ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಜನಾಕ್ರೋಶ ಸೃಷ್ಟಿಸಿದ ವಿದ್ಯಾರ್ಥಿ ಸಾವು

Last Updated 13 ಮೇ 2021, 10:49 IST
ಅಕ್ಷರ ಗಾತ್ರ

ತೈಪೈ: ನೈರುತ್ಯ ಚೀನಾದ ಚೆಂಗ್ಡುವಿನ ಮಾಧ್ಯಮಿಕ ಶಾಲೆಯಲ್ಲಿ ಸಂಭವಿಸಿರುವ ವಿದ್ಯಾರ್ಥಿಯೊಬ್ಬರ ಸಂಶಯಾಸ್ಪದ ಸಾವು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ವಿಶ್ವ ಅಮ್ಮಂದಿರ ದಿನವಾದ ಭಾನುವಾರ (ಮೇ 9) ತನ್ನ ಮಗನನ್ನು ಶಾಲೆಗೆ ಬಿಟ್ಟು ಬಂದಿದ್ದ ತಾಯಿಗೆ ಈ ವಿಷಯ ಬರಸಿಡಿಲಿನಂತೆ ಬಂದೆರಗಿದೆ.

ವಿದ್ಯಾರ್ಥಿಯ ಸಾವಿನ ವಿಷಯದಲ್ಲಿ ಶಾಲಾ ಆಡಳಿತ ಮಂಡಳಿ, ಪೊಲೀಸರು ಮತ್ತು ಸ್ಥಳೀಯ ಆಡಳಿತದ ವರ್ತನೆಯಿಂದ ಬೇಸತ್ತ ಸಹಸ್ರಾರು ಜನರು ಚೀನಾದ ಆಡಳಿತವನ್ನು ಪ್ರಶ್ನಿಸಿ, ಪ್ರತಿಭಟನೆ ನಡೆಸುತ್ತಿದ್ದಾರೆ. ಟ್ವಿಟರ್‌ ಸೇರಿದಂತೆ ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಷಯ ಸಾಕಷ್ಟು ಚರ್ಚೆಗೆ ಒಳಗಾಗಿದೆ.

ನಡೆದದ್ದೇನು?

ಮೇ 9ರಂದು ತಾಯಿಯು ತನ್ನ 16 ವರ್ಷದ ಮಗನನ್ನು ಶಾಲೆಗೆ ಬಿಟ್ಟು ತೆರಳಿದ್ದಾರೆ. ಅಂದು ಸಂಜೆ 6.40ರ ಸುಮಾರಿಗೆ ಬಾಲಕ ಸಂಶಯಾಸ್ಪದವಾಗಿ ಮೃತಪಟ್ಟಿದ್ದಾನೆ. ಈ ವಿಷಯವನ್ನು ಬಾಲಕನ ಪೋಷಕರಿಗೆ ತಿಳಿಸುವಲ್ಲಿ ಶಾಲಾ ಆಡಳಿತ ಮಂಡಳಿ ತಡಮಾಡಿದೆ.

ಅಲ್ಲದೆ ವಿಷಯ ತಿಳಿದ ಕೂಡಲೇ ಶಾಲೆ ಬಳಿ ಬಂದ ತಾಯಿಯನ್ನು ಶಾಲಾ ಆವರಣ ಪ್ರವೇಶಿಸಲು ಅನುಮತಿ ನೀಡಿಲ್ಲ. ಅಲ್ಲದೆ ತಾಯಿಗೆ ತನ್ನ ಮಗನ ಮೃತದೇಹವನ್ನು ಮರುದಿನ ತೋರಿಸಲಾಗಿದೆ. ಈ ಎಲ್ಲ ವಿಷಯವನ್ನು ಬಾಲಕನ ತಾಯಿ ಟ್ವಿಟರ್‌ನಲ್ಲಿ ಹಂಚಿಕೊಂಡ ಬಳಿಕ, ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಸಾಕಷ್ಟು ಜನರು ಶಾಲೆ, ಪೊಲೀಸ್‌ ಮತ್ತು ಸ್ಥಳೀಯ ಆಡಳಿತವನ್ನು ಈ ಕುರಿತು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ ಬಾಲಕನ ಅಮ್ಮನಿಗೆ ನ್ಯಾಯ ಸಿಗಬೇಕಿದೆ ಎಂದು ಆಗ್ರಹಿಸಿ ಪೋಸ್ಟ್‌ಗಳನ್ನು ಮಾಡಿದ್ದಾರೆ.

ಮಂಗಳವಾರ ರಾತ್ರಿ ಶಾಲೆ ಮುಂಭಾಗ ಪ್ರತಿಭಟನೆ ಕೂಡ ನಡೆದಿದೆ. ಪ್ರತಿಭಟನಕಾರರು ಬಿಳಿಯ ಹೂವುಗಳನ್ನು ಹಿಡಿದು ಸತ್ಯ ಹೊರಬರಬೇಕು ಎಂದು ಆಗ್ರಹಿಸಿದ್ದಾರೆ.

ಶಿಕ್ಷಣ ಇಲಾಖೆಯ ಚೆಂಗ್ಡು ಜಿಲ್ಲೆಯ ಸ್ಥಳೀಯ ವಿಭಾಗ ಮಂಗಳವಾರ ಹೊರಡಿಸಿರುವ ಪ್ರಕಟಣೆಯಲ್ಲಿ ‘ಇದು ಆತ್ಮಹತ್ಯೆ’ ಎಂದು ಉಲ್ಲೇಖಿಸಿದೆ. ಪೊಲೀಸರು 16 ವರ್ಷದ ಬಾಲಕನ ಸಾವಿನ ಬಗ್ಗೆ ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ವಿದ್ಯಾರ್ಥಿಯೊಬ್ಬ ಮೇಲಿಂದ ಬೀಳುವ ನೆರಳು ಮರಗಳ ಮೇಲೆ ಚಲಿಸಿರುವುದರ ಕುರಿತು ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯವನ್ನು ಇಲ್ಲಿನ ಸರ್ಕಾರಿ ವಾಹಿನಿ ಸಿಸಿಟಿವಿ ಪ್ರಸಾರ ಮಾಡಿದೆ.

‘ಅಮೆರಿಕದಲ್ಲಿ ಜಾರ್ಜ್‌ ಫ್ಲಾಯ್ಡ್‌ ಅವರ ಸಂಶಯಾಸ್ಪದ ಸಾವು ಸಂಭವಿಸಿದಾಗ ಜನರಿಂದ ಭಾರಿ ಪ್ರತಿಭಟನೆಗಳು ವ್ಯಕ್ತವಾದವು. ಆದರೆ ಇಲ್ಲಿ ಶಾಲೆಯ ವಿದ್ಯಾರ್ಥಿಯೊಬ್ಬರ ಸಂಶಯಾಸ್ಪದ ಸಾವಿನ ಬಗ್ಗೆ ಖಚಿತ ಮಾಹಿತಿಯೇ ಸಿಗುವುದಿಲ್ಲ’ ಎಂದು 19 ವರ್ಷದ ಮೈಕ್‌ ಲಿಯು ಎಂಬ ವಿದ್ಯಾರ್ಥಿ ಸಾಮಾಜಿಕ ಮಾಧ್ಯಮದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT