಾರತದ ಒಂದು ತಿಂಗಳ ಅಧಿಕಾರಾವಧಿ ಡಿ.31ಕ್ಕೆ ಮುಕ್ತಾಯವಾಗಲಿದೆ. ಇದಕ್ಕೂ ಮೊದಲು ಕಳೆದ ವರ್ಷ ಆಗಸ್ಟ್‌ನಲ್ಲಿ ಭಾರತ ಮಂಡಳಿಯ ಅಧ್ಯಕ್ಷತೆ ವಹಿಸಿಕೊಂಡಿತ್ತು.

ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿ ಭಾರತದ ಎರಡು ವರ್ಷದ ಅಧಿಕಾರಾವಧಿಯು ಮುಕ್ತಾಯದ ಹಂತದಲ್ಲಿದೆ.

15 ರಾಷ್ಟ್ರಗಳು ಮಂಡಳಿಯ ಸದಸ್ಯತ್ವ ಹೊಂದಿವೆ. ಇಂಗ್ಲಿಷ್‌ ವರ್ಣಮಾಲೆಯ ಪ್ರಕಾರ ಆಯಾ ದೇಶಗಳಿಗೆ ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿ ಒಂದು ತಿಂಗಳ ಅವಧಿಗೆ ಕಾರ್ಯನಿರ್ವಹಿಸುವ ಅವಕಾಶ ನೀಡಲಾಗುತ್ತದೆ. 

ಮಹಾತ್ಮ ಗಾಂಧಿ ಪುತ್ಥಳಿ ಲೋಕಾರ್ಪಣೆ:

ಅಧಿಕಾರಾವಧಿ ಸ್ಮರಣಾರ್ಥ ಮಹಾತ್ಮ ಗಾಂಧಿ ಅವರ ಪುತ್ಥಳಿಯನ್ನು ಭಾರತ ವಿಶ್ವಸಂಸ್ಥೆಗೆ ಉಡುಗೊರೆಯಾಗಿ ನೀಡಲಿದೆ. ಡಿ.14ರಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರ ಭೇಟಿಯ ಸಂದರ್ಭದಲ್ಲಿ ಪುತ್ಥಳಿ ಅನಾವರಣಗೊಳ್ಳಲಿದೆ. ಇದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸ್ಥಾಪಿಸಲಾಗುತ್ತಿರುವ ಮಹಾತ್ಮ ಅವರ ಮೊದಲ ಶಿಲ್ಪ.

ವಿಶ್ವಸಂಸ್ಥೆಯ ಕೇಂದ್ರ ಕಚೇರಿಯ ವಿಶಾಲವಾದ ಹುಲ್ಲುಹಾಸಿನಲ್ಲಿ ಪುತ್ಥಳಿಯನ್ನು ಇಡಲಾಗುತ್ತದೆ ಎಂದು ರುಚಿರಾ ಅವರು ತಿಳಿಸಿದ್ದಾರೆ. ಗುಜರಾತಿನ ‘ಏಕತಾ ಪ್ರತಿಮೆ’ಯ ಶಿಲ್ಪಿ ಪದ್ಮಶ್ರೀ ಪುರಸ್ಕೃತ ರಾಮ್‌ ಸುತಾರ್‌ ಅವರು ಈ ಪುತ್ಥಳಿ ನಿರ್ಮಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು